ಕವಿತೆ
ನೇಗಿಲಿನ ಒಂದು ಸಾಲು
ವಿಠ್ಠಲ ದಳವಾಯಿ
ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲು
ಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು
ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲು
ಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು.
ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲು
ಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು.
ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.
ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು.
ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆ
ಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು.
ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’
ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು.
*****************************************
ತುಂಬಾ ಅದ್ಭುತ ಮತ್ತು ಸೊಗಸಾಗಿದೆ ಸರ್ ಕವಿತೆ
ನೇಗಿಲಿನ ಸಾಲು ಯೋಗಿಯ ಮೌನದಂತೆ ಹೊಳೆಯುವಂತೆ ಮಾಡಿದೆ. ಅನ್ನದಾತನ ಕಾಯಕ, ಜೀವಗಳ ಬೆಸೆಯುವಿಕೆ ಹಾಗೂ ಸದಾ ಪ್ರಕೃತಿ ಜೀವಂತಿಕೆಯ ತುಡಿಯುವ ಹೊತ್ತಿಗೆ ಆ ಸಾಲು ಅಳಿಸಲು ನಿಂತಿರುವ ಹುಸಿ ಆಧುನಿಕಕತೆಗೆ ಮುಖಾಮುಖಿಯಾಗುತ್ತದೆ. ಸರಳತೆಯಲ್ಲೆ ಮಿಗಿಲಾದ ಅರ್ಥವಂತಿಕೆ ಜಿನುಗಿಸುವ ಕವಿಯ ಕುಸುರಿ ಮೆಚ್ಚವಂತದ್ದು. ಮುಂದುವರೆಯಲಿ….