ಪ್ರೇಮ
ಅರುಣ ರಾವ್
ಹೃದಯದರಮನೆಯಲ್ಲಿ ಹೊಸ ರಾಗ
ತಾಳ ಮೇಳಗಳ ಅಲೆಗಳೆಬ್ಬಿಸುವ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ನೋಡದಿದ್ದರೆ ಸತ್ತೇ ಹೋಗುವೆನೆಂದೆನಿಸಿ
ಇರುಳೆಲ್ಲಾ ಕಾಡಿಸಿ ಹಗಲಲ್ಲಿ ಬೇಯಿಸುವ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ಒಮ್ಮೊಮ್ಮೆ ಸರಸ ಮತ್ತೊಮ್ಮೆ ವಿರಸ
ವಿರಸವನ್ನೂ ಅಮೃತದಂತೆ ಸವಿಜೇನಾಗಿಸುವ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ಕ್ಷಣ ಕ್ಷಣವು ಅನುದಿನವು ನೆನಪಿನ
ಅಂಗಳದಲ್ಲಿ ಹಗುರವಾಗಿ ತೇಲಿಸುವ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ತ್ಯಾಗದ ಪ್ರತಿರೂಪ ಅಭಿಮಾನದ ಅನುರೂಪ
ಮರೆತೆವೆಂದರೂ ಮರೆಯಲಾಗದ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ನಿನಗೆ ನೀ ಸರಿಸಾಟಿ ಗಗನಕ್ಕಿಂತಲೂ ಮೇಟಿ
ಆಸೂರ್ಯ ಚಂದ್ರಾರ್ಕವಾಗಿಹ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
ಜಗದಲ್ಲೆಲ್ಲದಕ್ಕೂ ಸಾವುಂಟು ಕೊನೆಯುಂಟು
ಸಂಜೀವಿನಿ ಚಿರಂಜೀವಿ ಅಜರಾಮರವಾಗಿಹ
ನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ?
*********************
Very nice poem
Super ma’am
ಕೆ ಎಸ್ ಎನ್ ಅವರ ಮೈಸೂರು ಮಲ್ಲಿಗೆಯ ಹಾಗೆ ನಿಮ್ಮ ‘ಪ್ರೇಮ ‘ದ ಸಾಲುಗಳ ಕಂಪು, ತಂಗಾಳಿಯಂತೆ ಹಿತ ಕೊಡುತ್ತದೆ, ಚಲನ ಚಿತ್ರದ ಸಂಗೀತಗಾರನಿಗೆ ನಿಮ್ಮ ‘ಪ್ರೇಮ ಸಾಹಿತ್ಯ ‘ ಸಿಕ್ಕರೆ ಇಡೀ ಕನ್ನಡ ನಾಡೇ ಅಷ್ಟೇ ಅಲ್ಲದೆ ಪ್ರೀತಿಸುವ ಎಲ್ಲಾ ಹೃದಯಗಳು ಗುನುಗುವಂತೆ ಮಾಡುತ್ತದೆ.