ಕವಿತೆ
ಸ್ವಾತಿಮುತ್ತು
ಅಕ್ಷತಾ ಜಗದೀಶ.
ಎನಿತು ಸುಂದರ ನೋಡು
ತಿಳಿನೀಲ ಮುಗಿಲು….
ಮುತ್ತು ನೀಡುವಂತಿದೆ
ಬಾನಂಚಿನ ಕಡಲು..
ಕಡಲಿಗು ಮುಗಿಲಿಗು
ಇದೆಂತಹ ಬಂಧ..
ಅರಿಯಲಾರದಂತಹ
ಅಂತರಂಗದ ಅನುಬಂಧ..
ಕಾಲಗಳು ಉರುಳಿದರು
ಯುಗಗಳೇ ಕಳೆದರು
ಕಾಣುವುದು ತಿಳಿನೀಲಿ ಬಿಂಬ
ಮಾಸಿಹೋಗದ ಆ ಪ್ರತಿಬಿಂಬ..
ಭಾವದೊಳಗೆ ಸನಿಹ ಕಡಲು
ವಾಸ್ತವದೊಳು ದೂರ ಮುಗಿಲು
ಸತ್ಯದ ಒಳಗಿನ ಮಿಥ್ಯ..
ನೆನಪಿಸುತಿದೆ ಅಲೆಗಳು ನಿತ್ಯ..
ಬಾನಿಂದ ಜಾರಿದೆ ಮಳೆ ಹನಿ
ಕೇಳುತಿದೆ ಮರಳಿ ಕಡಲ ದನಿ
ಮತ್ತೆ ಪ್ರೀತಿ ಮೂಡುವ ಹೊತ್ತು
ಕಡಲಾಳದಲಿ ಎಲ್ಲೆಲ್ಲೂ ಸ್ವಾತಿಮುತ್ತು….
****************************