ಅಂಕಣಬರಹ
ಗೊಂಬೆಗೆ ತೊಡಿಸಿದ
ಬಣ್ಣದ ಅಂಗಿ
ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು.
ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ.
ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು ಬಂದಂತೆ ಇರುವ ನೇರಳೆಮರ ಎರಡು ಮರಗಳ ನಡುವೆ ಹಿಂಬದಿಯಲ್ಲಿ ಪುಟ್ಟ ದೇಹದ ನೆಕ್ಕರೆ ಮಾವಿನ ಮರ, ಬಾಲ್ಯದ ನಮ್ಮ ಒಡನಾಡಿಗಳು.
ಆ ಆಲದ ಮರದ ಬಿಳಲುಗಳನ್ನು ಹಿಡಿದು ನೇತಾಡುತ್ತಿದ್ದದ್ದು ,ಉಯ್ಯಾಲೆ ಆಡಿದ್ದೂ, ಅಂಗೈ ಗುಲಾಬಿಯಾಗಿ ಫೂ.ಫೂ ಎಂದು ಊದಿ ಉರಿ ಕಡಿಮೆಯಾಗಿಸಿಕೊಂಡದ್ದು..ನೇರಳೆ ಮರದ ಅಡಿಯಲ್ಲಿ ಕಾದು ಕಾದು ನೇರಳೆ ಹಣ್ಣ ಹೆಕ್ಕಿ ತಿಂದು ಬಾಯಿ ಮಾತ್ರವಲ್ಲ ಅಂಗಿ ಕೂಡ ಬಣ್ಣ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಹನಿಯುವ ಮೊದಲೇ ಡುಮ್ ಡುಮ್ ಎಂದು ಈ ಕುಳ್ಳ ಮಾವಿನ ಮರ ಹಣ್ಣು ಬಿಸಾಕುತ್ತಿತ್ತು. ನಾವು ಒದ್ದೆಯಾಗುವ ಭಯವಿಲ್ಲದೆ ಓಡಿ ಹೋಗಿ ಹೆಕ್ಕುತ್ತಿದ್ದೆವು. ಆಲದ ಮರದ ಬುಡದಲ್ಲಿ ಕುಳಿತು ಮಾವಿನ ಹಣ್ಣು ಚೀಪುತ್ತಿದ್ದೆವು.
ಈ ಮರಗಳ ನೆರಳನ್ನು ದಾಟಿ ಮುಂದೆ ಹೋಗುವಾಗ ಲೆಕ್ಕಮಾಡಿ ಮೂರೇ ಮನೆ. ಒಂದು ನನ್ನ ಗೆಳತಿಯ ಮನೆಯಾದರೆ, ಮತ್ತೆ ಪುಟ್ಟದಾದ ಮನೆ ಬೇಬಿಯವರದ್ದು. ಅಲ್ಲಿ ಕಡ್ಡಿ ದೇಹದ,ಎಲುಬಿನ ಹಂದರ ಕಾಣುವಂತೆ ಇರುವ ಅವರ ಐದಾರು ಗಂಡು ಮಕ್ಕಳು.ನಂತರದಲ್ಲಿ ಸಿಗುವುದು ಬೆಂಕಿಯ ಎದುರು ಊದುಗೊಳವೆ ಹಿಡಿದು ಕಬ್ಬಿಣದ ಉದ್ದದ ಕಡ್ಡಿ ಹಿಡಿದು ಕೆಲಸ ಮಾಡುವ ಮಾಧವ ಆಚಾರಿಯವರ ಅಂಗಡಿ. ಅಂಗಡಿ ಅಗಲಕ್ಕೆ ಬಾಯಿ ತೆರೆದು ಕೂತಿದ್ದರೆ ಅದರದ್ದೇ ಹಲ್ಲಿನಂತೆ ಎದುರು ಮೆಟ್ಟಲಿನಲ್ಲೇ ಕೂತುಕೊಳ್ಳುವ ಅವರ ಹೆಂಡತಿ,ಮಗಳು ಕಲಾವತಿ. ಅವರು ನಮಗೆ ಕಲಾವತಿಯಕ್ಕ. ರಜೆ ಬಂದಾಗ ಅಥವಾ ಇಳಿಸಂಜೆಗೆ ಎರಡು ಮನೆಯ ನಡುವಿನ ಓಣಿಯಲ್ಲಿ ನಡೆದು ಅವರ ಮನೆಯ ಕಿಟಕಿ ಬಳಿ ನಿಂತು ಕರೆಯಬೇಕು. ಕಲಾವತಿಯಕ್ಕ ಬಣ್ಣಬಣ್ಣದ ಪುಟ್ಟಪುಟ್ಟ ಬಣ್ಣದ ಬಾಟಲು ಹಿಡಿದು ಬರುತ್ತಾರೆ. ನಾವು ಕಿಟಕಿಯಿಂದ ನಮ್ಮ ಕೈ ಒಳಗೆ ತೂರಿಸಿದರೆ ಚುಮ್ ಅಂತ ತಂಪು ಉಗುರಿಗೆ ಇಳಿದು ಬಣ್ಣ ಕೈ ಬೆರಳಿನ ಉಗುರನ್ನು ತುಂಬಿಕೊಳ್ಳುತ್ತದೆ. ಎಷ್ಟು ಬಗೆಯ ಬಣ್ಣಗಳು.
ಹಚ್ಚಿದ ನಂತರ ಅವರ ಎಚ್ಚರಿಕೆ.
” ಅಂಗಿಗೆ ತಾಗಿಸಬಾರದು. ಹಾಳಾದರೆ ಮತ್ತೆ ಹಚ್ಚುವುದಿಲ್ಲ”
ಕೆಲವೊಮ್ಮೆ ಅವರ ಅಮ್ಮ ಕಿಟಕಿಯಲ್ಲಿ ಹಣಕಿ ಗದರಿಸುವುದೂ ಇದೆ.
” ಹೋಗಿ, ಹೋಗಿಯಾ..ಅವಳಿಗೆ ಮನೆಯಲ್ಲಿ ಕೆಲಸ ಇಲ್ಲವಾ”
ರಂಗದ ಬಣ್ಣಗಳು ನಮ್ಮನ್ನು ನಮ್ಮಿಂದ ಪಲ್ಲಟಗೊಳಿಸುತ್ತ ಬೇರೇನೇನನ್ನೋ ಸೇರಿಸುತ್ತ ಹೋಗುವಾಗ ಕಲಾವತಿಯಕ್ಕನ ಚಿಕ್ಕಚಿಕ್ಕ ಬಣ್ಣದ ಬಾಟಲುಗಳ ದ್ರವ ನಮ್ಮನ್ನು ಸ್ಪರ್ಶಿಸಿ ಘನವಾಗುತ್ತಿದ್ದ ನೆನಪುಗಳು ಆಪ್ತವೆನಿಸಿಕೊಳ್ಳುತ್ತದೆ.
ಕಲಾವತಿಯಕ್ಕನವರ ಅಂಗಡಿ( ಅವರನ್ನೂ) ಸವರಿದಂತೆ ದಾಟಿ ಹೋದರೆ ನಾರಾಯಣಮಾಮನ ಅಂಗಡಿ. ಊರವರಿಗೆ ಅದು ಕಾಮತ್ರ ಅಂಗಡಿಯಾದರೆ ನಮಗೆ ಮಕ್ಕಳಿಗೆ ಮಾತ್ರ ನಾರಾಯಣ ಮಾಮನ ಅಂಗಡಿ. ಅವರು ಆ ಅಂಗಡಿಯಲ್ಲಿ ಕೆಲಸಕ್ಕೆ ಇರುವುದು.
ಜಿನಸು ಅಂಗಡಿಯಲ್ಲಿ ತೊಗರಿ,ಉದ್ದು,ಮೆಣಸು ಸಾಸಿವೆ ಕಾಗದದ ಪೊಟ್ಟಣದಲ್ಲಿ ಕೊಡುವುದು ಅಂದಿನ ಕ್ರಮ. ಆಗ ಪ್ಲಾಸ್ಟಿಕ್ ಉಪಯೋಗ ಬಹಳ ಇದ್ದ ನೆನಪಿಲ್ಲ. ಆ ಅಂಗಡಿಗೆ ರಾಶಿ ಪೇಪರ್, ಪುಸ್ತಕಗಳು ಬಂದು ಬೀಳುತ್ತಿತ್ತು. ಬಿಡುವಿನ ವೇಳೆಯಲ್ಲಿ ಇವರಿಗೆ ಅದನ್ನು ಪರಪರಪರ ಹರಿದು ತನಗೆ ಬೇಕಾಗುವ ಅಳತೆಗೆ ತುಂಡು ಮಾಡುವ ಕೆಲಸ. ಪುಸ್ತಕಗಳೂ ಬರುತ್ತಿದ್ದವು. ನಾವು ಅಂಗಡಿಗೆ ಸಾಮಾನು ತರಲು ಹೋಗಿ ಪಟ್ಟಿಯಲ್ಲಿರುವ ಪೊಟ್ಟಣಗಳು ನಮ್ಮ ಚೀಲ ಸೇರಿದರೂ ಚಾಕಲೇಟಿಗೆ ಕಾಯುವ ಹಾಗೆ ಸುಮ್ಮನೆ ಅವರ ಮುಖ ನೋಡುತ್ತಾ ನಿಲ್ಲುವುದು. ಅವರು ಸನ್ನೆಯಲ್ಲೇ ಮೂರು, ಎರಡು, ಆಮೇಲೆ, ಇಲ್ಲ ಹೀಗೆ ಸಂದೇಶ ರವಾನಿಸುವುದು.
ನಮ್ಮನ್ನು ಅವರ ರೂಮಿನ ಬಳಿ ಆದಿತ್ಯವಾರ ಬರ ಹೇಳುವುದೂ ಇತ್ತು. ಆದಿತ್ಯವಾರ ಅವರಿಗೆ ರಜೆ. ಅಲ್ಲಿ ಈ ಮಾಮನ ಕೋಣೆಯಲ್ಲಿ ರಾಶಿ ಚಂದಮಾಮ ಮಾತ್ರವಲ್ಲ ಬಗೆಬಗೆಯ ಕಥೆ, ಚಿತ್ರದ ಪುಸ್ತಕಗಳು. ಚಂದಮಾಮ ಪುಸ್ತಕದ ಕಥೆಗಳು, ಜತೆಗೆ ಅದರೊಳಗಿನ ಅನೇಕ ಚಿತ್ರಗಳು ನನಗೆ ಅಚ್ಚುಮೆಚ್ಚು. ಪುಟಪುಟಗಳಲ್ಲೂ ಕಥೆಯ ಮೇಲ್ಗಡೆ, ಎಡಬದಿ ಅಚ್ಚಾದ ಹಲವು ಭಾವಾಭಿನಯದ,ಕತೆಗೆ ಹೊಂದುವ ಚಿತ್ರಗಳು ನೇರ ಇಳಿದುಬಂದು ಮನಸ್ಸಿನೊಳಗೆ ಜಾಗ ಹಿಡಿದು ಕೂರುತ್ತಿದ್ದವು. ಆ ಚಿತ್ರಗಳ ಹಾಗೆಯೇ ಮುಖಾಭಿನಯ ಮಾಡುವ ಹುಚ್ಚು ನನಗೆ.
ಹೊಸಹೊಸ, ನವನವೀನ ಪಾತ್ರಗಳು ಭಿತ್ತಿಯಲ್ಲಿ ಆಟವಾಡುತ್ತಿದ್ದವು.
ಕಲ್ಪನೆಯ ಲೋಕದ ಅನಿಯಂತ್ರಿತ ದಂಡಯಾತ್ರೆಗೆ ಇವುಗಳು ಸುರಿದು ಕೊಟ್ಟ ಕಪ್ಪ ಕಾಣಿಕೆ ಅಷ್ಟಿಷ್ಟಲ್ಲ. ಈಗಲೂ ವರ್ತಕ, ಬೇತಾಳ, ರಾಜ, ರಾಜಕುಮಾರಿ, ರೈತ ಎಂಬ ಪದದ ಒಳಗಿನ ಆತ್ಮದಂತೆ ಈ ಚಿತ್ರಗಳು ತೆರೆದುಕೊಳ್ಳುವ ಪರಿ, ಆ ವಿಸ್ಮಯ ಅನುಭವಿಸಿದವರಿಗಷ್ಟೇ ವೇದ್ಯ. ರಂಗದಲ್ಲೂ ಹೀಗೇ ತಾನೇ!. ಪುಟಪುಟಗಳನ್ನು ತಿರುಗಿಸಿದಂತೆ ಪಾತ್ರಗಳು ಬದಲಾಗುತ್ತಾ ನಾವು ನಾವಲ್ಲದ ನಾವೇ ಆಗಿ ತೆರೆದುಕೊಳ್ಳುವ ಸೋಜಿಗ. ನನ್ನ ಬಣ್ಣದ ಲೋಕದ ಬಾಗಿಲೇ ಚಂದಮಾಮ.
ಅಂತಹ ಚಂದಮಾಮದ ರಾಶಿ ಹಾಕಿ ಕಬ್ಬಿಣದ ತುಂಡನ್ನು ಸೆಳೆಯುವ ಆಯಸ್ಕಾಂತದಂತೆ ನಮ್ಮನ್ನು ಈ ನಾರಾಯಣ ಮಾಮ ಆಟವಾಡಿಸುತ್ತಿದ್ದ. ಕೆಲವೊಮ್ಮೆ ಮಾತ್ರ ವಿಪರೀತ ಸಿಡುಕಿ ಕೋಲು ತೋರಿಸಿ ಹೆದರಿಸುತ್ತಿದ್ದುದೂ ಉಂಟು.
ಆದಿತ್ಯವಾರ ನಮಗೆ ಭಾರೀ ಕೆಲಸಗಳು. ಈ ನಾರಾಯಣ ಮಾಮನ ರೂಮಿನ ತಲಾಶ್ ಮುಗಿಸಿ ಒಂದಷ್ಟು ಪುಸ್ತಕ ಕೈ,ಕಂಕುಳಲ್ಲಿಟ್ಟು ಹೊರ ಬಂದರೆ ಮುಖ್ಯರಸ್ತೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬಾಬಣ್ಣನ ಅಂಗಡಿ. ಉದ್ದದ ಹಾಲ್ ನಂತಹ ಅಂಗಡಿಯ ನಡುವಿನಲ್ಲಿ ಬಾಗಿಲು. ಬಾಬಣ್ಣ ಒಂದು ಮೂಲೆಯಲ್ಲಿ ತನ್ನ ಟೈಲರಿಂಗ್ ಮೆಶಿನ್ ಹಿಂದೆ ಕೂತು ಟಕಟಕ ಶಬ್ದ ಹೊರಡಿಸುತ್ತಾ ಬಟ್ಟೆ ಹೊಲಿಯುತ್ತಿರುತ್ತಾರೆ. ಪಕ್ಕದಲ್ಲಿ ತುಂಡು ಬಟ್ಟೆಗಳ ಸಣ್ಣ ರಾಶಿ. ಇನ್ನೊಂದು ಬದಿಯಲ್ಲಿ ಉದ್ದದ ಒಂದು ಕೋಲು. ಮೂಗಿನ ತುದಿಗೆ ಅಂಟಿಕೊಂಡ ಕಪ್ಪು ಚೌಕಟ್ಟಿನ ದಪ್ಪ ಕನ್ನಡಕ, ಕಪ್ಪು ಬಿಳಿ ಸಂಧಾನ ಮಾಡಿಕೊಂಡಂತೆ ಬೆರೆತಿರುವ ತಲೆಗೂದಲು, ಬಾಯಿಯಲ್ಲಿ ತುಂಬಿಕೊಂಡ ಬೀಡ.
ನಮ್ಮ ಧಾಳಿ ಅವರ ಅಂಗಡಿಗೆ ಆಗುವುದನ್ನು ಕನ್ನಡಕದ ಮೇಲಿನಿಂದ ನೋಡಿ ” ಹುಶ್ ಹುಶ್” ಎಂದು ಕಾಗೆ ಓಡಿಸುವಂತೆ ತಾಂಬೂಲ ತುಂಬಿಕೊಂಡ ಬಾಯಿಯಿಂದಲೇ ಗದರಿಸುವಿಕೆ. ನಮಗೆ ಅದೆಲ್ಲ ಒಂದು ಚೂರೂ ಲೆಕ್ಕಕ್ಕಿಲ್ಲ. ನಾವು ಇನ್ನೊಂದು ಮೂಲೆಯಲ್ಲಿ ಬಿದ್ದಿರುವ ಸಣ್ಣ ಸಣ್ಣ ತುಂಡು ಬಟ್ಟೆಗಳ ದೊಡ್ಡ ರಾಶಿಯತ್ತ ಓಡುವುದು. ಪುಸ್ತಕ ಅಲ್ಲೇ ಮೂಲೆಯಲ್ಲಿ ಪೇರಿಸಿಟ್ಟು ಬಟ್ಟೆಗಳ ರಾಶಿಯಲ್ಲಿ ನಮ್ಮದು ಹುಡುಕಾಟ. ಗೋಪುರದಂತಿರುವ ರಾಶಿ ನಮ್ಮ ಹಾರಾಟಕ್ಕೆ ಕುಸಿದು ಆಕಾರ ಬದಲಾದಂತಾಗುವುದೂ, ಕೆಲವೊಮ್ಮೆ ನಾವೇ ಮೇಲೆ ಏರಿ ಕೆಳಗೆ ಹಾರಿ ಬಿದ್ದು ಕೂಗುವುದು ಸಾಮಾನ್ಯ ಸಂಗತಿ. ಆಗ ಬಾಬಣ್ಣ ತನ್ನ ಸ್ವಸ್ಥಾನದಿಂದ ಪಕ್ಕದಲ್ಲಿದ್ದ ಕೋಲು ತಗೊಂಡು ಓಡಿ ಬರುತ್ತಾರೆ. ನಮಗೆ ಅದು ಆಟದ ಎರಡನೇ ಭಾಗ. ನಾವು ಬಟ್ಟೆಯ ರಾಶಿಗೆ ಸುತ್ತು ಬರುವುದು,ಹಾರುವುದು ಮೇಲೇರುವುದು. ಹಿಂಭಾಲಿಸುವ ಬಾಬಣ್ಣ “ಹ್ಹೇ ಹ್ಹೇ” ಬಟ್ಟೆಯ ರಾಶಿಗೆ ತನ್ನ ಕೋಲಿನಿಂದ ಹೊಡೆಯುವುದು. ನಾವು ಬಾಬಣ್ಣನಿಂದ ತಪ್ಪಿಸಿಕೊಂಡು ಓಡುವುದು. ಬಾಯಲ್ಲಿದ್ದ ಕವಳದಿಂದ ಸಲೀಸಾಗಿ ಬಯ್ಯುವುದೂ ಸಾಧ್ಯವಾಗದೆ ಬಾಗಿಲ ಬಳಿ ಓಡಿ ಬೆರಳೆರಡು ತುಟಿಗಳ ಮೇಲಿಟ್ಟು ಬಾಯಿಯಲ್ಲಿದ್ದ ಕೆಂಪು ರಸವನ್ನು ಪುರ್ರೆಂದು ಪಿಚಕಾರಿಯಂತೆ ಉಗುಳಿ ಬರುವಾಗ ನಾವು ಒಳಗೆ ಅಡಗಿಯಾಗುತ್ತಿತ್ತು.
” ಹೊರಗೆಬನ್ನಿ, ಬನ್ನಿಯಾ..”
ಅಂತ ಕೂಗಿ ಕೂಗಿ ಮತ್ತೆ ಹೋಗಿ ತನ್ನ ಕುರ್ಚಿಗೆ ಅಂಟುತ್ತಿದ್ದರು.
“ಲಗಾಡಿ ಹೋಯ್ತು ಇಡೀ ಅಂಗಡಿ. ಈ ಬಟ್ಟೆಗಳನ‌್ನು ಸರಿ ಮಾಡುವುದು ಯಾರು? ಇನ್ನೊಮ್ಮೆ ಯಾರಾದರೂ ಬಟ್ಟೆ ರಾಶಿ ಹತ್ತಬೇಕು. ಹೊರಗೆ ಹೋಗಲು ಬಿಡುವುದಿಲ್ಲ. ಇಲ್ಲೇ ಕಟ್ಟಿ ಹಾಕ್ತೇನೆ”
ಎನ್ನುತ್ತಿದ್ದರು. ಅಪರೂಪಕ್ಕೊಮ್ಮೆ ಅವರ ಕೈಗೆ ಸಿಕ್ಕಿಬಿದ್ದರೂ ಅವರು ಹೊಡೆದದ್ದಿಲ್ಲ. ನಾವು ಕಿರುಚಿದ್ದಷ್ಟೆ. ಅವರ ಊರು ಯಾವುದು, ಎಲ್ಲಿಂದ ಬರುತ್ತಿದ್ದರು ಗೊತ್ತಿಲ್ಲ. ಅವರೆಂದರೆ ನಮಗೆ ಬಹಳ ಪ್ರೀತಿ. ನಾನೂ ಯಾರೂ ಇಲ್ಲದ ಸಮಯ ಹೋಗಿ ಬಣ್ಣದ ಬಟ್ಟೆ ತುಂಡು ಆರಿಸಿ ಅವರ ಬಳಿ ಹೋಗಿ
” ನನ್ನ ಗೊಂಬೆಗೆ ಅಂಗಿ ಹೊಲಿದು ಕೊಡ್ತೀರಾ”
ಎಂದರೆ ಪ್ರೀತಿಯಿಂದ ದಿಟ್ಟಿಸಿ
“ಇದು ಚಿಕ್ಕದಾಯಿತು. ತಡಿ, ಬಂದೆ”
ಎನ್ನುತ್ತಾ ಆ ಬಟ್ಟೆ ರಾಶಿಯಿಂದ ಬೇರೆ ಬಟ್ಟೆ ಆರಿಸುತ್ತಿದ್ದರು. ಇದು ಬೇಡ ಅಂದರೆ ಇದು, ಇದು ಎಂದು ಕೆಲವು ತುಂಡು ಬಟ್ಟೆ ತೋರಿಸಿ ಒಂದನ್ನು ಆರಿಸಿ ನಾಳೆ ಅಂಗಿ ಮಾಡಿ ಕೊಡ್ತೇನೆ., ಎಂದು ಹೊಲಿದು ಕೊಡುವ ಮಮತಾಮಯಿ. ನಾನು ನನ್ನ ಉಳಿದ ಇಬ್ಬರು ಗೆಳತಿಯರಿಗೆ ತೋರಿಸಿ ಅವರೂ ಬಂದು ಹಠಕ್ಕೆ ಬೀಳುತ್ತಿದ್ದರು. ಆಗ ಕೋಪ ಮಾಡಿ
” ನನ್ನ ಅಂಗಡಿಯೊಳಗೆ ಬಂದರೆ ಜಾಗ್ರತೆ. ಹೋಗಿ ಹೊರಗೆ”
ಎಂದು ಗದರಿಸಿದರೂ ಮೂರು ಅಂಗಿಗಳು ನಮ್ಮಲ್ಲಿರುವ ಒಂದು ಗೊಂಬೆಗೆ ತಯಾರಾಗುತ್ತಿದ್ದವು.
ಕಿಟಕಿಯ ಬಳಿ ಕುಳಿತುಕೊಳ್ಳುವ ಬಾಬಣ್ಣ ಕಿಟಕಿಯ ದಂಡೆಯಲ್ಲಿ ಒಂದು ರೆಡಿಯೋ ಇಟ್ಟಿದ್ದರು. ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಂಗಿ, ಚಡ್ಡಿ. ಪ್ಯಾಂಟ್. ಹುಡುಗಿಯರ ಫ್ರಾಕ್, ಉದ್ದಲಂಗ, ರವಕೆ, ಸ್ಕರ್ಟ್, ಸೀರೆಯ ಬ್ಲೌಸ್. ಬಾಬಣ್ಣನ ಅಂಗಡಿಯಲ್ಲಿ ರೂಪುಗೊಳ್ಳುತ್ತಿದ್ದವು. ಅವರಿಗೆ ಯಾರೂ ಸಹಾಯಕರು ಇಲ್ಲ. ಅವರೇ ಎಲ್ಲವನ್ನೂ ಮಾಡುತ್ತಿದ್ದರು. ತಮ್ಮ ಬಳಿಯ ಟೇಪ್ ಹಿಡಿದು ಅಳತೆ ಮಾಡು, ಬಟ್ಟೆ ಕತ್ತರಿಸು, ಹೊಲಿದು ಕೊಡು. ಹೊಸ ಪಾತ್ರ ಕಟ್ಟಿಕೊಡುವ ನಿರ್ದೇಶಕನಂತೆ ಅವರ ಅಂಗಡಿಯಲ್ಲಿ ಬಗೆಬಗೆಯ ದಿರಿಸುಗಳು ಹುಟ್ಟಿ ಅಲ್ಲಲ್ಲಿ ರಾಶಿ ಬೀಳುತ್ತಿದ್ದವು. ಅವರು ಮಾಡಿಕೊಡುವ ಚೆಂದದ ವಸ್ತೃಗಳನ್ನು ಕಂಡು ಏಕಲವ್ಯನಂತೆ ನಾವೂ ನಮ್ಮ ಗೊಂಬೆಗೆ ದಿರಿಸು ತಯಾರಿಸುತ್ತಿದ್ದೆವು.
ನಮ್ಮ ಗೊಂಬೆಗೆ ಪ್ರೀತಿಯಿಂದ ನೇವರಿಸಿ ಮಗ್ಗದ ಸೀರೆಯ ತುಂಡಿನಿಂದ ಸೀರೆ ಮಾಡಿ ಸುತ್ತಿ ಸೆರಗು ತಲೆಯ ಮೇಲಿನಿಂದ ಬರುವಂತೆ ಹಾಕಿದರೆ ಪುಟ್ಟ ಪುಟಾಣಿ ಗೊಂಬೆ ಅಜ್ಜಿಯಾಗಿ ಬಿಡುತ್ತಿದ್ದಳು.
ಅವಳನ್ನು ದಪ್ಪ ಮಾಡಲು ಮೊದಲು ಒಂದೆರಡು ಬಟ್ಟೆ ಸುತ್ತಿ ಕೊನೆಗೆ ಮಗ್ಗದ ತುಂಡು ಉಡಿಸುತ್ತಿದ್ದೆವು.
ಸಿಲ್ಕ್ ಸೀರೆಯಂತಹ ಹೊಳಪು ಬಟ್ಟೆ ಸಿಕ್ಕಿದರೆ ನಮ್ಮ ಗೊಂಬೆ ರಾಜಕುಮಾರಿ.
ತಲೆಯ ಮೇಲಿನಿಂ ದ ಆ ಬಟ್ಟೆ ಎರಡೂ ಬದಿ ಇಳಿಸಿ ಬಿಡುವುದು. .ಮತ್ತೊಂದು ಬಣ್ಣದ ಬಟ್ಟೆ ಅದಕ್ಕೆ ಸುತ್ತಿ ನವೀನ ಮಾದರಿಯ ಬೊಂಬಾಯಿ ವಸ್ತೃ ಶೃಂಗಾರ. ಈಗ ಬೊಂಬೆ, ಮುಂಬಯಿಯ ಷಹರಸುಂದರಿ.
ಬೊಂಬೆ ಅಮ್ಮನಾದರೆ ಸಾಧಾರಣ ಸೀರೆ ಚೆಂದ ಮಾಡಿ ಸೆರಗು ಹಾಕಿ ತಯಾರು ಮಾಡುತ್ತಿದ್ದೆವು.
ಫ್ರಾಕ್ ಹಾಕಿಸಿದರೆ ಬೊಂಬೆ ಚಂದದ ಶಾಲಾ ಹುಡುಗಿ.
ಹೀಗೆ ನಮ್ಮಲ್ಲಿದ್ದ ಒಂದೇ ಒಂದು ಬೊಂಬೆ, ನಮ್ಮ ಬಣ್ಣದ ಚೌಕಿಯೊಳಗಿಂದ ಮೇಕಪ್ ಮಾಡಿಸಿಕೊಂಡು ಹಲವು ಪಾತ್ರಗಳಾಗಿ ಹೊಳೆಯುತ್ತಿತ್ತು.
ಬಟ್ಟೆಗಳ ಉದ್ದ ವ್ಯತ್ಯಾಸವಾದರೆ ಪುಟ್ಟ ಹೊಲಿಗೆ ಬೇಕಾದರೆ ಮತ್ತೆ ಗೊಂಬೆಯ ಜೊತೆಗೇ ಹೋಗಿ ಬಾಬಣ್ಣನಿಗೆ ದುಂಬಾಲು ಬೀಳುತ್ತಿದ್ದೆವು. ನಮ್ಮ ಬಳಿ ಪುಟ್ಟದಾದ ಒಂದು ಡಬ್ಬಿ. ಅದರೊಳಗೆ ವೇಷದ ಬಟ್ಟೆಗಳು. ಅದೆಷ್ಟು ಬಗೆಬಗೆ. ಕೆಲವೊಮ್ಮೆ ಪುರುಸೊತ್ತಿದ್ದರೆ ಬಾಬಣ್ಣ ಹೊಸ ರೀತಿಯ ಅಂಗಿ ಹೊಲಿದು ಅವರೇ ಅದಕ್ಕೊಂದು ಹೆಸರಿಟ್ಟು ಕನ್ನಡಕದ ಮೇಲಿನಿಂದ ನಮ್ಮ ಮೇಲೆ ಕಣ್ಣು ಹರಿಸಿ, ಸ್ಥಿರಗೊಳಿಸಿ ನಗುತ್ತಿದ್ದರು.
ಚೌಕಿಯಲ್ಲಿ ಬಗೆಬಗೆಯ ಪಾತ್ರಗಳು ಜನ್ಮ ತಾಳುವುದೂ ಹೀಗೇ ತಾನೇ..ಒಬ್ಬ ನಿರ್ದೇಶಕ. ಒಂದು ಕಥೆ. ಚಿತ್ತದಿಂದ ಹೊರಬಿದ್ದು ಅಕ್ಷರವಾಗಿ ಮತ್ತೆ ಚಿತ್ರವಾಗಿ ಕಲ್ಪನೆಯ ಚಿತ್ತಾರದ ಪ್ರತಿಬಿಂಬವಾಗಿ, ಪಾತ್ರವಾಗಿ ಸಾಕಾರಗೊಳ್ಳುವ ಅದ್ಬುತ ಜಾದೂ. ಒಬ್ಬ ಬಾಬಣ್ಣ,ಒಬ್ಬ ನಾರಾಯಣ,ಒಬ್ಬ ಕಲಾವತಿ ರಂಗದ ಪರಿಚಾರಕರಾಗಿ ಕಟ್ಟಿಕೊಡುತ್ತಾರೆ. ಮೌನವಾಗಿದ್ದ ಗೊಂಬೆ ಆತ್ಮ ತುಂಬಿ ಪಾತ್ರವಾಗಿ ಕಲಾವಿದನಾಗುತ್ತಾನೆ. ಕಲೆ ಉಸಿರಾಗಿ ನಾದ ಹರಿದಾಡುತ್ತದೆ. ಒಂದು ಬೀಣೆನೂಲಿನ ಚೀಲ. ಸರಿಯಾಗಿ ರಾತ್ರಿ 8 ಗಂಟೆಗೆ ನಮ್ಮ ಬಾಬಣ್ಣ ಅಂಗಡಿ ಬಾಗಿಲು ಹಾಕುತ್ತಿದ್ದರು.
ಅಷ್ಟೂ ಹೊತ್ತು ಹೊಸ ಜಗತ್ತಿನಲ್ಲಿ ವಿಹರಿಸುವಂತೆ ಅಲ್ಲಿ ರಂಗ ರಂಗೋಲಿಯು ಅರಳುತ್ತಿತ್ತು. ತುಂಡು ಬಟ್ಟೆಗಳ, ಬಣ್ಣಗಳ ಮಾಯೆ ಗೊಂಬೆಯ ರಂಗವನ್ನು ವಿಸ್ತರಿಸುತ್ತಿತ್ತು. ವಿಸ್ತರಿಸುತ್ತಲೇ ಇದೆ.
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ಕಾವ್ಯದ ಭಾಷೆ,ಹದವಾದ ನಿರೂಪಣೆಯಲ್ಲಿ ನೆನಪುಗಳಿಗೆ ರಂಗು ಬಳಿಯುವುದು ಎಷ್ಟು ಚೆಂದ.ಚೆನ್ನಾಗಿದೆ.ಸಿರಿ
ಸ್ಮಿತಾ..ವಂದನೆಗಳು
ಮತ್ತೆ ಮತ್ತೆ ಬಾಲ್ಯದೆಡೆ ಹೊರಳಿಸಿ ನಾವೇ ರೂಪಕೊಟ್ಟ ನಮ್ಮ ಕಡ್ಡಿಗೊಂಬೆಗಳನ್ನು ಕಣ್ಣ ಮುಂದೆ ಅದೆಷ್ಟೋ ಹೊತ್ತು ತಂದು ನಿಲ್ಲಿಸಿದೆ ಸಿರೀ…ಆಪ್ತ ಬರೆಹ
ಸುನೀ. ನಿನ್ನ ಪ್ರೀತಿಗೆ ಶರಣು
ಮಗುವೇ ಸಮಾಜದ ಮಡಿಲಿನ ಗೊಂಬೆಯೇ?. ಬಾಬಣ್ಣ, ಸದಾನಂದ ಮಾಮ, ಕಲಾವತಿ ಅಕ್ಕ, ಎಲ್ಲರೂ ಗೊಂಬೆ ಗೆ ಉಡುಪು, ಬಣ್ಣ, ಕಣ್ಣಿಗೆ ಕಾಡಿಗೆ ಹಚ್ಚಿದವರೇ.
ತುಂಬಾ ಮಗುಮನಸಿನ ಬರಹ
ಧನ್ಯವಾದಗಳು ನಿಮ್ಮ ಸೂಕ್ಷ್ಮ ನೋಟ ಇಷ್ಟ