ಚರ್ಚೆ

ನಿನ್ನೆ ಸಂಪಾದಕರು ಬರೆದ ‘ಜನರನ್ನತಲುಪುವ ಮಾರ್ಗ’ ಬರಹಕ್ಕೆಕವಿಮಿತ್ರರಾದ ಡಿ.ಎಸ್.ರಾಮಸ್ವಾಮಿಯವರು ನೀಡಿರುವ ಉತ್ತರ ಇಲ್ಲಿದೆ. ಈ ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಬಹುದು

ಡಿ.ಎಸ್.ರಾಮಸ್ವಾಮಿ

ಇವತ್ತಿನ ನಿಮ್ಮ ಬರಹ ನೋಡಿದೆ. ಸಾಹಿತ್ಯ ಪತ್ರಿಕೆಗಳು ಏಕೆ ನಿಲ್ಲಲಾರದೇ ಸೋಲುತ್ತಿವೆ ಎಂದು ಹೇಳ ಹೊರಟ ಬರಹ ಕಡೆಗೆ ಹತ್ತು ರೂಪಾಯಿಗೆ ಮುದ್ರಿಸಿ ಹಂಚುವ “ಜನಪ್ರಿಯ ಸಾಹಿತ್ಯ” ಪ್ರಸರಣದ ಲಾಭದವರೆಗೆ ಬಂದು ನಿಂತಿದೆ.

ಕೆಲವು ವರ್ಷಗಳ ಕಾಲ ಎಡವೂ ಅಲ್ಲದ ಬಲಕ್ಕೂ ವಾಲದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಗತಿಗಳಿಗಳಿಗೆ ಮೀಸಲಾದ ಖಾಸಗೀ ಪ್ರಸಾರದ ಪತ್ರಿಕೆಯೊಂದರ ಜೊತೆ ಗುರ್ತಿಸಿಕೊಂಡು ಆ ಪತ್ರಿಕೆಯು ವಿಶೇಷವಾಗಿ ತಂದ ಅದರ ೭೫ ಮತ್ತು ೧೦೦ ನೇ ಸಂಚಿಕೆಯ ಕಾವ್ಯ ವಿಶೇಷ ಸಂಚಿಕೆಗಳಿಗೆ ನಾಡಿನ ಖ್ಯಾತನಾಮರ ಕವಿತೆಗಳನ್ನು ಹೆಕ್ಕಿ ಓರಣಗೊಳಿಸಿ ನಿಜಕ್ಕೂ ನಿಲ್ಲುವಂಥ ಸಮೃದ್ಧ ಸಂಚಿಕೆ ಮಾಡಿದೆವು. ನಾವು ಆಯ್ಕೆ ಮಾಡಿದ ಕವಿಗಳಲ್ಲಿ ಕೆಲವರು ಸಂಭಾವನೆ ಕೊಡಲ್ಲವೆ ಅಂತ ಕೇಳಿದರೆ ಹಲವು ಕಾರಣಗಳಿಂದ ಹೊರಗುಳಿದ ಕವಿಗಳ ಖಾಯಂ ಶತೃತ್ವ ನನಗೊದಗಿತು. ಕವಿತೆಯೇ ಮುಖ್ಯ ಕವಿ ಆಮೇಲೆ ಅನ್ನುವ ಕಾರಣಕ್ಕೆ ಪರಿವಿಡಿಯಲ್ಲಿ ಬರೀ ಕವಿತೆಗಳನ್ನು ಅಕಾರಾದಿ ವಿಭಾಗಿಸಿ ಕಡೆಯಲ್ಲಿ ಕವಿಯ ವಿಳಾಸ ಕೊಟ್ಟಿದ್ದೆವು. ಅದಕ್ಕೂ ಪ್ರತಿರೋಧ ಬಂತು.

ಅದಕ್ಕಿಂತ ಮುಖ್ಯವಾಗಿ ಎಡದವರು ನೀವು ಬಲಕ್ಕೆ ವಾಲುತ್ತೀರ ಅಂತ ನಮ್ಮನ್ನು ಹೊರಗಿಟ್ಟರೆ ಬಲದವರದು ಬಿಡಿ ಕಾಸು ಖರ್ಚಾಗದೇ ಬಿಟ್ಟಿ ಪ್ರಚಾರ ಬಯಸುವ ಅವರಿಗೆ ನಾವು ಸಂಸ್ಕೃತಿಯ ಮೇಲಣ ದಂಗೆಕೋರರಂತೆ ಕಂಡೆವು. ಸರಿಸುಮಾರು ಮೂವತ್ತು ವರ್ಷ ಆ ಪತ್ರಿಕೆಯನ್ನು ತಮ್ಮೆಲ್ಲ ಸಮಯ ಶ್ರಮ ಮತ್ತು ದುಡಿಮೆಗಳಿಂದ ನಡೆಸುತ್ತಿದ್ದ ಆ ಸಂಪಾದಕರನ್ನು ಅಷ್ಟೂ ದಿನ ಯಾವ ಯಾವ ಕಾರಣಕ್ಕೋ ಸಂಪರ್ಕ ಇರಿಸಿಕೊಂಡಿದ್ದ ಮಹಾಮಹಿಮರೆಲ್ಲ ಆ ಪತ್ರಿಕೆ ಇತ್ತು ಅನ್ನುವುದನ್ನೇ ಮರೆತು ಬಿಟ್ಟರು. ಇನ್ನೂ ಆಸಕ್ತಿಯ ವಿಚಾರವೆಂದರೆ ಆ ಪತ್ರಿಕೆ ಕನ್ನಡದ ಹೊಸ ಬರಹಗಾರರನ್ನು ಕಾಸು ಪೀಕದೇ ಪುಸ್ತಕ ಪ್ರಕಟಿಸುವುದರ ಮೂಲಕ ಬೆಳಸಿತ್ತು ಕೂಡ.

ಯಾವತ್ತೂ ಈ ಖಾಸಗೀ ಪ್ರಸಾರಕ್ಕೆ ಅಥವ ಗುಂಪಿಗೆ ನಡೆಸುವ ಮುದ್ರಣವಾಗುವ ಪತ್ರಿಕೆಗಳಿಗೆ ಜಾಹೀರಾತು ಅಥವ ಕೊಡುಗೆಯ ಬೆಂಬಲ ಬೇಕೇ ಬೇಕು. ಇಲ್ಲವಾದರೆ ನಡೆಸೋದಾದರೂ ಹೇಗೆ?

ಇನ್ನು ಪೋರ್ಟಲ್ ಮೂಲಕ ಸದ್ಯ ಲಭ್ಯವಿರುವ ಕನ್ನಡದ ಪತ್ರಿಕೆಗಳಿಗೆ ಓ(ನೋ)ದುಗರಿದ್ದಾರ ಪರಿಶೀಲಿಸಿದರೆ ನಿರಾಸೆ ಗ್ಯಾರಂಟಿ. ಆ ಕುರಿತು ಮತ್ತೊಮ್ಮೆ ಬರೆಯುವೆ.

ಏಕೋ ನೀವು ಸುರುವಿನಲ್ಲೇ ನಿರಾಸೆಗೊಂಡಂತಿ‍ದೆ. ಮೊದಲು ತಿಳಿಯಬೇಕಾದ ಸತ್ಯ ಎಂದರೆ ಸಾಹಿತ್ಯ ಸಂಸ್ಕೃತಿ ಸಂಗೀತ ಇವೆಲ್ಲವೂ ಯಾವತ್ತೂ ಅಲ್ಪಸಂಖ್ಯಾತರು ಬಯಸುವಂಥವು. ಆದರೆ ಧರ್ಮ ಜಾತಿ ರಾಜಕೀಯ ಮತ್ತು ಮುಖ್ಯವಾಗಿ ಮನರಂಜನೆ ಬಹುಸಂಖ್ಯಾತರ ಇಷ್ಟದ ವಲಯ. ಹಾಗಾಗಿ ಅವನ್ನು ಪ್ರಸರಿಸುವ ಪತ್ರಿಕೆ ಗುಂಪು ಅಥವ ವಾಹಿನಿ ಯಾವತ್ತೂ TRP ಯಲ್ಲಿ ಮೇಲಿರುತ್ತದೆ. ಒಂದು ಬದ್ಧತೆಗೆ ಮತ್ತು ವ್ಯವಸ್ಥೆಯ ವಿಮರ್ಶೆಗೆ ನಿಂತವರು ನಿರಂತರ ಹೊಡೆದಾಡಲೇ ಬೇಕಾದ ಅನಿವಾರ್ಯತೆ ಇರುತ್ತದೆ.

ದಯವಿಟ್ಟು ಕೈ ಚಲ್ಲದೇ ಮುಂದುವರೆಯಿರಿ. ಬೇರೆ ಯಾರಿಗೂ ಅಲ್ಲದಿದ್ದರೂ ನಿಮಗೆ ಇಷ್ಟವಾದ ಬರಹಗಳನ್ನು ಕೆಲವರಿಗಾದರೂ ಮುಟ್ಟಿಸಬಹುದೆನ್ನುವ ಅವಕಾಶಕ್ಕಾದರೂ ಮುನ್ನಡೆಯಿರಿ

(ನೀವೂ ಈ ಚರ್ಚೆಯ ಭಾಗವಾಗಿಬರೆಯಬಹುದು)


Leave a Reply

Back To Top