ಅನಾಮಿಕಾ

ಕವಿತೆ

ಅನಾಮಿಕಾ

ಮೋಹನ್ ಗೌಡ ಹೆಗ್ರೆ.‌

Woman abstract faces graphic hand-drawn. Card stock illustration

ಅವಳು ಮಲಗಿದ್ದಾಳೆ
ಕಣ್ಣಿನಲ್ಲಿ ಕನಸಿನ ಹಸಿವ ತುಂಬಿ
ಒಡಲಿನಲಿ ಮತ್ಯಾವುದೋ ಹಸಿವ ನುಂಗಿ
ಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ…

ಒಂದಾನೊಂದು ದಿನದಲ್ಲಿ
ಅವಳು ಮಲಗಿರುವಾಗ
ತೊಟ್ಟಿಲ ತೂಗಿದ ಕೈಗಳು
ಮಲಗಿದ ಮುದ್ದು ಮುಖಕ್ಕೆ
ಮುತ್ತಿನ ಮಳೆಗೆರೆದ ಮನಸುಗಳು
ಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳು
ಅವಳಿಗೆ ನೆನಪಾಗುತಲೇ ಇಲ್ಲ…

ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆ
ಕೆಲವೊಮ್ಮೆ ಇವಳೂ ಏಳದ ಹಾಗೇ
ಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆ
ಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವ
ಸಹಿಸಿಕೊಂಡು

ಅದೊಂದು ವೃತ್ತಿಯೇ ಎನಿಸುವಷ್ಟು
ಬಲಿತ ಮಾಂಸ ಖಂಡಗಳೇ
ಉಬ್ಬು ತಗ್ಗುಗಳೇ ಅವಳ ಪದೋನ್ನತಿ
ಸ್ವಯಂ ನಿವೃತ್ತಿ ಪಡೆದರೂ
ಉಳಿತಾಯವಾಗಲಿ, ಪಿಂಚಣಿಯಾಗಲಿ ಅವಳ ಪಾಲಿಗಿಲ್ಲ….

ಅನುಕಂಪ, ಬಂಡಾಯ, ಭದ್ರತೆ
ಎಲ್ಲವನ್ನೂ ಮರೆತಿದ್ದಾಳೆ ಅವಳು
ತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆ
ಸಮಾಜದ ಯಾವುದೋ ಸರಪಳಿಯ
ಅನ್ವರ್ಥಕ ದೇವತೆಯೇ ಅವಳು
ಗೊತ್ತಿಲ್ಲ ನನಗೆ ಇಂದಿಗೂ ಅವಳ ಹೆಸರೇನೆಂದು…..

**************************************

12 thoughts on “ಅನಾಮಿಕಾ

  1. ಸುಂದರ ಕವನ . “ತನ್ನಮಯ್ಯ ಒತ್ತೆ ಇಟ್ಟು ಎಷ್ಟೊ ಅತ್ಯಾಚಾರಗಳ ತಪ್ಪಿಸಿದಾಕೆ ಸಮಾಜದ ಯಾವುದೋ ಸರಪಳಿಯ ಅನ್ವರ್ಥಕ ದೇವತೆ”ಮಜಬೂತಾದ ಸಾಲುಗಳಿವು.

  2. “ಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆ
    ಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವ” & “ತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆ” ಎಂಬ ಸಾಲುಗಳು ಮೈದಡವಿ ಮನ ಕಿವುಚಿದವು.. ನಿರಂಜನರ ‘ಕೊನೆಯ ಗಿರಾಕಿ’ ಕತೆ ನೆನಪಾಯಿತು…

Leave a Reply

Back To Top