ಕವಿತೆ
ತೆಗೆಯಲಾರದ ಬದುಕಿನ ಬಾಗಿಲು
ಟಿ.ಪಿ. ಉಮೇಶ್
ಒಂದು ಅಲೆ ಬಂದೊಡನೆ ಮುಗಿಯಲಾಗದ ಕಡಲು
ಒಂದು ತುತ್ತು ನುಂಗಿದೊಡನೆ ತುಂಬಲಾಗದ ಒಡಲು
ಹಜ್ಜೆ ಹೆಜ್ಜೆ ಪೋಣಿಸುತಲಿ ಮಣ್ಣ ತುಳಿದು ದೇಕುತಲಿ
ಗಾಳಿ ಓಲಗದಿ ತೇಲುತಲಿ ಭಾವ ಬಂಧುಗಳ ಜೀಕುತಲಿ
ಕನಸು ಚಿಟ್ಟೆಯ ಮುರಿದ ಬಣ್ಣ ರೆಕ್ಕೆಗಳ ಗುರುತಿನಲಿ ದಾರಿ ಕಾಣುತಲಿ
ಬದುಕು ಪೊರೆ ಕಳಚದ ಮೈ ಭೂತಕಾಲದ ಕಪ್ಪಿಡಿದ ಕನ್ನಡಿಯಲಿ
ನಿಲ್ಲಲಾರದು ಗಡಸು ಮೋಡಗಳ ತೊರೆಯು
ಭೂಮಿ ಬಾಗಿದರು
ಬದುಕು ತೆಗೆಯದು ಬಾಗಿಲು
ಇಂದ್ರಿಯಗಳ ಮೆಮೊರಿಯಲಿ ಅಳಿಸಿಹೋದ ಪೂರ್ವಜರ ವಿಶ್ವಕೋಶ
ವಿಷಯಗಳ ಅಲೆಗಳಲಿ ನೃತ್ಯಮಗ್ನ ದೇಹದ ಸ್ತುತಿ ಮರೆಯದ ರತಿಪಾಶ
ಪಂಚಕವಚಗಳ ಒಡ್ಡೋಲಗದ ಹುಕಿಗೊಂಡ ಚಬುಕಿನಲಿ
ಬೀಜ ಮೊಳೆಸದ ಮಣ್ಣಿನಲ್ಲಿ ಅನಗತ್ಯ ಬೆವರ ಊರುತಲಿ
ಅವತಾರಿ ಫಿಶ್ ಟಾರ್ಟೈಸ್ ಅನಕೊಂಡಗಳು ಮೌನಹೊದ್ದ ಬೆಂಕಿಯಲಿ
ಪಾಪ ಪುಣ್ಯಗಳು ಓಬಿರಾಯನ ಧೂಳುಗಳು ಮೆಟ್ಟುಗಾಲಿನ ಒತ್ತಿನಲಿ
ಬಟ್ಟೆಗಳ ಮರೆತ ಹೊಟ್ಟೆಗಳಿಗೆ ವರ್ಜಿನಿಟಿಯ ಲೇಪಿಸಲಾಗದು
ಯಾರ್ಯಾರು ಛಲ ತೊಟ್ಟರು
ತೆಗೆಯಲಾರದ ಬದುಕಿನ ಬಾಗಿಲು
ಮಹಾತ್ಮರ ಹೆಸರೊಂದು ಹೊರೆ ಸುಮ್ಮನೆ ಬದುಕುವ ಆತ್ಮಗಳಿಗು
ಛಾವಿ ಹೊತ್ತೊಯ್ದ ಹುತಾತ್ಮರ ಧೇನಿಸುತ ಬಾಗಿಲ ಬಡಿವ ಬದುಕಿಗು
ತೆಗೆಯಲಾಗದ ಬದುಕಿನ ಬಾಗಿಲು
ಹೆಳವ ಕುರುಡನಿಗಿಟ್ಟಿರುವ ಕಂದೀಲು