ಕವಿತೆ
ನನ್ನ ಕವಿತೆ
ಲಕ್ಷ್ಮೀದೇವಿ ಪತ್ತಾರ
ಹರುಕು ಬಟ್ಟೆ
ಮುರುಕು ಮನೆಯಲಿ
ಅರೆ ಹೊಟ್ಟೆ ಊಟದಲ್ಲೂ
ಹೆತ್ತ ಮಕ್ಕಳು ಕಲಿತು
ಮನೆಗೆ ಆಸ್ತಿ ಆಗುವರೆಂಬ
ಹೆತ್ತವರ ಹೊಟ್ಟೆ ತುಂಬಾ ಕನಸು
ನನ್ನ ಕವಿತೆ
ಭೂಮಿ ಹರಗಿ ಹದಗೊಳಿಸಿ
ಗಟ್ಟಿ ಬೀಜವ ಬಿತ್ತಿ
ಮಳೆ ಬರುವುದೆಂಬ ಭರವಸೆ ಹೊತ್ತ
ರೈತನ ನಿರೀಕ್ಷೆ ನನ್ನ ಕವಿತೆ
ಕೆಲಸವಿಲ್ಲವೆಂದು ಕೊರಗದೆ
ಸಿಕ್ಕ ಕೆಲಸವನ್ನ ಚೊಕ್ಕನಾಗಿ ಮಾಡಿ ಹೊಟ್ಟೆಗೆ ಹಿಟ್ಟು ಗಿಟ್ಟಿಸಿಕೊಳ್ಳುವ ಗಟ್ಟಿಗರ ಇಚ್ಛಾಶಕ್ತಿ
ನನ್ನ ಕವಿತೆ
ಬಾಳ ಪಥದ ಏರಿಳಿತಗಳನ್ನು ಎದುರಿಸಿ ಸಂಸಾರ ರಥವನ್ನು ಸುಗಮವಾಗಿ ದಡ ಸೇರಿಸುವ ಸ್ತ್ರೀ ರತ್ನ ನನ್ನ ಕವಿತೆ
ಗಾಳಿ ಮಳೆ ಬಿಸಿಲು ಲೆಕ್ಕಿಸದೆ
ಕಾಮನೆಗಳನ್ನು ಕಡಿಗಣಿಸಿ
ವೈರಿಪಡೆಯ ನಿರ್ಣಾಮದ ಪಣ ತೊಟ್ಟ
ಯೋಧನ ದೇಶಭಕ್ತಿ ನನ್ನ ಕವಿತೆ
ಪ್ರಕೃತಿ ಪ್ರಕೋಪ, ವಿಕೋಪಗಳ ಎದುರಿಸಿ
ರೋಗರುಜಿನಗಳ ನಿಯಂತ್ರಿಸಿ
ಒಳ್ಳೆಯ ದಿನಗಳ ಆಶೆ,ಭರವಸೆ
ಸಾಕಾರಗಳಿಸುವ ನಾಡಿನ ಸರ್ದಾರ
ನನ್ನ ಕವಿತೆ
*******************************