ಕವಿತೆ
ದಿಕ್ಕಿಲ್ಲದ ಹಕ್ಕಿಯ ಮುಂದೆ ಹಿಂದೆ
ಪ್ರೇಮಶೇಖರ
ಹೀಗೇ
ಎತ್ತಲಿಂದಲೋ ಹಾರುತ್ತಾ
ಇತ್ತ ಬಂದ ಗುರುತಿಲ್ಲದ ಹಕ್ಕಿ,
ಇಲ್ಲೇ ಕೂತಿದೆ ಬೆಳಗಿನಿಂದಲೂ.
ಲಲಿತೆ ಕಾಳು ಹಾಕಿದ್ದಾಳೆ,
ಪುಟ್ಟಿ ನೀರಿಟ್ಟಿದ್ದಾಳೆ,
ನಾನು ಕೋಲು ಹಿಡಿದು
ಪುಸ್ಸಿಯನ್ನು ಕಾಯುತ್ತಿದ್ದೇನೆ.
ಪುಟ್ಟ ಹಕ್ಕಿ
ಕಾಳು ತಿನ್ನುತ್ತಿಲ್ಲ,
ನೀರು ಕುಡಿಯುತ್ತಿಲ್ಲ,
ಬಾಯಿ ತೆರೆದು ಕೂಗುತ್ತಲೂ ಇಲ್ಲ.
ಅಕ್ಕಪಕ್ಕ
ದ ಮನೆಯವರು ಬಂದರು,
ತಲೆಗೊಂದು ಮಾತು ಅಂದರು-
ಅದು ಹಾರಿಬಂದ ದಿಕ್ಕು
ನೋಡಿದಿರಾ? ಮನೆಯೊಳಗೆ ನುಗ್ಗಿದ
ಗಳಿಗೆ ಗಮನಿಸಿದಿರಾ?
ಲಲಿತೆ ಅವರಿಗೆಲ್ಲ ಚಹ ಮಾಡುತ್ತಿದ್ದಾಳೆ,
ಪುಟ್ಟಿ ವಾಷ್‍ಬೇಸಿನ್ ತೋರಿಸುತ್ತಿದ್ದಾಳೆ,
ಪುಟ್ಟಹಕ್ಕಿ ಸುಮ್ಮನೆ ನೋಡುತ್ತಿದೆ,
ನನ್ನ ಕೈಯಲ್ಲಿನ್ನೂ ಕೋಲು ಆಡುತ್ತಿದೆ.
ಅವರು ಚಹಾ ಜತೆ ಹಕ್ಕಿ
ಯನ್ನು ನೆಂಜಿಕೊಳ್ಳುತ್ತಿದ್ದಾರೆ.
ಕಿವಿಚಿದರೆ ಕೂಸಿಗಾದರೂ
ಒಂದೊತ್ತಿನ ಪಲ್ಯವೂ ಆಗದು.
ತಿನ್ನುವ ಮಾತಾಢಬೇಡಜ್ಜೀ,
ಅದಕ್ಕೆ ಜ್ವರ ಬಂದಿರಬೇಕು,
ಅದೆಲ್ಲಿಯ ಗ್ರಹಚಾರ.
ಅದಕ್ಯಾವ ಜ್ವರ? ಕಥೆ
ಹೇಳಬೇಡ ಅಡುಗೂಲಜ್ಜೀ,
ಕೊರೋನಾ ನರರಿಗಷ್ಟೇ.
ಬಣ್ಣದ ಹಕ್ಕಿಗಳು ರುಚಿ
ಇಲ್ಲವಂತೆ, ಸಾದಾ ಹಕ್ಕಿಗಳೇ ರುಚಿ
ರುಚಿಯಂತೆ!
ಹಾಗಂತ ಹೇಳು ಮಹಾರಾಣೀ
ಕಾಲೇಜಿನ ಮುಂದೆ,
ಅಯ್ಯೋ ಬಿಡೇ ಸಾಕು ಅದನ್ನು
ದಾಟಿಯೇ ಬಂದವರು ನಾವೆಲ್ಲಾ.
ಈಗೆಲ್ಲಿ ಆ ವೈಭವ!
ಕಳೆದುಹೋದದ್ದು ಬಿಟ್ಟು ಎದುರಿಗೆ
ಕೂತದ್ದರ ಸುದ್ದಿ ಹೇಳು.
ಬೇಸಗೆಗೆ ಬಳಲಿದೆ ಹಕ್ಕಿ,
ಚಳಿ ದೇಶಕ್ಕೆ ಹಾರಿಹೋಗಲಾಗಲಿಲ್ಲ
ವೇನೋ ಸಂಗಡಿಗರೊಡನೆ.
ನಾವಾದರೂ ಬಿಟ್ಟುಬರೋಣ
ವೆಂದರೆ ರೈಲು ವಿಮಾನಗಳಿಲ್ಲವಲ್ಲ!
ಹ್ಞೂಂ, ಹಾಳು ಕೊರೋನಾ ಇವಳೇ.
ಹೌದು ಆಂಟೀ, ನಮಗೂ, ಹಕ್ಕಿಗೂ
ಅದರದೇ ಕಾಟ.
ಅಂ! ಕೊರೋನಾ ಅಂದೆಯಾ?
ಅರೆ ಆಂಟಿ
ನನ್ನ ಮಾಸ್ಕ್ ಎಲ್ಲಿ?
ನನ್ನದೂ ಕಾಣದು ಇವಳೇ
ಓಹ್ ಅತ್ತೇ, ನನ್ನದೂ ಇಲ್ಲ
ಟೀ ಕುಡಿವ ಮೊದಲು ಕಳಚಿಟ್ಟೆನಲ್ಲ…
ಮಡಿಲಲ್ಲಡಗಿರಬೇಕು ನೋಡೋಣ.
ಹಜಾರದ ತುಂಬಾ ಸೀರೆ
ದುಪಟ್ಟಾಗಳ ಫಟ್‍ಫಟ್ ಫಟರವ.
ಕಾಣ್ತಿಲ್ವೇ, ಹಾಳು ಹಕ್ಕಿ
ಯಿಂದ ಹೀಗಾಯ್ತಲ್ಲ!
ಗಾಳಿಯಲ್ಲಿ ಗಾಬರಿ
ಯ ಲೊಚ್ ಲೊಚ್ ಲೊಚರವ,
ಛೇ ಹಕ್ಕಿ,
ಪುಟ್ಟ ಹಕ್ಕಿ, ಪುಟಾಣಿ ಹಕ್ಕಿ…
ಅರೆ…!
ಎಲ್ಲಿದೆ ಹಕ್ಕಿ?
ಅದು ಹಾರಿಹೋಗಿದೆ,
ಕೂತಿದ್ದೆಡೆ ಒಂದು ಗುಪ್ಪೆ
ಹಿಕ್ಕೆ ಬಿದ್ದಿದೆ.
ಪುಟ್ಟಿಯ ಮುಖ ಕಪ್ಪಿಟ್ಟಿದೆ,
ಲಲಿತೆಯ ಕಣ್ಣಲ್ಲಿ ಹನಿ ನೀರಿದೆ,
ಬಾಲ್ಕನಿಯಾಚೆ
ಹದ್ದೊಂದು ರೆಕ್ಕೆ ಬಡಿದಿದೆ,
ನೆರೆಯವರ ನಿರಿಗೆಗಳು
ಮೆಟ್ಟಲಸರಣಿಯಲ್ಲಿ ಆತುರದಲ್ಲಿ ಚಿಮ್ಮಿವೆ.
ನನ್ನ ಕೈನ ಕೋಲು?.
ಅದು ನೆಲವನ್ನು ಪಟಪಟ ಬಡಿಯುತ್ತಿದೆ.
ಬಡಿಯುತ್ತಲೇ ಇದೆ.
***********************************************************************
ಚಂದದ ಕವಿತೆ.. ಈ ಹಕ್ಕಿ ಯಾರು ಅನ್ನುವುದೇ ಪ್ರಶ್ನೆ!
ಧನ್ತವಾದಗಳು. ಆ ಹಕ್ಕಿಯನ್ನು
ಸದ್ಯಕ್ಕೆ ಒಂದು ಹಕ್ಕಿ ಎಂದಷ್ಟೇ ತೆಗೆದುಕೊಳ್ಳೋಣ. ಅದು ಹಕ್ಕಿಗೂ ಒಳ್ಳೆಯದು, ನಮಗೂ ಸಹಾ
ಪಾಪದ ಹಕ್ಕಿ. ಸುಂದರ ಕವಿತೆಯಾಗಿದೆ
ತುಂಬ ಧನ್ಯವಾದಗಳು
ಚಂದದ ಕವಿತೆ.
ತುಂಬ ಧನ್ಯವಾದಗಳು
ಬಹಳ ಸೊಗಸು. ಚಂದ..
ತುಂಬಾ ಧನ್ಯವಾದಗಳು ಮ್ಯಾಮ್