ಕವಡೆಗಳು

ಕವಿತೆ

ಕವಡೆಗಳು

ವಿಭಾ ಪುರೋಹಿತ್

ಪಬ್ ಜಿ ವಿಡಿಯೋ ಗೇಮ್ ಬೇಜಾರಾಗಿ
ಚೌಕಾಬಾರಾ ಪಗಡೆ ಅಳೆಗುಳಿಮನೆ
ಝಾಡಿಸಿಕೊಂಡು ಮೇಲೆದ್ದಿವೆ
ಚರಿತ್ರೆಯ ಮು‌ಷ್ಟಿಯೊಳಗಿಂದ
ತಂದಾಣಿಪಿಲ್ಲೆ ಹಾವುಏಣಿಯಾಟ ಹುಣಸೆಬೀಜಗಳು ಕಾಶಿಯಿಂದ ತಂದ ಕವಡೆಗಳು ಕಣ್ಬಿಟ್ಟಿವೆ ಲಾಕ್ಡೌನಿನಲ್ಲಿ !

ಬೊಗಸೆಯಲ್ಲಿಟ್ಟು ಕುಲುಕಿಸಿ ಎಸೆದಾಗ
ಬೇಕಾಗುವ ಅಂಕೆ ದೊರೆತರೆ ಅದೃಷ್ಟ
ಅಂಗಾತ ಬಿದ್ದಕವಡೆ ಕುದುರಿಯೇಳುವ ಭಾಗ್ಯ
ಡಬ್ಬು ಮಲಗಿದ ಕವಡೆ ನಿತಾಂತ
ಬಾಳಭವಿತವ್ಯಕ್ಕೆ ಕವಡೆ ಸಂಖ್ಯೆ ಗಳ
ಪಾರಾಯಣವಂತೆ ಜೋತಿಷ್ಯಾಲಯದಲ್ಲಿ
ಸಾಲುಗಟ್ಟಿ ನಿಂತಿದ್ದಾರೆ ಕವಡೆವಾಣಿಗಾಗಿ
ಅರ್ಧಸತ್ಯವಿದ್ದರೂ ನಂಬುವ ಅನಿವಾರ್ಯ
ಮನದೊಳಗೆಹೂತಿಟ್ಟ ಪ್ರಶ್ನೆ ಗಳಿಗೆ
ರಾಮಬಾಣವಂತೆ ಕವಡೆಗಳು

ಅದೇನೋ ನೂರೆಂಟು ಕಗ್ಗಂಟು
ಲೆಕ್ಕಾಚಾರದ ಸೂತ್ರಗಳು
ನೌಕೆ ಓಡುವುದಕ್ಕೂ ನಿಲ್ಲುವದಕ್ಕೂ
ಕಾರಣಿಸುವ ಲಂಗರು ಕವಡೆ
ಉತ್ತರ ಹೇಳಬೇಕಂತೆ……
ಅಂತೆ ಕಂತೆಗಳ ಉಡ್ಡಯನ
ಪ್ಯಾಶ್ಚರೀಕರಿಸಿದ ಧೂತರಿಂದ


Leave a Reply

Back To Top