ಕವಿತೆ
ಮಾಂತ್ರಿಕ ಬದುಕು
ವಿದ್ಯಾ ಶ್ರೀ ಎಸ್ ಅಡೂರ್.
ಬದುಕು ಒಂದು ದುಷ್ಟ ರಾಕ್ಷಸ
ಅದು ನಮ್ಮ ಕೈಗೆ ಸುಂದರ ಕನ್ನಡಿಯನ್ನು ಕೊಟ್ಟು
ನಮ್ಮ ಮುಖವನ್ನು ಕುರೂಪಗೊಳಿಸಿಬಿಡುತ್ತದೆ
ಬದುಕು ಒಂದು ಕಳ್ಳಬೆಳಕು
ಒಮ್ಮೊಮ್ಮೆ ಕುರುಡರಿಗೆ ಕಣ್ಣು ಬರಿಸುವ ಬದುಕು
ಕೆಲವೊಮ್ಮೆ ಕಣ್ಣಿದ್ದವರನ್ನೂ ಕುರುಡಾಗಿಸುತ್ತದೆ
ಬದುಕು ಒಂದು ಕೆಟ್ಟ ಮಾಂತ್ರಿಕ
ಒಮ್ಮೆ ಕಂಡ ವಾಸ್ತವವನ್ನು ಕಂಡೇ ಇಲ್ಲ
ಎಂಬಂತೆ ಮರೆಮಾಚಿಸಿಬಿಡುತ್ತದೆ
ಬದುಕು ಒಂದು ವಿಲಕ್ಷಣ ಸ್ವಾರ್ಥಿ
ಬೇಕುಬೇಕೆಂಬ ಮನಸಿನ ಕನಸನ್ನು
ಕನಸಾಗಿಯೇ ಉಳಿಸಿಬಿಡುತ್ತದೆ
ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಬದುಕು ಒಂದು ಕರುಣೆಯಿಲ್ಲದ ವಂಚಕ
ಸೋತು,ಬೇಸತ್ತು,ಗೆಲುವಿನ ಆಸೆ ಹೊತ್ತವರನ್ನು
ಆಸೆಯೇ ದುಃಖ್ಖಕ್ಕೆ ಮೂಲ ಎಂದು ಹೊಸಕಿ ತುಳಿದುಬಿಡುತ್ತದೆ
**************************************************