ನಮ್ಮ ರೈತ

ಭಾಮಿನಿ ಷಟ್ಪದಿ

ನಮ್ಮ ರೈತ

ಅಭಿಜ್ಞಾ ಪಿ ಎಮ್ ಗೌಡ

Trust issue: Why Indian farmers are opposing 'historic' farm bills - News  Analysis News

ಲೋಕ ಬೆಳಗುವ ದಿವ್ಯ ಮೂರ್ತಿಯು
ನಾಕ ಮಾಡುತ ಧರೆಯ ಮಡಿಲನು
ದೇಕುತಿರುತಿಹ ನಿತ್ಯ ಹೊಲದಲಿ
ದಣಿದ ಜೀವವಿದು|
ನೂಕು ನುಗ್ಗಲು ಜನರ ಗುಂಪಲು
ಬೇಕು ಬೇಡುವನರಿತು ಸಾಗುವ
ಬಾಕಿಯುಳಿಸದೆ ಭುವಿಯ ಕಾರ್ಯವ
ಮಾಡೊ ನಿಸ್ವಾರ್ಥಿ||

ಹಸಿರ ಸೇಚಿಸಿ ಚಂದ ಗೊಳಿಸುತ
ನಸುಕು ಕಾಲದೊಳೆದ್ದು ದುಡಿಯುತ
ಕೆಸರು ಧರಣಿಗೆ ಚೆಲುವ ಮಾಡಿ
ನಿಂತು ನೋಡಿಹನು|
ಸಸಿನೆಯಿಂದಲೆ ಹಸನು ಮಾಡಿಸಿ
ಬೆಸೆದ ಬಂಧವ ಗಟ್ಟಿಗೊಳಿಸುತ
ತಸಕುಗೊಳ್ಳುವ ಪಾಪ ರೈತನು
ನಿತ್ಯ ಮರುಗುವನು||

ಭವದ ಭಯವನು ಸಹಿಸಿಕೊಳ್ಳುತ
ದವನ ಸೂಸುವ ಬೆಳೆಯ ಬೆಳೆಯುತ
ಸವಿದ ಭಾವದ ದಿವ್ಯ ಹೂರಣ
ಮೆಚ್ಚಿ ನಡೆಯುವನು|
ತವಕದಿಂದಲೆ ಕುಗ್ಗಿ ಹೋಗುವ
ಬೆವರ ಸುರಿಸುತ ಕೆಲಸ ಮಾಡುತ
ಧವಸ ಧಾನ್ಯವ ಬೆಳೆದು ನಲಿದರು
ಕಷ್ಟ ಕಾರ್ಪಣ್ಯ||

ಮಳೆಯ ಮಾಟಕೆ ಕುಸಿದು ಬೀಳುತ
ಬೆಳೆದ ಬೆಳೆಗೂ ಬೆಲೆಯು ಸಿಗದೇ
ಕಳೆಯು ಕುಂದಿದೆ ರೈತ ಮೊಗವದು
ಭಾರಿ ಭಂಗದಲಿ|
ತೊಳೆಯಬೇಕಿದೆ ಮನದ ಕೊಳೆಯನು
ಬಳಕೆ ಮಾಡದ ವಸ್ತು ವಿಷಯದ
ಹಳತು ಹೊಸತಿನ ಭವ್ಯ ಸಂಗಮ
ಕೂಗಿ ಕರೆದಿರಲು||

ಅನ್ನ ನೀಡುತ ಜಗವ ರಕ್ಷಿಸಿ
ತನ್ನ ಹೆಸರಲಿ ನೋವು ಬರೆಸುತ
ಭಿನ್ನ ರೂಪದಿ ಮನವ ಗೆದ್ದು ನೋವ
ಪಡುತಿಹನು|
ಚಿನ್ನದಂತಹ ಬೆಳೆಯ ತೆಗೆದರು
ಕನ್ನ ಹಾಕುವ ಮಂದಿ ಮುಂದೆಯೆ
ಮನ್ನದಿಂದಲೆ ಬದುಕ ಸವೆಸುತ
ದುಡಿವ ಯೋಗಿಯಿವ||

*************************************************

Leave a Reply

Back To Top