ಕವಿತೆ
ದಂಡೆಯಲ್ಲಿ ಒಮ್ಮೆ ನಡೆದು..
ಫಾಲ್ಗುಣ ಗೌಡ ಅಚವೆ
ಕಾರವಾರದ ದಂಡೆಯೆಂದರೆ ನನಗೆ
ಅದೆಂಥದೋ ಪ್ರೀತಿ
ಸಂಜೆ ಮುಂಜಾವೆನ್ನದೇ
ಸದಾ ಗಿಜುಗುಡುವ ಜನರು
ಈ ದಂಡೆಯಲ್ಲಿ ನಡೆದು
ಅದರ ಜೊತೆ ಒಬ್ಬೊಬ್ಬರೇ
ಸಂಭಾಷಿಸಿಸುತ್ತಾರೆ ಮತ್ತು
ಹಗುರಾಗುತ್ತಾರೆ.
ದಿಗಂತದಿಂದೋಡಿ ಬರುವ ಅಲೆಗಳು
ನಡೆವ ಪಾದಗಳ ತಂಪುಗೊಳಿಸಿ
ಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆ
ಸಾಂತ್ವನ ನೀಡುತ್ತವೆ.
ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು
‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’
ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆ
ಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು
‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ!
ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿ
ಅಲ್ಲಿಯವರೇ ಆಗಿಬಿಡುತ್ತೀರಿ
ಅದಕ್ಕೆ ಕಾರಣ ಅವರ ಪ್ರೀತಿ
ಪ್ರತಿ ಸಂಜೆ ಎದುರಾಗುವ ಈ
ದಂಡೆಯ ಮಮತೆ!
ದಂಡೆಯ ಉಸುಕು ಸದಾ ಗಾಳಿಯೊಂದಿಗೆ
ಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳು
ಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳು
ಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟು
ಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆ
ಮಾತಾಡುತ್ತಿರುತ್ತವೆ.
ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳು
ಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ.
ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆ
ಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ!
ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭ
ಇಡೀ ಕಾರವಾರಿಗರ ಮನಸ್ಸನ್ನು
ಪ್ರತಿನಿಧಿಸುತ್ತದೆ!
ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತ
ಸುರಕ್ಷಿತ ದಡ ಸೇರಿಸುತ್ತದೆ.!
ಸಂಜೆಯಾದರೆ ಮೀನ ಖಂಡಗಳ ಹೊಳೆಸುವ
ಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆ
ಸುಳಿದು ಹೋಗುತ್ತವೆ.
ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.
ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ!
ಲಂಗರು ಹಾಕಿದ ಹಡಗುಗಳು ಸಂಜೆ
ಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ!
ಇಲ್ಲಿನ ಆಹ್ಲಾದಕರ ಸಂಜೆ
ಅಲೆವ ಅಲೆಗಳ ಹೃದಯದ ಮಿಡಿತ
ದಂಡೆಯ ಮರಳ ಮಧುರ ಸಂಗೀತ
ಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆ
ನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆ
ದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ!
*************************************
ಸೊಗಸಾದ ಕವನ
ಕಾರವಾರ ದಂಡೆಯ ಸೊಬಗನ್ನು ಕವಿತೆಯಲ್ಲಿ ಚೆನ್ನಾಗಿ ಉಣಬಡಿಸಿರುವೆ.ಕವಿತೆ ಮಸ್ತ ಐತಿ….
ಕಾರವಾರ ಕಡಲತೀರದ ರಸದೌತಣವನ್ನು ಉಣಬಡಿಸುವ ಕವಿತೆ ಸೂಪರ್
ಸುಂದರವಾಗಿದೆ ಸರ್ ನಿಮ್ಕ ಕವನ ಹಾಗೂ ಕಾರವಾರದ ದಂಡೆ
ಎಲ್ಲ ಗೆಳೆಯರಿಗೂ ಧನ್ಯವಾದಗಳು..