ಅಂಕಣ ಬರಹ
ಸಂಕ್ರಾಂತಿ ಬಂತೋ ರತ್ತೋ ರತ್ತೋ
ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು ಬೇಕಿರುವ ವಸ್ತುಗಳ ಖರೀದಿಸಿ ತರುತ್ತಿದ್ದೆವು.
ಮನೆಯಲ್ಲಿ ಇರುತ್ತಿದ್ದ ಅಚ್ಚುಗಳಿಗೆ ಜೀವ ಬರುತ್ತಿತ್ತು. ನಾನಾ ನಮೂನಿಯ ಸಕ್ಕರೆ ಅಚ್ಚುಗಳು ಕುತೂಹಲ ಮತ್ತು ಬಾಯಲ್ಲಿ ನೀರೂರಿಸುವ ಸಕ್ಕರೆ ಗೊಂಬೆಗಳನ್ನು ನಮ್ಮದುರು ತಂದು ನಿಲ್ಲಿಸುತ್ತಿದ್ದವು. ಅದೆಷ್ಟು ಚಂದದ ಬಣ್ಣಗಳು ಇವುಗಳದ್ದು! ಈ ಗೊಂಬೆಗಳನ್ನು ನೋಡುತ್ತಾ ನೋಡುತ್ತಾ ಚಪ್ಪರಿಸಿ ತಿನ್ನಬಹುದಿತ್ತು ಎನ್ನುವುದೇ ನಮ್ಮ ದೊಡ್ಡ ಅಚ್ಚರಿಯಾಗಿರುತ್ತಿತ್ತು…
ಸಕ್ಕರೆ ಗೊಂಬೆಗಳಾದ ಮೇಲೆ ಇನ್ನು ಎಳ್ಳು-ಬೆಲ್ಲದ ತಯಾರಿಕೆ. ಊರೆಲ್ಲ ಎಳ್ಳು ಬೀರಿಯಾದ ಮೇಲೂ ತಿಂಗಳೊಪ್ಪತ್ತಿಗಾಗುವಷ್ಟು ಎಳ್ಳು ಬೆಲ್ಲ ಉಳಿಯಲೇ ಬೇಕಿತ್ತು… ನಾವೆಲ್ಲ ಮಕ್ಕಳಂತೂ ಸಂಕ್ರಾಂತಿ ಮುಗಿದು ಎಷ್ಟೋ ದಿನಗಳಾದರೂ ಸಂಕ್ರಾಂತಿ ಕಾಳು ಕೇಳುವುದನ್ನು ಬಿಡುತ್ತಿರಲಿಲ್ಲ. ಅದೆಷ್ಟು ಸವಿ… ಅದೆಂತಹಾ ಸವಿ…ಎಳ್ಳು ಸಂಬಂಧವನ್ನು ವೃದ್ಧಿಸುತ್ತದೆ ಮತ್ತು ಬೆಲ್ಲ ಆ ಸಂಬಂಧವನ್ನು ಮಧುರವಾಗಿಸುತ್ತದೆ ಎನ್ನುವ ನಂಬಿಕೆ ಇದೆ ಈ ಎಳ್ಳು-ಬೆಲ್ಲದ ಹಿಂದೆ. ಅದಕ್ಕೆ ಬಣ್ಣ ಬಣ್ಣದ ಜೀರಿಗೆ ಪೆಪ್ಪರಮೆಂಟು, ಬಣ್ಣ ಬಣ್ಣದ ಸಕ್ಕರೆಯ ಸಂಕ್ರಾಂತಿ ಕಾಳು, ಹುರಿದ ಶೇಂಗಾ, ಪುಟಾಣಿ, ಒಣ ಕೊಬ್ಬರಿ, ಸಣ್ಣಗೆ ತುಂಡು ಮಾಡಿದ ಬೆಲ್ಲ ಎಲ್ಲವನ್ನೂ ಬೆರೆಸಿಯಾದ ಮೇಲೆಯೇ ಎಳ್ಳು-ಬೆಲ್ಲ ತಯಾರಾಗುತ್ತಿದ್ದದ್ದು.
ಚಳಿಗಾಲದ ಈ ಹಬ್ಬ ವಾತಾವರಣಕ್ಕೆ ಅನುಗುಣವಾಗಿ ಆಚರಿಸಲ್ಪಡುತ್ತಿದ್ದ ರೀತಿಯಿಂದಲೂ ಖುಷಿಯ ಹಬ್ಬ. ಚಳಿಯ ದಿನಗಳಲ್ಲಿ ಮನುಷ್ಯನ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಅಂತಹ ಸಮಯದಲ್ಲಿ ಹಬ್ಬದ ನೆವದಲ್ಲಿ ದೇಹವನ್ನು ತಣಿಸುವ ಒಂದಷ್ಟು ಆಚರಣೆಗಳು ಮೈ ಮನಸಿಗೆ ಮುದನೀಡುತ್ತದೆ. ಎಳ್ಳು, ಕೊಬ್ಬರಿಗಳಲ್ಲಿ ಎಣ್ಣೆಯ ಅಂಶವಿರುತ್ತದೆ. ಇವು ಶೀತ, ವಾತವನ್ನು ದೂರ ಮಾಡುತ್ತವೆ. ಕಬ್ಬು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಎಳ್ಳು, ಕಡಲೆ ಬೀಜಗಳಿಂದ ಕ್ಯಾಲ್ಶಿಯಂ ದೊರೆತರೆ ಬೆಲ್ಲದಿಂದ ಕಬ್ಬಿಣಾಂಶ ದೊರೆಯುತ್ತದೆ. ಮತ್ತೆ ಪೊಂಗಲ್ ತಯಾರಿಸಲು ಬಳಸುವ ಹೆಸರು ಬೇಳೆಯಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಮಣಸು-ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಇವೆಲ್ಲವನ್ನೂ ಗಮನಿಸಿದಾಗ ನಮ್ಮ ಪೂರ್ವಿಕರು ಧಾರ್ಮಿಕವಾಗಿ ರೂಪಿಸಿದ ಆಚರಣೆಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಅಡಗಿರುವುದು ಕಂಡುಬರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವ ಮೊದಲು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಅರಿಯಬೇಕಿದೆ. ಮತ್ತು ನಮ್ಮ ಸಂಸ್ಕೃತಿಯ ಉಳಿವೂ ಇಂತಹ ಆಚರಣೆಗಳಲ್ಲಿಯೇ ಇರುತ್ತದೆ ಎನ್ನುವುದನ್ಬು ನಾವು ಮರೆಯಬಾರದು.
ಪಥವ ಬದಲಿಸಿದ ಸೂರ್ಯ
ಮೊಳಗಿ ಸಂಕ್ರಾಂತಿ ತೂರ್ಯ
ಸವೆದಿದೆ ದಾರಿ ಕವಿದಿದೆ ಮಂಜು
ಬದಲಾವಣೆ ಅನಿವಾರ್ಯ
-ಬಿ.ಆರ್.ಲಕ್ಷ್ಮಣ ರಾವ್
ಸೂರ್ಯ ತನ್ನ ಇಷ್ಟು ದಿನದ ಪಥವನ್ನು ಬದಲಿಸಿ ಮತ್ತೊಂದು ಪಥದಲ್ಲಿ ತಿರುಗಲು ಶುರು ಮಾಡುತ್ತಾನೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಮೇಷ ರಾಶಿ ಪ್ರವೇಶಿಸಿದಾಗ ಸೌರಮಾನ ಯುಗಾದಿ ಎಂದು ತುಲಾ ರಾಶಿ ಪ್ರವೇಶಿಸಿದ ದಿನವನ್ನು ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಎಂದು ಆಯಾನಾಧಾರದ ಮೇಲೆ ಆಚರಿಸಲಾಗುತ್ತದೆ ಮತ್ತು ಈ ದಿನ ಪೌರಾಣಿಕ ಹಿನ್ನೆಲೆಯಲ್ಲಿ ಊರ್ಧ್ವ ಲೋಕಗಳಾದ ಬುವರ್ಲೋಕ(ತಪಸ್ಸಿನಲ್ಲಿ ಮಗ್ನರಾದ ಮುನಿಗಳು ವಾಸ ಮಾಡುವ ಲೋಕ) ಸ್ವರ್ಗಲೋಕದಲ್ಲಿ(ಇಂದ್ರಾದಿ ಅಷ್ಟದಿಕ್ಪಾಲಕರು, ನವಗ್ರಹಗಳು,ಅನೇಕ ಪ್ರತ್ಯಧಿದೇವತೆಗಳು ವಾಸಮಾಡುವ ಲೋಕ) ಸೂರ್ಯೋದಯ ವಾಗುವ ಕಾಲವನ್ನು ನಾವು ಉತ್ತರಾಯಣದ ಸಂಕ್ರಾಂತಿ ಹಬ್ಬ ಎಂದು ಆಚರಿಸುವ ವಾಡಿಕೆ. ಈ ದಿನವನ್ನು ಒಂದು ಪವಿತ್ರ ದಿನ ಎಂದು ಭಾವಿಸಲಾಗಿದೆ ಕಾರಣ ಲೋಕಕಲ್ಯಾಣ ಕರ್ತರಾದ ದೇವತೆಗಳು ಎಚ್ಚರಗೂಳ್ಳುವ ದಿನ ಇದು ಎನ್ನುವ ಧಾರ್ಮಿಕ ನಂಬಿಕೆ. ಆದರೆ ಅವರು ಸ್ನಾನ ಸಂಧ್ಯಾವಂದನೆ ಮುಗಿಸಿ ಕಾರ್ಯಮಗ್ನರಾಗುವುದು ಮುಂದಿನ ರಥಸಪ್ತಮಿಯ ದಿನ ಎಂಬ ಪ್ರತೀತಿಯೂ ಇದೆ. ಮಹಾಭಾರತದ ಭೀಷ್ಮಾಚಾರ್ಯರು ಯುದ್ದಮುಗಿದು ಶರಶಯ್ಯೆಯಲ್ಲಿ ಪವಡಿಸಿದ್ದರೂ, ದೇಹ ಬಾಣಗಳ ಇರಿಯುವಿಕೆಯಿಂದ ನೋಯುತ್ತಿದ್ದರೂ ಪ್ರಾಣಬಿಡಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾದರಂತೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ.
ಉತ್ತರಾಯಣ ಪುಣ್ಯಕಾಲದ ಈ ಹಬ್ಬ ಸುಗ್ಗಿಯನ್ನು ಸಾರುವ ಹಬ್ಬವಾಗಿದೆ. ಈ ದಿನ ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದೇ ಕರೆಯಲಾಗುತ್ತದೆ. ರೈತರು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಟಾವು ಮಾಡುವ ಸಮಯವಿದು. ದನಕರುಗಳನ್ನು ತೊಳೆದು, ಅಲಂಕರಿಸಿ, ಮೇವನ್ನು ಉಣಿಸಿ ಮೆರವಣಿಗೆ ಮಾಡುತ್ತಾರೆ. ಹೊಸ ಧಾನ್ಯಗಳಿಂದ ಹುಗ್ಗಿ ಮಾಡಿ ನೈವೇದ್ಯವಾಗಿ ಅರ್ಪಿಸಿ, ಎಳ್ಳನ್ನು ದಾನ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ.
ಈ ದಿನ ಸಣ್ಣ ಮಕ್ಕಳನ್ನು ಮಣೆಯ ಮೇಲೆ ಕೂರಿಸಿ, ಎಳ್ಳು, ಎಲಚಿಹಣ್ಣು(ಬಾರೀ ಹಣ್ಣು), ಕಾಸು, ಬಾಳೆಹಣ್ಣಿನ ತುಂಡುಗಳು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕಬ್ಬುಗಳನ್ನು ಬೆರೆಸಿ ತಲೆಯ ಮೇಲಿಂದ ಎರೆದು ಆರತಿ ಮಾಡುತ್ತಾರೆ. ಇದಕ್ಕೆ ಕರಿ ಎರೆಯುವುದು ಎನ್ನುತ್ತಾರೆ. ಹಬ್ಬದ ಸಂತಸದೊಂದಿಗೆ ಮಕ್ಕಳ ಹಟಮಾರಿತನ, ತುಂಟತನ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ ಇದರ ಹಿಂದೆ. ಸೃಜನಾತ್ಮಕವಾಗಿರುವವರು ಸಕ್ಕರೆಯಿಂದ ತಯಾರಿಸಿದ ಕುಸುರು ಕುಸುರಾಗಿರುವ ಎಳ್ಳನ್ನು (ಕುಸುರೆಳ್ಳು) ರಟ್ಟಿನ ಮೇಲೆ ಅಂಟಿಸಿ, ಬಳೆ, ಕಿರೀಟ, ಸೊಂಟದಪಟ್ಟಿ, ಕಾಲಿಗೆ ಗೆಜ್ಜೆ, ಕೊಳಲು, ಸರ ಹೀಗೆ ಎಲ್ಲವನ್ನೂ ತಯಾರಿಸಿ ಮಕ್ಕಳಿಗೆ ತೊಡಿಸಿ ರಧಾಕೃಷ್ಣರನ್ನಾಗಿ ತಯಾರು ಮಾಡಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ.
ಅಂದು ಬೆಳಗ್ಗೆ ತಲೆಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿ ಪಿತೃಗಳಿಗೆ ತರ್ಪಣ ಕೊಡುತ್ತಾರೆ. ಅನುಕೂಲವಿದ್ದರೆ ನದಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಂತಿಯಂದು ತೀರ್ಥಸ್ನಾನ ಮಾಡಿದರೆ ಪುಣ್ಯ ಫಲವಿದೆಯೆಂಬ ನಂಬಿಕೆ ಇದೆ. ಸಂಜೆ ಹೆಂಗಳೆಯರು ತಟ್ಟೆಯಲ್ಲಿ ಎಳ್ಳು, ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚು, ತಾಂಬೂಲ ಸಹಿತ ಮನೆ ಮನೆಗೂ ಹಂಚಿ ಬರುತ್ತಾರೆ. ಭಾಗವತದಲ್ಲಿ ಕೃಷ್ಣ ಬಲರಾಮರು ಈ ದಿನ ಮಥುರಾಕ್ಕೆ ಬಂದು ಕಂಸನನ್ನು ಕೊಂದರು ಎಂಬುದಾಗಿ ಬರುತ್ತದೆ.
ನಿರಂತರ ಸೃಷ್ಟಿಯ ತಿಗುರಿ
ಸೂರ್ಯ ಆಡಿಸುವ ಬುಗುರಿ
ಭ್ರಮಣಲೋಲೆ ಸಂಕ್ರಮಣಶೀಲೆ
ನಿತ್ಯನೂತನೆ ಧರಿತ್ರಿ
-ಬಿ.ಆರ್.ಲಕ್ಷ್ಮಣ ರಾವ್
ವೈಜ್ಞಾನಿಕವಾಗಿ ನೋಡುವುದಾದರೆ ಇಂದಿನ ಈ ದಿನ ಕ್ರಾಂತಿವೃತ್ತದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಆಧುನಿಕ ವಿಜ್ಞಾನಿಗಳ ಪ್ರಕಾರ ಸೂರ್ಯ ಒಂದು ನಕ್ಷತ್ರ. ಅವನಿಗೆ ಪರಿಭ್ರಮಣ ಇಲ್ಲ. ಆದರೆ ಅಕ್ಷ ಪರಿಭ್ರಮಣ ಇದೆ. ಈಗ ನಮ್ಮ ವಿಜ್ಞಾನ ಇಡೀ ಸೌರಮಂಡಲವೇ ನಿಧಾನವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯುತ್ತಿದೆ ಎಂದು ಸಾಧಿಸಿ ತೋರಿಸಿಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಕಾಯಕ್ಕೂ ಚಲನೆ ಇದೆ. ಬದಲಾವಣೆ ಜಗದ ನಿಯಮ, ನಿರಂತರ ಚಲನೆ ವಿಶ್ವದ ನಿಯಮ…
ಜಡತೆ ನಿರಾಸೆಯ ತೊಡೆದು
ಭರವಸೆಯಲಿ ಮುನ್ನಡೆದು
ಹೊಸ ವಿಕ್ರಮಗಳ ಮೆರೆಯಲೀ ನಾಡು
ನಗೆ ನೆಮ್ಮದಿಯನ್ನು ಹರಿಸಿ
-ಬಿ.ಆರ್.ಲಕ್ಷ್ಮಣ ರಾವ್
ಎನ್ನುವ ಬಿ.ಆರ್.ಲಕ್ಷ್ಮಣರ ಮಾತಿನಂತೆ ನಮ್ಮ ಬದುಕು ಹೊಸ ಭರವಸೆಯ ದಿಕ್ಕಿನೆಡೆಗೆ ತಿರುಗಲಿ… ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾವನ್ನು ಸೂರ್ಯನ ಹೊಸ ಪ್ರಭೆ ಸಂಹರಿಸಲಿ. ಬದುಕು ಮತ್ತೊಮ್ಮೆ ಹಳಿಗೆ ಬಂದು ಪ್ರಯಾಣ ಸಸೂತ್ರವಾಗಲಿ ಎನ್ನುವ ಆಸೆ ಮತ್ತು ಹಾರೈಕೆಯೊಂದಿಗೆ ನಾವೆಲ್ಲ “ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ” ಅಲ್ಲವಾ…
ಈ ಭುವಿಯಾಗಲಿ ಸ್ಪೂರ್ತಿ ನಮ್ಮ ನಾಡಿಗೆ
ಮರಳಲಿ ಗತ ಕೀರ್ತಿ ನಮ್ಮ ನಾಡಿಗೆ
ಹೊಸ ನಡೆನುಡಿ ಬರಲಿ ನಮ್ಮ ಹಾಡಿಗೆ
ಹೊಸಹುರುಪನು ತರಲಿ ನಮ್ಮ ನಾಡಿಗೆ
-ಬಿ.ಆರ್.ಲಕ್ಷ್ಮಣರಾವ್
ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.