ಕವಿತೆ
ಕವಿತೆಯ ಜೀವನ
ಟಿಪಿ.ಉಮೇಶ್
ಅಸಹಾಯಕ ಅಕ್ಷರದ ಕಾಲುಗಳ ಊರುತ್ತಾ
ಪೇಲವ ಮುಖ ಚಿಹ್ನೆಗಳ ಹೊತ್ತು ಬಂದವು
ಪ್ರೇಯಸಿಯ ಮನೆಗೆ;
ಭಿಕ್ಷಾಂದೇಹಿ!
ಕೆದರಿದ ಕೂದಲು ಕೆಸರಾದ ಕೈಕಾಲು ಹರಿದ ಬಟ್ಟೆಗಳ ಮುಗ್ಗಲು ನಾರುತ್ತಿರುವ
ಕವಿತೆಗಳ ಕಂಡೊಡನೆ;
ಪ್ರೇಯಸಿ ಅನ್ನ ಹಾಕುವುದಿರಲಿ
ಒಂದು ಹಸನಾದ ಮಾತು
ಹಸನ್ಮುಖ ನಗುವನ್ನು ತೋರದೆ
ದಡಾರನೆ ಕದವಿಕ್ಕಿಗೊಂಡು ಒಳ ಹೋದಳು!
ಮರುದಿನ
ಕವಿತೆ
ಪತ್ರಿಕೆಯಲ್ಲಿ ರಾರಾಜಿಸುತ್ತಿದೆ!!
ಬಹುಖ್ಯಾತಿಗೊಂಡು ಮನೆ ಮನ ಬೀದಿ ಓಣಿಗಳಲ್ಲಿ ಕುಣಿಯುತ್ತಿದೆ!
ಪ್ರೇಯಸಿ ದಾರಿಗಿಳಿದು ಬಂದವಳೇ;
ಕವಿತೆಯ ಬೆನ್ನ ನೇವರಿಸಿದಂತೆ ಮಾಡಿ
ಜುಟ್ಟು ಹಿಡಿದುಕೊಂಡು
ದರದರನೆ ಮನೆಯ ಒಳಗೆ ಎಳೆದೊಯ್ದಳು!
ಬೀದಿಯಲ್ಲಿ ನಿಶ್ಯಬ್ಧ!
ಮನೆಯಲ್ಲಿ ಸಶಬ್ಧ!
ಅವರ ಮನೆ ಕತೆ ನಮಗೆ ನಿಮಗೇಕೆ
ಲೋಕದ ಡೊಂಕು ಕೊಂಕು ತಿದ್ದಲು ನಾನ್ಯಾರು ನೀವ್ಯಾರು?
ಕವಿತೆಗೆ ತನ್ನ ಮನೆ ದಕ್ಕಿತಲ್ಲ;
ಅನುಭವಿಸಲಿ ಬಿಡಿ ಇನ್ನಾದರೂ ಜೀವನ!
ಸರ್ ಧನ್ಯವಾದಗಳು
ಕವಿತೆಯ ಕವಿತೆ ಪ್ರಕಟಣೆ ಹಾಗು ಚಿತ್ರ ಸೊಗಸಾಗಿ ಬಂದಿದೆ.