ಕವಿತೆ
ಗುರುತು
ಮಮತಾ ಶಂಕರ್
ತಳ ಹಿಡಿದ ಅನ್ನ ಸಾರಿನ ಪಾತ್ರೆ
ಕೆನೆಗಟ್ಟಿದ ಹಾಲಿನ ಬೋಗುಣಿ
ತಿಕ್ಕಿತೊಳೆದು ಶುಭ್ರಗೊಳಿಸಿ
ಅವುಗಳ ಸ್ವಸ್ಥಾನದಲ್ಲಿ ಜೋಡಿಸುತ್ತಿದ್ದ
ಅವಳ ಕೆಂಪು ಗಾಜಿನ ಬಳೆಗಳ ಬಿಳಿಯ ಒದ್ದೆ
ಕೈನ ನಿರ್ಲಿಪ್ತತೆ ತುಂಬ ಮೌನವಾಗಿ ಅವಳಿಗೆ ತಿಳಿಸುತಿತ್ತು..
ನೋಡು ಈ ಮನೆಯಲ್ಲಿರುವ
ಹಾಲು ಅನ್ನ ಸಾರಿನ ಪಾತ್ರೆ
ಕೊನೆಗೆ ಮೊಸರಿನ ಪುಟ್ಟ ಬೋಗುಣಿ
ಕಾಫಿ,ನೀರಿನ ಲೋಟಕೂ
ಉಂಟು ಅದರದೇ ಆದ ಐಡೆಂಟಿಟಿ
ನೀನು….
ಏನೆನ್ನುತಿ….?
2.
ಈಗೀಗ ರಕ್ತ ಒಸರುವುದಿಲ್ಲ ತೊಡೆಯ ಸಂಧಿಯಲಿ
ಕಿಬ್ಬೊಟ್ಟೆ ನೋವಿಲ್ಲ ಬೇನೆ ಬೇಸರಿಕೆಯಿಲ್ಲ
ಬರಿಯ ಒಂದು ತೆಳು ನಿಟ್ಟುಸಿರು ಅಷ್ಟೆ
ಆಗಾಗ್ಗೆ ಕಿರುಗುಡುವ ಕೈಕಾಲು ಸೊಂಟಗಳ
ಗಂಟು ಜಾಯಿಂಟುಗಳ ಮೆಲ್ಲಗೆ ಸವರುತ್ತ
ಎಲ್ಲ ಕೆಲಸಗಳ ಕೈಗೊಳ್ಳುವಳು
ಕೈಲಾಗದವಳು ಎನಿಸಿಕೊಳ್ಳಲಿಚ್ಚಿಸದೆ;
ಅಲ್ಲಲ್ಲಿ ಕಪ್ಪು ಮೋಡದ ನಡುವೆ ಮಿಂಚುವ
ಬೆಳ್ಳಿಗೆರೆಯಂತ ಬುದ್ಧಿಜೀವಿ ಕೂದಲುಗಳ
ಕಾಣದಂತೆ ಒಳ ಸೇರಿಸುತ್ತಾ
ಕನ್ನಡಿಯ ಬಳಿ ಸುಳಿಯದೆ
ಈಗ ಕೇಳಿಕೊಳ್ಳುತ್ತಿದ್ದಾಳೆ ತನಗೆ ತಾನೇ
ಇಷ್ಟು ದಿನವಿಲ್ಲದ್ದು ಈಗೇಕೆ ಅದರ ಗೊಡವೆ
ನಿಂತ ಮುಟ್ಟಿನ ನಿಶಾನಿಯೇ ಸಾಕು
ನನ್ನಾತ್ಮಗೌರವಕೆ
ಬೇಡ ಬೇರಾವ ಪುರಾವೆ ನನಗೆ ಹೆಣ್ಣೆಂಬುದಕ್ಕೆ
ಬೇಡ ನನಗೆ ನಿಮ್ಮ ಗುರುತಿನ ಚೀಟಿ
ಇರಲಿ ನಿಮ್ಮ ಬಳಿಯೇ….
****************************************
ವಾಹ್….
ಥ್ಯಾಂಕ್ಯೂ ನಳಿನ
ಅನನ್ಯ ಕಲ್ಪನೆಯಿಂದ ತಲೆದೂಗುವಂಥ ಸಾಲುಗಳು
ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ
Own experience? Nicely said! Actually every women’s experience and that is the reality!
Thnq dear