ಗಜಲ್
ಅಶೋಕ ಬಾಬು ಟೇಕಲ್
ನಿನ್ನ ಏಳಿಗೆ ಕಂಡು ಅವರು ಕಾಲೆಳೆದು ನಗುತ್ತಾರೆ ನೀನು ಸುಮ್ಮನಿರಬೇಕು
ಶ್ವೇತ ವರ್ಣದ ಮನದ ಮೇಲೆ ಮಸಿ ಬಳಿಯುತ್ತಾರೆ ನೀನು ಸುಮ್ಮನಿರಬೇಕು
ಲೆಕ್ಕವಿಲ್ಲದಷ್ಟು ದೋಷಾರೋಪದ ಮಳೆ ಹನಿಸಿ ಜಾರಿಕೊಳ್ಳುತ್ತಾರೆ
ಅಯ್ಯೋ ಪಾಪ! ಹೀಗಾಗಬಾರದಿತ್ತು ಎಂದು ಮರುಗುತ್ತಾರೆ ನೀನು ಸುಮ್ಮನಿರಬೇಕು
ಕೊಂಡು ತಂದ ಸೂಜಿ ಚುಚ್ಚುತ್ತದೆಂದು ಮಾಲಿಗೂ ಗೊತ್ತು
ಪುಷ್ಪ ಪಲ್ಲಂಗದೊಳಗಿಟ್ಟು ಮಲಗು ಮಲಗು ಎಂದೆನ್ನುತ್ತಾರೆ ನೀನು ಸುಮ್ಮನಿರಬೇಕು
ಬಜಾರಿನೊಳಗೆ ಮಾನ ಹರಾಜಿಗಿಟ್ಟು ಹೆಗಲ ಮೇಲೆ ತೋಳೆರಿಸುತ್ತಾರೆ
ಹುಣ್ಣಿಮೆಯ ಶಶಿವದನನಂತೆ ನಟಿಸುತ್ತಾರೆ ನೀನು ಸುಮ್ಮನಿರಬೇಕು
ಅಬಾಟೇಯ ಪುಂಗಿಯ ನಾದಕ್ಕೆ ಹೆಡೆಬಿಚ್ಚಿ ಆಡುತ್ತಿದೆ ನಾಗರ
ಕೇಕೆ ಹಾಕುತ್ತಾ ಕೋವಿ ಹಿಡಿದು ಹವಣಿಸುತ್ತಾರೆ ನೀನು ಸುಮ್ಮನಿರಬೇಕು
************************************