ಹರಿಯೇ ಪ್ರೇಮಗಂಗೆ….
ವಿನುತಾ ಹಂಚಿನಮನಿ
ಅಂದು ನೀನೂರಿದ ಪ್ರೀತಿಯ ಬೀಜ
ಚೆಂದದಿ ಬೇರೂರಿ ಮನದಲಿ ಬೆಳೆದಿತ್ತು
ಕೊಂದು ಹಾಕಿದರೂ ನೀ ಕೈಯಾರೆ ಕಿತ್ತು
ಮತ್ತೆ ಮತ್ತೆ ಚಿಗುರಿ ಕೊನರಿ ಕೊನೆಗೆ
ಸತ್ತುಹೋಗುವ ಬದಲು ಜೀವ ಹಿಡಿದು
ಸುಪ್ತವಾಗಿದೆ ನೆಲದಾಳದಲಿ ಉಳಿದು
ಅಂದು ನೀನುರಿಸಿದ ಒಲವ ದೀವಿಗೆ
ಗೆಲುವಾಗಿ ಉರಿದು ಬೆಳಕ ಚೆಲ್ಲಿತ್ತು
ಬಿರುಗಾಳಿಯ ಹೊಡೆತ ಸಹಿಸಿತ್ತು
ನಿನ್ನ ಪ್ರೀತಿಯ ತೈಲವಿಲ್ಲದೆ ಇಂದು
ಉರಿಯುವ ಛಲ ಬಿಡದೆ ಮುರುಟಿ
ಬರಿ ಬತ್ತಿ ಸುಟ್ಟು ಹೋಗುತಿದೆ ಕರಟಿ
ಅಂದು ನೀ ಹರಿಸಿದ ಪ್ರೇಮಗಂಗೆ
ರಭಸದಿಂದ ಮೈದುಂಬಿ ಹರಿದಿತ್ತು
ನಿನ್ನ ಸೇರುವ ಆಸೆಯಲಿ ಸಾಗಿತ್ತು
ಭರವಸೆ ಕಾಣದಿರಲು ತಡವರಿಸಿದೆ
ಅಡೆತಡೆಗಳಿಗೆ ಬೇಸತ್ತು ದಿಕ್ಕುಗಾಣದೆ
ಇಂದು ಕ್ಷೀಣಿಸಿ ಗುಪ್ತಗಾಮಿನಿಯಾಗಿದೆ
ಅಂದು ನೀನಿತ್ತ ವಚನದಲಿ ಜೇನಿತ್ತು
ಮಧುರ ಸುಧೆ ಮನಸು ಆವರಿಸಿತ್ತು
ಕನಸಿನ ಲೋಕದಲಿ ಮತ್ತ ತೇಲಾಡಿಸಿತ್ತು
ಪ್ರೇಮಾಮೃತದ ಕಲಶ ಬರಿದಾಗಿಸಿದೆ
ಇಂದು ದೂರವಾಗುವ ಶಿಕ್ಷೆಯ ವಿಧಿಸಿದೆ
ನನ್ನಾವ ಅಪರಾಧಕೆ ಪ್ರೀತಿ ವಿಷವಾಗಿದೆ
ಹೃದಯಪೀಠದಲಿ ಸ್ಥಾಪಿತ ನಿನ್ನ ಮೂರ್ತಿ
ದೇವರಂತೆ ಪೂಜೆಗೊಳ್ಳುತಿರುವದ ಮರೆತಿ
ಬಂದೊಮ್ಮೆ ನೋಡುವೆಯಾ ನನ್ನಯ ಸ್ಥಿತಿ
ನನ್ನಾತ್ಮ ಕಾಯ್ದಿದೆ ಹಗಲಿರುಳು ನಿನಗಾಗಿ
ಕಲ್ಲಾಗದಿರು ನಲ್ಲ ನೀ ನನ್ನ ಭಾವನೆಗಳಿಗೆ
ನೆನೆ ಅಂತರಂಗದ ಭಾವ ಸಾಕ್ಷಿಯಾದ ಗಳಿಗೆ
*************************