ಆತ್ಮ ವಿಶ್ವಾಸವಿರಲಿ…

ಲೇಖನ

ಆತ್ಮ ವಿಶ್ವಾಸವಿರಲಿ…

ರಶ್ಮಿ ಹೆಗಡೆ

macro shot of spider web

ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ.

ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ ಕೆಲವೇ ಕೆಲವು ಸೈನಿಕರೂ ಜೀವದ ಆಸೆಗಾಗಿ ರಣರಂಗದಿಂದ ದೂರ ಸರಿದರು.ಸೋಲನ್ನೇ ಅರಿಯದ ಬ್ರೂಸ್ ಆತ್ಮಸ್ಥೈರ್ಯ ಕಳೆದುಕೊಂಡು ಕಂಗಾಲಾದ. ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡ. ಗುಡ್ಡ ಬೆಟ್ಟ, ಕಣಿವೆಗಳಲ್ಲಿ ಏಕಾಂಗಿಯಾಗಿ ಅಲೆಯತೊಡಗಿದ.ಹೀಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರಿಯಲಾರಂಭಿಸಲು ಬ್ರೂಸ್ ಒಂದು ಗುಹೆಯಲ್ಲಿ ಬಂದು ಆಶ್ರಯ ಪಡೆದ.

ನಡೆದಿದ್ದನ್ನು ಮೆಲುಕುಹಾಕುತ್ತ ಕುಳಿತಿದ್ದ ಬ್ರೂಸ್ ನನ್ನು ನಾಜೂಕಾಗಿ ಬಲೆ ನೇಯುತ್ತಿರುವ ಪುಟ್ಟ ಜೇಡವೊಂದು ಆಕರ್ಷಿಸಿತು.ನೇಯುವಾಗ ಪ್ರತಿಬಾರಿಯೂ ವಿಫಲಗೊಂಡು ಬೀಳುತ್ತಿದ್ದ ಜೇಡ ಮತ್ತೆ ಮೇಲೇರುತ್ತಿತ್ತು.  ಪ್ರತಿಬಾರಿ ಬಿದ್ದಾಗಲೂ ಮೊದಲಿಗಿಂತ ಹೆಚ್ಚಿನ ಎಚ್ಚರಿಕೆವಹಿಸುತ್ತಿದ್ದ ಜೇಡ ಕೊನೆಗೂ ಬಲೆ ನೇಯುವುದರಲ್ಲಿ  ಯಶಸ್ವಿಯಾಯಿತು.

ಸೋಲಿಗೆ ಹೆದರದೆ,ಆತ್ಮವಿಶ್ವಾಸ ತೊರೆಯದೆ,ಸತತವಾಗಿ ಪ್ರಯತ್ನಿಸಿ,ಸೋಲನ್ನೇ ಸೋಲಿಸಿದ ಜೇಡದ ಆತ್ಮಬಲ ಹಾಗೂ ಕಾರ್ಯವೈಖರಿ ಬ್ರೂಸ್  ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಬ್ರೂಸ್ ತನ್ನ ವೈಫಲ್ಯಕ್ಕೆ ತಾನೇ ಸವಾಲೊಡ್ಡಿದ.

ಅಷ್ಟು ಚಿಕ್ಕ ಕೀಟವೇ ಸೋಲನೊಪ್ಪಿಕೊಳ್ಳದಿರುವಾಗ ತಾನೇಕೆ ತನ್ನ ಪತನವನ್ನು ಒಪ್ಪಿಕೊಳ್ಳಲಿ ಎಂದು ಯೋಚಿಸುತ್ತ,ಹೊಸ ಹುರುಪಿನೊಂದಿಗೆ ಹೊಸ ವ್ಯಕ್ತಿಯಾಗಿ ಗುಹೆಯನ್ನು ತೊರೆದ. ಮತ್ತೆ ಸೈನ್ಯವನ್ನು ಕಟ್ಟಲು ನಿರ್ಧರಿಸಿ ಜನರನ್ನು ಸೇರಿಸಿದ. ಮೊದಲಿಗಿಂತ ಹೆಚ್ಚು ಬಲಿಷ್ಠವಾದ ಸೈನ್ಯ ಕಟ್ಟಿದ. ಮತ್ತದೇ ಬ್ರಿಟಿಷ್ ದೊರೆಯೊಂದಿಗೆ ಹೋರಾಡಿ ತನ್ನ ರಾಜ್ಯವನ್ನು ಮರಳಿ ಪಡೆದ. ಬ್ರಿಟಿಷರಿಂದ ಸ್ಕಾಟ್ಲೆಂಡ್ ನ್ನು ಮುಕ್ತಗೊಳಿಸಿ ಹೊಸ ಇತಿಹಾಸವನ್ನೇ ರಚಿಸಿದ.

” ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ,ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ”ಎಂಬ ಸಾಲುಗಳು ಇಂದಿಗೂ ಸತ್ಯ.ಯಶಸ್ಸಿನ ಮೂಲ ಮಂತ್ರವೆಂದರೆ ಅದು ‘ಆತ್ಮವಿಶ್ವಾಸ’. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ತೊಡಕುಗಳು ಅನೇಕ.  ಕಲ್ಲು ಮುಳ್ಳು,ಬಿಸಿಲು ಬವಣೆಗಳಿರದ ದಾರಿ ಯಾವುದಿದ್ದೀತು? ಅದೆಷ್ಟೋ ಬಾರಿ ಸಾಧನೆಯತ್ತ ಸಾಗುವ ಮೊದಲ ಹೆಜ್ಜೆಗಳು ತಡವರಿಸಿದಾಗ,ಭಯಪಟ್ಟು,ಮುನ್ನಡೆವ ಭರವಸೆ ಕಳೆದುಕೊಂಡು ಮುಂದೆ ಹೆಜ್ಜೆ ಇಡುವುದನ್ನೇ ನಿಲ್ಲಿಸಿ ಬಿಡುತ್ತೇವೆ. ಹಾಗಂತ ಮುನ್ನಡೆವ ಶಕ್ತಿ ಇಲ್ಲವೆಂದಲ್ಲ,ಆ ಶಕ್ತಿಯ ಪರಿಚಯ ನಮಗೇ ಇರುವುದಿಲ್ಲವಷ್ಟೇ!

ಜೀವನದಲ್ಲಿ  ಗುರಿಯೊಂದಿದ್ದರೆ ಸಾಲದು, ಗುರಿಯತ್ತ ಪಯಣಿಸಲು ಬೇಕಾದ ಸಮಚಿತ್ತ,ತಾಳ್ಮೆ ಹಾಗೂ ಏಕಾಗ್ರತೆಯ ಜೊತೆಗೆ ಮುಖ್ಯವಾಗಿ ಇರಬೇಕಾದ್ದು ‘ಆತ್ಮವಿಶ್ವಾಸ’.

  “ಧೈರ್ಯಮ್ ಸರ್ವತ್ರ ಸಾಧನಂ” ಎಂದು ಆತ್ಮವಿಶ್ವಾಸದಿಂದ ಎದ್ದು ನಿಂತು ಧೈರ್ಯದಿಂದ ಪ್ರಯಾಣ ಮುಂದುವರೆಸುವ ಗುಣ ನಮ್ಮೆಲ್ಲರಲ್ಲಿದ್ದರೆ ಯಾವ ಸಾಧನೆಯೂ ಎಟುಕದ ನಕ್ಷತ್ರವಾಗಲಾರದು.

ಯಶಸ್ಸಿನ ಹೆಬ್ಬಯಕೆಯ ಜೊತೆ ಆತ್ಮವಿಶ್ವಾಸವೂ ಜೊತೆಗಿದ್ದಾಗ, ಸ್ವಸಾಮರ್ಥ್ಯದ ಮೇಲಿನ ನಂಬಿಕೆಯು ವಿಫಲತೆಯ ತೀವ್ರ ಭಯವನ್ನು ಮೆಟ್ಟಿನಿಂತಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ

**************************************

Leave a Reply

Back To Top