ಕವಿತೆ
ಕಾರ್ತಿಕದ ಮುಸ್ಸಂಜೆ
ಅಕ್ಷತಾ ರಾಜ್
ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿ
ನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿ
ಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳು
ಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು ||
ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋ
ಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆ
ಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿ
ನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ ||
ಹಾಡು ಕೂಜಣದ ಆ ದನಿಯ ಇಂಪಿನಲಿ
ನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನು
ಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿ
ಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ ||
ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿ
ಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವು
ಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನು
ತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ ||
***********************************