ಅಂಕಣ ಬರಹ
ಕ್ರಾಂತಿ ಜ್ಯೋತಿ
ಸಾವಿತ್ರಿಬಾಯಿ ಫುಲೆ
ಸಾವಿತ್ರಿಯಿ ಬಾಯಿ ಫುಲೆಯವರು ಈ ನಾಡಿಗೆ (ಸತಾರಾ, ಭಾರತ) ಸಿಕ್ಕಿದ ಅದ್ಭುತ ಚೇತನ. ಒಂದು ಹೆಣ್ಣು ಮನಸು ಮಾಡಿದರೆ ಏನನ್ನಾದರೂ ಸರಿ ಮಾಡಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ ಆಕೆ. ಸಣ್ಣ ವಯಸ್ಸಿಗೆ (9 ವರ್ಷ) ಮದುವೆಯಾಗಿ ಬಂದ ಪುಟ್ಟ ಸಾವಿತ್ರಿ ತನ್ನ ಒಳಗಿನ ಬಿಡುಗಡೆಗೆ ಹಂಬಲಿಸುವ ತುಡಿತವನ್ನು ಮಾತ್ರ ಬಿಟ್ಟುಕೊಡಲಿಲ್ಲ ಎನ್ನುವುದು ಭಾರತದಂತಹ ದೇಶದ ಅಸಂಖ್ಯ ಹೆಣ್ಣುಮಕ್ಕಳ ಸ್ಪೂರ್ತಿಯಾಗಿದೆ. ತಾವು ವಿದ್ಯೆ ಕಲಿತದ್ದೇ ಅಲ್ಲ ಆ ಕಾಲದಲ್ಲಿ ಮಹಿಳಾ ಅಸ್ಮಿತೆ, ಮಹಿಳಾವಾದ (feminism) ಅಂತೆಲ್ಲ ಸರಿಯಾದ ರೂಪು ಪಡೆಯದೆ ಇದ್ದ ಆ ಕಾಲದಲ್ಲಿ ಅದನ್ನೇ ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾ, ಅನಾದಿಕಾಲದ ಕಂದಾಚಾರಗಳನ್ನು ಪ್ರಶ್ನಿಸುವ ಮನೋಭಾವವನ್ನು ಮೂಡಿಸಿಕೊಂಡದ್ದು ಮತ್ತು ಇತರರನ್ನೂ ಪ್ರೇರೇಪಿಸಿದ್ದು ಮಾತ್ರ ಅಸಾಧಾರಣ ವಿಚಾರ. ಒಂದು ರೀತಿಯಲ್ಲಿ ಸಾವಿತ್ರಿಯವರು ಮಹಾನ್ ಗಟ್ಟಿಗಿತ್ತಿ. ಆ ಗಟ್ಟಿತನವೇ ನಮಗೆಲ್ಲ ಆದರ್ಶವಾಗಬೇಕಿರುವುದು. Only the strong and the right one can change the others to the right path ಎನ್ನುವ ಮಾತಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಸಾವಿತ್ರಿ ಬಾಯಿ ಫುಲೆಯವರು.
ಬಹುಶಃ ಈ ಪುಸ್ತಕವನ್ನು ನಾನು ಓದಿರದೇ ಹೋಗಿದ್ದಿದ್ದರೆ ಏನನ್ನೋ ಕಳೆದುಕೊಂಡಂತಾಗುತಿರುತ್ತಿತ್ತೇನೋ. ಅದಕ್ಕಾಗಿ ಡಾ.ಎಚ್.ಎಸ್.ಅನುಪಮಾರನ್ನು ಒಮ್ಮೆ ತಣ್ಣಗೆ ನೆನೆಯಲೇ ಬೇಕು. ವ್ಯಕ್ತಿ ಚಿತ್ರಣವನ್ನು ಕಟ್ಟಿ ಕೊಡುವುದು ಒಂದು ಸವಾಲಿನ ವಿಚಾರ. ಅದರಲ್ಲೂ ಇತಿಹಾಸದ ಪುಟಗಳಿಂದ ಹೀಗೆ ಕಂಡರಿಸುವುದು ಮತ್ತೊಂದೆ ಮಟ್ಟಿಗಿನ ಸವಾಲು. ಅದನ್ನು ಅನುಪಮಾರು ಬಹಳ ಸಲೀಸಾಗಿ ಮೀರಿದ್ದಾರೆ ಎನ್ನುವದು ಅತ್ಯಂತ ಖುಷಿ ಮತ್ತು ಈ ಕೃತಿಯ ಯಶಸ್ಸೂ ಸಹ. ಸಾವಿತ್ರಿ ಬಾಯಿಯವರು ಗಂಡನ ಯಶಸ್ಸಿನ ಹಿಂದೆ ಇದ್ದು ನೆರಳಿನಂತೆ ಕಳೆದುಹೋದವರಲ್ಲ. ಗಂಡನ ಹೆಗಲಿಗೆ ಹೆಗಲು ಕೊಟ್ಟು ಅವರ ಬೌದ್ಧಿಕ ವಿಚಾರಗಳಲ್ಲೂ ಸರಿ ಸಮನಾಗಿ ನಿಂತು ಹೆಜ್ಜೆ ಹಾಕಿದ, ಕೊನೆ ಉಸಿರಿರುವವರೆಗೂ ಅದನ್ನು ನಡೆಸಿಕೊಟ್ಟ ಸಹಧರ್ಮಿಣಿ.
ತಾಯ್ತನ ಎನ್ನುವದು ಬರಿದೆ ಜೈವಿಕ ತಾಯ್ತನಕ್ಕೆ ಸಂಬಂಧ ಪಟ್ಟುದಲ್ಲ. ಅದೊಂದು ಭಾವ. ಆ ಭಾವವಿದ್ದವರೆಲ್ಲಾ ತಾಯಂದಿರಾಗಬಹುದು ಎನ್ಬುವುದು ಸಾವಿತ್ರಿಯವರಿಂದ ಸಾಬೀತಾಗುತ್ತದೆ. ಆಕೆ ತಮ್ಮದೇ ಒಂದು ಮಗುವನ್ನು ಹೆರಲಿಲ್ಲ. ಆದರೆ ದೀನ ದಲಿತರ ಪಾಲಿಗೆ ನಿಜವಾದ ಮಾತೃಪೂರ್ಣ ತಾಯಿಯೇ ಆದರು. ದಲಿತರ ಮಗುವೊಂದನ್ನ ದತ್ತು ಪಡೆದು ಮಗನೆಂದು ಸಾಕಿದರು ಸಹ. ಅವರು ಎಷ್ಟೇ ಸಂಪಾದಿಸಿದರೂ ಧನಸಂಚಯ ಮಾಡಿದವರಲ್ಲ. ದುಡಿದ ಅಷ್ಟೂ ಹಣವನ್ನೂ ಸಾಮಾಜಿಕ ಕಾರ್ಯಗಳಿಗೆಂದು ಮೀಸಲಿಟ್ಟವರು. ಸಾವಿತ್ರಿಯವರನ್ನು ಹತ್ತಿರದಿಂದ ಕಂಡವರು ಹೇಳುವ ಹಾಗೆ, ಸಾವಿತ್ರಿ ಸರಳರು, ಸಾದಾ ಬಟ್ಟೆ ಧರಿಸುತ್ತಿದ್ದವರು, ವಡವೆಗಳನ್ನು ಎಂದೂ ಅವರು ಧರಿಸುತ್ತಿರಲಿಲ್ಲ. ಅತ್ಯಂತ ಶಿಸ್ತಿನ ಸಿಪಾಯಿಯಂತಿದ್ದ ಸಾವಿತ್ರಿ, ತಮ್ಮ ತನು ಮನ ಧನವೆಲ್ಲವನ್ನೂ ತಮ್ಮ ಸಾಮಾಜೋದ್ಧಾರ ಕೆಲಸಗಳಿಗಾಗಿ ಮೀಸಲಿಟ್ಟಿದ್ದರು. ಯಾರೇ ಎಷ್ಟೇ ಹೊತ್ತಲ್ಲಾಗಲಿ ಅವರ ಮನೆ ಬಾಗಿಲಿಗೆ ಬಂದು ಉಂಡು ಹೋಗಬಹುದಿತ್ತು, ಏನೇ ಸಹಾಯವಾದರೂ ಸರಿ ಪಡೆಯಬಹುದಿತ್ತು. ಇದೇ ಕಾರಣಕ್ಕೆ ಬಂಧು ಬಳಗದಿಂದ ದೂರವಾದರು. ಯಾವುದು ನಿರಾತಂಕ ಜೀವನಕ್ಕೆ ವಿರುದ್ಧವಾಗಿರುತ್ತದೋ ಅಂತಹ ಬದುಕು ಸಾಮಾನ್ಯ ಜನರ ಆಯ್ಕೆಯಾಗಿರುವುದಿಲ್ಲ. ನಾಲ್ಕರ ಜೊತೆ ಮತ್ತೊಂದು ಎನ್ನವಂತೆ ಬದುಕಿದರೆ ಸಾಕು ಅವರಿಗೆ. ತಮ್ಮ ಮನೆ ಮಠದ ಉದ್ಧಾರದ ಹೊರತಾಗಿ ಅವರಿಗೆ ಯೋಚಿಸುವುದು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಗೆ ಮಾರಿಯಾಗಿ ಊರಿಗೆ ಉಪಕಾರಿಯಾಗಿ ನಿಲ್ಲುವುದು ಸುಲಭದ ಕೆಲಸವಾಗಿರಲಿಲ್ಲ. ಅದರಲ್ಲೂ ಜಾತಿ, ಸಂಪ್ರದಾಯ, ತಾರತಮ್ಯ, ಅಸ್ಪೃಷ್ಯತೆ, ವಿಧವಾ ಪುನರ್ವಸತಿ ಮತ್ತು ಪುನರ್ವಿವಾಹ, ಅಂತರ್ಜಾತಿ ವಿವಾಹ, ಹೆಣ್ಣುಮಕ್ಕಳ ಶಿಕ್ಷಣ, ಆಂಗ್ಲ ಶಿಕ್ಷಣ…. ಇಂತಹ ವಿಷಯಗಳಲ್ಲಿ ಸಮಾಜದ ಒಪ್ಪಿತ ದಾರಿಯನ್ನು ಬಿಟ್ಟು ಹೊಸದಾರಿ ಕಂಡುಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಈ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲು ಮುಳ್ಳಿನ ಕಚ್ಚಾ ಕಾಡು ಹಾದಿಯಾಗಿತ್ತು. ಅದನ್ನು ನಡಿಗೆಯೋಗ್ಯವನ್ನಾಗಿ ನಿರ್ಮಿಸುವುದು ನಿಜಕ್ಕೂ ದುಃಸ್ಸಾಧ್ಯವೇ ಆಗಿತ್ತು. ಆದರೆ ಆ ದಾರಿಯಲ್ಲಿ ಸಾಗಿ ಕೊನೆಯುಸಿರಿರುವವರೆಗೂ ನಡೆದು ಆದರ್ಶಪ್ರಾಯರಾದ ಈ ಸತಿಪತಿಯರನ್ನು ನೋಡುವಾಗ made for each other ಎನ್ನುವ ನುಡಿಗಟ್ಟು ಬಹುಶಃ ಇವರಿಂದಲೇ ಹುಟ್ಟಿದ್ದಿರಬೇಕು ಅನಿಸಿಬಿಡುತ್ತದೆ.
ಜ್ಯೋತಿಬಾ ಮತ್ತು ಸಾವಿತ್ರಿ ಇಬ್ಬರೂ ಮಹಾರಾಷ್ಟ್ರಾದ ಸತಾರಾದಲ್ಲಿ ಹುಟ್ಟಿದವರು. ಅದೇ ಸತಾರಾದಲ್ಲಿ ಸುಮಾರು ಅವರು ಬದುಕಿ ಹೋಗಿ 150 ವರ್ಷಗಳ ನಂತರ ತೀರಾ ಇತ್ತೀಚೆಗೆ 285 ಹೆಣ್ಣುಮಕ್ಕಳಿಗೆ ನಾಮಕರಣ ಮಾಡುವ ಕೆಲಸ ನಡೆಯಿತು. ಕಾರಣ ಹೆಣ್ಣುಮಕ್ಕಳಿಗೆ ತಮ್ಮದೇ ಆದ ಒಂದು ಹೆಸರಿನ ಭಾಗ್ಯವೇ ಇರಲಿಲ್ಲ. ಅವಕ್ಕೆಲ್ಲ ಇದ್ದದ್ದು ಒಂದೇ ಹೆಸರು “ನಕುಸಾ”, ಅಂದರೆ ಹೆಸರಿಲ್ಲದವಳು ಎಂದು. ಎಂತಹ ಹೆಸರದು! ಯಾವ ಮಣ್ಣಿನಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿಯವರ ಬೆವರು ಹರಿದಿತ್ತೋ ಅದೇ ಮಣ್ಣಿನಲ್ಲಿ ಹೆಣ್ಣುಮಕ್ಕಳ ಕಡೆಗಣನೆ! ಹೆಣ್ಣಿಲ್ಲದೇ ಜಗದ ಚಲನೆಯೇ ನಿಂತುಹೋಗುತ್ತದೆ ಎಂದು ಗೊತ್ತಿದ್ದರೂ ಇಂತಹ ಅನಾಚಾರ ಅವ್ಯಾಹತವಾಗಿ ನಡೆಯುತ್ತಲೇ ಹೋಗುತ್ತದಲ್ಲ ಹೇಗೆ…
ಶಿಕ್ಷಣ ಎಲ್ಲರಿಗಾಗಿ ಎಂದು ಇಲ್ಲದಿದ್ದ ಆ ಕಾಲದಲ್ಲಿ ಅವರು ಎದುರಿಸಿದ ಸವಾಲುಗಳನ್ನು ಗಮನಿಸಿದರೆ ಮೈ ಝುಂ ಎನ್ನುತ್ತದೆ. ಆದರೆ ಇಂದು ಕಾಲಮಾನ ಬದಲಾಗಿದೆ. ಎಷ್ಟೆಲ್ಲ ಅನುಕೂಲತೆಗಳಿವೆ. ಆದರೆ ನಾವು ಎಷ್ಟು ಜನ, ಅಭಾಗ್ಯರಿಗಾಗಿ ವಿದ್ಯೆ ನೀಡುವ ಸಲುವಾಗಿ ಒಂದು ಕಾಳಜಿ ಇಟ್ಟುಕೊಂಡು ಕೆಲಸ ಮಾಡಲು ಹೊರಡುತ್ತೇವೆ?! ಸವಾಲುಗಳು ಈಗಲೂ ಇವೆ. ಇಲ್ಲ ಎನ್ನುವುದಿಲ್ಲ. ಆದರೆ ಸವಾಲು ಮತ್ತು ಸಮಸ್ಯೆಗಳಿಗಿಂತಲೂ ನಮ್ಮ ಗುರಿ ಮತ್ತು ಉದ್ದೇಶಗಳೇ ದೊಡ್ಡವಾಗಬೇಕಿವೆ. ಸುತ್ತಲಿನ ಸಮಸ್ಯೆಗಳಿಗೆ ನಮ್ಮನ್ನು ಎದೆಗುಂದಿಸುವ ಉದ್ದೇಶವಿರುತ್ತದೆ. ಅದು ತನ್ನ ಉದ್ದೇಶವನ್ಬು ಸಾಧಿಸದಂತೆ ನಿಷ್ಫಲಗೊಳಿಸಿ, ನಾವು ನಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವುದು ಗಟ್ಟಿತನ… ಆ ಇಚ್ಛಾಶಕ್ತಿಯನ್ನು ಸಾವಿತ್ರಿ ಯಂಥವರ ಮಾರ್ಗ ಸಾಧಿಸಿ ಕೊಡುತ್ತದೆ. ಅವರು ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವಾಗ ನಾವು ಕನಿಷ್ಠ ಅದನ್ನು ಉಳಿಸಿಕೊಳ್ಳಲು ಒಂದಷ್ಟು ಶ್ರಮಪಡಬಹುದಲ್ಲ…
ಹೀಗೊಂದು ಘಟನೆ ನಡೆಯುತ್ತದೆ. ಜ್ಯೋತಿಬಾ ಅವರು ಮರಣ ಹೊಂದುವ ಮುಂಚೆ ತಮ್ಮ ಸಮಾಧಿ ನಿರ್ಮಿಸಲಿಕ್ಕಾಗಿ ತಾವೇ ಒಂದು ಜಾಗದಲ್ಲಿ ಗುಂಡಿ ತೋಡಿಸಿ ಉಪ್ಪು ತುಂಬಿಸಿ ಇಲ್ಲೇ ತಮ್ಮನ್ನು ಸಮಾಧಿ ಮಾಡಬೇಕೆಂದು ಹೇಳಿರುತ್ತಾರೆ. ಆದರೆ ಅವರ ಸಾವಾದಾಗ ಧಾರ್ಮಿಕ ಮೂಲಭೂತವಾದಿಗಳು ಹಾಗೆ ಅವರ ಅಪರಕರ್ಮಗಳನ್ನು ನಡೆಸಲು ಅವಕಾಶ ಕೊಡುವುದಿಲ್ಲ. ಮೇಲಾಗಿ ಜ್ಯೋತಿಬಾ ಸಾವಿತ್ರಿಬಾಯಿಯವರ ದತ್ತು ಮಗನಿಗೆ ಜ್ಯೋತಿಬಾರ ಅಂತಿಮ ಕರ್ಮಗಳನ್ನು ನೆರವೇರಿಸಲೂ ಬಿಡುವುದಿಲ್ಲ. ದತ್ತು ಮಕ್ಕಳಿಗೆ ಆ ಹಕ್ಕಿಲ್ಲ ಎನ್ನುತ್ತಾರೆ. ಅವರ ಆಸ್ತಿಪಾಸ್ತಿಯನ್ನು ಹೊಡೆಯುವ ಹುನ್ನಾರ ಹೂಡುತ್ತಾರೆ. ಇದನ್ನೆಲ್ಲ ಅರಿತ ಸಾವಿತ್ರಿ ಗಂಡನ ಕೊನೆಯ ಕ್ರಿಯಾವಿಧಿಗಳನ್ನು ತಾವೇ ದಿಟ್ಟತನದಿಂದ ಮಾಡುತ್ತಾರೆ. ಕೊನೆಗೆ ಅವರ ಅಸ್ತಿಯನ್ನು ತಂದು ಜ್ಯೋತಿಬಾ ಅವರ ಆಸೆಯಂತೆಯೇ ಅವರು ಹೇಳಿದ ಜಾಗದಲ್ಲೇ ಅವರ ಸಮಾಧಿಯನ್ನು ಅವರು ಆಸೆ ಪಟ್ಟಂತೆಯೇ ನಿರ್ಮಿಸಿ ಅವರ ಇಚ್ಛೆ ಪೂರೈಸುತ್ತಾರೆ. ಎಂತಹ ಆದರ್ಶ ದಂಪತಿಗಳವರು!
ಸಮಾಜದ ಕಟ್ಟಗಳ ವಿರುದ್ಧ ಹೋರಾಡಿದ ಆದರ್ಶನೀಯ ವ್ಯಕ್ತಿಗಳನ್ನು ಅವರ ಸಾವಿನ ನಂತರ ಅವೇ ಗೊಡ್ಡು ಕಟ್ಟಳಗಳಲ್ಲಿಯೇ ಬಂಧಿಸಲು ಹೊರಡುವ ಸಮಾಜದ ನಡೆ ವಿಷಾದ ಹುಟ್ಟಿಸುತ್ತದೆ.
ಇಂತಹ ಅದೆಷ್ಟೋ ಮನ ಕಲಕುವ ನೈಜ ಘಟನೆಗಳನ್ನು ಆಧಾರ ಸಮೇತ ಕಂಡರಿಸುತ್ತಾ ಹೋಗುತ್ತಾರೆ ಡಾ.ಎಚ್.ಎಸ್.ಅನುಪಮಾ ಅವರು. ಇದೊಂದು ಅದ್ಭುತವಾದ ಅನುಭವ ಕೊಟ್ಟ ಪುಸ್ತಕ… ಅವರ ಬಗ್ಗೆ ಮತ್ತಷ್ಟು ತಿಳಿಯಬೇಕೆನ್ನುವ ಹಂಬಲ ಹುಟ್ಟಿಸಿದಂತಹ ಪುಸ್ತಕ… ಈ ಅನುಭವಕ್ಕೆ ಸದಾ ಶರಣು…
*************************
ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.