ಗಜಲ್

ಗಜಲ್

ಅರುಣಾ ನರೇಂದ್ರ

silhouette of plant during sunset

ಮತ್ತೇರಿಸುವ ಮಧು ಇಂದು ನೆತ್ತರಿನ ಬಣ್ಣವಾಯಿತೇಕೆ
ತುಟಿ ಸೋಕುವ ಮುಂಚೆ ಬಟ್ಟಲು ಉರುಳಿ ಹೋಯಿತೇಕೆ

ಹೃದಯ ಒಡೆದು ಚೂರಾದರಾಗಲಿ ಮಧುಶಾಲೆ ಕೈ ಮಾಡಿ ಕರೆದಿದೆ
ತುಂಬಿ ತುಳುಕುವ ಹೂಜಿ ಎದುರಿಗಿದೆ ಮುಖದ ನಗು ಮಾಯವಾಯಿತೇಕೆ

ಯಾರೇನೇ ಅಡಿಕೊಳ್ಳಲಿ ಬಿಡು ನೋವು ಮರೆಸುವ ಔಷಧಿ ಜೊತೆಗಿದೆ ಗಾಲಿಬ್
ಸಾಕಿ ಸುರಿದು ಕೊಟ್ಟ ಸಂಜೀವಿನಿ ಕೈ ಸೇರುವ ಮುನ್ನ ನೆಲದ ಪಾಲಾಯಿತೇಕೆ

ಎಲ್ಲರೂ ನನ್ನ ನೋಡಿ ದೂರ ಸರಿಯುತ್ತಾರೆ ಸಜನಿ ಎದೆಯ ಬೇನೆ ನಿನಗಷ್ಟೇ ಗೊತ್ತು
ದರ್ದಿಗೆ ಮುಲಾಮು ಸವರಿ ಕೈಗಿತ್ತ ತುತ್ತು ಬಾಯಿಗೆ ಬರದಾಯಿತೇಕೆ

ಮಸೀದಿಯಲಿ ಮುಲ್ಲಾ ಅಜಾ ಕೊಟ್ಟಾಗಲೇ ಇವರಿಗೆ ಬೆಳಗಾಗುತ್ತದೆ ಅರುಣಾ
ಮೈಖಾನಾದೊಳಗೆ ನಾನಿರುವಾಗ ಕತ್ತಲೆಯಲ್ಲೂ ಒಳಗೆ ಬೆಳಕಾಯಿತೇಕೆ

***************************************************

Leave a Reply

Back To Top