ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

Four Rock Formation

ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ ಸಿಗುತ್ತದೆ. ಆದರೆ ಅಸಂಖ್ಯ ಮಕ್ಕಳಿಗೆ ಅದೂ ಇಲ್ಲ. ಆ ಮಕ್ಕಳನ್ನು ನೆನೆದು ನಾವಿಲ್ಲಿ ದುಃಖಿಸಿ ದುಃಖಿಸಿ ಅಳುತ್ತೇವೆ. ಪ್ರಾರ್ಥಿಸುತ್ತೇವೆ. ನ್ಯಾಯಕ್ಕಾಗು ಕೂಗುತ್ತೇವೆ. ದೀಪ ಹಚ್ಚಿ ಅವರ ಆತ್ಮಕ್ಕಾಗಿ ನಾವಿಲ್ಲಿ ಶಾಂತಿ ಕೋರುತ್ತೇವೆ. ಹೀಗೇ ಯಾರೋ ಎಂಥದೋ ಸಂಕಟದಲ್ಲಿರುತ್ತಾರೆ, ಮತ್ಯಾರೋ ತುಂಬಾ ಕಷ್ಟಪಡುತ್ತಿರುತ್ತಾರೆ. ಯಾರು ಏನು ಎತ್ತ ಎಂದು ತಿಳಿಯದ ಅವರ ಬಗ್ಗೆ ನಾವಿಲ್ಲಿ ಮರುಗತೊಡಗುತ್ತೇವೆ. ಸಧ್ಯ ಅವರು ಅದರಿಂದ ಹೊರಬಂದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಕೈಲಾದಷ್ಟು ಸಹಾಯ ಮಾಡಲು ಹೊರಡುತ್ತೇವೆ. ಅದು ನಮ್ಮೊಳಗಿನ ಮನುಷ್ಯತ್ವ. ಅದಕ್ಕೆ ಯಾವ ಭೇದವೂ ಇಲ್ಲ, ಬೇಲಿಯೂ ಇಲ್ಲ. ಅದಕ್ಕೆ ನಾವೆಲ್ಲ ಮನುಷ್ಯರು ಎನ್ನುವ ಒಂದೇ ಕಾರಣ ಸಾಕು. ನಮ್ಮ ಅದೆಷ್ಟೋ ಇಂತಹ ನಿಸ್ವಾರ್ಥ ಪ್ರಾರ್ಥನೆಗಳು ಅದೆಷ್ಟೋ ಜನರ ಬದುಕಿನ ಹಿಂದಿರುತ್ತವೆ ಎನ್ನುವುದನ್ನು ನಾವು ಯೋಚಿಸಿಯೂ ಇರುವುದಿಲ್ಲ.

ಅಪ್ಪ, ಅಮ್ಮ, ಸಂಬಂಧಿಕರು, ಸ್ನೇಹಿತರು, ಪರಿಚಯದವರಷ್ಟೇ ಅಲ್ಲದೆ ಕೆಲವೊಮ್ಮೆ ಅಪರಿಚಿತರೂ ಆಪದ್ಭಾಂದವರಾಗಿ ಬರುತ್ತಾರೆ. ನಮ್ಮ ಹೊಗಳಿಕೆ, ಗಮನ ಯಾವೊಂದನ್ನೂ ನಿರೀಕ್ಷಿಸದೆ ಪ್ರಾರ್ಥಿಸುವ ಆ ಕೈಗಳು ನಿಜಕ್ಕೂ ಭಗವಂತನ ಆಶೀರ್ವಾದವೇ ಇರಬೇಕು. ಮತ್ತೆ ನಾವು ಸುಖಾ ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೂ ನಮ್ಮನ್ನು ಪ್ರೀತಿಸುವವರೊಂದಿಗೆ ಮುನಿಸಿಕೊಳ್ಳುತ್ತೇವೆ, ದೂರವಾಗಿಬಿಡುತ್ತೇವೆ. ಆದರೆ ಅವರ ಮನಸಿನಲ್ಲಿ ಉಳಿದಿರುವ ನಮ್ಮ ಬಗ್ಗೆ ನಮಗೇ ಅರಿವಿರುವುದಿಲ್ಲ. ನಮ್ಮ ಕಷ್ಟ ಸುಖಕ್ಕೆ ಅವರದೊಂದು ಪ್ರಾರ್ಥನೆ ಸದಾ ಸಲ್ಲುತ್ತಿರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ.

ಅವಳು ನನ್ನ ಗೆಳತಿ. ಆದರೆ ಬಹಳ ವರ್ಷಗಳಿಂದ ನಮ್ಮಿಬ್ಬರ ನಡುವೆ ಸಂಪರ್ಕವಿಲ್ಲ. ಜಗಳ ಮನಸ್ಥಾಪ ಎಂತದ್ದೂ ಇಲ್ಲ. ಆದರೆ ಸುಮ್ಮನೇ ಅದು ಹೇಗೋ ಸೃಷ್ಟಿಯಾದ ನಿರ್ವಾತವದು. ಅವಳಿಗೆ ಮಕ್ಕಳೆಂದರೆ ಪ್ರಾಣ. ಆದರೆ ಅವಳ ಮಮತೆಯ ಮಡಿಲು ಮಾತ್ರ ಇನ್ನು ತುಂಬಿರಲಿಲ್ಲ. ಎರೆಡು ಮಕ್ಕಳನ್ನು ಕಳೆದುಕೊಂಡಿದ್ದಳು. ದಿನ ತುಂಬಿದ್ದರೂ ಗರ್ಭದಲ್ಲೇ ಮರಣಿಸಿಬಿಟ್ಟಿದ್ದವು. ಮತ್ತೆರೆಡು ಬಾರಿ ಆದ ಗರ್ಭಪಾತಗಳು ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅದು ತಿಳಿದಾಗಿನಿಂದಲೂ ಸದಾ ಒಂದು ಪ್ರಾರ್ಥನೆ ಅವಳಿಗಾಗಿ.ಪ್ರತಿದಿನ ದೇವರ ಮುಂದೆ ಕೂತಾಗಲೂ, ಅವಳೇ ಕಣ್ಮುಂದೆ ಬರುತ್ತಾಳೆ, ಒಂದು ಪ್ರಾರ್ಥನೆ ದೇವರ ಪಾದದ ಮೇಲೆ ಬೀಳುತ್ತದೆ, “ಭಗವಂತಾ ಇದೊಂದು ಮಗು ಅವಳ ಮಮತೆಯ ಮಡಿಲಿಗಿಳಿದು ಅವಳ ಮಡಿಲು ಜೀವಂತವಾಗಿಬಿಡಲಿ…” ಎಂದು ಒಂದು ನಿಮಿಷ ಕಣ್ಮುಚ್ಚಿ ಕೈಮುಗಿದು ಕುಳಿತುಬಿಡುತ್ತೇನೆ. ನಾನು ಅವಳಿಗಾಗಿ ಇಲ್ಲಿ ಪ್ರಾರ್ಥಿಸುತ್ತಿದ್ದೇನೆ ಎನ್ನುವ ಸುದ್ದಿಯೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ನಾನು ಪ್ರಾರ್ಥಿಸುತ್ತಲೂ ಇಲ್ಲ. ಆದರೆ ಒಂದು ಮಾತ್ರ ನನಗೂ ಆಶ್ಚರ್ಯ! ಅವಳಿಗೇ ಗೊತ್ತಿಲ್ಲದ ನನ್ನ ಪ್ರಾರ್ಥನೆಯೊಂದು ಅವಳ ಬದುಕಿಗಾಗಿ ಸಲ್ಲುತ್ತಿದೆ.. ಹಾಗೆಯೇ ನಮ್ಮ ಬದುಕಿಗೂ ನಮಗೇ ಗೊತ್ತಿಲ್ಲದ ಅದೆಷ್ಟು ಜನರ ಅದೆಷ್ಟು ಪ್ರಾರ್ಥನೆಗಳು ಸಲ್ಲಿಸಲ್ಪಟ್ಟಿರಬಹುದು! ಇಲ್ಲದ ಇರುವ ಕೊರತೆಗಳನ್ನು ದೊಡ್ಡದು ಮಾಡಿಕೊಂಡು ಬದುಕನ್ನು ಹಳಿಯುವ ಮೊದಲು ನಾವ್ಯಾಕೆ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ಎನ್ನುವುದು ಅರ್ಥವಾದರೆ ಖಂಡಿತ ನಾವು ಇರುವುದರಲ್ಲೆ ಸಂತೋಷವಾಗಿ ಬದುಕಬಲ್ಲೆವು. ನಮಗೆ ಸಿಕ್ಕಿರುವ ಈ ಬದುಕಿನ ಅದೆಷ್ಟೋ ಕಾಣದ ಕೈಗಳ ಪ್ರಾರ್ಥನೆ ಇರುವುದು ತಿಳಿದರೆ ನಮ್ಮ ದುರಾಸೆಯ ಬಗ್ಗೆ ನಮಗೆ ಅಂಜಿಕೆ, ಮುಜುಗರವಾಗಬಹುದು.

ಬಹಳ ವರ್ಷಗಳ ನಂತರ ಗೆಳತಿಯೊಬ್ಬಳು ಸಿಕ್ಕಿದಳು. ಆಡಿದ ಮಾತುಗಳು ಸಾವಿರ. ನಕ್ಕಿದ್ದೆಷ್ಟೋ… ಅತ್ತಿದ್ದೆಷ್ಟೋ… ಕೊನೆಗೆ ಅವಳು ಮೆಲ್ಲಗೆ, “ನಿನ್ನ ಮೊದಲ ಹೆರಿಗೆಯಲ್ಲಿ ಏನೋ ತೊಂದರೆ ಆಗಿತ್ತಂತೆ ಹೌದಾ..?” ಎಂದು ಕೇಳಿದಳು. ನಾನು ನಗುತ್ತಾ “ಎಂಟು ವರ್ಷಗಳೇ ಕಳೆದು ಹೋದವು… ಈಗ್ಯಾಕೆ ಮಾರಾಯ್ತಿ ಆ ಮಾತೆಲ್ಲ…?” ಎಂದೆ. ಅದಕ್ಕವಳು, “ಏನಿಲ್ಲ ಅವತ್ತು ಯಾರೋ ನನಗೆ ಸುದ್ದಿ ಮುಟ್ಟಿಸಿದ್ದರು. ನನಗಾದ ಗಾಬರಿ ಅಷ್ಟಿಷ್ಟಲ್ಲ, ಹೋಗಿ ದೇವರ ಮುಂದೆ ದೀಪ ಹಚ್ಚಿಟ್ಟು, ದೇವರೇ ಎಲ್ಲ ಸಸೂತ್ರ ಆಗಿ ಅವಳು ಆರೋಗ್ಯವಾಗಿ ಮಗುವಿನೊಟ್ಟಿಗೆ ಮನೆಗೆ ಬಂದುಬಿಡಲಪ್ಪಾ… ” ಎಂದು ಹರಸಿಕೊಂಡಿದ್ದೆ. ಮತ್ತೆ ನೀ ಮನೆಗೆ ಬಂದದ್ದು ತಿಳಿದ ಮೇಲೆ ದೇವರಿಗೆ ಹೋಗಿ ಹರಕೆ ತೀರಿಸಿ ಬಂದಿದ್ದೆ ಎಂದಳು. ನನ್ನ ಕಣ್ಣು ತುಂಬಿಬಿಟ್ಟಿದ್ದವು. ಗಂಟಲು ಕಟ್ಟಿಬಿಟ್ಟಿತ್ತು. ಸುಮ್ಮನೇ ಅವಳನ್ನು ತಬ್ಬಿಕೊಂಡೆ. ಕಣ್ಣೀರು ಅವಳ ಭುಜವನ್ನು ತೋಯಿಸುತ್ತಿತ್ತು. ಇಂಥದೊದು ಹರಕೆ ನನ್ನನ್ನು ಕಾಯುತ್ತಿದೆ ಎನ್ನುವ ಕಲ್ಪನೆಯೂ ಇಲ್ಲದೆಯೇ ಇಷ್ಟು ವರ್ಷ ಬದುಕಿದೆನಲ್ಲ ಅನಿಸಿ ಅಂತಃಕರಣದ ಎಳೆಗಳು  ನಮ್ಮನ್ನು  ಸುತ್ತಿಕೊಂಡು ಪೊರೆಯುವ ರೀತಿಗೆ ಸೋತುಹೋದೆ.

ಹೀಗೆ ಬದುಕು ನಮ್ಮ ಹುಂಬ ನಡವಳಿಕೆಗಳನ್ನು ಸುಳ್ಳು ಮಾಡುತ್ತಾ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ನಾವು ಎನ್ನುವುದನ್ನು ಮತ್ತೆ ಮತ್ತೆ ಪ್ರಾಮಾಣೀಕರಿಸಿ ತೋರಿಸಿಕೊಡುತ್ತಿರುತ್ತದೆ…

****************************************************************

ಆಶಾ ಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Leave a Reply

Back To Top