‌ಬಾಲಂಗೋಚಿ

ಪುಸ್ತಕ ಸಂಗಾತಿ

ಬಾಲಂಗೋಚಿ

ಮಕ್ಕಳ ಕವನ ಸಂಕಲನ

‘ಬಾಲಂಗೋಚಿ’ ಮಕ್ಕಳ ಕವನ ಸಂಕಲನ.
ಪ್ರಕಟಣೆ: 2019
ಪುಟಗಳು: 96
ಬೆಲೆ: 90ರೂ.
ಪ್ರಕಾಶಕರು: ಗೋಮಿನಿ ಪ್ರಕಾಶನ
ಶಾಂತಿ ನಗರ, ತುಮಕೂರು-2 ದೂರವಾಣಿ: 9986692342

ಮಕ್ಕಳ ಮನವನ್ನು ಅರಳಿಸುವ ಪದ್ಯಗಳು

ಅರಳ ಬೇಕು ಚಿಣ್ಣರ ಮನಸು

ಮೊಲ್ಲೆ ಹೂವಿನಂತಯೇ

ಸಲ್ಲಬೇಕು ಮನುಜ ಕುಲಕೆ

ಅದರ ಸೇವೆಯಂತೆಯೇ

ಬಾಲ್ಯದ ನೆನಪುಗಳೇ ಎಲ್ಲರಿಗೂ ಒಂದು ರೀತಿಯ ಪ್ರೀತಿ ಹಾಗೂ ಚೈತನ್ಯ ಬಾಲ್ಯ ನೆನಪಾಗುತ್ತಲೇ ನಮ್ಮ ಬದುಕಿನ ಬಹುದೂರದ ಪಯಣವೆಲ್ಲ ಮರೆತಂತಾಗಿ ನಾವೂ ಒಂದು ರೀತಿಯ ಬಾಲ್ಯದ ಖುಷಿಯಲ್ಲಿ ತೇಲತೊಡಗುತ್ತೇವೆ. ಆಗ ಅಲ್ಲಿ ಆಡಿದ ಆಟಗಳು, ಸುತ್ತಾಡಿದ ಜಾಗಗಳು, ಗುಡ್ಡ ಬಯಲುಗಳು, ಹಳ್ಳ ಪ್ರಪಾತಗಳು, ಎತ್ತರದ ಬಂಡೆ, ಕ್ರಿಕೆಟ್ ಚಂಡು, ಪ್ರೀತಿಯ ನಾಯಿಮರಿ, ಬೆಕ್ಕಿನ ಮರಿಗಳಿದ್ದ ಬುಟ್ಟಿ, ಬೀಳುವ ಮಳೆ, ನೀರಿನ ಆಟ, ಶಿಕ್ಷಕರ ಪಾಠ, ಅಮ್ಮನ ಪ್ರೀತಿ ಹಾಗೂ ಸಿಟ್ಟು ಹೀಗೆ ಏನೇನೋ ಕಾಣಲು ತೊಡಗುತ್ತದೆ. ಆಗ ನಾವು ನಮ್ಮ ವಯಸ್ಸನ್ನು ಮರೆತು ಅಲ್ಲಿಯ ದೃಶ್ಯ ಚಿತ್ರಗಳಲ್ಲಿ ಒಂದಾಗುತ್ತ ಆ ಭಾವಕ್ಕೆ ಇಳಿಯಲು ಸಾಧ್ಯವಾಗುವುದು. ಇದನ್ನು ಬಳಸಿಕೊಂಡು ನಾವು ಅಭ್ಯಸಿಸಿದ, ಓದಿದ, ಕಂಡ, ಉಂಡ ಇತರ ಸಂಗತಿಗಳನ್ನು ಸೇರಿಸಿ ಮಕ್ಕಳ ಪ್ರೀತಿಗಾಗಿ ಅವರ ಖುಷಿಗಾಗಿ ಬರೆಯುವುದು  ಮಕ್ಕಳ ಒಲುಮೆಯ ಸಾಹಿತ್ಯವಾಗಿ ರೂಪುಗೊಳ್ಳುತ್ತದೆ. ಇದೆಲ್ಲವನ್ನು ನಮ್ಮಲ್ಲಿರುವ ಬರೆಯುವ ತುಡಿತ ಹಾಗೂ ಶೃದ್ಧೆ ಆಗುಮಾಡುತ್ತದೆ. ಅಂತಹ ತುಡಿತ ಹಾಗೂ ಶೃದ್ಧೆ ಇರದಿದ್ದಲ್ಲಿ ಬಾಲ್ಯಕ್ಕೆ ಮರಳುವ ಭಾವವೇ ಬರದು. ಆದರೂ ತಾನು ಮಕ್ಕಳಿಗೆ ಬರೆಯಬೇಕೆಂಬ ಒತ್ತಡದಲ್ಲಿ ಹೊರಟರೆ ಅದು ನೈಸರ್ಗಿಕ ಕಲಾತ್ಮಕ ರಚನೆ ಆಗದು.

ಮೇಲಿನ ಪದ್ಯದ ಸಾಲುಗಳು ಡಾ.ಕೆ.ಬಿ. ರಂಗಸ್ವಾಮಿಯವರದು. ಅವರು “ಬಾಲಂಗೋಚಿ” ಎನ್ನುವ ಮಕ್ಕಳ ಕವನಸಂಕಲನ ರೂಪಿಸಿದ್ದಾರೆ. ವೃತ್ತಿಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿದ್ದಾರೆ. ರಂಗಸ್ವಾಮಿಯವರಲ್ಲಿ ಇರುವ ಬಾಲ್ಯ ಉಳಿಸಿಕೊಳ್ಳುವ ಹಂಬಲ ಪ್ರೀತಿ ಶೃದ್ಧೆಗಳೇ ಈ ಸಂಕಲನ ರೂಪಿಸಲು ಪ್ರೇರಣೆ ಹಾಗೂ ಯಶಸ್ಸು ಆಗಿದೆ. ‘ಅರಳ ಬೇಕು ಚಿಣ್ಣರ ಮನಸು ಮೊಲ್ಲೆ ಹೂವಿನಂತಯೇ’ ಎನ್ನುವ ಇವರ ಸಾಲು ಎಲ್ಲರ ಆಶಯವೂ ಆಗುತ್ತದೆ. ಮಕ್ಕಳ ಪ್ರೀತಿಯಲ್ಲಿ ನಾವು ಸಮಾಜದ ಒಳಿತನ್ನು ಕಾಣುತ್ತೇವೆ. ಕಾಣ ಬೇಕು. ಅವರ ಮನಸ್ಸು ಅರಳುವುದು ಬಹಳ ಮುಖ್ಯ ಅಂತಹ ಅರಳುವಿಕೆ ನೈಸರ್ಗಿಕವಾಗಿರುವಂತಹ ಪರಿಸರ ನಾವು ಉಂಟುಮಾಡಬೇಕು.

 ನಾವೆಲ್ಲ ಮಕ್ಕಳಾಗಿದ್ದಾಗ ಹಾವಾಡಿಗನ ಬೆನ್ನು ಹತ್ತಿದವರೇ. ಸುಡುಗಾಡು ಸಿದ್ಧನ ಜಾದು, ತಂಬೂರಿಯೊಂದಿಗೆ ಪದ ಹೇಳುವವನ ಪದ್ಯ, ಸುಗ್ಗಿಯ ಕುಣಿತ ಎಲ್ಲದರಲ್ಲೂ ಖುಷಿಪಡುತ್ತ ಅವರೊಂದಿಗೆ ಮನೆಯಿಂದ ಮನೆಗೆ ಸುತ್ತಾಡಿದ್ದೂ ಇದೆ. ಈ ರೀತಿಯ ಭಾವ ಎಲ್ಲ ಮಕ್ಕಳಲ್ಲೂ ಇರುತ್ತದೆ. ಆದರೆ ಚಿತ್ರ ಬದಲಾಗಬಹುದು ಅಷ್ಟೇ. ಇಲ್ಲಿ ರಂಗಸ್ವಾಮಿಯವರು ಬರೆದುದನ್ನು ನೋಡಿ.

ಬೀದಿಗೆ ಬಂದಿತು

ದೊಡ್ಡದೊಂದು ಒಂಟೆ

ಓಡಿದ ಸುಬ್ಬನು

ನಿಲ್ಲಿಸಿ ತಂಟೆ

ಮೇಲಿನ ಸಾಲು ಸಹಜವಾಗಿ ಬಂದಿದೆ. ಅದೇ ಪದ್ಯ ಮುಂದುವರಿದು

ಕುಳಿತನು ಸುಬ್ಬ

ಓಂಟೆಯ ಮೇಲೆ

ತೇಲುವ ಅನುಭವ

ಅಂಬರದಲ್ಲೇ

ಎನ್ನುವ ಸಾಲೂ ಇದೆ. ಹೌದು ಮಕ್ಕಳ ಕಲ್ಪನಾ ವಿಸ್ತಾರ ಅಧಿಕವಾಗಿರುತ್ತದೆ. ದೊಡ್ಡವರಾದ ನಾವು ಬಹಳಸಾರಿ ನಮ್ಮ ಕಲ್ಪನೆಯನ್ನು ತರ್ಕದಿಂದ ಕಟ್ಟಿಹಾಕುತ್ತೇವೆ ಅನಿಸುತ್ತದೆ. ಮಕ್ಕಳು ಅಂಬರದಲ್ಲಿ ತೇಲುತ್ತಾರೆ, ಸಮುದ್ರದಲ್ಲು ಮುಳುಗುತ್ತಾರೆ ಹಾಗೂ ನಕ್ಷತ್ರಗಳನ್ನು ಚೀಲದಲ್ಲಿ ತುಂಬುತ್ತಾರೆ. ಇದೆಲ್ಲಾ ಅವರ ಕಲ್ಪನಾ ವಿಸ್ತಾರ. ಇಂತಹುದೇ ಕಲ್ಪನೆ ಇದೇ ಪುಸ್ತಕದ ಪ್ರಾಣಿ ಪಕ್ಷಿಗಳ ಸಂಗೀತ, ತರಕಾರಿ ಮದುವೆ,  ಮುಂತಾದ ಪದ್ಯಗಳಲ್ಲೂ ಇದೆ. 

‘ಬದನೆ ತಂದೆ

ಸೋರೆ ಕಾಯಿ

ತೋರಣ ಕಟ್ಟಿತು

ತುಪ್ಪೀರೆ’

ಎಂದೆಲ್ಲ ಬರೆದುದು ಸೊಗಸಾಗಿದೆ.

‘ಪುಟ್ಟೇನಳ್ಳಿ ಪುಟ್ಟ

ಭಾರೀ ಭಾರೀ ತುಂಟ

ಕುದಿಯುವ ಹಾಲು ಕುಡಿಕೇಲಿಟ್ಟು

ಬೆಕ್ಕಿನ ಮೂತಿ ಸುಟ್ಟ.’

ಮಕ್ಕಳು ತುಂಟರೆನ್ನುವುದು ಎಲ್ಲರಿಗೂ ಗೊತ್ತು. ಆದರೆ ಅವರ ತುಂಟತನವನ್ನು, ಮಕ್ಕಳಿಗೆ ಖುಷಿಯ ಓದನ್ನು ಒಟ್ಟಿಗೆ ತಂದಿರುವ ಸಾಲು ಎಲ್ಲಕರಿಗೂ ಹಿತವಾಗುತ್ತದೆ. ಇರುವೆಯನ್ನು ಕಾಣದೇ ತುಳಿದು ಅದನ್ನು ಅಳಬೇಡ ಎಂದು ಸಂತೈಸುವ ಮಕ್ಕಳ ನಿರ್ಮಲ ಜೀವ ಪ್ರೀತಿ, ಸುಮತಿ ಪದ್ಯದಲ್ಲಿ ಮಕ್ಕಳದೇ ಉದಾಹರಣೆಯ ಮೂಲಕ ಒಳಗಿನ ಸೌಂದರ್ಯವೇ ಬಹಳ ಮುಖ್ಯ ಎಂದು ಹೇಳುವ ರೀತಿ ಎಲ್ಲ ಚಿಂತನೆಗೆ ಹಚ್ಚುವಂತಿವೆ. ಹಸು ಕರು, ಹೊಟ್ಟೆಬಾಕ, ಕಂಬಳಿ ಹುಳು, ಹಕ್ಕಿ ಮತ್ತು ಮರ, ಬೆಳ್ಳಕ್ಕಿ ಮುಂತಾದ ಪದ್ಯಗಳೆಲ್ಲ ತುಂಬಾ ಇಷ್ಟವಾಗುವಂತಿವೆ.

ಕುಕ್ಕರಳ್ಳಿ ಕೆರೆಯ ತುಂಬಾ

ಸಾಲು ಸಾಲು ಕೊಕ್ಕರೆ

ಒಂದೇ ಒಂದು ಹಲ್ಲು ಇಲ್ಲ

ಬಾಯಿ ತೆರೆದು ನಕ್ಕರೆ

ಕೆರೆಯಲ್ಲಿರುವ ಪಕ್ಷಿಗಳನ್ನು ನೋಡುತ್ತ ನಾವು ಮೈಮರೆತು ಬಿಡುತ್ತೇವೆ. ಅವುಗಳ ಈಜು, ನೀರಲ್ಲಿ ಮುಳುಗುವ ರೀತಿ, ದೋಣಿಯಂತಹ ಚಲನೆ, ಎಷ್ಟೇ ಈಜಿದರೂ ಅವುಗಳ ಮೈ ಒದ್ದೆ ಆಗದೇ ಇರುವುದು, ಅವು ಮೀನು ಮುಂತಾದವನ್ನು ಬೇಟೆಯಾಡುವ ರೀತಿ ಎಲ್ಲ ಮಕ್ಕಳಿಗೆ ಬೆರಗೆ. ಅದೇ ರೀತಿಯ ಬೆರಗನ್ನೇ ಇಲ್ಲಿ ಒಂದು ಹೊಸ ನೋಟದೊಂದಿಗೆ ರಂಗಸ್ವಾಮಿಯವರು ಪದ್ಯವಾಗಿಸಿದ ರೀತಿ ಖುಷಿಕೊಡುತ್ತದೆ. ಒಂದೇ ಒಂದು ಹಲ್ಲು ಇಲ್ಲ ಬಾಯಿತೆರೆದು ನಕ್ಕರೆ ಇದು ಸಹಜವಾದರೂ ಅದು ಉಂಟುಮಾಡುವ ಆನಂದ ಬಹಳ ಮಹತ್ವದ್ದು.

‘ಕೊಕ್ಕರೆ ಇರುವ ಕೆರೆಯ ನೋಟ

ತಂಪು ತಂಪು ಕಣ್ಣಿಗೆ

ನೀರಿನಲ್ಲಿ ಪುತ ಪುತನೆ

ಅರಳಿದಂತೆ ಮಲ್ಲಿಗೆ’

ಹೌದು ಮಲ್ಲಿಗೆ ಅರಳಿದ ನೋಟಕ್ಕಿಂತಲೂ ಮಿಗಿಲಾದ ಸಂತಸ ಕೆರೆಯ ತುಂಬಾ ಕೊಕ್ಕರೆಗಳನ್ನು ನೋಡಿದಾಗ ಅಗದೇ ಇರದು.

ಮನಕೆ ಮುದ ನೀಡುವ

ಮುದ್ದು ಮುದ್ದು ಕೊಕ್ಕರೆ

ಅಮ್ಮನಂತೆ ಮುದ್ದಿಸುವೆ

ನೀನು ಕೈಗೆ ಸಿಕ್ಕರೆ.

ಅಮ್ಮನನ್ನು ಹೇಗೆ ಪ್ರೀತಿಯಿಂದ ಮುದ್ದಿಸುವೆನೋ ಹಾಗೆ ಮುದ್ದಿಸುವೆ ಎನ್ನುತ್ತ ಮಕ್ಕಳನ್ನು ಖುಷಿಯಲ್ಲಿ ಮೀಯಿಸಿದ್ದಾರೆ. ಇಂತಹ ಗೆಲುವಾದ ಪದ್ಯಗಳ ಸಂಕಲನದ ಮೂಲಕ ರಂಗಸ್ವಾಮಿಯವರು ಮಕ್ಕಳ ಮನಸ್ಸನ್ನು ಅರಳಿಸಲು ಪ್ರಯತ್ನಿಸಿದ್ದಾರೆ. ಅವರೇ ಹೇಳಿರುವಂತೆ ಅವರು ತಮ್ಮ ಅನುಭವದ ಮೂಲಕ ಇದನ್ನು ರೂಪಿಸಿದ್ದಾರೆ. ಇನ್ನಷ್ಟು ಹೊಸ ಓದು ಹಾಗೂ ಒಳ್ಳೆಯ ಪದ್ಯಗಳ ಮಾದರಿಗಳನ್ನು ಕಣ್ಣ ಮುಂದೆ ತಂದುಕೊಂಡು ಅವರು ಮತ್ತಷ್ಟು ಗೆಲುವಿನ ಪದ್ಯಗಳೊಂದಿಗೆ ಬರುತ್ತಾರೆ ಎನ್ನುವುದು ನನ್ನ ಆತ್ಮೀಯ ಅನಿಸಿಕೆ. ಈ ಪದ್ಯಗಳನ್ನು ಕನ್ನಡದ ಮಕ್ಕಳು ಓದಬೇಕು, ಅದಕ್ಕೆ ಹಿರಿಯರು ಸಹಕರಿಸಬೇಕು ಎನ್ನುತ್ತ ಉತ್ತಮ ಕೃತಿಗಾಗಿ ರಂಗಸ್ವಾಮಿಯವರನ್ನು ಅಭಿನಂದಿಸುತ್ತೇನೆ.

************************************************************************

    ತಮ್ಮಣ್ಣ ಬೀಗಾರ.

5 thoughts on “‌ಬಾಲಂಗೋಚಿ

  1. ಬಾಲಂಗೋಚಿ ಮಕ್ಕಳ ಕವನ ಸಂಕಲನವನ್ನು ಅತ್ಯಂತ ಮಾರ್ಮಿಕವಾಗಿ ತಮ್ಮಣ್ಣ ಬೀಗಾರ ಸರ್ ವಿಮರ್ಶೆ ಮಾಡಿದ್ದಾರೆ. ನಾನು ಸಂಕಲನ ಓದಿದೆ ತುಂಬಾ ಸೊಗಸಾಗಿದೆ. Dr. ರಂಗಸ್ವಾಮಿ ಸಾಹಿತಿಗಳಿಗೆ ಅಭಿನಂದನೆಗಳು.

  2. ಬಾಲ ಕವನ ಬರೆಯುವ ಹಕ್ಕಿಗೆ ವಿಮರ್ಶೆ ಬೇಕೆ?
    ರಾಜರತ್ನಂ ಬರೆದ ಹಾಗೆ, ಮಕ್ಕಳ ಆಡು ಭಾಷೆಯಲ್ಲಿ ಬರೆಯುವ, ಅದರಲ್ಲೂ ಮಕ್ಕಳ ವ್ಯೆದ್ಯರ ಸಹವಾಸದಲ್ಲಿ ಬರುವ ಮಕ್ಕಳ ಆಡು ಮಾತಿನಲ್ಲೇ ಬರೆಯುವವರಿಗೆ. ಆದರೂ ವಿಮರ್ಶೆ ಮಾಡುವ ವಿಮರ್ಶಕರು ಬೇಕೇಬೇಕು, ನ್ಯಾಯಮೂರ್ತಿಗಳ ಹಾಗೆ,ಅವರೂ .
    ನಮ್ಮ ಅನಿಸಿಕೆ ಇದು. ಅವರ ತೀರ್ಪು ಸರಿಯಾಗಿ ಬಂದಿದೆ. ನಾನೂ ಓದಿದಾಗ ಸುಲಲಿತವಾಗಿ ಮಕ್ಕಳಿಗೆ ಇಷ್ಟವಾದ ಪದಗಳ ಭಂಢಾರವೇ ಹರಿದಿದೆ. ಅದಕ್ಕಾಗಿ ವಸ್ತು ನಿಷ್ಠವಾಗಿ ಬರೆದವರಿಗೆ ಅಭಿನಂದನೆ.
    ಹಾಗೂ ಕವನ ಕರ್ತರಿಗೂ ❤❤

Leave a Reply

Back To Top