ಅಂಕಣ ಬರಹ
ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ
ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ
ಸರಣಿಬರಹ………..
ಅದ್ಯಾಯ—ಒಂದು
ಕಳೆದ ವರ್ಷ ಆಗಿನ್ನೂ ಈ ಕೊರೊನಾ ಮಹಾಮಾರಿಯ ಬಗ್ಗೆ ಕಲ್ಪನೆಯೂ ಇರದ ಸಮಯದಲ್ಲಿ ನಾನು ಅಪ್ಪನ ಜೊತೆ ಮಾತನಾಡುವಾಗ, ನಮ್ಮ ಗೋವಾ ಪ್ರವಾಸ, ಮೈಸೂರಿನಿಂದ ಗೋವಾಗೆ ವಿಮಾನ ಪ್ರಯಾಣ ಮಾಡಿದ್ದರ ಬಗ್ಗೆ ಹೇಳುತ್ತಿದ್ದೆ. ನಾನು ಅದೆಷ್ಟನೆಯ ಬಾರಿ ಹೇಳಿದ್ದೋ ನನಗೆ ನೆನಪಿಲ್ಲ. ಆದರೆ ಒಮ್ಮೆಯೂ ಅಪ್ಪ ನನಗಿದು ಎಷ್ಟನೆಯ ಬಾರಿ ನೀನು ಹೇಳುತ್ತಿರುವುದೆಂದು ಕೇಳದುದರಿಂದ, ಇನ್ನೊಮ್ಮೆ ಹೋಗುವಾಗ ನೀನೂ ಬಾ ನಮ್ಮ ಜೊತೆ, ಹೀಗೆ ಕೂತು ಆಕಡೆ ಈಕಡೆ ನೋಡುವುದರೊಳಗೆ ಬಂದೇ ಬಿಡ್ತು ಗೋವಾ. ಸ್ವಲ್ಪವೂ ಆಯಾಸವಿಲ್ಲ ಅನ್ನುವಾಗ,
ಅಪ್ಪ, ಹೋದರೆ ಅಂಡಮಾನ್‍ಗೆ ಹೋಗಬೇಕು. ಬಹಳ ವರ್ಷಗಳ ಆಸೆ ಇದು. ಅಂದರು.
ಹೇಳಿದ್ದೇನಲ್ಲ.. ನಾನು ಮತ್ತು ಅಪ್ಪ ನಮ್ಮ ವಯಸ್ಸನ್ನೇ ಮರೆಯುತ್ತೇವೆ.
ಅಂಡಮಾನ್.. ವಾಹ್ ಭಾರತದಲ್ಲೇ ವಿದೇಶಕ್ಕೆ ಹೋದ ಹಾಗೆ ಅಲ್ವಾ! ನಂಗೂ ಆಸೆ ಇದೆ. ನೀನೂ ಬರ್ತಿ ತಾನೇ? ಅನ್ನೋದರೊಳಗೆ ಹೋ ಬರ್ತೇನೆ ಅಂದರು.
ಸುಮಾರು ಒಂದೂವರೆ ವರ್ಷದಿಂದ ನನ್ನ ಪತಿಯ ಅನಾರೋಗ್ಯದಿಂದಾಗಿ ಆಸ್ಪತ್ರೆ ಓಡಾಟ, ಇತರ ಜವಾಬ್ದಾರಿಗಳು, ಏನೇನೋ ಕೆಲಸಗಳೆಂದು ಮಾನಸಿಕವಾಗಿ ಸಾಕಷ್ಟು ಬಳಲಿ ಹೋಗಿದ್ದರಿಂದ, ಈ ಪ್ರಪಂಚದ ಜಂಜಾಟಗಳನ್ನೆಲ್ಲ ಮರೆತು ಚಿಕ್ಕ ಮಗುವಿನಂತಾಗಿರುವ ಅವರಿಗೂ ಹೊರಗಿನ ಪ್ರವಾಸದಿಂದ ಸ್ವಲ್ಪ ಬದಲಾವಣೆ ಸಿಗಬಹುದೆಂದು ಯೋಚಿಸಿ ಅಂಡಮಾನ್ ಪ್ರವಾಸದ ಬಗ್ಗೆ ಕನಸು ಕಾಣಲು ತೊಡಗಿದೆ.
ತಕ್ಷಣ ನೆನಪಾಗಿದ್ದು ಗಣೇಶಣ್ಣ ಮತ್ತು ಸರಸ್ವತಿ. ಅವರ ಮತ್ತು ನಮ್ಮ ಕುಲದೇವರು ಒಂದೇ ಆಗಿರೋದರಿಂದ ಅವರ ಜೊತೆಗೆ ಗೋವಾ ಪ್ರವಾಸಕ್ಕೆ ಹೋಗಿ ಅಲ್ಲಿ ಗಣೇಶಣ್ಣನ ನೇತೃತ್ವದಲ್ಲಿ, ಅವರ ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಗೋವಾ ಪ್ರವಾಸವೆಂಬುದು ನೆನಪಿನಲ್ಲಿ ಸುಂದರವಾಗಿ ಅಚ್ಚಾಗಿದ್ದರಿಂದ, ಅಂಡಮಾನ್ ಪ್ರವಾಸಕ್ಕೂ ಅವರ ಜೊತೆ ಸಿಕ್ಕಿದರೆಷ್ಟು ಒಳ್ಳೆಯದು ಎಂದು ಯೋಚಿಸಿ ಕೂಡಲೇ ಅವರಿಗೆ ಫೋನ್ ಮಾಡಿದೆ.
ಗಣೇಶಣ್ಣಾ.. ಅಂಡಮಾನ್‍ಗೆ ಹೋದರೆ ಹೇಗೆ? ಅನ್ನುವುದರೊಳಗೆ ಅವರೂ ನಮ್ಮದೂ ಪ್ಲಾನ್ ಇದೆ. ನೀವೂ ಬರುತ್ತೀರೆಂದರೆ ಯೋಚನೆ ಮಾಡೋದೇ ಅಂದರು. ಸರಸ್ವತಿ ಖುಷಿಯಿಂದ ನಿರ್ಮಲಾ ಟ್ರಾವೆಲ್ಸ್ ಗೆ ಕರೆ ಮಾಡಿ ಮಾತನಾಡಿದರು.
ಕನಿಷ್ಟ ಇಪ್ಪತ್ತು ಜನರಾದರೂ ಆಗಬೇಕು ನಾವು ತಾರೀಕು ನಿಗದಿ ಮಾಡಿಲ್ಲ ಇನ್ನೂ. ಈಗಾಗಲೇ ನಾಲ್ಕು ಜನರ ಒಂದು ತಂಡ ನಿಮ್ಮ ಹಾಗೆಯೇ ವಿಚಾರಿಸಿದ್ದಾರೆ. ನೀವು ಎಂಟು ಮಂದಿಯೆಂದರೆ ಹದಿನೆರಡು. ನೋಡೋಣ ಆದಷ್ಟು ಬೇಗ ತಿಳಿಸುತ್ತೇವೆ ಎಂದರಂತೆ.
ಆಗಲಿ ಎಂದು ಸಮಾಧಾನದಿಂದ ಕಾಯುತ್ತಿರುವಾಗಲೇ ನಿರ್ಮಲಾ ಟ್ರಾವೆಲ್ಸ್ ನಿಂದ ಫೋನ್ ಕಾಲ್. ಮೊದಲು ಕೇಳಿದ್ದ ನಾಲ್ಕು ಜನ ಒಂದೇ ಕುಟುಂಬದವರು, ಅವರ ಮನೆಯಲ್ಲಿ ಯಾರಿಗೋ ತುಂಬಾ ಸೀರಿಯಸ್ ಅಂತೆ ಅವರು ಬರೋದಿಲ್ವಂತೆ!
ಛೆ!! ಇದೇನಾಗಿ ಹೋಯಿತು. ನಮ್ಮ ಅಂಡಮಾನ್ ಪ್ರವಾಸದ ಕನಸು, ಕಾಣುವ ಮೊದಲೇ ಹೀಗಾಯಿತೇ?
ಇದರ ನಡುವೆ ಅಪ್ಪ ಒಂದು ಬಾಂಬ್ ಹಾಕಿದರು. ನಾನು ಬಂದರೆ ನಿನಗೆ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ. ನೀವು ಹೋಗಿ ಬನ್ನಿ. ಅಷ್ಟು ದುಡ್ಡು ಖರ್ಚು ಮಾಡಿ ಇಡೀ ಪ್ರವಾಸ ನೀನು ನಮ್ಮನ್ನು ನೋಡಿಕೊಳ್ಳುವುದರಲ್ಲೇ ಆಗುತ್ತದೆ. ನೀವು ಹೋಗಿ ಬನ್ನಿ ಅಂದರು.
ಅಲ್ಲಿಗೆ ಎಂಟಿದ್ದಿದ್ದು ಏಳಾಯಿತು.
ಎರಡು ದಿನ ಬಿಟ್ಟು ಒಂದು ಸುದ್ದಿ ಬಂತು ಮತ್ತೆ ಬೇರೆ ನಾಲ್ಕು ಜನ ಸೇರಿದ್ದಾರೆ. ಏನೋ ಸಣ್ಣ ಆಸೆಯೊಂದು ಚಿಗುರಿತು.
ಆದರೆ ನಮ್ಮ ಮನೆಯ ಚಿಕ್ಕದು ನನಗೆ ಪರೀಕ್ಷೆ ಇದೆ ಎಂದು ಟೈಮ್ ಟೇಬಲ್ ತೋರಿಸಿತು.
ನಮ್ಮ ಪ್ರವಾಸದ ತಾರೀಕು ಇನ್ನು ನಿಗದಿಯಾಗದಿದುದರಿಂದ ಸರಸ್ವತಿಗೆ ಈ ವಿಷಯವನ್ನು ತಿಳಿಸಿದೆ. ಅವರಿಗೆ ಅದೇ ದಿನ ನಿರ್ಮಲಾದಿಂದ ಒಂದು ಸುದ್ದಿ ಬಂದಿದೆ ಏನೆಂದರೆ ನಾವು ಸೇರಿ ಹತ್ತೊಂಬತ್ತು ಮಂದಿಯಾಗಿದ್ದೇವೆ. ಇಪ್ಪತ್ತನೆಯ ತಾರೀಕೆಂದು ಯೋಚಿಸಿದ್ದೇವೆ.
ಇಲ್ಲಿ ಕೊನೆಯ ಪರೀಕ್ಷೆ ಇಪ್ಪತ್ತಕ್ಕೇ ಇರುವುದು.
ಒಂದೆರಡು ದಿನಗಳಲ್ಲಿ ಹೊರಡುವ ದಿನಾಂಕದ ವಿಷಯದಲ್ಲಿ ಎರಡು ಮೂರು ಸಲ ಬದಲಾವಣೆಯಾಗುತ್ತಾ ಇತ್ತು. ನನಗಂತೂ ಬಹಳ ಆತಂಕವಾಯಿತು. ಚಿಕ್ಕವಳು ನಾನು ಬರೋದಿಲ್ಲ ನನಗೆ ಪರೀಕ್ಷೆ ಮುಖ್ಯ ಎಂದು ಹಠ. ನನ್ನ ಹೊಟ್ಟೆಯಲ್ಲಿ ಹೇಗೆ ಹುಟ್ಟಿದಳೆಂದು ಆಶ್ಚರ್ಯ ಪಡುವಂತಾಯ್ತು. ನನಗಂತೂ ಪರೀಕ್ಷೆ ಯಾಕೆ ಮಾಡ್ತಾರೆ ಅನ್ನೋದೇ ಕಿರಿಕಿರಿಯ ವಿಷಯವಾಗಿತ್ತು. ಇಂಥದ್ದೇನಾದರೂ ಅನಿವಾರ್ಯ ಕಾರಣಗಳು ಬಂದು ಪರೀಕ್ಷೆ ತಪ್ಪಿ ಹೋಗಲಿ ಎಂದು ಎಷ್ಟು ಬೇಡುತಿದ್ದೆನೋ!!
ಇವಳು ನೋಡಿದರೆ ಪರೀಕ್ಷೆಯೇ ಮುಖ್ಯ ಎಂದು ತಲೆ ನೋವು ತಂದಿಟ್ಟಳು.
ಕಾಲೇಜಿಗೆ ಹೋಗಿ ಮಾತಾಡಿದೆ. ಅವರು ಹೋಗಿ ಬನ್ನಿ. ಬಂದ ನಂತರ ಮರು ಪರೀಕ್ಷೆ ಮಾಡುತ್ತೇವೆ ಅಂದರು. ಸ್ವಲ್ಪ ಮಟ್ಟಿಗೆ ನಿರಾಳವೆನಿಸಿತು.
ಟಿಕೇಟ್‍ಗಳು ಬುಕ್ ಆದವು. ಹೊರಡುವ ತಯಾರಿ ಬಹಳ ಸಡಗರದಿಂದ ಮಾಡುತಿದ್ದೆವು.
ಗಣೇಶಣ್ಣ ಸರಸ್ವತಿಯವರ ಜೊತೆ ಮಾತನಾಡಿ ಏನೇನು ಬೇಕು ಎಂಬುದನ್ನೆಲ್ಲ ಪಟ್ಟಿ ಮಾಡಿಟ್ಟು, ಅದರಂತೆ ಒಂದೊಂದಾಗಿ ತೆಗೆದಿಟ್ಟುಕೊಂಡು, ಕೆಲವನ್ನು ಹೊಸದಾಗಿ ಖರೀದಿಸಿ ಬ್ಯಾಗ್ ಗಳಿಗೆ ತುಂಬಿಸುವುದೇ ನಮ್ಮ ಕೆಲಸವಾಯ್ತು.
ಈ ಸಲ ನಮ್ಮ ಲೀಡರ್ ಸರಸ್ವತಿ. ನಿರ್ಮಲಾ ಟ್ರಾವೆಲ್ಸ್ ಅವರ ಬಳಿ ಮಾತನಾಡುವುದು, ಟಿಕೇಟ್ಸ್ ಬುಕ್ ಮಾಡೋದು, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ನಿಗಾ ವಹಿಸಿ ನಮಗೆ ವಿವರಿಸುವುದು ಎಲ್ಲಾ ಅವರ ಕೆಲಸವಾಗಿತ್ತು.
ಜನವರಿ ಇಪ್ಪತ್ತರಂದು ಮಧ್ಯರಾತ್ರಿ ನಮ್ಮ ವಿಮಾನ ಬೆಂಗಳೂರಿನಿಂದ. ರಾತ್ರಿ
ಹತ್ತು ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ನಮ್ಮ ಪ್ರಯಾಣ ಆರಂಭವಾಯಿತು.
ದೊಡ್ಡ ದೊಡ್ಡ ಬ್ಯಾಗುಗಳು, ಸ್ವೆಟರ್ ಶಾಲುಗಳು. ವಿದೇಶ ಪ್ರವಾಸಕ್ಕೆ ಹೊರಟಿರುವಂತಹ ಸಂಭ್ರಮ ನಮ್ಮದು.
ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಮೇಲೆ ಪ್ರತಿಯೊಂದರ ಉಸ್ತುವಾರಿ ಗಣೇಶಣ್ಣ ಸರಸ್ವತಿ ನೋಡಿಕೊಂಡಿದ್ದರಿಂದ ನನಗೆ ಹೆಚ್ಚಿನ ಜವಾಬ್ದಾರಿಗಳಿರಲಿಲ್ಲ.
ಬೆಳಗಿನ ಜಾವ ನಾಲ್ಕು ಗಂಟೆಗೆ ವಿಮಾನ ಬೆಂಗಳೂರಿನಿಂದ ಪೋರ್ಟ್‌ಬ್ಲೇರ್ ಗೆ ಹೊರಟಿತು.
ನಮ್ಮ ಟೂರ್ ಮ್ಯಾನೇಜರ್ ಮತ್ತು ಸ್ವಲ್ಪ ಜನರಿಗೆ ನಮ್ಮ ವಿಮಾನದಲ್ಲಿ ಟಿಕೇಟ್ ಸಿಗದುದರಿಂದ ಅವರು ಆರು ಗಂಟೆಯ ವಿಮಾನದಲ್ಲಿ ಹೊರಟು ಬರುವವರಿದ್ದರು.
ಹಾಗಾಗಿ ನಮ್ಮ ಜೊತೆಯ ಅಂಡಮಾನ್ ಪ್ರವಾಸಿಗರು ಯಾರೆಂದು ನಮಗೆ ತಿಳಿದಿರಲಿಲ್ಲ. ವಿಮಾನ ನಿಲ್ದಾಣದಲ್ಲಿ ಬೇರೆ ಬೇರೆ ಟ್ರಾವೆಲ್ಸ್ ನಲ್ಲಿ ಬಂದವರು ಇದ್ದರು. ಅವರಿಗೆಲ್ಲ ಒಂದೇ ರೀತಿಯ ಕ್ಯಾಪ್‌ಗಳನ್ನು ಕೊಟ್ಟಿದ್ದರು. ಹಾಗಾಗಿ ಅವರೆಲ್ಲಾ ಒಂದೇ ಗುಂಪಾಗಿ ಕೂತಿದ್ದು ನೋಡಿದ್ದೆವು.
ಸುಖಕರ ಪ್ರಯಾಣವನ್ನು ಆನಂದಿಸುತಿದ್ದಾಗಲೇ ಆರು ಮುಕ್ಕಾಲಿಗೆ ನಮ್ಮ ವಿಮಾನ ಪೋರ್ಟ್ ಬ್ಲೇರ್ ನಲ್ಲಿ ಇಳಿಯಿತು. ವಿಜಯ್ ಎಂಬ ಹುಡುಗ ನಮ್ಮನ್ನು ಎದುರುಗೊಳ್ಳಲು ಫಲಕವನ್ನು ಹಿಡಿದು ನಿಂತಿದ್ದ. ನಮಗಾಗಿ ಎರಡು ವಾಹನಗಳು ತಯಾರಾಗಿದ್ದವು. ಒಂದು ನಮ್ಮ ಲಗ್ಗೇಜ್‌ಗಳಿಗೆ. ಇನ್ನೊಂದು ನಮಗೆ.
ನಮ್ಮನ್ನು ಹೊತ್ತ ವಾಹನ ನಿಂತಿದ್ದು ಒಂದು ಒಳ್ಳೆಯ ದೊಡ್ಡ ಹೊಟೇಲ್ ಎದುರಿಗೆ.
ನಮಗೆಂದು ನಿಗದಿಯಾದ ಕೋಣೆಗಳಿಗೆ ಹೋಗಿ ಸ್ನಾನ ಮುಗಿಸಿ ಬೆಳಗಿನ ತಿಂಡಿ ಸೇವಿಸುವುದರೊಳಗೆ ನಮ್ಮ ನಿರ್ವಾಹಕರು ಬಂದು ತಲುಪಿದರು.
ಆ ದಿನ ಮದ್ಯಾಹ್ನ ಒಂದು ಗಂಟೆಯವರೆಗೆ ನಮಗೆ ವಿಶ್ರಾಂತಿ. ಮದ್ಯಾಹ್ನ ಊಟದ ಬಳಿಕ ಅಂದಿನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತೇವೆ ಎಂದರು.
ನಮಗೂ ರಾತ್ರಿ ಇಡೀ ನಿದ್ದೆ ಇಲ್ಲದುದರಿಂದ ವಿಶ್ರಾಂತಿಯ ಅಗತ್ಯವಿತ್ತು. ಕೋಣೆ ಸೇರಿದವರೆಲ್ಲಾ ಸದ್ದಿಲ್ಲದೇ ನಿದ್ದೆಗೆ ಜಾರಿದೆವು.
********************************ಮುಂದಿನ ವಾರ ನಿರೀಕ್ಷಿಸಿ*****************
ಶೀಲಾ ಭಂಡಾರ್ಕರ್
ಗೃಹಿಣಿ, ಹಲವಾರು ಹವ್ಯಾಸಗಳಲ್ಲಿ ಬರವಣಿಗೆಯೂ ಒಂದು. ಅನೇಕ ಕವನಗಳು, ಲಲಿತ ಪ್ರಬಂಧಗಳು, ಪೌರಾಣಿಕ ಪಾತ್ರಗಳ ಸ್ವಗತಗಳನ್ನು ಬರೆದಿದ್ದು.
ತಪ್ತ ಮೈಥಿಲಿ, ರಾಮಾಯಣದ ಊರ್ಮಿಳೆಯ ಪಾತ್ರದ ಕಥನವು ಎಚ್ಚೆಸ್ಕೆಯವರ ನೂರರ ಸಂಭ್ರಮದಲ್ಲಿ ಬಿಡುಗಡೆಯಾಗಿರುತ್ತದೆ.
ಕುತೂಹಲಕರ ಆರಂಭ
ಧನ್ಯವಾದಗಳು ಸರ್
ಆಸಕ್ತಿದಾಯಕವಾಗಿ ಆರಂಭಿಸಿದ್ದೀರಿ ಶೀಲಾ
ಚೆನ್ನಾಗಿ ಶುರುವಾಗಿದೆ.
ಚೆನ್ನಾಗಿ ಶುರು ವಾಗಿದೆ ಶೀಲಾ.
ಲೇಖನ ಚೆನ್ನಾಗಿದೆ