ಸೇಹ ಗಜಲ್
ರತ್ನರಾಯಮಲ್ಲ
ಹಾಸಿಗೆಯಲಿ ಮಾಂಸ ಸವಿಯುವುದು ಪ್ರೀತಿಯೆ..
ಬಿಸಿ ಉಸಿರಿಗೆ ಗೋರಿ ತೋಡುವುದು ಪ್ರೀತಿಯೆ..
ಪ್ರಣಯವು ಸೇತುವೆಯಾಗಿದೆ ಮನುಕುಲದ ಶಾಂತಿಗೆ
ಪ್ರೇಮದ ಹೆಸರಲ್ಲಿ ಪಂಜರ ರೂಪಿಸುವುದು ಪ್ರೀತಿಯೆ..
ಭಾವಂತರಂಗವು ಗರಿ ಬಿಚ್ಚಿ ಹಾರುತಿದೆ ದುನಿಯಾದಲ್ಲಿ
ಭಾವನೆಗಳನು ಛೂ ಬಿಟ್ಟು ಬೆದರಿಸುವುದು ಪ್ರೀತಿಯೆ..
ವ್ಯಾಪಾರವು ಬೇಕು ಕೊಡು-ಕೊಳ್ಳುವಿಕೆಯ ಬದುಕಿಗೆ
ವ್ಯವಹಾರದಿ ತಕ್ಕಡಿ ಹಿಡಿದು ಸೆಳೆಯುವುದು ಪ್ರೀತಿಯೆ…
ತೋರಿಕೆಯ ನಡೆಯು ಸಾಗದು ಬಹು ದೂರ ಜಗದೊಳಗೆ
ಸಮಾಜದ ಮುಂದೆ ರಸಿಕತೆ ಪ್ರದರ್ಶಿಸುವುದು ಪ್ರೀತಿಯೆ..
ಜೀವಸಂಕುಲ ಬಯಸುವುದು ಸ್ವಚ್ಛಂದ ಪರಿಸರ ‘ಮಲ್ಲಿ’
ಮುದ್ದಾದ ಗಿಳಿಯನ್ನು ಹಿಡಿತದಲ್ಲಿಡುವುದು ಪ್ರೀತಿಯೆ…
ಜೀವಕ್ಕೆ ಬೇಲಿ ಹಾಕಿ ಷರತ್ತು ವಿಧಿಸುವುದು ಪ್ರೀತಿಯೆ..
ಕನಸಿನ ಗೋಪುರಗಳನು ಖರೀದಿಸುವುದು ಪ್ರೀತಿಯೆ…
ಅಂಧಕಾರದ ಬಾಳಿಗೆ ಸಂಬಂಧಗಳೆ ಬೆಳದಿಂಗಳು ಸಾಕಿ
ಧನಕ್ಕಾಗಿ ಕಾಡು ದನಗಳಂತೆ ವರ್ತಿಸುವುದು ಪ್ರೀತಿಯೆ..
ಹೆತ್ತವರೆ ಮೂರ್ತ ರೂಪದ ದೇವರುಗಳು ನಂಬಿದವರಿಗೆ
ಗೋಡೆ ಮೇಲೆ ಭಾವಚಿತ್ರ ನೇತುಹಾಕುವುದು ಪ್ರೀತಿಯೆ..
ಕಾಲದೊಂದಿಗೆ ಹೆಜ್ಜೆಯು ಹಾಕಲೆಬೇಕಾಗಿದೆ ಗಾಲಿಬ್
ತಣ್ಣನೆಯ ದೇಹವ ಶವವೆಂದು ಬಿಸಾಕುವುದು ಪ್ರೀತಿಯೆ..
ಭಾವಗಳ ತಾಕಲಾಟವೆ ಕಂಬನಿಯಾಗಿ ಹರಿಯುತಿದೆ
ಕಣ್ಣೀರನ್ನು ಒಣಗಿಸಿ ಕುಣಿದಾಡುವುದು ಪ್ರೀತಿಯೆ..
ಜೀವಕ್ಕೆ ಜೀವ ಕೊಡುವುದು ಮಾತಾಗಿ ಉಳಿದಿದೆ ‘ಮಲ್ಲಿ’
ಸೂತಕದ ಜೊತೆಗೆನೆ ಸಂಭ್ರಮಿಸುವುದು ಪ್ರೀತಿಯೆ..
*************************************
ಹುಸಿ ಪ್ರೀತಿಯ ಅನಾವರಣವಾಗಿದೆ