ಕವಿತೆ
ಹೇಳು ಸಿವನೆ
ಸುವಿಧಾ ಹಡಿನಬಾಳ
೧ ಜಗವ ಕಾಯುವ
ಜಗದೊಡೆಯನಿಗೆ
ರಕ್ತದಾಹವೆಂಬ ಭ್ರಮೆಯ
ನಂಬಬೇಕೆ ಸಿವನೆ?
೨ ಹೆತ್ತ ತಾಯಿ
ಮುದ್ದು ಮಡದಿ
ಮಮತೆಯ ಕೂಸು
ಹೆಣ್ಣೇ ಆದರೂ ಅನ್ಯರ
ಮೇಲೆ ಅತ್ಯಾಚಾರ ಗೈವ
ಗಂಡು ಕಾಮಿಯ ಎದೆಯಲ್ಲಿ
ಕರುಣವಿಲ್ಲವೆ ಸಿವನೆ?
೩ ತುತ್ತಿನ ಚೀಲ ತುಂಬಲು
ಗೇಣುದ್ದ ದೇಹವ ಮುಚ್ಚಲು
ಬೆಚ್ಚನೆಯ ಸೂರು ಹೊಂದಲು
ನೆಮ್ಮದಿಯ ಬದುಕ ಬಾಳಲು
ಕೋಟಿ ಕೋಟಿ ದುಡ್ಡು
ಆಸ್ತಿ ಬೇಕೆ ಸಿವನೆ?
೪ ಮೈಯ ರಕ್ತ ಒಂದೇ
ಕುಡಿವ ಜಲವು ಒಂದೇ
ತಿನ್ನುವ ಅನ್ನವೊಂದೇ
ಪೊರೆವ ಧರಣಿಯೊಂದೇ
ಮತ್ತೆ ನಾನು ನೀನು
ಅವನು ಅವಳು
ಮೇಲು ಕೀಳು
ಹೇಗೆ ಸಿವನೆ?
೫ ಹುಟ್ಟಿ ಬಂದಾಗಿದೆ
ಚೆಂದ ಬಾಳು ಮುಂದಿದೆ
ಹಮ್ಮು ಬಿಮ್ಮು ಎಲ್ಲಾ
ನಾನು ನನ್ನದೇ ಎಲ್ಲಾ
ಎಂದು ಬೀಗಲು ದೇಹವೇನು
ಶಾಶ್ವತವೆ ಸಿವನೆ?
೬ ದೇವಸ್ಥಾನ ಮಠ
ಮಂದಿರ ಮಸೀದಿಗಗಳಲಿ
ನೀನಿರುವೆಯೆಂದು ತಿಳಿದು
ಧಾಂಗುಡಿಯಿಡುವರಲ್ಲ!
ನೀನು ನನ್ನಲ್ಲಿ ನಿನ್ನಲ್ಲಿ
ಎಲ್ಲೆಲ್ಲೂ ಇರುವೆಯಲ್ಲ
ನಿಜವೆ ಸಿವನೆ?
***********************************