ಕವಿತೆ
ಕಾಲವೆಂಬ ಗಡಿ
ವಿಶಾಲಾ ಆರಾಧ್ಯ
ಈಗೀಗ ನಗುವೇಕೋ ಮೊದಲಿನಂತಿಲ್ಲ
ಎಷ್ಟೇ ಹುಡುಕಿದರು ಹೂವಂತಿಲ್ಲ
ಅಮ್ಮನ ಮಡಿಲಿನ ಬೆಚ್ಚನೆಯ ಕಾವಲ್ಲಿ
ಮಿಂದಿದ್ದ ಅಂದಿನ ಹಾಲನಗುವಿಲ್ಲ
ನಗು ರೂಪಾಂತರವಾಗಿ ಮತ್ತೆ ಸಿಕ್ಕಿತ್ತು
ಬದುಕಿನ ಜೊತೆಯಾಗಿ ಆರ್ಹೆಜ್ಜೆ ನಡೆದಿತ್ತು
ಯಾಕೋ ಅದು ನಿಲ್ಲದೆ ಪಲ್ಲಟಗೊಂಡಿತ್ತು
ಸೋಲದೆ ಮತ್ತೆ ನಗುತ್ತಾ ನಗುವ ಹುಡುಕಿದೆ
ಮತ್ತೆ ನಗು ಮಗುವಾಗಿ ಆವರಿಸಿತು
ಮಗು ಬೆಳೆದು ಬೆಳಕಾಗಿ ನಲಿದಾಡಿತು
ಕನಸುಗಳ ಮಹಲುಗಳು ಮೇಲೇರಿತು
ಧನ್ಯಭಾವಗಳು ಒಲವಿನ ಹಾದಿಗಾದವು
ಗುಟುಕಿತ್ತ ಹಕ್ಕಿಗೆ ರೆಕ್ಕೆ ಬಂದಾದವು
ರೆಕ್ಕೆಗಳು ಬಲಿತು ಬಲವಾದವು
ಹಾರಿಹಾರುವ ತವಕ ಹಕ್ಕಿಗೀಗ ದಾರಿತಪ್ಪದಿರೆಂದು ಜಗ್ಗಿದರೆ ಗುಟುಕಿತ್ತ ಗುಬ್ಬಿಗೆ ಕುಟುಕ
ಬದುಕಿದು ಕಾಲದ ಗಡಿ ಪಯಣವೋ
ನೆನ್ನೆಗಳು ಇಂದಾಗಿ ಇಂದೆಲ್ಲಾ ನಾಳೆಗೂ
ಮುಂದುವರೆಯುತ ಸಾಗಿ ಹೋದವೋ
ಇಲ್ಲ ಬಿನ್ನಾಣ ಬಿಗುಮಾನವೇನೇನೂ ಇಲ್ಲಿ
******************************