ಕವಿ
ಎಂ.ಆರ್. ಅನಸೂಯ
ನೀರೊಳಗಿದ್ದವರ ಬೆವರ ಹನಿಯನ್ನು.
ಕಂಡವನು
ಮಳೆಹನಿಯೊಳಗೆ ಮರೆಯಾದ ಕಣ್ಣೀರನ್ನು
ಗಮನಿಸಿದವನು
ಮೌನ ವ್ರತದಲ್ಲಿರುವ ಮನದ ಮಾತುಗಳ
ಆಲಿಸಿದವನು
ಮನಸಿನ ಆಭಿವ್ಯಕ್ತಿಯ ಮೊಗದ ಮೂಲಕ
ಅರಿತವನು
ನುಡಿಗೂ ನಿಲುಕದ ಭಾವಕೆ ಅಕ್ಷರ
ರೂಪವಿತ್ತವನು
ನೇಸರನೂ ನೋಡದ ನೋಟವ
ನೋಡಿದವನು
ಕಿರಿದರಲಿ ಕಾಣದ ಹಿರಿಯದನ್ನ
ಅಡಗಿಸಿದವನು
ದಮನಿತರ ನೋವಿನ ನರಳಿಕೆಗೆ
ಧ್ವನಿಯಾದವನು
ಸಹೃದಯರ ಸಂವೇದನೆಯ ಮಿಡಿತಕೆ
ಸ್ಪಂದಿಸಿದವನು
ಇದ್ದರೂ ನಮ್ಮೆಲ್ಲರಂತೆ
ಜಗವ ನೋಡುವ
ಅವನು ತಾನಂದುಕೊಂಡಂತೆ
***********************************