ಪ್ರೇಮಮೂರುತಿ
ಆಶಾ ಆರ್ ಸುರಿಗೇನಹಳ್ಳಿ
ಬಿಕ್ಕುತ್ತಿದ್ದವು..
ಮೌನವೊದ್ದು,
ಸೊರಗುತ್ತಿದ್ದ ಕನಸುಗಳು..
ಹಗಲು-ರಾತ್ರಿಗಳ ಪರಿವಿಲ್ಲದೆ,
ಏರುತ್ತಿದ್ದ ನಶೆಗೂ..
ನಿಶೆಯ ಗಾಢ ಮೌನವೇ
ಒಲವ ಆಲಿಂಗನ.
ಮಡುಗಟ್ಟಿದ ನೋವುಗಳು
ಅಧರಗಳ ಕಂಪಿಸಿ
ತೋಯಿಸುವಾಗ..
ವಿರಹಕ್ಕಾಗಿ ಚಡಪಡಿಕೆಯೊ?
ಸನಿಹಕ್ಕಾಗಿ ಬೇಡಿಕೆಯೊ?
ಅಶ್ರುವಿಗೂ ಗೊಂದಲ ಮೂಡಿ
ಉರುಳುರುಳಿ ಸತ್ತವು..
ನೋವುಗಳೊ? ನೆನಪುಗಳೊ?
ಖಾಲಿಯಾದ ದುಃಖ,
ಉಳಿಸಿದ್ದೇನೆಂಬುದೇ ಗುಟ್ಟು
ಬಯಸಿದ್ದು ಮಾಯಾಜಿಂಕೆಯಂತೆ
ಸರಿಯುತ್ತಲೇ ಇತ್ತು..
ಒಲವಾಂಕುರ ಜಿನುಗುತಾ
ಪುಟಿ ಪುಟಿದು ನೆಗೆವಾಗ
ಅವಳ ಒದ್ದಾಟವೆಲ್ಲಾ
ನಿರರ್ಥಕವಾಗಿ..
ಒಲುಮೆಯ ಘಮಲು
ಬಿಡದೆ ಪಸರಿಸುತಿತ್ತು..
ಆ ನೋವು-ನಲಿವ ಮಂಥನದಲೂ
ನೋವಿನದೆ ಮೇಲುಗೈ ಆದಾಗ
ವಿಷಕಂಠನಂತವಳು
ದಿನವೂ ನೊವನುಣ್ಣುತಾ
ಭರವಸೆಯ ದೀವಿಗೆ ಬೆಳಗುತಾ
ಒಲವ ದೀಪವಚ್ಚುವ
ಪ್ರೇಮಮೂರುತಿಯಾದಳು..
ದೀಪದ ಬೆಳಕಲಿ
ಬದುಕಿನ ಸತ್ಯವ ಕಂಡಳು..!
********************************
ಅರ್ಥ ಪೂರ್ಣ ಕವನ
ಆಶಾ
ಥ್ಯಾಂಕ್ಯೂ☺️
ಸುಂದರ ಭಾವಪೂರ್ಣ ಕವನ