ಶುಭಾಶಯ
ವೀಣಾ ರಮೇಶ್
ಅದೆಷ್ಟೋ ಪ್ರೇಮ ಪತ್ರಗಳು
ವಸಂತನ ಕುಂಚದಲಿ
ಪ್ರೇಮ ತಳಿರಿನ ಚಿಗುರಿನಲಿ,ಬರೆದು
ರವಾನಿಸಿದೆ,
ಸ್ವೀಕರಿಸು ನಲ್ಲೇ
ನಿನ್ನದೊಂದು
ಮುಗುಳು ನಗೆ ಬೀರಿ
ಕೆಂಪು ಗುಲಾಬಿಯಂತೆ
ನಾಚಿ ನಿಂತೆ ನೀನು
ಇರುಳು ಚಲುವ ಹಣತೆ ಪ್ರೇಮದ ಅರಸಿ ನೀನು
ಲಜ್ಜೆ ಕೆಂಪಿನಲಿ ಅರಳಿದ
ಪ್ರಣಯ ಪ್ರಣೀತೆ
ಎದೆಯ ಸಿಹಿಯೊಳಗೆ
ಚೆಲ್ಲಿರುವುದು ಬರಿದಾಗದ
ಸಂಪ್ರೀತಿ
ಬಣ್ಣದ ಹಚ್ಚೆಯಲಿ
ಬರೆದಿರುವುದು ನಿನ್ನ
ಹೆಸರಿನ ಪ್ರೀತಿ
ತೂಗು ಮಂಚದಲ್ಲಿ
ಮೌನ ಪ್ರೇಮ,ಹರೆಯ
ಕೂಗಿದೆ ನಿನ್ನ ಜೊತೆ
ಮೇಘ ಶ್ಯಾಮ ರಾಧೆ
ನಾವಿಬ್ಬರೂ ತೂಗಿದಂತೆ
ಕತ್ತಲ ಕಂಬಳಿ ಕಿತ್ತೊಗೆದು
ಪೂರ್ಣ ಚಂದಿರ
ಹೃದಯ ಬಾನಿಗೆ ಇಳಿದು
ಪ್ರಣಯ ಹಾದಿಗೆ
ಮಧುಚಂದಿರನ ಸೆಳೆದು
ಪ್ರೇಮ ಚಂದಿರ ಈಗ
ಸಿಹಿ ನಗೆಯಲಿ ಬಿರಿದು
************************************