ಹರಿದ ಬಟ್ಟೆ….
ಸುಜಾತ ಕಂದ್ರವಳ್ಳಿ
ನನ್ನದು ಅರ್ಧಂಬರ್ಧ ಹರಿದ ಬಟ್ಟೆ
ಆಧುನಿಕತೆಯನ್ನು ವೈಭವೀಕರಿಸಲೆಂದೇ
ಹರಿದುಕೊಂಡ ಬಟ್ಟೆ….!
ಹರಕಲು ಬಟ್ಟೆ ಎನ್ನಲಾರೆ….!
ಆದರೂ ಹರಿದ ಬಟ್ಟೆ….!
ಆಧುನಿಕತೆಯನ್ನು ತೋರಿಸುವ ಭರದಲ್ಲಿ, ಸಾಂಪ್ರಾದಾಯಿಕತೆಯನ್ನು ಮುಚ್ಚಿಡಲೆಂದೇ ಹರಿದುಕೊಂಡ ಬಟ್ಟೆ……!
ಅರ್ಧ ಹೊಟ್ಟೆಗೆ ತಾಗುವಂತ ಹಸಿದ ಬಟ್ಟೆ…
ಅಂಬಲಿ ಊಟ ನನ್ನದಲ್ಲವೇ ಅಲ್ಲ…!
ಮಾಲ್ಟ್ ಎಂದು ಹೆಸರು ಬದಲಿಸಿಕೊಂಡು ಮೆರೆವ ಹರಿದ ಬಟ್ಟೆ.
ನನ್ನದು ಅರ್ಧಂಬರ್ಧ ಹರಿದ ಬಟ್ಟೆ.
ಅಮ್ಮನ ಹಳೆ ಸೀರೆಗೆ ಹೊಸ ಮೆರುಗು ಕೊಟ್ಟ ಬಟ್ಟೆ,
ಅಪ್ಪನ ಲುಂಗಿಗೆ ಅಲಂಕಾರ ಕೊಟ್ಟ ಬಟ್ಟೆ…,
ಲುಂಗಿಯನ್ನೆ ಅಂಗಿಯಾಗಿಸಿದ ಬಟ್ಟೆ…
ಸೀರೆಯನ್ನೆ ಹೊದಿಕೆಯಾಗಿ ಸಿಂಗರಿಸಿಕೊಂಡ ಬಟ್ಟೆ,
ಆದರೇನಂತೆ ನಾ ಹರಕಲು ಬಟ್ಟೆ ಎಂದು ಅರಚಲಾರೆ,ಕಿರುಚಲಾರೆ ಆದರು ಹರಿದ ಬಟ್ಟೆ.
ನನ್ನದು ಅರ್ಧಂಬರ್ಧ ಹರಿದ ಬಟ್ಟೆ.
ಒಬ್ಬರು ಇನ್ನೊಬ್ಬರನ್ನು ನಂಬಲಾರದಂತ ಬಟ್ಟೆ.
ತಳುಕು ಬಳುಕಿನ ವೈಯ್ಯಾರದ ಬಟ್ಟೆ.
ಬಣ್ಣದ ಜಗದಲಿ ಮೆರೆಯಲೆಂದೆ ಹುಟ್ಟಿಕೊಂಡು
ಸಾಯಲಾಗದೆ ನರಳಾಡುತಿರುವ ಬಟ್ಟೆ.
ಬಂಗಾರವಿಲ್ಲದ, ಸಿಂಗಾರ ಕಾಣದ ,ಮಲ್ಲಿಗೆ ಕಂಪು ತಾಗದ ಬಟ್ಟೆ
ಬೊಟ್ಟನ್ನೆ ದಿಕ್ಕರಿಸಿ ಬೆಟ್ಟು ಮಾಡಿ ತೋರಿಸಿಕೊಳ್ಳುತಿರುವ ಬಟ್ಟೆ,
ಆದರೂ ಹರಿದ ಬಟ್ಟೆ ಎನ್ನಲಾರೆ….!
ಅರ್ಧಂಬರ್ಧ ಹರಿದ ಬಟ್ಟೆ…..
ಎಂದು ಹೊಲಿಸಿಕೊಳ್ಳಲಾರದಷ್ಟು ದುಬಾರಿ ಈ ಬಟ್ಟೆ.
ಅಲಂಕರಿಸಿಕೊಳ್ಳುವ ಸೊಬಗನ್ನು ಮರೆತ ಬಟ್ಟೆ
ಇದರೊಳಗೆ ನಾನು ಪಟ್ಟದ ಗೊಂಬೆಯಂತೆ ಮೌನಳಾಗಿಬಿಟ್ಟೆ.
********************************************
ಥ್ಯಾಂಕ್ಯೂ ಸರ್