ಕವಿತೆ
ಕಿಟಕಿ-ಬಾಗಿಲು
ಸ್ಮಿತಾ ಅಮೃತರಾಜ್.ಸಂಪಾಜೆ.
ಮುಂಬಾಗಿಲು ಸದಾ
ದಿಡ್ಡಿಯಾಗಿ ತೆರೆದೇ
ಇರುತ್ತದೆ.
ಬೆಳಕು ಕಂದಿದ ಮೇಲಷ್ಟೇ
ಮುಚ್ಚಿಕೊಳ್ಳುತ್ತದೆ.
ಬಾಗಿಲೆಡೆಗೆ ಮುಖವೂ
ತೋರಿಸಲು ಬಿಡುವಿಲ್ಲದವರು
ಒಳಗೆ ಗಡಿಬಿಡಿಯಲ್ಲಿರುತ್ತಾರೆ
ಅದಕ್ಕೇ ಬಾಗಿಲು ಸದಾ
ತೆರೆದೇ ಇರುತ್ತದೆ.
ಪುಣ್ಯಕ್ಕೆ ಪ್ರತೀ ಕೋಣೆಗಳಿಗೂ
ಪುಟ್ಟ ಪುಟ್ಟ ಕಿಟಕಿಗಳಿವೆ.
ಹೊರಕ್ಕೆ ನೋಡಲು ಹಾತೊರೆಯುವವರು
ಏನನ್ನೂ ನೋಡದೇ ಸಾಯುತ್ತಿದ್ದೇವೆ ಅಂತ
ಹಲುಬುತ್ತಾ ಶಾಪ ಹಾಕುವಂತಿಲ್ಲ.
ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆ
ಅಂತ ಖಾತ್ರಿ ಪಡಿಸಿಕೊಂಡ ಮೇಲೂ
ಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳು
ಬಿಗಿಯಲ್ಪಟ್ಟಿವೆ.
ಬೆಟ್ಟ ಗುಡ್ಡ ಹಸಿರು
ದೂರದಲ್ಲಿ ಹರಿಯುವ
ತೊರೆಯ ಸದ್ದು
ಚಿತ್ರ ಬಿಡಿಸುತ್ತಾ ಓಡುವ
ಮುಗಿಲು
ಇಷ್ಟಿಷ್ಟೇ ಕಡಲಿಗಿಳಿಯುವ
ಹಗಲು.
ಅಂಗೈಯಷ್ಟಗಲ ಕಂಡರೂ
ಅನಂತ ಆಗಸದಗಲ
ಹಬ್ಬುತ್ತಿದೆ ಒಳಮನೆಯೊಳಗೂ
ಕಲ್ಪನೆಯ ಚಿತ್ತಾರ.
ಕಿಟಕಿ ಅರೆ ಮುಚ್ಚಿಕ್ಕೊಂಡೇ
ಇರುತ್ತದೆ.
ಆದರೂ ಬಿಗಿದ ಸರಳುಗಳ
ಎಡೆಯಿಂದ ಬೆಳಕು ನುಸುಳಿ
ಬರುತ್ತಲಿದೆ.
ಮುಂಬಾಗಿಲು ಸದಾ ತೆರೆದೇ
ಇರುತ್ತದೆ.
ಅಡ್ಡಕ್ಕೆ ಜೋಡಿಸಿದ ಪುಟ್ಟ
ಕಟ್ಟಳೆ ಕಾವಲಂತೆ
ಕಾಯುತ್ತಿದೆ.
ತೋರಿದಂತೆ ತೋರಗೊಡುವ
ತೋರಿಕೆಯ ಬಾಗಿಲು
ಬಿಗಿದ ಕಿಟಕಿ ಸರಳುಗಳ ನಡುವೆಯೂ
ಉಯ್ಯಾಲೆ ಕಟ್ಟಿ ತೂಗಿ ಹೋಗುವ
ಕವಿತೆ ಸಾಲು.
ಕಿಟಕಿ-ಬಾಗಿಲುಗಳು
ಎಲ್ಲಾ ಕಡೆಗಳಲ್ಲೂ ಇವೆ.
ಕೆಲವೊಂದು ಕಡೆ ಪಾತ್ರಗಳು
ಅದಲು ಬದಲಾಗುತ್ತವೆ.
***********************************
ಒಳ್ಳೆಯ ಪದ್ಯ
Nice poem Smitha…
Nice ಸ್ಮಿತಾ ಜೀ
“ತೋರಿಕೆಯ ಬಾಗಿಲು
ಬಿಗಿದ ಕಿಟಕಿ ಸರಳುಗಳ ನಡುವೆಯೂ
ಉಯ್ಯಾಲೆ ಕಟ್ಟಿ ತೂಗಿ ಹೋಗುವ
ಕವಿತೆ ಸಾಲು.”
ಸದರಿ ಸಾಲುಗಳು ಓದಿದಾಗ ಹಿಡಿದಿಟ್ಟವು……