ಕವಿತೆ
ಅಹಮ್ಮಿನ ಕೋಟೆ
ಚಂದ್ರಪ್ರಭ ಬಿ.
‘ಸೋತರೇ ಗೆಲುವು ಮಗಳೇ’ ಅವ್ವನ ಮೆಲು ನುಡಿ
‘ಇಟ್ಟಾಂಗಿರಬೇಕ ಮಗಾ’ ಅಜ್ಜಿಯ ಚೆನ್ನುಡಿ
ನಿನ್ನ ನಲ್ನುಡಿ ಎದುರು ಗಾಳಿಯೊಡನೆ
ತೂರಿ ಹೋದುದು ಅರಿವಿಗೇ ಬರಲಿಲ್ಲ
ಆಹಾ! ಏನದರ ಸೊಗಸು…
ಖೋಡಿ ಮನಸ್ಸಿನ ಹತ್ತು ಹದಿನಾರು ಕನಸು
ಚಿತ್ತಾಕರ್ಷಕ ಸೆಳೆತ.. ಬಲು ಮತ್ತಿನ ಅಮಲು
ಬಿಸಿಲೇರಿದಂತೆಲ್ಲ ನಿಚ್ಚಳ ಬೆಳಕು
ನಡು ಮಧ್ಯಾಹ್ನದ ನಿಗಿನಿಗಿ ಕೆಂಡ
ಮಂಜು ಕರಗಿ ಒಳಹೊರಗೆಲ್ಲ ಕಡು ತಾಪ
ಅಪಥ್ಯವಾಗುವ ಅವ್ವ ಅಜ್ಜಿಯ ಕಿವಿಮಾತು
ತುದಿ ಮೊದಲಿಲ್ಲದ ತಪ್ಪು ಒಪ್ಪುಗಳ
ಗುಣಾಕಾರ ಭಾಗಾಕಾರ…
ಮುಂಬರಿಯಲು ತವಕಿಸುವ ಹೃದಯ
ನಿಂತೇ ಬಿಡುವ ಹಠಮಾರಿ ಹೆಜ್ಜೆ
ಕ್ಷಮಿಸು ಗೆಳೆಯ, ನಿನ್ನಂತೆ ನಾನೂ ಬಂದಿ
ಅಹಮ್ಮಿನ ಕೋಟೆಯಲಿ..
****************************************
ಸುಂದರವಾಗಿದೆ.