ಗಜಲ್
ಅರುಣಾ ನರೇಂದ್ರ
ನೀ ಹಚ್ಚಿಕೊಳ್ಳುವ ಅತ್ತರಿನದೆ ವಾಸನೆ ಬರುತಿದೆ ಎಲ್ಲಿರುವಿ
ಮೋಹಬ್ಬತ್ತಿನ ಈ ಹಾಡಲ್ಲಿ ನಿನ್ನದೇ ಧ್ವನಿ ಕೇಳುತಿದೆ ಎಲ್ಲಿರುವಿ
ಮುಂಜಾನೆಯ ಮಂಜಿನ ಹನಿಗೂ ಕಣ್ಣ ಕನಸುಗಳಿವೆ
ಆಗಸದ ಹಾಳೆಯಲಿ ನೀ ಬರೆದ ಚಿತ್ರ ಕಾಣುತಿದೆ ಎಲ್ಲಿರುವಿ
ಮುಂಗುರುಳ ತೀಡುವ ತಂಗಾಳಿ ಇಂದೇಕೋ ಹಠ ಮಾಡುತಿದೆ
ಇಲ್ಲಿ ನೀ ನಡೆದಾಡಿದ ಹೆಜ್ಜೆಗಳ ಗುರುತಿದೆ ಎಲ್ಲಿರುವಿ
ಧುಮ್ಮಿಕ್ಕುವ ಪ್ರವಾಹಕ್ಕೆ ಗೋಡೆ ಕಟ್ಟಲಾಗುತ್ತಿಲ್ಲ
ನಿನ್ನ ನಗೆಯ ಅಲೆ ಎದೆಗೆ ಅಪ್ಪುತಿದೆ ಎಲ್ಲಿರುವಿ
ಎದುರಿನಲಿ ಸಿಕ್ಕು ಬಿಡು ಒಮ್ಮೆ ಹೀಗೇಕೆ ಹಿಂಬಾಲಿಸುತ್ತಿ
ಅರುಣಾಳ ಅಂತರಾತ್ಮ ನಿನ್ನನ್ನೇ ಧ್ಯಾನಿಸುತಿದೆ ಎಲ್ಲಿರುವಿ
********************************