ಸಂಕ್ರಾಂತಿ ಕಾವ್ಯ ಸುಗ್ಗಿ
ಮೌನ
ವೀಣಾ ನಿರಂಜನ
ಮಾತು ಗೋಜಲಾಗಿ
ಮೌನ ನಿಜವಾದಾಗ
ಸುಮ್ಮನೆ ಆಲಿಸುತ್ತೇನೆ
ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು
ಲಜ್ಜೆಯಿಲ್ಲದೆ ಸಂಚರಿಸುವ
ಶಬ್ದಗಳು ವಜ್ಜೆಯಾಗಿ
ಅರ್ಥ ಕಳೆದುಕೊಂಡು
ಅರ್ಧಸತ್ಯವಾಗುತ್ತ
ಬೀಗುವ ಬೆನ್ನಲ್ಲೇ
ಮೌನ ನಗುತ್ತದೆ
ಸತ್ಯದ ಜೊತೆಗೆ
ಒಂದು ಸಣ್ಣ ಅನುಸಂಧಾನ
ಅಲ್ಲಿ ಆರಂಭವಾಗುತ್ತದೆ
ಮೌನ
ನಮ್ಮೊಳಗೆ ತುಡಿಯುತ್ತಿರುವ
ಜೀವಸೆಲೆಯಂತೆ
ರಾತ್ರಿ ನೀರವದಲ್ಲಿ ಬೀಳುವ
ತುಂತುರು ಹನಿಗಳ ರಾಗದಂತೆ
ಕತ್ತಲೆಗೆ ಹೊಂದಿಕೊಂಡಂತೆ
ಸದಾ ಜಾಗೃತವಾದ ಬೆಳಕಿನೊಂದು
ಕಣ್ಣಂತೆ
ಬುದ್ಧನ ಮುಗುಳು ನಗೆಯಂತೆ
ಬಯಲೊಳಗೆ ಬಯಲಾಗಿ ನಿಂತ
ಅಲ್ಲಮನಂತೆ
ಮೌನವನ್ನು ಆಲಿಸುವುದೆಂದರೆ
ನನ್ನೊಳಗನ್ನು ನಾನು ಹೊಕ್ಕಂತೆ
ಮೌನವನು ಆಲಿಸುವುದೆಂದರೆ ನನ್ನೊಳಗೆ ನಾನು ಹೊಕ್ಕಂತೆ.
ಸುಂದರ ಕವಿತೆ
ಒಳ್ಳೆಯ ಕವಿತೆ
ಕವಿತೆ ಅರ್ಥವತ್ತಾಗಿದೆ.