ಮುಗಿಲ ಮಲ್ಲಿಗೆ

ಕಥೆ

ಮುಗಿಲ ಮಲ್ಲಿಗೆ

ರೂಪಕಲಾ ಕೆ.ಎಂ.

9 Randy and Romantic Works That Show What Love Has Looked Like Across Art  History | Art for Sale | Artspace

ಕತ್ತಲೆಯ ಸೆರಗನ್ನು ಹೊದ್ದು ಮಲಗಿದ್ದ ರಸ್ತೆಯಲ್ಲಿ, ವೇಗವಾಗಿ ಚಲಿಸುತ್ತಿದ್ದ ಬಸ್ಸು.. ಅದಕ್ಕಿಂತಲೂ ವೇಗದಲ್ಲಿ ಓಡುತ್ತಿತ್ತು ಹರೀಶನ ಮನಸ್ಸು. ಆಗಾಗ ಎದುರಾಗುವ ವಾಹನಗಳ ಬೆಳಕು ಬಂದು ಕಣ್ಣಿಗೆ ಹೊಡೆದರೂ, ಮನಸ್ಸು ಮಾತ್ರ ಕತ್ತಲೆಯ ಗೂಡಾಗಿತ್ತು..

ಪಕ್ಕದ ಸೀಟಿನಲ್ಲಿ ರಾಧಿಕ ಗಾಢವಾದ ನಿದ್ರೆಯಲ್ಲಿದ್ದಳು.. ಬಸ್ಸಿನ ಪ್ರಯಾಣದಲ್ಲಿಯೂ ಗೊರಕೆ ಹೊಡೆಯುತ್ತ ಮಲಗಿದ್ದ ಸಹ ಪ್ರಯಾಣಕರನ್ನು ನೋಡಿ, ‘ಚಿಂತೆಯಿಲ್ಲದವರೆಗೆ ಸಂತೆಯಲ್ಲೂ ನಿದ್ರೆಯಂತೆ’ ಅನ್ನೊ ಮಾತು ಅವನಿಗೆ ನೆನಪಾಯಿತು..

ಅವನ ಮನ ಪದೇ ಪದೆ ಪ್ರದೀಪನನ್ನೇ ಮೆಲಕು ಹಾಕುತ್ತಿತ್ತು. ‘ಈಗ ಅವನಿಗೆ ಎಷ್ಟು ಖೂಷಿಯಾಗುತ್ತೋ!?, ಪ್ರತಿ ಬಾರಿಯು ಊರಲ್ಲಿದ್ದಾಗ “ನಮ್ಮ ಊರಿಗೆ ಒಂದು ಬಾರಿ ಬಾರೋ, ಆಗ ಗೊತ್ತಾಗುತ್ತೆ.. ಹಳ್ಳಿಯ ಸೊಬಗು ಹೇಗಿರುತ್ತೆ ಅಂತ. ಸಿಟಿಯಲ್ಲಿ ಜೀವನ ಮಾಡೋರಿಗೆ ಪ್ರಕೃತಿಯ ಸೌಂದರ್ಯ ಹೇಗೆ ಗೊತ್ತಾಗುತ್ತೆ ಹೇಳು” ಎಂದಿದ್ದ.. ಈಗ ಊರಿಗೆ ಬರ್ತಿದಿವಿ ಅನ್ನೋ ಪತ್ರ ಕೈ ಸೇರುವಷ್ಟರಲ್ಲಿಯೇ ನಾವೂ ಊರಲ್ಲಿ ಇರ್ತೀವಿ..ಅಬ್ಬಾ ಅವನ ಖುಷಿ ನಮ್ಮ ಕಣ್ಣಾರೇ ನೋಡಬೇಕು’… ಯೋಚನೆಗೆ ಭಂಗ ತರುವಂತೆ ಸಡನ್ ಬ್ರೇಕ್ ಹೊಡೆದಾಗ ಗಾಢವಾದ ನಿದ್ರೆಯಲ್ಲಿದ್ದವರೂ ಕೂಡ ಬೆಚ್ಚಿ ಬಿದ್ದು,ಏನಾಯಿತು ಎಂದು ಸುತ್ತ ಮುತ್ತ ಕತ್ತಲಿನಲ್ಲಿಯೇ ಕಣ್ಹಾಯಿಸಿ ಹುಡುಕುತ್ತಿದ್ದರು.

“ಅಬ್ಬಾ, ಏನಾಯ್ತು ಹರೀಶ್!?,” ಮುಂದಿನ ಸೀಟು ಹಣೆಗೆ ತಾಗಿ ನೋವಾದ ಕಡೆ ಒತ್ತುತ್ತ ಕೇಳಿದಳು ರಾಧಿಕ. ಎದ್ದು ನೋಡುವನಿದ್ದ ಅಷ್ಟರಲ್ಲಿಯೇ ಕಂಡೆಕ್ಟರ್ ಬಂದು

” ಏನಾಗಿಲ್ಲ ಹಸು ಅಡ್ಡ ಬಂತು”

” ನೋಡಿ ನಡ್ಸೋಕ್ಕಾಗಲ್ವಾ?, ತಲೆಗೆಷ್ಟು? ಪೆಟ್ಟು ಬಿತ್ತು” ಹಿಂದೆ ಸೀಟಲ್ಲಿದ್ದವರ ಮಾತಿಗೆ..

” ನೋಡಿ ನಡೆಸ್ತಾ ಇರೋದಕ್ಕೆ ಅಪಾಯ ತಪ್ಪಿದ್ದು ಸರ್. ಇಲ್ಲವಾಗಿದ್ರೆ ಬಸ್ಸು ಪಲ್ಟಿ ಹೊಡಿತಿತ್ತೋ ಅಥವಾ….” ಗುಣುಗುತ್ತಾ ಮುಖ ನೋಡಿ ಹೋದ ಕಂಡೆಕ್ಟರ್ ಮಾತಿಗೆ ಹರೀಶ್ ಹೌದು ಎನ್ನುವಂತೆ ತಲೆ ಆಡಿಸಿದನು.

ಹಿಂದೆಯಿಂದ ಮಾತುಗಳು ಕೇಳುತ್ತಲೇ ಇದ್ದವು. ಯಾವುದನ್ನು ತಲೆಗೆ ಹಾಕಿಕೊಳ್ಳದೇ ತನ್ನಷ್ಟಕ್ಕೆ ತಾನು ರಸ್ತೆ ಕಡೆ ದೃಷ್ಟಿ ಇಟ್ಟಿದ್ದ ಡ್ರೈವರ್ ಹತ್ತಿರ ಹೋಗಿ “ಇವುರ್ಗಳಿಗೆ ಬಸ್ಸಲ್ಲು ಹ್ಯಾಂಗ್ ನಿದ್ರೆ ಬತ್ತದೆ ಅಂತ..ದಿನಾ ಓಡಾಡೋ ನಮಗೆ ನಿದ್ದೆ ಇಲ್ಲದಿದ್ದರೂ ನಿದ್ದೆ ಬರಲ್ಲ. ಇನ್ನು ಮೇಲಾಗಿ ಸಲಹೆ ಕೊಡ್ತಾವ್ರೆ”..ಗೊಣಗಿದ ಕಂಡೆಕ್ಟರಿಗೆ..

” ಏನೋ ನಿಂದು?, ಯಾಕೆ ಗೊಣಗ್ತಿಯಾ.. ಯಾರು ಏನಂದ್ರು ಈಗ?..ಅವರನ್ನು ಬಂದು ಇಲ್ಲಿ ಕೂರಲು ಹೇಳು”

” ಸಾಯ್ಲಿ ಬಿಡಣ್ಣೋ.. ಜೀವ ಹೋದ್ರೂ ನಿದ್ದೆ ಬೇಕು ಅನ್ನೋ ಜನ್ಗಳು”..

ಹರೀಶ ಅವರಿಬ್ಬರ ಮಾತು ಕೇಳಿ ರಾಧಿಕಳ ಕಡೆ ತಿರುಗಿ ನೋಡಿ ನಕ್ಕಾಗ

” ಅವ್ರು ನಂಗಲ್ಲ ಹೇಳಿದ್ದು ಆಯ್ತಾ.. ನೀನೇನೋ ನನ್ನ ನೋಡಿ ನಗ್ಲಿಕ್ಕೆ?,..

” ಅಯ್ಯೋ ರಾಮ. ನಾನೇನೇ ಅಂದೇ ಈಗ!?,.

” ಏನಿಲ್ಲ ಬಿಡು” ಎನ್ನುತ ರಗ್ಗನ್ನು ಸರಿ ಮಾಡಿಕೊಂಡು ಮುದುರಿ ಮಲಗಿದಳು.

————

ಸೂರ್ಯ ಇನ್ನು ನಿದ್ರೆಯಿಂದ ಎದ್ದಿರಲಿಲ್ಲ

ಆಗಲೇ ಹಕ್ಕಿಗಳಿಗೆ ಬೆಳಗಾಗಿತ್ತು.. ಅಲ್ಲಲ್ಲಿ ತಂಬಿಗೆ ಹಿಡಿದು ಹೋಗುವ ಜನರನ್ನು ಕಂಡು… “ಅಬ್ಬಾ ರಸ್ತೆ ಬದಿಯಲ್ಲೇ?…ಕರ್ಮ. ಮರ್ಯಾದೆ ಸಹ ಇರಲ್ವಾ ಇವರಿಗೆಲ್ಲಾ?”

ಮೂಗು ಮುಚ್ಚಿಕೊಂಡು ರಾಧಿಕ ಸಿಟ್ಟಿನಲ್ಲಿ ಹೇಳಿದಾಗ..

” ಇದೆಲ್ಲಾ ಹಳ್ಳಿ ಕಡೆ ಕಾಮನ್ ರಾಧಿಕ, ಇಲ್ಲಿ ಇಷ್ಟೆ.. ಇನ್ನೂ ಕೆಲವು ಕಡೆ ಮಹಿಳೆಯರು ಕೂಡ!”…

” ಬೇಡ ಬಿಡು ಆ ಮಾತು.. ಇವರನ್ನೆಲ್ಲಾ ತಿದ್ದಲು ಆ ಬ್ರಹ್ಮನೇ ಬರಬೇಕೇನೋ… ಅದಿರಲಿ

ಈಗ ಪ್ರದೀಪನ ಮನೆ ಎಲ್ಲಿ ಅಂತ ನಿಂಗೆ ಗೊತ್ತಾ?”

” ಇಲ್ಲ,..ಇರು.., ಅಲ್ಲಿ ಯಾರಾನ್ನಾದರೂ ಕೇಳೋಣ” ಎನ್ನುತ್ತ ಸ್ವಲ್ಪ ಮುಂದೆ ನಡೆದರು. ಅಲ್ಲಿಯೇ ಇದ್ದ ಸಣ್ಣ ಗೂಡಂಗಡಿಯಲ್ಲಿ ಇಬ್ಬರು ಟೀ ಕುಡಿದು ವಿಚಾರಿಸಿದಾಗ… ಅವರು ಹೋಗಬೇಕಾದ ಊರು ಇನ್ನು ಒಂದು ಕಿಲೋ ಮೀಟರ್ ದೂರವಿರುವುದಾಗಿಯು

” ಇಲ್ಲೇ ಒಂದು ಆಟೋ ಬತ್ತದೆ ಈಗ. ಅದು ಆ ಊರಿಗೆ ಹೋಗತ್ತೆ ಅದರಲ್ಲಿ ಹೋಗಿ” ಅಂಗಡಿಯವರು ಹೇಳಿದಾಗ ಸರಿಯೆಂದು ಆಟೋಕ್ಕಾಗಿ ಕಾದು ನಿಂತರು.

—–

ರಾಧಿಕ ಮತ್ತು ಹರೀಶ್ ಮಾರನ ಹಳ್ಳಿ ಪ್ರವೇಶಿಸಿದ ಕೂಡಲೆ ಅಲ್ಲಿ ಯಾರನ್ನಾದರೂ ಕೇಳಿದರೆ ಪ್ರದೀಪನ ಬಗ್ಗೆ ತಿಳಿಯುತ್ತದೆಂದು ಯೋಚಿಸಿದ್ದರು.ಆದರೆ ಅಲ್ಲಿಯೇ ಆಡುತಿದ್ದ ಮಕ್ಕಳನ್ನು ಕೇಳಿದಾಗ ಇವರಿಬ್ಬರ ಕಡೆ ವಿಚಿತ್ರವಾಗಿ ನೋಡಿದರು.ಅದಕ್ಕು ಕಾರಣವಿತ್ತು. ರಾಧಿಕಳ ಉಡುಗೆ ಹರೀಶನ ಉಡುಗೆಯು ಒಂದೇ ತೆರನಾಗಿದ್ದವು. ಮುಂದೆ ಹೋಗಿ ಅಲ್ಲಿಯೇ ಹಲಸಿನ ಮರದ ಕಟ್ಟೆಯಲ್ಲಿ ಕುಳಿತ ಹಿರಿಯರನ್ನು ಕೇಳಿದರು. ಅವರಲ್ಲಿ ಹಿರಿಯರಾದ ಒಬ್ಬರು ಅವರಿಬ್ಬರನ್ನು ತೀಕ್ಷ್ಣವಾಗಿ ನೋಡಿ

” ಅವ , ನಿಮಗ್ ಹ್ಯಾಗ್ ಗೊತ್ತು?” ಎಂದರು. ಅವರ ಮಾತು ಅರ್ಥವಾಗದೆ ಇಬ್ಬರು ಒಬ್ಬರನ್ನೊಬ್ಬರು ಮುಖ ನೋಡಿಕೊಂಡರು.ಅದನ್ನರಿತ ಹಿರಿಯರು

” ಎಲ್ಲಿಂದ ಬಂದ್ರಿ”

” ಸಿಟಿಯಿಂದ, ಪ್ರದೀಪನನ್ನು ಕಾಣಬೇಕಿತ್ತು. ನಾವೆಲ್ಲ ಒಟ್ಟಿಗೆ ಓದಿದವರು”

” ಈಗ ನಿಮಗಾ ಅವ ಸಿಗಂಗಿಲ್ರಿ”

” ಅಂದ್ರೆ!!?”

” ಬನ್ರಿ, ಅವರ ಮನೆಯಾಗ ಬಿಡ್ತೀನಿ” ಎಂದವರೇ ಆ ಹಿರಿಯರು ಎದ್ದು ಮುಂದೆ ಹೆಜ್ಜೆ ಹಾಕಿದರು. ಅವರಿಬ್ಬರೂ ಹಿಂಬಾಲಿಸಿದರು. ಊರಿನ ಹಲವಾರು ಮನೆಗಳನ್ನು ದಾಟಿ ದೊಡ್ಡದೊಂದು ಮನೆಯ ಮುಂದೆ ಬಂದು ನಿಂತು!,.

” ಅದೇ ಅವ್ರ ಮನೆ” ಎಂದರು.

” ಥ್ಯಾಂಕ್ಸ್ ಸರ್” ಎಂದವರೇ ಮನೆಯ ಮುಂದೆ ಹೋಗಿ ಬಾಗಿಲ ಬಳಿ ನಿಂತು ಹರೀಶ ಒಳ ನೋಡುತ್ತ ಕರೆದನು.

” ಪ್ರದೀಪ್,ಪ್ರದೀಪ್” ಇವರ ಸ್ವರ ಕೇಳಿ ಒಳಗಿನಿಂದ ಬಂದ ವ್ಯಕ್ತಿಯನ್ನು

” ಸರ್,ಪ್ರದೀಪ ಇಲ್ವಾ?”

” ನೀವ್ಯಾರು?”

“ನಾವು ಅವನ ಫ್ರೆಂಡ್ಸ್. ಕಾಲೇಜಲ್ಲಿ ಒಟ್ಟಿಗೆ ಓದುತ್ತಿದ್ದೆವು, ತುಂಬಾ ತಿಂಗಳಿಂದ ಅವನಿಂದ ಯಾವುದೇ ಸಂಪರ್ಕ ಸಿಗುತ್ತಿಲ್ಲ.ಹಾಗಾಗಿ ನಾವೇ ಬಂದ್ವಿ”.

” ಹೋ, ಹೌದಾ!!,. ಬನ್ನಿ ಒಳಗ, ಪ್ರದೀಪನು ನನ್ನ ಮಗನೇ.ನನ್ನ ಹೆಸರು ಶಿವಪ್ಪ ಅಂತ”

” ನಮಸ್ತೆ ಸರ್,ನಾನು ಹರೀಶ ಅಂತ,ಇವರು ರಾಧಿಕ.ನಾವು ಮೂವರು ಬೆಸ್ಟ್ ಫ್ರೆಂಡ್ಸ್”,

“ಹೌದ,ಬನ್ನಿ ಕೂತ್ಕಳ್ಳಿ,ಈಗ ಬಂದೆ” ಎಂದು ಒಳ ಹೋಗಿ ಕುಡಿಯಲು ನೀರು ತಂದರು.

ದೂರದಿಂದ ಬಂದವರಿಗೆ ಊಟೋಪಚಾರದ ವ್ಯವಸ್ಥೆಯು ಆದ ನಂತರ ನಿಧಾನವಾಗಿ ಮಾತಿಗೆ ಇಳಿದರು.

“ಸರ್, ಈಗ ಅವನೆಲ್ಲಿದ್ದಾನೆ?”.

” ಪ್ರದೀಪ,!? ಈಗ ಎಲ್ಲಿದ್ದಾನೆ ಅಂತ ಹೇಳದು,ನಮಗಾ

ಗೊತ್ತಿದ್ದರ ಮನೆಯಲ್ಲಿಯೆ ಇರ್ತಿದ್ದ.ಆದ್ರ ದೇವರು ನಮಗಾ ಅನ್ಯಾಯ ಮಾಡ್ದ” ಎಂದು ನಿಟ್ಟುಸಿರು ಬಿಟ್ಟರು.ಕಣ್ಣಿನಿಂದ ನೀರು ಹೊರ ಬಂದಿತ್ತು .ಇಬ್ಬರಿಗೂ ಗಾಬರಿ .ಅವನಿಗೆ ಏನಾಗಿರ ಬಹುದು?. ಒಳಗಿನಿಂದ ಅಳುವ ಶಬ್ದ ಕೇಳಿ ಬಂತು.

” ಸರ್, ದಯವಿಟ್ಟು ಹೇಳಿ ,ಪ್ರದೀಪನಿಗೆ ಏನಾಯ್ತು?,ಈಗ ಎಲ್ಲಿದ್ದಾನೆ?.” ಕಣ್ಣು ಒರೆಸಿಕೊಂಡು ಹೇಳಲು ಶುರು ಮಾಡಿದರು.

” ಅವನಿಗೆ ಹುಚ್ಚು ಹಿಡಿತಪ್ಪಾ,ಈಗ ಎಲ್ಲಿದ್ದಾನಂತ ಗೊತ್ತಿಲ್ಲ.ಯಾರಾದರು ಅವನನ್ನ ನೋಡಿದೊರು ಬಂದು

ಹೇಳ್ತಾರ! ನಾವು ಹೋಗೋದ್ರೊಳಗ ಅವ ಅಲ್ಲಿರಲ್ಲ.ಇದೇ ಆಗದೇಪ್ಪ ಆರು ತಿಂಗಳಿಂದ”, ಬಿಕ್ಕಿದರು. ಹರೀಶ್ ಕುಳಿತಲ್ಲಿಂದ ಎದ್ದು ಬಂದು ಅವರ ಕೈ ಹಿಡಿದು ಸಮಾಧಾನ ಮಾಡುತ್ತ ಕೇಳಿದ.

” ಇದೆಲ್ಲ ಹೇಗಾಯ್ತು ಸರ್”,

” ಪಿರುತಿ ಮಾಡಿದ್ದನಪ್ಪ..ಆ ಮಗ ಸತ್ತು ಹೋದ್ಲು,ಅದರ ನೋವು ತಡಿಲಾರ್ದೆ ಇವ ಹುಚ್ಚ ಆದ.ಸ್ವಲ್ಪ ದಿನ ತಡಿದಿದ್ರೆ ಇಬ್ಬರ ಮದುವೆ ನಾವೇ ಮಾಡೋರು.ಆದ್ರ

ದೇವ್ರಿಗ ನಮ್ಮ ಮೇಲ ಕರುಣೆ ಇಲ್ಲ ನೋಡಿ.ಇದ್ದ ಒಬ್ಬ ಮಗನ್ನ ಹೀಗಾ ಮಾಡ್ಬಿಟ್ಟ”, ಮತ್ತೆ ಅಳಲು ಶುರು

ಮಾಡಿದ್ರು.ರಾಧಿಕಳ ಕಣ್ಣಲ್ಲಿ ಆಗಲೆ ನೀರು ಇಳಿಯುತಿತ್ತು.ಮನೆಯ ಒಳಗಿನ ಅಳು ಸ್ವಲ್ಪ ಕಡಿಮೆ ಆಗಿತ್ತು.ಶಿವಪ್ಪನವರ ದುಃಖ ನೋಡಲಾಗದೆ ಹರೀಶ್

ನಿಧಾನವಾಗಿ ಎದ್ದು ಹೊರ ಬಂದ.ರಾಧಿಕ ಕೂಡ ಅವನ ಹಿಂದೆಯೆ ಬಂದಳು. ಏನೋ ಯೋಚಿಸಿದವರಂತೆ ಮತ್ತೆ

ಒಳಗಡೆ ಬಂದವರು ಕುರ್ಚಿಯಲ್ಲಿ ಕುಳಿತರು.

” ಸರ್ ನಮಗೆ ಪ್ರದೀಪನ ಪೂರ್ಣ ಮಾಹಿತಿ

ಬೇಕು.ಕಾಲೇಜು ಬಿಟ್ಟು ಬಂದಲ್ಲಿಂದ ಇಲ್ಲಿ ಏನಾಯಿತು ಅಂತ ತಿಳಿಸಲು ಆಗತ್ತ.ನಮಗೆ ನಮ್ಮ ಮೆಚ್ಚಿನ ಗೆಳೆಯನ ಜೀವನ ಹೀಗೆ ಆಗಿದ್ದು ನಂಬಲು

ಆಗುತ್ತಿಲ್ಲ.ದಯವಿಟ್ಟು ವಿವರವಾಗಿ ತಿಳಿಸಿ ಸರ್”,

ಅವರಿಬ್ಬರನ್ನು ಒಮ್ಮೆ ನೋಡಿದರು.’ಪ್ರದೀಪನ ವಯಸ್ಸಿನವರೆ’ ಅನ್ನಿಸಿತು.ಹರೀಶನನ್ನು ನೋಡಿ ಮಗನ ನೆನಪಾಗಿ ಕಣ್ತುಂಬಿ ಬಂದವು. ನಡೆದ ಕಥೆ ಹೇಳಲು ಶುರು ಮಾಡಿದರು.

“ನಂಗಾ ಇಬ್ರು ಮಕ್ಳು.ಮಗಳ ಮದ್ವಿ ಆಗದೆ. ಇವ ಓದು ಮುಗ್ಸಿ ಊರಿಗೆ ಬಂದ.ನಾವು ಅವ್ನ ಕೆಲ್ಸದ ವಿಷಯ ಏನೂ ಹೇಳಿಲ್ಲ.ಮನೇಲಿ ಮೂರು ತಲೆಮಾರಿಗೂ ಕೂತು ಉಣ್ಣೊಷ್ಟು ಇರುವಾಗ ಅವ ಕೆಲಸಕ್ಕೆ ಹೋಗೂ ಅಗತ್ಯ ನಂಗಿರ್ಲಿಲ್ಲ”, ಮಾತು ನಿಲ್ಲಿಸಿ ಒಳಗೆ ನೋಡಿದರು. ಹೆಂಡತಿಗೆ ತನ್ನ ಮಾತು ಕೇಳಿದರೆ?.

” ನಿಮ್ಗೆ ದಣಿವಿಲ್ಲಾಂದ್ರಾ ತೋಟಕ್ ಹೋಗುಣಾ?”,

ಮೂವರು ಎದ್ದು ಹೊರ ಹೋಗುವಾಗ ಲಕ್ಷ್ಮಮ್ಮನವರು ಹೊರ ಬಂದರು.ಅವರಿಗೆ ತೋಟಕ್ಕೆ ಹೋಗಿ ಬರುತ್ತೆವೆಂದು ಹೇಳಿ ಹೊರಟರು.

***

ಊರ ಹೊರಗಿನ ಹೊಲದ ಮಧ್ಯದಲ್ಲಿ ಒಂದು ಪುಟ್ಟ ಮನೆ. ಸುತ್ತಲೂ ಹಚ್ಚ ಹಸಿರಾದ ಪೈರು.ಹೂ ಬಿಟ್ಟು

ಭತ್ತದ ತೆನೆ ಬಿಡುವ ಸಮಯ.ಗಾಳಿ ಬಂದರೆ ಪೈರಿನ ಪರಿಮಳ ಮೂಗಿಗೆ ತಾಗಲು, ‘ಅಹ್ಹಾ’,ಎಷ್ಟೊಂದು ಅಹ್ಲಾದಕರ.

ಗದ್ದೆ ಅಂಚಿನ ಮೇಲೆ ಮೆಲ್ಲನೆ ಹೆಜ್ಜೆ ಹಾಕುತ್ತ ನಡೆಯುತಿದ್ದಳು ಮಲ್ಲಿ.

“ಯಾರಲ್ಲಿ?”. ಕೂಗಿಗೆ ಹೆದರಿ ನಿಂತಳು.ತಿರುಗಿ

ನೋಡಿದರೆ ತನಗೆ ಸ್ವಲ್ಪ ದೂರದಲ್ಲಿಯೆ ಒಬ್ಬರು ದ್ವಿಚಕ್ರ ವಾಹನದಲ್ಲಿ ನಿಂತಿದ್ದರು. ಅವರನ್ನು ಎಂದೂ ನೋಡಿರಲಿಲ್ಲ .’ಯಾರಿರ ಬಹುದು?’ಎಂದು

ಕುತೂಹಲದಲ್ಲಿರುವಾಗಲೆ ಮತ್ತದೇ ದ್ವನಿ.

“ನಿನ್ನನ್ನೆ ಕೇಳಿದ್ದು, ಯಾರು ನೀನು?.ಎಲ್ಲಿಯೂ ನೋಡಿದ ನೆನಪಿಲ್ಲ.ಹೊಸ ಮುಖದ ಹಾಗೆ ಕಾಣುತ್ತಿಯ!?”

“ನಾನು ಮಲ್ಲಿ,ಸುಬ್ಬಣ್ಣನ ಮಗಳು”

“ಹೌದಾ!!?.ನಮ್ಮ ಸುಬ್ಬಣ್ಣನ ಮಗಳಾ?.ಇಷ್ಟು ದಿನ ಎಲ್ಲಿದ್ದೆ?.ಒಂದು ದಿನವು ಕಾಣಲಿಲ್ಲ!!?”

” ನಾನು ಸಿಟಿಯಲ್ಲಿನ ಚಿಕ್ಕಪ್ಪನ ಮನೆಯಲ್ಲಿದ್ದು ಕಲಿತಿದ್ದೆ”

“ಎಷ್ಟನೆ ಕ್ಲಾಸಿನವರೆಗೆ ಓದಿದ್ದಿಯಾ”

“ಹತ್ತು, ಪಾಸು”.

“ಮುಂದೆ!?”

ಅವರ ಮಾತನ್ನು ತಡೆಯುವಂತೆ

“ನೀವ್ಯಾರು!?”ಎಂದು ಕೇಳಿ ನಾಲಿಗೆ ಕಚ್ತಿಕೊಂಡಳು.

“ಹೋ, ನೋಡಿದ್ಯಾ ನಿನ್ನ ಬಗ್ಗೆ ಕೇಳುವ ಆತುರದಲ್ಲಿ

ನಾನು ಯಾರು? ಅಂತ ಹೇಳಲೆ ಇಲ್ಲ ಅಲ್ವಾ?.ನಾನು ಈ ಊರಿನ ಗೌಡರ ಮಗ ಪ್ರದೀಪ. ನಿನ್ನ ತಂದೆ ನಮ್ಮ ಮನೆಯಲ್ಲೆ ಕೆಲಸ ಮಾಡೋದು.ನಿನ್ನ ಹಾಗೆಯೆ

ಸಿಟಿಯಲ್ಲಿ ಓದುತಿದ್ದೆ.ಈಗ ಸಧ್ಯಕ್ಕೆ ಓದು ಮುಗಿಯಿತು.ಕೆಲಸಕ್ಕೆ ಪ್ರಯತ್ನ ನಡೆಸಬೇಕು.”

ಸಾಕ? ಎನ್ನುವಂತೆ ಅವಳ ಕಡೆ ನೋಡಿದನು.

ಒಂದೇ ಉಸಿರಲ್ಲಿ ಮಾತನಾಡಿ ಮುಗಿಸಿದ ಅವನನ್ನೇ ತದೇಕ ಚಿತ್ತದಿಂದ ನೋಡುತಿದ್ದಳು.ಅವನೂ ಸಹ ಮಾತು ನಿಲ್ಲಿಸಿ ಮಲ್ಲಿಯ ಕಡೆ ನೋಡಲು ಇಬ್ಬರ ಕಣ್ಣುಗಳ ಮಿಲನವಾಯಿತು.ಮಲ್ಲಿ ಅವನ ನೋಟಕ್ಕೆ ನಾಚಿ ತಲೆ ತಗ್ಗಿಸಿದಳು.ಪ್ರದೀಪ ಮಾತ್ರ ಮಲ್ಲಿಯ ಅಂದವನ್ನು ಸವಿಯುವದರಲ್ಲೆ ಮಗ್ನನಾದ.

ಹಾಲು ಕೆನ್ನೆಯ ದುಂಡನೆಯ ಮುಖದಲ್ಲಿ ಕಾಡಿಗೆಯ ಅಗತ್ಯವೇ ಇಲ್ಲದಂತೆ ಹೊಳೆಯುವ ಕಣ್ಗಳು..ನೀಳವಾಗಿ ಉದ್ದವಾದ ಕೂದಲನ್ನು ಎಣ್ಣೆ ಹಾಕಿ ಬಲವಂತವಾಗಿ

ಬಾಚಿದಂತೆ ಕಂಡರು, ಅವಳಿಗದು ಅಂದ ತಂದಿತ್ತು.ಬಲ ಕಿವಿಯ ಹತ್ತಿರ ಇಳಿ ಬಿದ್ದ ಗುಂಗುರು ಕೂದಲು. ಕಿವಿಯಲ್ಲಿ ಸಣ್ಣದೊಂದು ಓಲೆ. ಎರಡೂ ಕೈಯಲ್ಲಿ ನಾಲ್ಕೇ ನಾಲ್ಕು ಮಣ್ಣಿನ ಕೆಂಪು ಬಳೆಗಳು ಅವಳ ಬಿಳಿ ಕೈಗಳಿಗೆ ಮುದ್ದಾಗಿದ್ದವು. ಹೆಚ್ಚೇನು ಎತ್ತರವಿಲ್ಲದ ಅತಿ ದಪ್ಪವು ಅಲ್ಲದ ಅವಳು, ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡಬೇಕೆನ್ನಿಸುವ ಶರೀರ,ಅದರಲ್ಲೂ ಮೈಯನ್ನಪ್ಪಿದ ಲಂಗ ರವಿಕೆಯಲ್ಲಿನ ದೇಹದ ಸಿರಿ, ಪ್ರದೀಪನಿಗೆ ಸಿಟಿಯ ವೈಯ್ಯಾರಿಯರ ಮಧ್ಯೆ ಕೂಡ ಮಲ್ಲಿಯೇ ಅಂದವಾಗಿ ಕಂಡಿದ್ದಳು.

ಪ್ರದೀಪನ ಕಣ್ಣು ತನ್ನ ಮೇಲಿರುವುದು ಅರಿತ ಮಲ್ಲಿ, ಮೆಲ್ಲನೆ ನಾಚಿ ಜಿಂಕೆಯಂತೆ ಓಡುವ ಸನ್ನಾಹ ಪ್ರದೀಪನ ಅರಿವಿಗೆ ಬಂದದ್ದೆ ತಡ ಅವಳನ್ನು ತಡೆಯುತ್ತಾ

” ಏಯ್,ಇರು ಮಲ್ಲಿ.ಯಾಕೆ ಓಡ್ತಿದ್ದಿಯಾ?”.

“ಮನೆಯಲ್ಲಿ ಅಮ್ಮ ಕಾಯ್ತಾ ಇರ್ತಾಳೆ” ಎನ್ನುತ್ತ ಸರ ಸರನೆ ನಡೆದಳು.

” ಛೇ” ಎಂದು ಕೈ ಕೊಡವಿಕೊಂಡ.ಹೌದು, ಅವನಿಗೆ ಇದು ಸ್ವಲ್ಪ ಅವಮಾನವೆನಿಸಿತು.ಸಿಟಿಯಲ್ಲಿನ ಕಾಲೇಜು ಹುಡುಗಿಯರು ಅವನ ಅಂದಕ್ಕೆ

ಮರುಳಾಗಿ ಅವನ ಜೊತೆ ಸ್ನೇಹಕ್ಕೆ ಹಾತೊರೆದು ಮಾತನಾಡಲು ಹಿಂದೆ ಬೀಳುತಿದ್ದರು.ಆದರೆ ಹಳ್ಳಿಯಲ್ಲಿರುವ ಮಲ್ಲಿ ತನ್ನ ಅಂದವಿರಲಿ

ಮಾತನಾಡಲು ಸಹ ಇಷ್ಟವಿಲ್ಲದವಳಂತೆ ಮುಖ ಮಾಡಿ ಹೋಗಿದ್ದು ನೋಡಿ ಅವಮಾನವೆನಿಸಿತ್ತು.

ನಿಧಾನವಾಗಿ ತನ್ನ ವಾಹನವನ್ನು ಮನೆಯ ಕಡೆ ತಿರುಗಿಸಿದನು.

*

ಹೊರಗೆ ಹೋದ ಮಗ ಬೇಗ ಬಂದಿದ್ದು ನೋಡಿ ತಂದೆಗೆ ಕುತೂಹಲ.

” ಏನಪ್ಪ, ಯಾಕ?, ಬೇಗ ಬಂದಿಯಲ್ಲಾ?.ತೋಟ ನೋಡಿ ಬಂದಿಯೇನು?”

” ಇಲ್ಲ ಅಪ್ಪ. ಹೊಲದ ಕಡೆ ಹೋಗಿದ್ದೆ,ಆದರೆ ನಮ್ಮ ತೋಟದ ಕಡೆ ಹೋಗಲು ಆಗಿಲ್ಲ, ಒಂದು ಕೆಲಸ ನೆನಪಾಯಿತು.ಅದಕ್ಕೆ ಬಂದೆ”.

” ಹ್ಞು ಸರಿ,ಒಳ ಹೋಗಿ ಕುಡಿಯಕ್ಕ ಏನಾರ ಕುಡಿ ಹೋಗು.ಅವ್ವ ರಾಗಿ ಅಂಬಲಿ ಮಾಡಿದ್ರ ನನಗೂ ಕೊಡು ಅಂತ ಹೇಳ್ ಹೋಗು”.

” ಸರಿ ಅಪ್ಪ”. ಎನ್ನುತ್ತಲೆ ಒಳ ನಡೆದ ಮಗನನ್ನೆ ನೋಡುತಿದ್ದರು ಶಿವಪ್ಪ ಗೌಡರು.

ಶಿವಪ್ಪನವರು ಆ ಊರಿಗೆ ಹಿರಿಯ ಮತ್ತು ಶ್ರೀಮಂತರು.ಆದರೆ ಅವರಿಗೆ ಶ್ರೀಮಂತಿಕೆಯ ಅಹಂ

ಇರಲಿಲ್ಲ.ಊರಿನ ಜನರನ್ನು ಆಪ್ಯಾಯತೆಯಿಂದಲೇ ನೋಡುತಿದ್ದರು.ಹಾಗಾಗಿ ಊರಿನ ಜನರಿಗೂ ಶಿವಪ್ಪನವರು ಎಂದರೆ ಎಲ್ಲಿಲ್ಲದ ಗೌರವ

ಮಮತೆ.ಅವರಿಗೆ ಇಬ್ಬರು ಮಕ್ಕಳು,ಪದ್ಮ ಹಿರಿಯ ಮಗಳು ನಂತರ ಪ್ರದೀಪ.ಮಗಳನ್ನು ಪಕ್ಕದ ಊರಿನವರಿಗೆ ಮದುವೆ ಮಾಡಿ ಕೊಟ್ಟಿದ್ದರು.ಮಗಳು

ಸುಖವಾಗಿರಲು ತಮಗಿದ್ದ ಜಮೀನಲ್ಲಿ ಸ್ವಲ್ಪ ಮಗಳ ಹೆಸರಿಗೆ ಬರೆದು ಕೊಟ್ಟಿದ್ದರು.ಇನ್ನು ಉಳಿದ ಹತ್ತು ಎಕರೆ

ತೆಂಗಿನ ತೋಟ.ಅದರ ಮಧ್ಯದಲ್ಲಿಯೆ ಮಾವು, ಮೂಸಂಬೆ, ದಾಳಿಂಬೆಯಂತಹ ಹಣ್ಣಿನ ಗಿಡಗಳನ್ನೂ ಬೆಳೆಸಿದ್ದರು.ಶಿವನಪ್ಪನವರ ಪತ್ನಿ ಲಕ್ಷ್ಮಮ್ಮ, ಲಕ್ಷ್ಮಿಯ

ಹಾಗೆಯೆ ನೋಡಲು ಲಕ್ಷಣವಾಗಿದ್ದರು.ಯಾವಾಗಲು ನಗು ಮುಖದಲ್ಲೆ ಇರುವ ಅವರು ಊರಿನ ಜನರಿಗೆ ಒಡತಿಯೆಂತಲೇ ಹೆಸರಾಗಿದ್ದರು.

ಮಗ ಒಳಗೆ ಬಂದಿದ್ದು ನೋಡಿದ ಲಕ್ಷ್ಮಮ್ಮ ಅವನಿಗಾಗಿ ಹಸುವಿನ ಹಾಲನ್ನು ಉದ್ದವಾದ ಲೋಟದಲ್ಲಿ ಬಗ್ಗಿಸಿ ಕೊಡಲು ಮುಂದಾದರು.ಅದಕ್ಕವನು

” ಅಮ್ಮ,ಈಗ ಬೇಡಮ್ಮ.ಊಟವಾದ ಮೇಲೆ ಕುಡಿತೀನಿ. ಈ ರೀತಿ ನೀನು ದಿನಾ ಹಸುವಿನ ಹಾಲು ಕುಡಿಸಿ ಮೈ

ಬಂದರೆ ಮತ್ತೆ ಕೆಲಸ ಮಾಡಲು ಆಗಲ್ಲ ನೋಡು ” ಎಂದ.

ಆ ಅಮ್ಮನಿಗೆ ಮಗನ ಕರೆಯಲ್ಲೆ ಒಂದು ಆನಂದ.ಓದಿದ ಹುಡುಗರು ಮಮ್ಮಿ ಡ್ಯಾಡಿ ಎನ್ನುವಾಗ ಪ್ರದೀಪ ಅಮ್ಮ

ಎಂದು ಬಾಯ್ತುಂಬಾ ಕರೆದರೆ ಯಾವ ತಾಯಿಗೆ ಖುಷಿ ಆಗಲ್ಲ?.ಅಲ್ಲದೆ ಹಳ್ಳಿಯ ಭಾಷೆಯ ಅವ್ವಾ ಎನ್ನೊದು ಮಾತ್ರ ಮರೆತಿದ್ದ ಅಷ್ಟೇ.

” ಏನಾಗಲ್ಲ, ತಗಳಪ್ಪ.ಇಲ್ಲಿ ಇರುವಾಕ ಕುಡಿತಿಯ.ಕೆಲಸ ಅಂತ ಹೋಕರೆ ಅಲ್ಲಿ ಹಸು ಹಾಲು ಇರಲ್ಲ.ಕುಡಿ ಅಂತ ಕೊಡಾಕ ನಾ ಬರಲ್ಲ.”

” ಅದಕ್ಕೆ ಅಮ್ಮ ಇದೇ ಊರಲ್ಲಿ ಏನಾದರು ಕೆಲಸ ಮಾಡ್ಕಂಡು ಇಲ್ಲೆ ನಿಮ್ಮೊಡನೆ ಇರೋಣ ಅಂತ ಯೋಚಿಸ್ತಿದಿನಿ”.ಮಗನ ಮಾತಿಗೆ ಬೆರಗಾಗಿ ನೋಡಿದರು.

ಮೊದಲೆಲ್ಲ ರಜೆಯಲ್ಲಿ ಊರಿಗೆ ಬಂದರೆ ವಾಪಸ್ಸು ಹೋಗುವ ದಿನ ಲೆಕ್ಕ ಹಾಕುತಿದ್ದ ಮಗನ ವರ್ತನೆ ಈಗ ಬದಲಾಗಿದ್ದು ಖುಷಿ ತಂದರೂ ಸಹ ಯಾವ ಕೆಲಸ

ಮಾಡಲು ಸಾಧ್ಯ ಅನ್ನೋದು ಯೋಚನೆ ಮಾಡುತಿದ್ದರು.

” ಅಮ್ಮ.,ಅಪ್ಪನಿಗೆ ಅಂಬಲಿ ಅಂತೆ ಮಾಡಿದ್ಯ?”.

” ಹ್ಞೂ ಕಣಪ್ಪ, ಕೊಡ್ತೀನಿ ಇರು.ಬಿಸಿಲಲ್ಲಿ ತಿರುಗಿ ಬರ್ತಾರೆ ರಾಗಿ ಅಂಬಲಿ ಕುಡಿದೆ ಊಟ ಮಾಡಲ್ಲ ನೋಡ್ ನಿಮ್ಮಪ್ಪ”,ಎನ್ನುತ್ತ ಉದ್ದ ಲೋಟದಲ್ಲಿ ರಾಗಿ

ಅಂಬಲಿ ಹಾಕಿ ಶಿವಪ್ಪನವರಿಗೆ ಕೊಡಲು ಹೊರಟರು ಲಕ್ಷ್ಮಮ್ಮ. ಪ್ರದೀಪ ಅಮ್ಮ ಕೊಟ್ಟ ಹಾಲು ಕುಡಿದು ತನ್ನ ಕೋಣೆಯ ದಾರಿ ಹಿಡಿದ.

*

ಸಂಜೆಯ ಸಮಯ. ಕೆಂಪೇರಿದ ಬಾನು ರಂಗೇರಿ ರಾಗರತಿಗೆ ನಂಜು ಏರುವ ಹೊತ್ತು.ರವಿಯು ಹೊಲದ ಅಂಚಿನಿಂದ ಕಾಡು ಬೆಟ್ಟಗಳನ್ನು ದಾಟಿ ತನ್ನ ವಾಸ ಸ್ಥಳಕ್ಕೆ ಹೋಗುವವನಿದ್ದ. ಅಲ್ಲಲ್ಲಿ ಮೋಡದ ಮರೆಯಿಂದ ಬೀಳುವ ಕಿರಣಕ್ಕೆ ಹೊಲವು ರಂಗೇರಿ ನವವಧುವಿನಂತೆ ಕಾಣುತಿತ್ತು.ದೂರದಲ್ಲಿ ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತ ಗೂಡಿನಲ್ಲಿ ಕಲರವ ಹುಟ್ಟಿಸಿದ್ದವು. ಸಂಜೆಯ ತಂಪು ಹಾಯೆನಿಸಿದರು ಪ್ರದೀಪನಿಗೆ ಏನೋ ತೀರದ ಬಯಕೆ. ತನ್ನ ವಾಹನವೇರಿ ಹೊಲದ ಕಡೆ ಬಂದಾಗಿದೆ.ಆದರೆ ಕಣ್ಣು ಬಯಸುವ ಅಂದ ಅಲ್ಲಿಲ್ಲ.ಮುಂದಿರುವ ಅಂದ-ಚಂದ ಅವನ ಮನಸ್ಸಿಗೆ ರುಚಿಸಲಿಲ್ಲ.ಬಹಳ ಹೊತ್ತು ಕಾದರು ದೂರದ

ಪುಟ್ಟ ಮನೆಯಲ್ಲಿ ಅವಳ ಬರುವಿಕೆ ಕಾಣದೆ ನಿರಾಸೆಯಿಂದ ಮನೆಯ ಕಡೆ ಹೊರಡಲು ಸಿದ್ದನಾದವನ ಕಣ್ಣು ಯಾಕೊ ಇನ್ನೊಂದು ದಿಕ್ಕಿಗೆ ಮರಳಿತ್ತು.

‘ ಹೌದು ತಾನು ಅರಸಿದ ಸೌಂದರ್ಯ ಅದೇ’ಎನ್ನುವಂತೆ ಅವನ ಮುಖ ಅರಳಿತು.ದೂರದ ಹೊಲದಿಂದ ಮಲ್ಲಿ ತನ್ನ ತಾಯಿಯ ಜೊತೆ ಮಾತನಾಡುತ್ತ ಬರುತಿದ್ದಳು.

ಇನ್ನೇನು ಹತ್ತಿರ ಬರುತ್ತಾರೆ ಎನ್ನುವಾಗ ನಿಧಾನವಾಗಿ ಅವರ ಮುಂದೆ ನಡೆದು ಹೊರಟ.ತನ್ನ ಮುಂದೆ ಬಂದವನನ್ನು ನೋಡಿ ಬೆರಗಾದಳು ಮಲ್ಲಿ. ಅವಳ ಹಿಂದೆಯೇ ಅವಳ ತಾಯಿ, ಮಗಳು ನಿಂತಿದ್ದು ನೋಡಿ ಗದರಿಸಿದಳು.ಮುಂದೆ ಹೋಗಲು ದಾರಿಯಿಲ್ಲದೆ ಗದ್ದೆಗೆ ಇಳಿದಳು ಮಲ್ಲಿ.ಮಗಳ ವರ್ತನೆ ಅರಿಯದೆ ಮುಂದೆ ಹೋಗಲು ಹೋದ ಗಂಗಿ ಕೂಡ ಪ್ರದೀಪನನ್ನು ನೋಡಿ ಬೆರಗಾಗಿ ನಿಂತಳು. ಅವಳಿಗೆ ಅವನನ್ನು ನೋಡಿದ್ದು ನೆನಪಿತ್ತು.ಆಗಾಗ ಗೌಡರ ಮನೆಯ ಕೆಲಸಕ್ಕೆ ಹೋದಾಗ ರಜೆಗೆಂದು ಬಂದಾಗ ನೋಡಿದ್ದಳು.

” ಹೋ ಅಯ್ಯಾರ, ಏನ್ ಬಂದ್ರಿ ಅಯ್ಯಾ”

” ಸುಮನ್ನೆ ಬಂದೆ. ಹೇಗಿದ್ದಿ ಗಂಗಮ್ಮ”

“ಚೆಂದಾಕಿದ್ದಿನಿ ಅಯ್ಯಾ, ಇದು ನನ್ನ ಮಗ್ಳು ಮಲ್ಲಿ”.

” ಹೋ ಹೌದಾ,” ಎಂದೂ ನೋಡದ ಹಾಗೆ ಕೇಳಿದ.

” ಹ್ಞು ಅಯ್ಯಾ, ಓದಕ್ಕೆ ಅಂತ ಪಟ್ಣದಲ್ಲಿತ್ತು.ಹತ್ತು ಪಾಸಾತು.ಇನ್ನು ಓದದು ಬ್ಯಾಡ ಮನೆಗೆಲ್ಸ ಕಲಿಲಿ ಅಂತ ಅವರಪ್ಪ ಹೇಳ್ಬುಟ್ರು.ಹಾಗೆ ಮನೆಲದೆ ಅಯ್ಯಾ,”

” ಓದಲೇ ಬೇಕು ಅಂತ ಇದ್ರೆ ಓದ್ಲಿ ಬಿಡಿ. ಏನಾಗತ್ತೆ?. ಯಾಕೆ? ಓದ್ಸೋದು ಕಷ್ಟನಾ?.ಅಪ್ಪಂಗೆ ಹೇಳಿ ಏನಾರ ಸಹಾಯ ಮಾಡಣ ತಡಿರಿ”

” ಇಲ್ಲ ಅಯ್ಯಾ, ಓದು ಹೆಚ್ಚಾದ್ರೆ ಹುಡ್ಗ ಸಿಗೋದು ಕಷ್ಟ ಆತದೆ.ಕಮ್ಮಿ ಓದಿದ್ರೆ ಹೊಲ ಗದ್ದೆ ಕೆಲಸ ಮಾಡೋರು ಸಿಗ್ತಾರೆ ಮದ್ವಿಗೆ”. ಗಂಗಿ ಮಾತು ಕೇಳಿ ಮಲ್ಲಿಯ ಮುಖ ನೋಡಿದ.

” ಯಾಕೆ ಮಲ್ಲಿ.ಮುಂದೆ ಓದೋ ಆಸೆ ಇಲ್ವಾ ಹೆಂಗೆ”

ಏನೂ ಹೇಳದೆ ಅಮ್ಮನ ಮುಖ ನೋಡಿದಳು.

ಪ್ರದೀಪ ಮಾತ್ರ ಮಲ್ಲಿಯ ಸೌಂದರ್ಯ ಸವಿಯುತಿದ್ದ. ಗಂಗಿ ತನ್ನ ಮಗಳ ಮುಖ ನೋಡಿದಳು.

” ಅವ್ಳಿಗಿ ಐತ್ರಿ.ಆದ್ರ ಅವರಪ್ಪ ಬ್ಯಾಡಾಂತರ ಅಯ್ಯಾ”.

” ಸುಬ್ಬಣ್ಣನ ಹತ್ರ ನಾ ಮಾತಾಡ್ತೀನಿ ಇರಿ. ಗಂಗಮ್ಮ. ಈಗಿನ ಕಾಲದಲ್ಲ ಹೆಣ್ಮಕ್ಳು ಬಾಳ ಓದಬೇಕು ಗೊತ್ತಾ? ನಿಮಗ್”

” ಸರೆ ಅಯ್ಯಾ.ನೀವು ಹೇಳಿದ್ರ ಏನಾರ ಕೇಳ್ಬೋದೇನೊ

ಮತ್ತ.ನೀವು ಎಲ್ಲಿಗೊ ಹೊಂಟಗಿದೆ ?”. ಮಾತು ನಿಲ್ಲಿಸಿದ್ಲು ಗಂಗಿ.

” ಇಲ್ಲೆ ಒಂದ್ ಸರಿ ಹೊಲ ನೋಡೋಣ ಅಂತ ಬಂದಿದ್ದೆ ಅಷ್ಟೇ”.

” ಸರೆ ಅಯ್ಯಾ, ನಾವಿನ್ನು ಬತ್ತಿವ್ರಿ ಮತ್ತ” ಎನ್ನುತ್ತ ಹೊರಟ ಗಂಗಿಯನ್ನು ಹಿಂಬಾಲಿಸಿದಳು ಮಲ್ಲಿ.

ಇಬ್ಬರು ಹೋದ ದಿಕ್ಕನ್ನೆ ನೋಡುತ್ತ ನಿಂತವನು

‘ಒಮ್ಮೆ ತಿರುಗಿ ನೋಡು ಮಲ್ಲಿ’ಎಂದು ಕಾಯುತ್ತಾ ನಿಂತ ಅವನ ಮನದಾಸೆ ತಿಳಿದಂತೆ ಮಲ್ಲಿ ಸ್ವಲ್ಪ ದೂರ ಹೋದ ಮೇಲೆ ಮೆಲ್ಲನೆ ತಿರುಗಿ ನೋಡಿದಳು.

ಪ್ರದೀಪ ಕದಲದೆ ನಿಂತು ತನ್ನನ್ನೇ ನೋಡುತಿದ್ದಾನೆ ಎಂದರಿವಾದ ತಕ್ಷಣ ಮತ್ತೆ ಮುಂದೆ ನೋಡುತ್ತ ಹೊರಟಳು..ಪ್ರದೀಪನ ಮನ ಮಲ್ಲಿಯ ಇರುವನ್ನು

ನೆನೆಯುತಿತ್ತು.ಹೇಗಾದರೂ ಮಾಡಿ ಮಾತನಾಡಿಸಬೇಕು. ಅವಳೊಡನೆ ಕಾಲ ಕಳೆಯಬೇಕು ಎನ್ನುವ ಆಸೆ ಹೊತ್ತು ಅಲ್ಲೆ ನಿಂತಿದ್ದ.ಮನೆ ಹತ್ತಿರ ಬಂದ ಕೂಡಲೆ ಮತ್ತೊಮ್ಮೆ

ತಿರುಗಿ ನೋಡಿದಳು ಮಲ್ಲಿ.ಅವಳ ನೋಟಕ್ಕೆ ಕಾದಿರುವ ಪ್ರದೀಪ ಅವಳು ತಿರುಗಿದೊಡನೆ ಕೈ ಬೀಸಿ ಟಾಟಾ

ಮಾಡಿದ.ಅನಿರೀಕ್ಷಿತ ಘಟನೆಗೆ ಮಲ್ಲಿಯ ಮುಖ ಕೆಂಪೇರಿದ್ದು ಪ್ರದೀಪನಿಗೆ ಕಾಣಿಸದಿದ್ದರು ಊಹಿಸಬಲ್ಲವನಾಗಿದ್ದ.

*

ಮಗನ ಕೆಲಸದ ಬಗ್ಗೆ ಲಕ್ಷ್ಮಮ್ಮ ಶಿವಪ್ಪ ಗೌಡರ ಹತ್ತಿರ ಅವನ ಆಸೆ ತಿಳಿಸಿದಳು.ಅವನ ಓದಿಗೆ ಇಲ್ಯಾವ ಕೆಲಸ

ಸಿಗುತ್ತೆಂದು ಸಿಡುಕಿದರೂ ಸಹ ಇರುವ ಒಬ್ಬ ಮಗ ತಮ್ಮ ಹತ್ತಿರ ಇರಲು ಇಚ್ಛೆ ಪಟ್ಟಿದ್ದೇ ಅವರಿಗೆ ಖುಷಿಯ ಸಂಗತಿ ಆಗಿತ್ತು.ಕೆಲಸ ಮಾಡಿ ದುಡಿದು ಬದುಕ

ಬೇಕೆಂದೇನು ಇರಲಿಲ್ಲ.ಕೂತು ತಿಂದರು ಮೂರು ತಲೆ ಮಾರಿಗಾಗುವಷ್ಟು ಹಣ ಆಸ್ತಿ ಇದ್ದವರು. ಮಗ ವಿದ್ಯಾವಂತನಾಗಿರಲಿ ಅಂತ ಓದಿಸಿದ್ದರು ಅಷ್ಟೇ.ಅವನು

ಸಹ ತಮಗಿರುವ ಹಣ ಆಸ್ತಿಯ ಅಹಂ ತೋರಿಸದೆ ಎಲ್ಲರೊಡನೆ ಬೆರೆತು ಓದಿನಲ್ಲು ಮುಂದಿದ್ದು ಇಂಜಿನಿಯರ್ ಆಗಿದ್ದ.ಛಾನ್ಸ್ ಬಂದರೆ ಹೊರ ದೇಶ

ಹೋಗಬೇಕೆಂಬ ಆಸೆ ಇತ್ತು.ಆದರೆ…..ಅದು ಕೇವಲ ಮಲ್ಲಿ ಕಾಣದಿದ್ದಾಗಿನ ಮಾತು.ಈಗ ತಮ್ಮ ಊರಲ್ಲೆ ಇದ್ದು ಕೆಲಸ ಮಾಡಿದರಾಯಿತು ಎನ್ನುವ ನಿರ್ಧಾರಕ್ಕೆ

ಬಂದಿದ್ದ.ಅದು ಕೂಡ ಒಂದೇ ದಿನದಲ್ಲಿ.

ಮನೆಗೆ ಬಂದ ಮಲ್ಲಿಗೆ ಕೈ ಬೀಸಿ ಟಾಟಾ ಮಾಡಿದ ಪ್ರದೀಪನ ನೆನಪು ಕಾಡುತಿತ್ತು.’ಯಾಕೆ ನನಗೆ ಟಾಟಾ

ಮಾಡಿದ್ದು.ನಾನು ಸಹ ಹಿಂತಿರುಗಿ ನೋಡಬಾರದಿತ್ತು. ಸುಮ್ಮನೆ ಬರದೆ ಎಲ್ಲಿಗೆ ಹೋದ್ರು ಅಂತ ನೋಡಬೇಕಿತ್ತಾ’?. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ದೂರದ ಹೊಲ ನೋಡುತ್ತ ಕುಳಿತಳು ಮಲ್ಲಿ.

*

ಮುಂಜಾನೆಯ ಸೂರ್ಯೋದಯದ ವೇಳೆ ಹೊಲದಲ್ಲಿ ಇಬ್ಬನಿಯ ಸೋನೆ ಸುರಿದು ಸುತ್ತಲೂ ಮಬ್ಬಾಗಿದ್ದು

ಪೈರಿನ ಮೇಲೆ ಮುತ್ತಿನ ಹನಿಗಳ ಹಾರ ಕಟ್ಟಿತ್ತು.ಮರದ ಎಲೆಗಳಿಂದ ಜಾರುವ ಹನಿಯು ಪಟ ಪಟ ಸದ್ದು ಮಾಡುತ್ತ ತರಗೆಲೆಯ ಮೇಲೆ ಬೀಳುತಿತ್ತು.ಸೂರ್ಯನ

ಕಿರಣಗಳ ಸ್ಪರ್ಶಕ್ಕೆ ಕಾದ ಕಮಲ, ಹೂವಾಗಲು ಮೊಗ್ಗಿನ ಕಾತುರ,ಅಹಾರ ಹುಡುಕಲು ಹೊರಟ ಹಕ್ಕಿಗಳ ಕಲರವ, ಹೊಲದ ಅಂಚಿಂದ ಹರಿಯುವ ನೀರಿನ ಜುಳು ಜುಳು

ಸದ್ದು ಮೈ ಮರೆಸುವಂತಿತ್ತು.ಹಸಿರುಟ್ಟ ಭೂ ತಾಯಿ ಸೀಮಂತದ ಸಂಭ್ರಮದಲಿ ಮಿಂದು ಫಸಲು ಹೊತ್ತು ನಿಂತಿದ್ದಳು.ಕೋಡಿಯುದ್ದಕ್ಕು ಕಣ್ಣು ಹಾಯಿಸಿದರೆ

ಹಸಿರೇ ಹಸಿರು ಹೊಲ ಗದ್ದೆಗಳು.ಅಲ್ಲಲ್ಲಿ ಒಂದೊಂದು ಸಣ್ಣ ಬೇಲಿಗಳು ಅವರವರ ಹೊಲಕ್ಕೆ ಕಾವಲು.

*

ದೂರದಲ್ಲೆಲ್ಲೋ ವಾಹನದ ಶಬ್ದ. ಇತ್ತ ಮಲ್ಲಿಯ ಎದೆಯ ಬಡಿತವು ಹೆಚ್ಚಾಯಿತು.ಹಿಂದಿನ ದಿನದ ಅವನ ಟಾಟಾ ಇನ್ನು ಕಣ್ಣಲ್ಲಿಯೆ ಇತ್ತು. ಮನಸ್ಸು ಹೋಗ ಬೇಡವೆಂದರು ಕಾಲುಗಳು ಮನೆಯ ಹೊರಗೆ ನಡೆದಿದ್ದವು.ಹೊಲದ ಉದ್ದಂಚಿನವರೆಗೂ ಕಣ್ಣು

ಹಾಯಿಸಿದಳು.ಎಲ್ಲಿಯು ಅವನ ಸುಳಿವಿಲ್ಲ.

ಇಬ್ಬನಿಯ ಮಬ್ಬಲ್ಲಿ ಯಾರು ಬಂದರು ಕಾಣದ ವಾತಾವರಣ.ಆದರು ಮನಸ್ಸು ಮಾತ್ರ ಹಾತೊರೆಯುತಿತ್ತು. ನಿರಾಸೆಯ ಸೋಲನ್ನು ಒಪ್ಪಿಕೊಳ್ಳದ ಮನ ಮತ್ತೆ ಮತ್ತೆ ಶಬ್ದದ ಕಡೆ ಗಮನವಿಟ್ಟಿತು.ವಾಹನದ ಶಬ್ದವಂತು ಹೌದು.ಆದರೆ? ಅದು ಅವನದೇ ಅನ್ನೋದು ನಂಬಿಕೆ ಇಲ್ಲದೆ ಮನಸ್ಸಿಗೆ ತಳಮಳ ಶುರುವಾಯಿತು. ಒಳಮನಸ್ಸಿನ ಎಚ್ಚರ!? ‘ಅವನನ್ನೇಕೆ ನೆನಪಿಸಿ ಕೊಳ್ಳುವೇ?’.ಮಲ್ಲಿ ನಿಧಾನವಾಗಿ ಒಳಹೋಗಲು ತಿರುಗಿದಳು.ಮತ್ತೊಮ್ಮೆ ಶಬ್ದ ಹೆಚ್ಚಾಯಿತು.’ಹೌದು ಈಗ ಮಾತ್ರ ಅವರೇ ‘, ಎನ್ನುವ ದೃಡ ನಿರ್ಧಾರಕ್ಕೆ ಬಂದು ಮನೆಯಿಂದ ಗದ್ದೆಯ ಹಾದಿ ಹಿಡಿದಳು.ತಲೆಯಲ್ಲಿ ನೂರಾರು ಯೋಚನೆ.’ ನನಗೇನಾಗಿದೆ? ಯಾಕೆ ಹೀಗೆ ಅವರನ್ನು ನೆನೆಯುತ್ತಿದೆ ಮನಸ್ಸು? ಇದು ಪ್ರೇಮನಾ? ಅಥವಾ ನನ್ನ ಮನಸ್ಸಿನಲ್ಲಾದ ಆಸೆಯ?’

ಆದರೆ ಬಿರಿದ ಹೂವು ದುಂಬಿಯ ಆಕರ್ಷಣೆಗೆ

ಒಲಿದಂತೆ ಮಲ್ಲಿಯ ಮನ ಪ್ರದೀಪನ ಕಣ್ಣೋಟಕ್ಕೆ ಮರುಳಾಗಿದ್ದಂತು ಹೌದು.

“ಮಲ್ಲಿ”

ಆ ಕರೆ ಚಿರಪರಿಚಿತ.ಹೌದು ಅವಳ ಮನ ಇಷ್ಟು ಹೊತ್ತು ಅದೇ ಕರೆಗೆ ಪರಿತಪಿಸಿದ್ದು. ಅವಳ ಎಣಿಕೆ ತಪ್ಪಾಗಲಿಲ್ಲ.

ಪ್ರದೀಪನ ವಾಹನದ ಶಬ್ದವೇ ಅದಾಗಿತ್ತು.ಅವಳ ಕಾಲುಗಳು ಕದಲಲಿಲ್ಲ.ಕರೆ ಬಂದ ಕಡೆ ತಿರುಗಿದಳು.ಬಲ ಬದಿಯ ಗದ್ದೆ ಅಂಚಿನಲ್ಲಿ ನಡೆದು ಬರುತಿದ್ದನವನು. ನೀಲಿ ಪ್ಯಾಂಟು,ಚಳಿಗೆ ಹಾಗಿದ ಕೋಟು ತಲೆಗೆ ಟೋಪಿ ಧರಿಸಿ ಕೈಗಳೆರಡನ್ನು ಕೋಟಿನ ಜೇಬಲ್ಲಿಟ್ಟುಕೊಂಡು ಬರುತಿದ್ದ ಅವನ ಬಾಯಿಂದ ಇಬ್ಬನಿಗೆ ಹೊಗೆ ಹೊರ ಬರುತಿತ್ತು. ಅವನನ್ನು ನೋಡಿ ನಕ್ಕಳು ಮಲ್ಲಿ.

” ಯಾಕೆ ನಗ್ತಿಯಾ ಮಲ್ಲಿ”ಮಲ್ಲಿ ಎನ್ನುವ ಹೆಸರು ಅವನ ಬಾಯಲ್ಲಿ ಕೇಳಿದರೆನೇ ಅವಳಿಗೇನೊ ರೋಮಾಂಚನ.

” ಏನಿಲ್ಲ”

” ಮತ್ತೆ, ನನ್ನ ನೋಡಿ ನಕ್ಕಿದ್ಯಾಕೆ?”.

” ನೀವು ಈ ಇಬ್ಬನಿಗೆ ಹೆದರಿ ಹಾಕಿಕೊಂಡ ಡ್ರೆಸ್ ನೋಡಿ ನಗು ಬಂತು”.

” ನಿನಗೆ ಚಳಿ ಇಲ್ವಾ?”

” ಇಲ್ಲ” ಎಂದರು ‘ ನಿಮ್ಮ ನೆನಪಲ್ಲಿ ಚಳಿ ಬಿಟ್ಟು ಹೋಯಿತು’ ಎನ್ನಬೇಕೆನಿಸಿತು ಮಲ್ಲೀಗೆ.

” ನನಗಂತು ತುಂಬಾ ಚಳಿ ಇದೆ, ಆದರೆ ಈ ಇಬ್ಬನಿಯ

ಬೆಳಗನ್ನು ನೋಡಲು ಬರಬೇಕು ಅನ್ನಿಸಿತು”. ಅವಳ ಕಡೆ ಓರೆ ನೋಟ ಬೀರಿದನು.

” ಹೋ ನಿಮಗಿದು ಹೊಸದು ಈ ಕಾಲದಲ್ಲಿ ಇಲ್ಲಿಗೆ ಬಂದಿಲ್ಲ ಅಲ್ವಾ”

” ಊರಿಗೆ ಬರ್ತಿದ್ದೆ.ಆದ್ರೆ ಈ ರೀತಿ ಹೊಲಕ್ಕೆ ಬಂದಿಲ್ಲ.ಇಲ್ಲಿ ಇಷ್ಟೊಂದು ಸೌಂದರ್ಯ ಇದೆ ಅಂತ ಗೊತ್ತಿರಲಿಲ್ಲ” ಮಲ್ಲಿಯ ಕೆನ್ನೆ ಕೆಂಪಾಯಿತು.ಅವನ ಮಾತು ಅರ್ಥವಾಗದಷ್ಟೇನು ಹೆಡ್ಡಿ ಅಲ್ಲ.ಅವಳು ಸಹ

ಹತ್ತು ಪಾಸಾಗಿ ಅಷ್ಟೊ ಇಷ್ಟೊ ಸಿನೆಮಾ ನೋಡಿದವಳು.

ಆಗಲೆ ಪ್ರೇಮ ಚಿಗುರೊಡೆಯುವ ವಯಸ್ಸು. ಅವನ ಪ್ರತಿ ಮಾತು ತನ್ನ ಬಗ್ಗೆಯೆ ಇರಬಹುದೇನ್ನುವ ಭಾವ ಅವಳಿಗೆ.

” ಎಲ್ಲಿಗೆ ಹೊರಟಿದ್ದು ಇಷ್ಟು ಬೆಳಿಗ್ಗೆ”

” ಸುಮ್ಮನೆ.ಗದ್ದೆ ಅಂಚಲ್ಲಿ ಇಬ್ಬನಿಯೊಡನೆ ಆಡೋದು ನಂಗೆ ಇಷ್ಟ “.ಎನ್ನುತ್ತ ಗಂಟಿನವರೆಗೂ ಒದ್ದೆಯಾದ ಲಂಗವನ್ನು ನೋಡುತ್ತ ಹೇಳಿದಳು.ಅಂದು ಮಲ್ಲಿ ಪ್ರದೀಪನಿಗೆ ಅಪ್ರತಿಮ ಸುಂದರಿಯಂತೆ ಕಂಡಳು.ಇಬ್ಬನಿಯ ಹನಿಗೆ ತೊಯ್ಯಿದು ರವಿ ಕಿರಣಕ್ಕೆ ಕಾದಿರುವ ಮೊಗ್ಗಿನಂತೆ ಕಂಡಳು.ಇಬ್ಬರಿಗೂ ಈ

ಲೋಕದ ಅರಿವೆಯೇ ಇಲ್ಲದಂತೆ ಅಲ್ಲಿಯೆ ನಿಂತು ಹರಟೆ ಹೊಡೆಯಲು ಶುರು ಮಾಡಿದರು.ಅವರವರ ಕಾಲೇಜು ಸ್ಕೂಲಿನ ಬಗ್ಗೆ, ಸ್ನೇಹಿತರು, ತಾವು ತಿರುಗಿದ ಸ್ಥಳಗಳು, ಕೊನೆಯಲ್ಲಿ ಸಿನೆಮಾದ ಬಗ್ಗೆಯು ಬಂದಾಯಿತು. ಒಂದೇ ದಿನದ ಪರಿಚಯ ಹಳೆಯ ಸ್ನೇಹಿತರಂತಾದರು ಅವರಿಬ್ಬರು.ಆದರೆ ಎಲ್ಲಿಯು ಅವರ ಬಾಯಲ್ಲಿ ಇಷ್ಟ ಎನ್ನುವ ಮಾತು ಬರಲಿಲ್ಲ.ಕಣ್ಣೋಟಗಳು ಬೆರೆತರು ಆಗಾಗ ಅವಳೇ ತಲೆ ತಗ್ಗಿಸುತಿದ್ದಳು.

” ಯಾಕೆ ಮಲ್ಲಿ.ಇಲ್ಲೆ ನಿಂತು ಉಪಚಾರ ಮಾಡ್ತಿಯಾ? ಮನೆಗೆ ಕರೆಯಲ್ವಾ?”

ಊಹಿಸಲಾಗದ ಪ್ರಶ್ನೆಗೆ ತಬ್ಬಿಬ್ಬಾದಳು.’ಇವರು ನಮ್ಮ ಮನೆಗಾ!!?.ಸಾವಾರಿಸಿ ಕೊಂಡವಳು.

” ಅಯ್ಯೋ, ಹಾಗೇನಿಲ್ಲ,ನೀವು ನಮ್ಮ ಮನೆಗೆ ಬರ್ತಿರೊ ಇಲ್ವೊ ಅಂತ ಕರಿಲಿಲ್ಲ,”

” ಕರೆದು ನೋಡು ಮಲ್ಲಿ” ಕರೆಯುವುದು ಅನಿವಾರ್ಯ ಆಯಿತು ಈಗವಳಿಗೆ.

” ಬನ್ನಿ,ಹೋಗೋಣ”

” ನಡಿ,.ಸುಬ್ಬಣ್ಣ ಇದಾರೇನು ಮನೇಲಿ,”

” ಹ್ಞು,ಅಪ್ಪ ಇರ್ಬಹುದು”. ಎಂದು ತಿರುಗಿ ಮುಂದೆ ಹೆಜ್ಜೆ ಹಾಕಿದಳು.ಹಿಂದೆ ಅವನೂ ನಡೆದ.

” ಎಲ್ಹೋಗಿದ್ಯೆ ಮಲ್ಲಿ?, ಏಟೋತ್ತಿಂದ ಕರಿತಿವ್ನಿ, ಬರಂಗಿಲ್ಲ ನೀ,”

“ಬಂದೆ ಅಮ್ಮऽ, ಬನ್ನಿ ಒಳಗೆ”,

” ಅಮ್ಮ ಯಾರ್ ಬಂದಾರ ನೋಡ್ ಬಾ,”

” ಯಾರ್ ಬಂದಾರ?”, ಪ್ರಶ್ನೆ ಹಾಕುತ್ತಲೆ ಸೆರಿಗಿಗೆ ಕೈ

ಒರೆಸುತ್ತ ಹೊರ ಬಂದಳು ಗಂಗಿ.

“ಅಯ್ಯೋ, ಅಯ್ಯರಾ ನೀವಾ!!?, ಗೊತ್ತೆ ಆಗಿಲ್ಲ ನೋಡ್ರಿ,” ಗಾಬರಿಯಲ್ಲಿ ಅಲ್ಲೆ ಇದ್ದ ಕುರ್ಚಿಯನ್ನು ಸೆರಗಿನಿಂದ ಒರೆಸಿ ಮುಂದೆ ಸರಿಸಿ

” ಕುಂದ್ರಿ ಅಯ್ಯರ, ಏನ್ ಇತ್ತ ಕಡೆ ಹೊಂಟಿರಿ. ನಮ್ಮೊರನ್ನ ನೋಡಾಕ್ ಬಂದಿದ್ರೆನು?,.ಈಗಷ್ಟೇ ತೋಟದ ಕಡೆ ಹೋದ್ರು”.

“ಇಲ್ಲ ಗಂಗಮ್ಮ.ಹೀಗೆ ಇಬ್ಬನಿಯಲ್ಲಿ ಹೊಲ ನೋಡೋಣ ಅಂತ ಸುತ್ತುತ್ತ ಬಂದೆ.ಹಾಗೆ ಮಲ್ಲಿ ಕಾಣಿಸಿದ್ಳಲ್ಲ,ಈ ಕಡೆ ಬಂದೆ,” ಎನ್ನುತ್ತ ಮಲ್ಲಿಯ ಕಡೆ

ನೋಡಿದನು.ಮಲ್ಲಿ ಸಿಕ್ಕಿದ್ಲು ಅಂತ ಎಲ್ಲಿ ಹೇಳ್ತಾರೊ ಅನ್ನೊ ಭಯ ಅವಳಿಗೆ.ಕುಳಿತಲ್ಲಿಯೆ ಮನೆಯನ್ನೆಲ್ಲ ಪರೀಕ್ಷಿಸಿದನು ಪ್ರದೀಪ.

ಪುಟ್ಟದಾದ ಹುಲ್ಲಿನ ಮನೆ,ನೆಲವನ್ನು ಸೆಗಣಿ ಹಾಕಿ ಆಗಷ್ಟೇ ಸಾರಿಸಿದ್ದು ಇನ್ನು ಸಹ ಹಸಿ ಕಾಣುತಿತ್ತು. ಗೋಡೆಯಲ್ಲಿ ತೂಗು ಹಾಕಿದ್ದ ಕುಟುಂಬದ ಫೋಟೋ,ಅಲ್ಲಲ್ಲಿ ಗಣಪತಿಯ ಫೋಟೊ,ಮತ್ತು ಕ್ಯಾಲೆಂಡರ್. ಇನ್ನೊಂದು ಕಡೆ ಪುಟ್ಟ ಪ್ರಶಸ್ತಿ ಕಂಡು ಕೇಳಿದ,

” ಇದು ಯಾರಿಗೆ ಬಂದಿದ್ದು,ಮಲ್ಲಿ?”

” ನಂಗೇನೆ,ಕೊ ಕೊ ಆಟದಲ್ಲಿ ನಮ್ಮ ಶಾಲೆ ಮೊದಲ ಸ್ಥಾನ ಬಂದಿತ್ತು.ನಾನು ಒಂಬತ್ತರಲ್ಲಿ ಇರುವಾಗ,”

“ಹೋ,ಆಟದಲ್ಲು ಇದ್ದಿಯಾ?,”

” ಹೌದ್ರಿ,ಅವಳಿಗೆ ಆಟ ಅಂದ್ರೆ ಲೋಕಾನೇ ಮರಿತಾಳ”,

” ಏನೇನು ಆಟದಲ್ಲಿ ಇದ್ದಿಯಾ,”

” ಕೊ ಕ್ಕೊ,ಕಬ್ಬಡಿ,ವಾಲಿ ಬಾಲ್”,

” ಸೂಪರ್,ಮುಂದುವರೆಸಿದ್ರೆ ಆಗ್ತಿರಲಿಲ್ವಾ ಮತ್ತೆ,ಯಾಕೆ ಬಿಟ್ಟೆ,”

” ಮುಂದೆ ಹೋಗಲು ಕೋಚ್ ತಗೊಬೇಕು,ಅದಕ್ಕೆ ನಮ್ಹತ್ರ ಹಣ ಎಲ್ಲಿರತ್ತೆ ಹೇಳಿ,”

” ಅಯ್ಯೋ,ಅದಕ್ಕು ಯೋಚಿಸ ಬೇಕಾ,ಸುಬ್ಬಣ್ಣ ಒಂದು ಸಾರಿ ಅಪ್ಪನ ಹತ್ರ ಮಾತಾಡಿದ್ರೆ ಆಗ್ತಿತ್ತು ,ಇಂತಹ ಪ್ರತಿಭೆಗಳನ್ನು ಬೆಳೆಸೋದು ನಮ್ಮ ಕರ್ತವ್ಯ. ಈಗಲಾದರು ಮುಂದುವರೆಸು ಮಲ್ಲಿ,”

” ಇಲ್ಲ ಅಯ್ಯಾರ,ಅವರಪ್ಪನೇ ಬೇಡ ಅಂದವರೆ,ಗಂಡು ಮಕ್ಕಳು ಇಲ್ಲದ ಮನೆ,ಇವಳ್ನ ಊರು ತಿರ್ಗಲು ಬಿಟ್ರೆ ನಮ್ಗ ಕಷ್ಟ ಆಕತಿ ಅಂತ,” ಗಂಗಿಯ ಮಾತಿಗೆ ಮುಂದೆ

ಮಾತೇ ಬರಲಿಲ್ಲ ಪ್ರದೀಪನಿಗೆ.ಗಂಗಿ ಕೊಟ್ಟ ಹಸುವಿನ ಹಾಲು ಕುಡಿದು ಅಲ್ಲಿಂದ ಹೊರಟು ನಿಂತ,ತಲೆಯಲ್ಲಿ ಮಲ್ಲಿಯ ಬಗ್ಗೆ ಯೋಚನೆಗಳು.ಬಡವರ ಮನೆಯಲ್ಲಿ

ಒಳ್ಳೆಯ ಕಲಿಕೆಯನ್ನು ಕೋಡ್ತಾನೆ ದೇವರು,ಆದರೆ ಹಣಕ್ಕೆ ಬರ.ಶ್ರೀಮಂತರ ಮನೆಯಲ್ಲಿ ಹಣ ಕೊಳಿಯುತ್ತೆ.ಆದರೆ ಉಪಯೋಗವಿರಲ್ಲ.

ಪ್ರದೀಪನಿಗೆ ಮಲ್ಲಿ ಇನ್ನೂ ಓದಿದ್ದರೆ ಚೆನ್ನಾಗಿತ್ತು. ಆಗಲಾದರು ಕ್ರೀಡೆಯಲ್ಲಿ ಮುಂದೆ ಹೋಗುವ ದಾರಿ ಇರುತಿತ್ತು ಎನ್ನುವ ಆಲೋಚನೆಯಲ್ಲೆ ತನ್ನ ವಾಹನವನ್ನು ತಮ್ಮ ತೋಟದ ಕಡೆ ತಿರುಗಿಸಿದನು.

ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಇಳಿಸುವ ಕೆಲಸ ಜೋರಾಗಿ ನಡೆಯುತಿತ್ತು.ಕೆಲವರು ಕಿತ್ತ ಕಾಯಿಯನ್ನು

ತಂದು ರಾಶಿ ಹಾಕುತಿದ್ದರೆ,ಇನ್ನು ಕೆಲವರು ಹಳೆ ಕಾಯಿಯ ಸಿಪ್ಪೆ ತೆಗೆಯುವುದರಲ್ಲಿ ತೊಡಗಿದ್ದರು. ಸುಬ್ಬಣ್ಣ ಕೂಡ ಅಲ್ಲಿಯೇ ಕೆಲಸ ಮಾಡುತಿದ್ದ.ಎಲ್ಲಿ ನೋಡಿದರು ತೆಂಗಿನ ಕಾಯಿಗಳ ರಾಶಿ.

ಊರಿನ ಶ್ರೀಮಂತ,ದೇವರಂತಹ ಮನುಷ್ಯ,ಹಣವಿದ್ದರು ಅಹಂಕಾರವಿರದ ಶಿವಪ್ಪ ಯಾವಾಗಲು ಬಿಳಿಯ ಪಂಚೆ, ಬಿಳಿಯ ಅಂಗಿ,ಹೆಗಲ ಮೇಲೆ ಬಿಳಿಯ ಕಂಡುವ

ಧರಿಸಿಯೆ ಹೊರ ಹೊರಡೋದು.ಅದು ತೋಟಕ್ಕಾದರು ಸರಿ, ಪೇಟೆಗಾದರು ಸರಿ, ಕೊನೆಗೆ ಪಂಚಾಯ್ತಿ ಕಟ್ಟೆಗಾದರು ಅದೇ ಉಡುಗೆ.ಬಿಳಿಯ ಉಡುಗೆ

ಶಾಂತಿಯ ಪ್ರತೀಕವೆಂದೆ ನಂಬಿದ್ದ ಅವರು ಹೆಚ್ಚು ಎಲ್ಲರೂ ಒಗ್ಗಟ್ಟಾಗಿಯೆ ಇರಬಯಸುವವರು.ಇದರಿಂದ ತಾನು ಶ್ರೀಮಂತನೆಂಬ ಅಹಂ ಅವರ ಹತ್ತಿರ ಸುಳಿಯುತ್ತಿರಲಿಲ್ಲ.ದೂರದಲ್ಲಿ ತೆಂಗಿನ ಕಾಯಿ ಇಳಿಸುವ

ಜಾಗದಲ್ಲಿಯೇ ಶಿವಪ್ಪನವರು ಸಹ ಕೆಲಸದವರೊಟ್ಟಿಗೆ ಇದ್ದರು.ಮಗನ ವಾಹನದ ಶಬ್ದ ಕೇಳಿ ಆಶ್ಚರ್ಯವಾದರು ತೋರಗೊಡದೆ ಹತ್ತಿರ ಬರುವ ತನಕ ತಮ್ಮ ಕೆಲಸದಲ್ಲಿಯೆ ಮಗ್ನನಾಗಿದ್ದರು.ಹತ್ತಿರ ಬಂದ ಮಗನ

ಕಂಡು ಒಂದು ಎಳನೀರನ್ನು ಕೀಳಲು ಹೇಳಿದರು ಮಂಜನಿಗೆ.ಅವನು ಮರದಲ್ಲಿದ್ದವನಿಗೆ ಎರಡು ಕೀಳಲು ಹೇಳಿ,ಇಳಿಸಿದ ಕಾಯಿಯನ್ನು ಕೆತ್ತಿ ಶಿವಪ್ಪನವರ ಹತ್ತಿರ ಬಂದನು ಮಂಜ.

” ಏನ್ ಪ್ರದೀಪ,ಇವತ್ತೇನ್ ತೋಟದ್ ಕಡೆ ಸವಾರಿ ಬಂತಲ್ಲ,”

” ಏನಿಲ್ಲಪ್ಪ,ಇಬ್ಬನಿ ಬೀಳೊ ವೇಳೆ ಹೊಲ ನೋಡಾಣ ಅನ್ನಿಸ್ತು , ಅತ್ತ ಕಡೆ ಹೋಗಿದ್ನ ,ಹಾಗೆ ತೋಟ ನೋಡಣಾಂತ ಬಂದೆ,”

“ಎರಡ್ಯಾಕ ಲೇ,ಒಂದಲ್ಲ ನಾ ಹೇಳಿದ್ದ್”,

” ಹೌದಯ್ಯ,ಆದ್ರ ನೀವು ಒಂದು ಕುಡಿರಿ ಅಯ್ಯ,”

” ನನ್ನ ತೋಟದ್ ಕಾಯಿ,ನಂಗೆ ಉಪಚಾರಾನು?,”

” ಹಾಗಲ್ಲ ಅಯ್ಯ,ಬಾಳ ಹೊತ್ತಾತು ನೀವು ಬಂದು,ಬಾಯರಿತ್ತಲ್ಲ ಅಂತ”,

” ಹ್ಞು ಕೊಡು ಮತ್ತೆ,ಯಾವ ಮರದ್ದೊ ಮಂಜ,”

” ಅದೆ, ಅಲ್ಲಿದಿಯಲ್ಲ ಅಯ್ಯ,ಸಿಹಿ ಕಾಯಿ ಮರದ್ದು, ನೀರು ತುಂಬ ಇರುತ್ತ್ ,”

” ಅವ್ನೀಗೂ ಕೊಡು,” ಎಂದು ತಾನೊಂದು ಎಳೆ ನೀರು ಕುಡಿದು ಮಗನ ಕಡೆ ನೋಡಿ

” ಹ್ಯಾಂಗದೆ,ನಿಮ್ಮ ಸಿಟಿಲಿ ಇಂತಹ ಕಾಯಿ ಸಿಗತಾವನು?,”

” ಹ್ಞು,ಸಿಕ್ಕಾವು,ಬೆಂಗಳೂರಿಂದ ಬರ್ತಾವು,ಬರೊವಾಗಲೆ ಅರ್ದ ಒಣಗಿದ್ದ ಹಾಗೆ,ನೀರು ತುಂಬ ಇದ್ರು ಸಹ ಸಪ್ಪೆ ಇರೋವು”,ಮುಂದುವರೆಸಿ

” ಅಪ್ಪ, ಎಳ್ನೀರು ಮಾರ್ಕೇಟ್ ಇಲ್ವಾ ನಮಗೆ,” ಕೇಳಿದನು

” ಇಲ್ಲಪ್ಪ ,ನಮ್ಗೆ ಕಾಯಿದೆ ಲಾಭ.ಕಾಯಿ ಒಣಗಿದ್ರೆ ಕೊಬ್ರಿ ಮಾಡಬಹುದು,ಅದು ಬಿಡು ಮಗ,ನೀ ಏನ್ ಯೋಚ್ನೆ ಮಾಡಿ,ಕೆಲಸದ ಬಗ್ಗೆ,” ರಾತ್ರಿ ಹೆಂಡತಿಯ ಬಾಯಲ್ಲಿ

ಇವನು ಇಲ್ಲೆ ಇರುವ ವಿಷಯ ಗೊತ್ತಾದರು ತನ್ನ ಕಿವಿಯಾರೆ ಕೇಳುವ ಆಸೆ ಅವರಪ್ಪನಿಗೆ.

” ಅಪ್ಪ ,ಅದು,. ಹೊರಗೆ ಕೆಲಸ ಅಂತ ಹೋಗೊ ಬದಲು ನಿಮ್ಮ ಕೆಲಸದಲ್ಲೆ ಕೈ ಜೋಡಿಸಿ ಇಲ್ಲೆ ಇರುವ ಅಂತ”,

” ಇಲ್ಲೇನ್ ಮಾಡ್ತಿ?,ನೀನ್ ಓದಿದ ಓದಿಗೆ ನಮ್ಮಲ್ಲೇನಿದೆ ಕೆಲಸ,”

” ಓದು ಬೇಕಿತ್ತು ಓದಿದೆ,ಆದರೆ ನೀವು ಮಾಡುವ ಕೆಲಸವನ್ನು ಕಲಿತು ಮಾಡಿದ್ರೆ ನಿಮಗೂ ಅರಾಮಾಗುತ್ತಲ್ವಾ, ಅಪ್ಪ”,

” ಸರಿ ಪ್ರದೀಪ,ನಿನ್ನ ಇಷ್ಟ,ನೀನು ಇಲ್ಲೆ ಇರ್ತೀನಿ ಅಂದ್ರ

ನನಗಾ ಖುಷಿ ಆಗ್ತದ,ನಮ್ಮ ಕೊನೆ ಕಾಲದಲ್ಲಿ ಮಗ ತನ್ನ ಸಂಸಾರ ಎಲ್ಲಾ ಒಟ್ಟಿಗಿರೋದನ್ನ ಬಯಸೋನು ನಾನು, ಸರಿಯಪ್ಪ ನನ್ನ ವಹಿವಾಟನ್ನ ಆದಷ್ಟು ಬೇಗ ಕಲ್ತುಬಿಡು. ನಂಗು ವಿಶ್ರಾಂತಿ ಸಿಕ್ಕಂಗ ಆಗತ್ತ ಮತ್ತ ,ಬೇಕನು ಇನ್ನೊಂದು ಎಳ್ನೀರು,”

” ಬೇಡಪ್ಪ ಸಾಕು,ಒಂದು ಕುಡಿದದಕ್ಕ ಹೊಟ್ಟಿ ತುಂಬಿದ,ಇನ್ನೊಂದು ನಾ ವಲ್ಲೆ”,

” ನಡಿ ಹೋಗೋನ್ ಮತ್ತ”

‘ಮನೀಗ?.’ಮನಸ್ಸೇಕೊ ಒಪ್ಪಲೆಲ್ಲ ಅವನಿಗೆ.ಆದರೂ

” ಸರಿ ಅಪ್ಪ,ಬನ್ನಿ” ಎಂದು ತನ್ನ ವಾಹನ ತಿರುಗಿಸಿದ. ತಂದೆ ಮಗ ಒಟ್ಟಿಗೆ ಬಂದಿದ್ದು ನೋಡಿ ಲಕ್ಷ್ಮಮ್ಮ

” ಬೆಳಿಗ್ಗೆನ ಎಲ್ಹೋಗಿದ್ದಿ ಮಗ,”

” ಹೊಲ ಸುತ್ಕಂಡು ತೋಟಕ್ಹೋಗಿ ಅಪ್ಪನೊಡನ ಬಂದೆ”,

“ಸರಿ, ತಿಂಡಿ ತಿನ್ನು ಬರ್ರಿ ಮತ್ತ”, ಇಬ್ಬರು ಒಟ್ಟಿಗೆ ಕುಳಿತು ಅಕ್ಕಿ ರೊಟ್ಟಿ ಕಾಯಿ ಚಟ್ನಿ ಸವಿದು ಎದ್ದರು.

*

ಇತ್ತ ಮಲ್ಲಿಯ ಮನ ಪದೇ ಪದೆ ಪ್ರದೀಪನ ಬಗ್ಗೆ ಯೋಚಿಸುತಿತ್ತು. ಒನ್ ಸೈಡ್ ಲವ್ ಹಾಗೆ.ತನ್ನ ಮನದ

ತುಂಬಾ ಅವನದೆ ರೂಪ,ಕುಳಿತಲ್ಲಿ ನಿಂತಲ್ಲಿ ಅವನದೇ ದ್ಯಾನ,ಗಂಗಿಯ ಕೂಗೀಗು ಒಮ್ಮೊಮ್ಮೆ ಸ್ವಂದಿಸದೆ ಬೈಗುಳ ತಿನ್ನುತ್ತಿದ್ದಳು,ಇದರ ಅರಿವು ಗಂಗಿಗಿರಲಿಲ್ಲ.ಮಲ್ಲಿ ಮಾತ್ರ ತನ್ನ ಮನದಲ್ಲಿ

ಪ್ರದೀಪನಿಗೆ ಗುಡಿ ಕಟ್ಟಿದ್ದಳು.ಪ್ರತಿ ದಿನವು ಅವನನ್ನೆ ಕಾಯುತ್ತ ಅವನೊಡನೆಯ ಮಾತಿಗೆ ಹಪಾಹಪಿಸುತಿದ್ದಳು. ಪ್ರದೀಪನು ಸಹ ದಿನಕ್ಕೊಮ್ಮೆಯಾದರೂ ಅವಳನ್ನು ಬೇಟಿ ಮಾಡದೆ ಇರುತ್ತಿರಲಿಲ್ಲ.ಹೊಲ ಗದ್ದೆ,ಕೆರೆಯ ದಂಡೆ, ತೋಟದಲ್ಲಿಯೇ ಇವರ ಬೇಟಿಯ ಸ್ಥಳ,ಇಬ್ಬರು ಮನಸ್ಸಿಗೆ ತೃಪ್ತಿಯಾಗುವಷ್ಟು ಮಾತನಾಡಿ ಆಡಿ

ಹೋಗುತಿದ್ದರು.ಅವನ ಸಹವಾಸದಿಂದ ಕೆಲವು ವಿಷಯದ ಬಗ್ಗೆ ತಿಳಿಯುವಂತಾಗಿತ್ತು ಅವಳಿಗೂ. ಇಬ್ಬರಲ್ಲಿಯು ಅರಳಿದ ಸ್ನೇಹ ನಂತರದ ದಿನದಲ್ಲಿ

ಪ್ರೀತಿಯ ಅಂಕುರವಾಗಿತ್ತು. ಕೊನೆ ಕೊನೆಗೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಆದರೆ ಇಬ್ಬರ ಪ್ರೀತಿಯನ್ನು ಅವರವರ

ಕುಟುಂಬದವರು ಒಪ್ಪುತ್ತಾರೊ ಇಲ್ಲವೊ ಇದರ ಬಗ್ಗೆ ಯೋಚನೆ ಇಬ್ಬರಿಗೂ ಇರಲಿಲ್ಲ.

ಪ್ರದೀಪನು ತನ್ನ ತಂದೆಯ ಮುಕ್ಕಾಲು ಭಾಗ ಕೆಲಸದ ಜವಬ್ದಾರಿ ವಹಿಸಿ ಕೊಂಡಿದ್ದ.ಬೆಳಿಗ್ಗೆ ಬೇಗ ಎದ್ದವನೆ

ತೋಟಕ್ಕೆ ಹೋಗಿ ಕೆಲಸದವರ ಬಗ್ಗೆ ವಿಚಾರಿಸುವುದು.ಇಳಿಸಿದ ಕಾಯಿಗಳ ಲೆಕ್ಕ, ಲಾರಿಯ ಲೋಡ್ ಮತ್ತು ಬರುವ ಆದಾಯದ ಬಗ್ಗೆ ಕೂಡ ತಿಳಿದುಕೊಂಡ.ಕೆಲಸದವರಿಗೆ ಕೊಡುವ ಸಂಬಳದ ವ್ಯವಹಾರ ಮಾತ್ರ ಶಿವಪ್ಪನವರೆ ನೋಡುತಿದ್ದರು.ತನಗೆ ಹಣ ಬೇಕಾದರು ತಂದೆಯನ್ನೆ ಕೇಳಿ ಪಡೆಯುತಿದ್ದ.ಕೆಟ್ಟ ಚಾಳಿಗಳು ಯಾವುದು ಇಲ್ಲದ ಅವನು ಎಲ್ಲರಿಗೂ ಅಚ್ಚುಮೆಚ್ಚಿನ ಧಣಿಯಾಗಿದ್ದ.

ಸಾಯಂಕಾಲ ಪ್ರದೀಪ ಮಲ್ಲಿಯೊಡನೆ ಕೆರೆ ದಂಡೆಯ ಮೇಲೆ ನಡೆದು ಬರುವಾಗ ಅದೇ ಊರಿನ ಶಂಕ್ರ ಎದುರಾದ.ಅವನಿಗೆ ಮಲ್ಲಿಯ ಮೇಲೆ ಕಣ್ಣು.ಅವಳನ್ನು ಹೇಗಾದರು ಮಾಡಿ ಪಡೆಯ ಬೇಕೆನ್ನುವ ಹಟ.ಕುಡಿತಕ್ಕೆ ಬಲಿಯಾದ ಶಂಕ್ರ ಮಲ್ಲಿಯ ಅಮ್ಮನ ತಮ್ಮ.ಅಂದ್ರೆ ಸೋದರ ಮಾವ.ತಾನೇ ಮಲ್ಲಿಯ ಗಂಡ ಎಂದು ಕುಡಿದಾಗಲೆಲ್ಲ ಗಂಗಿಯ ಮನೆಗೆ ಬಂದು ಗಲಾಟೆ ಮಾಡುತಿದ್ದ.ಆದರೆ ಗಂಗಿ ‘ ತಾನು ಸಾಯುವವರೆಗೂ ಇದು ನಡೆಯಲು ಬಿಡಲ್ಲ’ವೆಂದು ಕಡ್ಡಿ ತುಂಡಾದಂತೆ ಹೇಳಿದ್ದಳು.ಈಗ ಅವನ ಕಣ್ಣಿಗೆ ಇವರಿಬ್ಬರು ಬಿದ್ದಿದ್ದರು.ಮಲ್ಲಿಯ ಎದೆಯಲ್ಲಿ ನಗಾರಿ ಬಡಿದಂತೆ ಆಯ್ತು.ಇನ್ನು ಇಬ್ಬರ ವಿಷಯ ಊರವರ

ಕಿವಿಗೆ ಬೀಳುತ್ತೆ.ನಂತರ ಇಬ್ಬರ ಮನೆಯಲ್ಲಿ.ಮುಂದೆ? ಭಯದಲ್ಲಿಯೇ ಪ್ರದೀಪನ ಕೈ ಗಟ್ಟಿಯಾಗಿ ಹಿಡಿದಳು.

” ಏನಾಯ್ತು ಮಲ್ಲಿ”

“ನಮ್ಮ ಮಾವ”

“ಅಂದ್ರೆ,ಈ ಕುಡುಕ? ನಿಮ್ಮ ಮಾವನ!!?,”

“ಹೌದು, ಅಮ್ಮನ ತಮ್ಮ….ಅಷ್ಟೆ ಅಲ್ಲ ಇವನಿಗೆ ನನ್ನ ಮದ್ವಿ ಆಗು ಹುಚ್ಚು , ಅಮ್ಮ ಒಪ್ಪಿಲ್ಲ ,ನಾ

ಸಾಯೋಗಂಟ ಇದು ನಡಿಯಲ್ಲ,ಅಂದಾಳ”

” ಯಾರು? ಇವನು ನಿನ್ನ ಮದ್ವೆ ಆಗ್ತಾನಂತ !?,ಅವನ

ಮುಖ ಕನ್ನಡಿಲಿ ನೋಡ್ಕೊಂಡಿದ್ದಾನಂತ?,ಬಂಗಾರದಂತ ನಿನ್ನ ಆ ಕುಡುಕ,..ಥೂ”

” ದಿನಾ ಬಂದು ಮನೇಲಿ ಗಲಾಟೆ ಮಾಡ್ತಾನ,ಅಪ್ಪ ಇಲ್ಲದ್ದಾಗ ಬರೋದು,ಅಪ್ಪ ಬರೋದು ಕಂಡ ಕೂಡಲೆ

ಹಿತ್ತಲ ಕಡೆಯಿಂದ ಓಡಿ ಹೋಗ್ತಾನ,”.

” ಈಗಲೂ ಕೂಡನಾ?”,

” ಹೌದು,ಆದ್ರ ಇವತ್ತು ನಮ್ಮಿಬ್ಬರನ್ನ ಹೀಗೆ ನೋಡ್ದೋನು ಇನ್ನು ಹೆಚ್ಚು ಮಾಡ್ತಾನ,ಅಪ್ಪನಿಗೂ

ವಿಷಯ ಗೊತ್ತಾಕತ,”

” ಭಯ ಪಡಬೇಡ ಮಲ್ಲಿ ,ಗೊತ್ತಾಗಲಿ.ನೀನು ಹೆದರ ಬೇಡ.ನಾನು ನಮ್ಮ ಮನೇಲಿ ಆದಷ್ಟು ಬೇಗ ಮಾತನಾಡಿ ನಿಮ್ಮ ತಂದೆ ಹತ್ರ ನಮ್ಮ ವಿಷಯ ಹೇಳ್ತೀನಿ.ನನಗೆ ನಮ್ಮ ಅಪ್ಪನ ಮೇಲೆ ನಂಬಿಕೆ ಇದೆ.ನಮ್ಮ ಮದುವೆಗೆ ಒಪ್ಪಿಗೆ ಕೊಡ್ತಾರೆ .”

” ಒಂದು ವೇಳೆ ಒಪ್ಪದಿದ್ರ?”

” ಬಿಡ್ತು ಅನ್ನು , ಹಾಗೆ ಯಾಕೆ ಯೋಚನೆ ಮಾಡ್ತಿ

ಮಲ್ಲಿ , ಒಪ್ಪಲಿಲ್ಲ ಅಂದ್ರು ಸಹ ನಿನ್ನ ಕೈ ಬಿಡಲ್ಲ.ಆದರೆ ನೀನು ಯಾವುದೇ ಅನಾಹುತಕ್ಕೆ ಕೈ

ಹಾಕಬಾರದು.ತಾಳ್ಮೆ ಇರಲಿ.ಎಲ್ಲರನ್ನು ಒಪ್ಪಿಸಿಯೇ ಮದುವೆ ಆಗೋಣ,”ಮಲ್ಲಿ ತುಂಬಿದ ಕಣ್ಣಲ್ಲಿ ಪ್ರದೀಪನನ್ನು ನೋಡಿದಳು.ಅವನ ಮುಖದಲ್ಲಿ ಯಾವುದೆ ರೀತಿಯ ಭಯ ಗಾಬರಿ ಇರಲಿಲ್ಲ.ಮೇಲಾಗಿ ಶಾಂತವಾಗಿತ್ತು.ದೃಡ ನಿರ್ಧಾರದ ಅವನ ಮಾತಿನಿಂದ ದೈರ್ಯ ಬಂದ ಮಲ್ಲಿ ಪ್ರದೀಪನಿಗೆ ಟಾಟಾ ಹೇಳಿ ಮನೆ ಕಡೆ ನಡೆದಳು.

*

ಪ್ರದೀಪನು ಸಹ ಮನೆ ಕಡೆ ಹೊರಟನು.ಮನೆಯ ಅಂಗಳದಲ್ಲಿ ಹೋದ ಕೂಡಲೇ ಎಡ ಭಾಗದ ಕಟ್ಟೆಯ

ಹತ್ತಿರ ಶಂಕ್ರ ಕೈ ಕಟ್ಟಿ ಕೆಳಗೆ ಕುಳಿತಿದ್ದನ್ನು ನೋಡಿ ಸ್ವಲ್ಪ ಗಾಬರಿಯಾದರು ಸಹ ಏನು ಆಗದಂತೆ ಮನೆಯೊಳಗೆ ಹೋದನು. ವರಾಂಡ ದಾಟಿ ಒಳ ಹೋದ ಅವನಿಗೆ ಶಿವಪ್ಪನವರು ಎದುರಾದರು.ಅವರ ಮುಖದಲ್ಲಿಯು

ಯಾವ ಬದಲಾವಣೆ ಇರಲಿಲ್ಲ.ಅಮ್ಮಯ್ಯ ಎಂದುಕೊಳ್ಳುತ್ತ ಅಮ್ಮನನ್ನು ಅರಸುತ್ತ ಅಡುಗೆ ಕೋಣೆಗೆ ಹೋದನು.

” ಬಂದ್ಯನಪ್ಪ , ಏನ್ ಇಟ್ಟೋತ್ತು,”

” ಏನಿಲ್ಲಮ್ಮ,ಹಾಗೆಯೇ ಸುಮ್ಮನೆ ಹೊಲದ ಕಡೆ ಒಂದು

ಸುತ್ತು ಸುತ್ತಿ ಬಂದೆ”,ಎನ್ನುತ್ತಲೆ ಅಮ್ಮನ ಮುಖ ನೋಡಿದ.ಅವರ ಮುಖದಲ್ಲಿಯು ಏನು

ಬದಲಾವಣೆ ಕಾಣದಿದ್ದಾಗ ಶಂಕ್ರಪ್ಪ ಏನು ಹೇಳಿಲ್ಲವೆಂದು ಅರಿವಾಯಿತು ಅವನಿಗೆ..

” ಕಾಲು ತೊಳ್ಕಂಡು ಬಾ,ಕುಡಿಯಾಕ ಕೊಡ್ತೀನಿ”,

” ಸರಿ ಅಮ್ಮ”. ಎಂದವನೇ ಮತ್ತೊಮ್ಮೆ ಅಮ್ಮನ

ಮುಖದಲ್ಲಿಯ ಭಾವನೆಗಳನ್ನು ಅಳೆಯಲು ಹೋದ ಅವನಿಗೆ ಸೋಲೇ ಎದುರಾಯಿತು.ಲಕ್ಷ್ಮಮ್ಮ ಮಗನಿಗೆ ಆಗಷ್ಟೇ ಕರೆದು ತಂದ ಹಸುವಿನ ಹಾಲನ್ನು ಬಿಸಿ ಮಾಡಿ ಅವನ ಮುಂದೆ ಹಿಡಿದರು . ಅಮ್ಮನ ಕೈಯಲ್ಲಿನ ಹಾಲಿನ ಲೋಟ ತೆಗೆದುಕೊಂಡು ಒಂದೇ ಗುಟುಕಿಗೆ ಕುಡಿದು ಮುಗಿಸಿದ ಪ್ರದೀಪನನ್ನು ನೋಡಿ ಲಕ್ಷ್ಮಮ್ಮ.

” ಯಾಕ್ ಮಗ ಅಟ್ಟೋಂದು ಅವಸರ,ಮತ್ತೆಲ್ಲಿಗಾದರು ಹೋಗಾಕ ಇದಿಯೇನು?”

” ಇಲ್ಲಮ್ಮ,ಈಗ ಬಂದಿದ್ದು.ಇನ್ನೆಲ್ಲಿಗೆ ಹೋಗಲಿ”, ಎಂದವನೆ ತನ್ನ ಕೋಣೆಗೆ ಹೋದನು.ಅವನ ತಲೆಯಲ್ಲಿ

ಅಮ್ಮ ಕೇಳಿದ ಪ್ರಶ್ನೆಗೆ ಅನುಮಾನ ಬಂತು.ತಪ್ಪು ಮಾಡಿದವರಿಗೆ ಯಾರು ಏನೇ ಹೇಳಲಿ ಅದು

ಅಪಾರ್ಥವಾಗಿಯೆ ಕಾಣುವ ಹಾಗೆ ಅವರಮ್ಮ ಕೇಳಿದ ಮಾತು ಕೂಡ ಅನುಮಾನ ತರಿಸಿತ್ತು.ಅಲ್ಲದೆ ‘ಮಲ್ಲಿಯ ವಿಷಯ ಯಾವ ರೀತಿ ಅಪ್ಪನ ಹತ್ತಿರ ಮಾತಾಡೋದು? ಅನ್ನೋದು ಮುಖ್ಯವಾಗಿತ್ತು.ತನ್ನ ಮದುವೆಯ ಬಗ್ಗೆ ಹಲವಾರು ಕನಸು ಕಂಡಿರ ಬಹುದು.ಅಲ್ಲದೆ ಮನೆಯ ಕೆಲಸದವರ ಮಗಳನ್ನೆ ಮದುವೆ ಆಗುತ್ತೇನೆ ಅಂದರೆ ಒಪ್ಪುವರೆ? ಅಲ್ಲದೆ ಕುಲದ ಬೇಧವಿಲ್ಲದಿದ್ದರು ಮದುವೆ ಅಂದ ಮೇಲೆ ಒಪ್ಪುತ್ತಾರ?.ಅಲ್ಲಿ ಮಲ್ಲಿಯ ತಂದೆ ತಾಯಿ ಒಪ್ಪದಿದ್ದರೆ? ಏನಾದರು ಮಾಡಿ ಒಪ್ಪಿಸ ಬೇಕು. ಇಲ್ಲವಾದರೆ ಮದುವೆಯೇ ಆಗಲ್ಲ ಅಂದರೆ? ಇರುವ ಒಬ್ಬನೆ ಮಗನ ಸಂತೋಷಕ್ಕಾದರು ಒಪ್ಪಲೇ

ಬೇಕಲ್ವಾ.ಮಲ್ಲಿಗಾದರು ಏನಾಗಿದೆ.ಬೇರೆ ಕಡೆ ಹುಡುಗಿ ಹುಡುಕಿದರು ಸಹ ಅಂತಹ ಹುಡುಗಿ ಸಿಗುತ್ತಾಳೆಯೆ?’

ಎಲ್ಲಾ ಯೋಚನೆಗಳು ಒಂದೇ ಸಾರಿ ತಲೆಯಲ್ಲಿ ದಾಳಿ ಇಟ್ಟಿದ್ದರ ಕಾರಣವೋ ಅಥವಾ ಇನ್ನೇನಾದರು ಕೆಟ್ಟದ್ದು

ಆಗಬಹುದೆನ್ನುವ ಕಾರಣವೋ ಸ್ವಲ್ಪ ಭಯ ಹುಟ್ಟಿತು .ಹಾಗೆಯೇ ದೇವರಲ್ಲಿ ಬೇಡುತ್ತ ಹಾಸಿಗೆಯ ಮೇಲೆ ಒರಗಿದನು.

ಲಕ್ಷ್ಮಮ್ಮನ ಧ್ವನಿ ಕೇಳಿ ಪ್ರದೀಪ ಬೆಚ್ಚಿ ಬಿದ್ದ..ಗಂಟೆ ನೋಡಿದಾಗ ರಾತ್ರಿ ಎಂಟಾಗಿತ್ತು.ತಲೆಯಲ್ಲಿ ಸುತ್ತಿಗೆಯಿಂದ ಹೊಡೆದ ಅನುಭವ.ಏಳಲು ಹೋದರೆ ಆಗಲಿಲ್ಲ.ತಲೆ ಬಾರವಾಗಿತ್ತು. ನಿಧಾನವಾಗಿ ಮಗ್ಗುಲು

ತಿರುಗಿದವನೆ ‘ಅಮ್ಮಾ’ ಎಂದ.ಅಲ್ಲಿಯೆ ಇದ್ದ ಲಕ್ಷ್ಮಮ್ಮ ಗಾಬರಿಯಲ್ಲಿ ಓಡಿ ಬಂದರು.

” ಏನಾತ್ತಪ್ಪ,? ಜ್ವರ ಬಂತಾ ಏನು”, ಎನ್ನುತ್ತಲೆ ಕುತ್ತಿಗೆ, ಹಣೆ ಮತ್ತು ಕೈ ಮುಟ್ಟಿ ನೋಡಿದರು.

” ಇಲ್ಲಮ್ಮ.ತುಂಬಾ ತಲೆ ನೋವು, ಸುತ್ತಿಗೇಲಿ ಹೊಡೆದಂತೆ ಅಗ್ತಿದೆ”,

” ಇರಪ್ಪ ಬಂದೆ”, ಎಂದವರೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ತಂದು ಅವನ ತಲೆಗೆ ಹಾಕಿ ತಿಕ್ಕಲು ಶುರು

ಮಾಡಿದರು.ಮೊದಲು ನೋವು ಹೆಚ್ಚಾದರು ಅಮ್ಮನ ಕೈ ಬಿದ್ದ ಕೂಡಲೆ ಸ್ವಲ್ಪ ಹಾಯೆನಿಸಿತು. ಹಾಗೆಯೆ ಅಮ್ಮನ ಮಡಿಲಲ್ಲಿ ಒರಗಿದನು.ಸಣ್ಣ ಮಗುವಿನಂತೆ ಮಲಗಿದ ಮಗನನ್ನು ನೋಡಿ ಅಮ್ಮನ ಕರುಳು ಚುರುಕ್ಕೆಂದಿತು. ಬೇಡವೆಂದರು ಬೆಳಿಗ್ಗೆ ಮತ್ತು ಸಂಜೆ ಎನ್ನುವಂತೆ ತೋಟದ ಕೆಲಸವೆಲ್ಲಾ ನೋಡಿಕೊಳ್ಳುತ್ತ ಸ್ವಲ್ಪವು ವಿಶ್ರಾಂತಿ ಇಲ್ಲದೆ ತಿರುಗುತ್ತಿರುವ ಮಗನಿಗೆ ಎಷ್ಟು ಹೇಳಿದರು ಕೇಳಲಾರ ಎಂದು ಕೊಂಡರು.ಹಾಗೆಯೆ ಮಗನ ಕೂದಲಲ್ಲಿ ಕೈಯಾಡಿಸುತ್ತ ಇದ್ದ ಅಮ್ಮನ ಕೈ ಹಿಡಿದು

” ಸಾಕು ಬಿಡಮ್ಮ,ಈಗ ಸ್ವಲ್ಪ ಕಡಿಮೆ ಆಯ್ತು.ನಿನ್ನ ಕೈಯಲ್ಲಿ ಏನಿದೆಯೋ? ಎಣ್ಣೆ ಹಾಕಿ ತಿಕ್ಕಿದ ಕೂಡಲೆ ಕಡಿಮೆ ಆಯ್ತು ನೋಡು”, ಎಂದು ಏಳಲು ಹೋದ ಮಗನನ್ನು ತಡೆದು

” ಸ್ವಲ್ಪ ಹೊತ್ತು ಹಾಗೆಯೆ ಮಲಿಕ್ಕ , ತಲೆ ಸಿಡ್ತ ಪೂರ್ತಿ ಕಮ್ಮಿ ಆಕತ್ತೆ”,

” ಅಮ್ಮ,ಅಪ್ಪ ಎಲ್ಲಿದ್ದಾರೆ?”,

” ಹೊರಗಾ ಕುಂತವ್ರೆ , ಯಾಕಪ್ಪ?”,

” ಏನಿಲ್ಲಮ್ಮ,ಸುಮ್ಮನೆ ಕೇಳಿದ್ದ್, ಶಂಕ್ರ ಹೋದ್ನಾ?”

“ಅವ ನೀ ಬಂದಾಗಲೆ ಹೊಂಟು ಹೋದ”,

“ಯಾಕಂತೆ ಬಂದಿದ್ದು?”

” ಏನೋ ಗೊತ್ತಿಲ್ಲ ನೋಡ್,ಅಪ್ಪನ ಹತ್ರ ಏನೊ ಹೇಳ್ತಿದ್ದ,ಇವ್ರು ಜೋರ್ ಮಾಡ್ತಿದ್ರು,ಕುಡಿಯಾಕ ಹಣ ಕೇಳಿರ್ಬೇಕು”, ಸಮಾಧಾನವಾಯ್ತು ಪ್ರದೀಪನಿಗೆ..ಹಣ ಕೇಳಲು ಬಂದಿದ್ದ , ಹಾಗಾದರೆ ನಮ್ಮ ವಿಷಯ ಏನು ಹೇಳಿಲ್ಲ , ಹೇಳುವಷ್ಟು ದೈರ್ಯ ಇರಬೇಕಲ್ವಾ ಅವನಿಗೆ ಅನ್ನಿಸಿತ್ತಾದರು,ಕುಡಿದವರಿಗೆ ತುಂಬಾ ದೈರ್ಯ ಅಂತ ಯಾರೋ ಹೇಳಿದ್ದು ಕೇಳಿದ್ದ.

” ಏಳಪ್ಪ ,ಊಟ ಮಾಡಿ ಮಕ್ಕೋಳುವಂತೆ” ಎಂದು ಮಗನನ್ನು ಎಬ್ಬಿಸಿದರು. ಯೋಚನೆಯಿಂದ ಹೊರ ಬಂದ ಪ್ರದೀಪ ಎದ್ದು ಅಮ್ಮನನ್ನು ಹಿಂಬಾಲಿಸಿದ. ಊಟಕ್ಕೆ ಅಪ್ಪನೊಡನೆ ಕುಳಿತು ಕೊಳ್ಳುವುದು ಹೊಸತೇನು ಅಲ್ಲವಾದರು ಅವತ್ತೇಕೊ ಭಯವೆನಿಸಿತು.ಅಪ್ಪನನ್ನ ನೋಡಿ ಮಾತೇ

ಬರಲಿಲ್ಲ.ದಿವಸವು ಏನೋ ಒಂದು ಮಾತಲ್ಲೆ ಮುಳುಗಿ ಊಟ ಮುಗಿಸುತಿದ್ದ ಇಬ್ಬರು ಮೌನವಾಗಿದ್ದು ಊಟ

ಮುಗಿಸಿದರು. ಅಪ್ಪನಿಗೆ ವಿಷಯ ಗೊತ್ತಾಗಿರ ಬಹುದೇ ಎನ್ನುವ ಅನುಮಾನ ಬಲವಾಗ ತೊಡಗಿತು ಅವನಿಗೆ.ಹಾಗಾದರೆ ಹೇಗೆ ಹೇಳಬೇಕು.ಅವರೆ ಕೇಳಿದರೆ ಸರಿ.ಇಲ್ಲವಾದರೆ ಶುರು ಎಲ್ಲಿಂದ?.

ಶಿವಪ್ಪನವರಿಗೆ ಅವನ ಯಾವ ವಿಚಾರವು ಗೊತ್ತಿರಲಿಲ್ಲ.ಆದರೆ ಮಗನ ಮದುವೆ ವಿಚಾರ ಮಾತ್ರ

ಹಲವು ದಿನದಿಂದ ತಲೆಯಲ್ಲಿತ್ತು.ಕೆಲವರಲ್ಲಿ ಅದರ ಬಗ್ಗೆ ಹೇಳಿದ್ದರು ಕೂಡ.ಒಳ್ಳೆಯ ಕಡೆ ಹುಡುಗಿ ಇದ್ದರೆ ಹೇಳಿ

ಎನ್ನುವ ಮಾತು.ಹಾಗೆಯೇ ಒಂದೆರಡು ಹುಡುಗಿಯರ ಫೋಟೋ ಬಂದಿದ್ದವು ಸಹ.ಆದರೆ ಹೆಂಡತಿಗಾಗಲಿ ಮಗನಿಗಾಗಲಿ ಹೇಳಿರಲಿಲ್ಲ.ಕಾರಣ ಬಂದ ಫೋಟೊಗಳಲ್ಲಿ ಎಲ್ಲರು ಚೆನ್ನಾಗಿಯೆ ಕಾಣುವವರು, ಓದಿದವರು ಕೂಡ.ಅವರೆಲ್ಲ ಊರಲ್ಲಿ ಇದ್ದು ಮನೆ ಕೆಲಸ ಮಾಡುವ ಹಾಗಿದ್ದವರಲ್ಲ.ಸಿಟಿ ಸೇರಿ ಕೆಲಸ

ಮಾಡಲು ಬಯಸುವವರು.ಇರಲಿ ಎಂದು ಫೋಟೊ ಕೊಟ್ಟವರಿಗೆ ಹೇಳಿದ್ದರು.ಆದರೆ ಮಗನಿಗೆ ತೋರಿಸಿ ಅವನು ಒಪ್ಪಿ ಮತ್ತೆ ಸಿಟಿ ಸೇರಿದರೆ? ಈಗಾಗಲೆ ತನ್ನ ಕೆಲಸದಿಂದ ಸ್ವಲ್ಪ ವಿಶ್ರಾಂತಿ ಪಡೆದವರು ಮತ್ತೆ ಆದೆ

ಕೆಲಸವನ್ನು ಶುರು ಮಾಡಬೇಕು.ಎಲ್ಲವನ್ನು ಯೋಚಿಸಿ ಹೇಳಿದರಾಯಿತು ಎಂದು ಸುಮ್ಮನಿದ್ದರು.ಆದರೆ ಪ್ರದೀಪನ ಮನದಲ್ಲಿ ಅಪ್ಪನಿಗೆ ವಿಷಯ ತಿಳಿದಿರ ಬಹುದೇ?ಎನ್ನೋದು ಆತಂಕ ಮೂಡತೊಡಗಿತ್ತು.

ಬೆಳಿಗ್ಗೆ ಎದ್ದವನಿಗೆ ತಲೆ ನೋವು ಕಡಿಮೆಯಾದರು ಮನಸ್ಸಿಗೆ ಯಾಕೋ ಬೇಸರ,ಹೇಳಲಾರದ ಸಂಕಟ. ‘ಏನಾಗುತ್ತಿದೆ? ಯಾವುದರ ಮುನ್ಸೂಚನೆ? ತನ್ನ ಮಲ್ಲಿ? ಛೇ..ಛೇ’ ತಲೆ ಕೊಡವಿದ.ಮನಸ್ಸಿಲ್ಲದ ಮನಸ್ಸಿಂದ ನಿಧಾನವಾಗಿ ಎದ್ದು ದಿನ ನಿತ್ಯದ ಕಾರ್ಯ ಮುಗಿಸಿ ತಿಂಡಿ ತಿಂದು ತೋಟದ ಕಡೆ ಹೊರಟನು.ಅವತ್ತು ಎರಡು

ಲಾರಿ ತೆಂಗಿನ ಕಾಯಿ ಲೋಡು ಬೆಂಗಳೂರಿಗೆ ಹೋಗುವುದಿತ್ತು.ಅದರ ಕೆಲಸವೇ ಮಧ್ನಾಹದವರೆಗೆ ಇದ್ದಿದ್ದರಿಂದ ಇನ್ಯಾವ ಯೋಚನೆಯು ಬರಲಿಲ್ಲ

ಅವನಿಗೆ.ಲಾರಿ ಹೊರಟ ಕೂಡಲೆ ಮನೆಗೆ ಹೋಗಿ ಅಪ್ಪನವರಿಗೆ ನಿಧಾನವಾಗಿ ವಿಷಯ ಹೇಳಿದರೆ ಸರಿ,ಬೇರೆಯವರ ಬಾಯಲ್ಲಿ ಕೇಳ ಬಾರದು ಎನ್ನುವುದು

ಅವನ ಮನದ ಮಾತು.ಮನೆಗೆ ಬಂದು ಊಟ ಮುಗಿಸಿ ಅಪ್ಪನೆಲ್ಲಿ ಎಂದು ಅಮ್ಮನ ಹತ್ತಿರ ಕೇಳಿದಾಗ ಊರ

ಪಂಚಾಯಿತಿಲಿ ಏನೋ ಕೆಲಸದ ಮೇಲೆ ಹೋಗಿರುವ ವಿಷಯ ಗೊತ್ತಾಗಿ ಹಾಗೆಯೆ ತನ್ನ ಕೋಣೆಗೆ ಬಂದು ಹಾಸಿಗೆಯ ಮೇಲೆ ವಾಲಿದನು.ಸಣ್ಣದಾಗಿ ನಿದ್ರೆ ಬಂದು

ಸಂಜೆಯ ನಾಲ್ಕಕ್ಕೆ ಎಚ್ಚರವಾಯಿತು..ಬೇಗ ಎದ್ದವನೆ ತೋಟದ ದಾರಿ ಹಿಡಿದನು.ಹಿಂದಿನ ದಿನದ ಘಟನೆಯ ನಂತರ ಮಲ್ಲಿಯನ್ನು ನೋಡಲು ಆಗಿರಲಿಲ್ಲ. ಇವತ್ತಾದರು ಹೆಚ್ಚು ಸಮಯ ಕಳೆದು ಎಲ್ಲಾ ವಿಷಯ ಹೇಳಿ ಸಮಾಧಾನ ಮಾಡಬೇಕು ಎನ್ನುತ್ತ ತಾವಿಬ್ಬರು ಸೇರುವ ಕೆರೆಯ ದಡದ ಕಡೆ ಹೊರಟ ಪ್ರದೀಪ. ಸ್ವಲ್ಪ ದೂರ ಹೋದಾಗ ಬೆಕ್ಕು ಅಡ್ಡ ಬಂದು ವಾಹನ ಬೀಳುವಂತಾಯಿತು. ಹಾಗೆಯೆ ಸಾವಾರಿಸಿಕೊಂಡನು. ಮನದಲ್ಲಿ ಏನೋ ಹೇಳಲಾಗದ ತಳಮಳ.

ಮಲ್ಲಿ ತನಗಾಗಿ ಕಾದಿರುತ್ತಾಳೆ ಎನ್ನುವ ಕಾತುರ ಒಂದು ಕಡೆಯಾದರೆ ಹೇಳಲಾಗದ ವೇಧನೆ ಇನ್ನೊಂದು ಕಡೆ.ಬೇಗನೆ ಕೆರೆಯ ದಂಡೆಯ ಹತ್ತಿರ ವಾಹನ ನಿಲ್ಲಿಸಿ

ಯಾವಾಗಲು ಇಬ್ಬರು ಕೂರುವ ಜಾಗಕ್ಕೆ ಬಂದವನೇ ನೋಡಿದಾಗ ಅವಳಿರಲಿಲ್ಲ.’ಯಾಕೆ? ಇನ್ನು ಬರಲಿಲ್ಲ? ಅಥವಾ! ಶಂಕ್ರ ಅವರ ಮನೆಯಲ್ಲಿ ವಿಷಯ ಹೇಳಿರ ಬಹುದೆ!?’ ಎಂದೆಲ್ಲ ಯೋಚಿಸುತ್ತ ಇದ್ದವನು ಸುತ್ತಲು ಮಲ್ಲಿಯ ಬರುವಿಕೆಗೆ ಕಣ್ಣು ಹಾಯಿಸಿದನು..ದೂರದಲ್ಲಿ ಯಾರೋ ಓಡಿದ ಹಾಗೆ ಕಾಣಿಸಿದರು, ಗಮನವಿಡಲಿಲ್ಲ. ಮನಸ್ಸು ಮಲ್ಲಿಯನ್ನೆ ನೆನೆಯುತಿತ್ತು..ಅವನು ಬಂದು ಅರ್ಧ ಗಂಟೆಯ ಮೇಲಾದರು ಅವಳ ಸುಳಿವು ಇರಲಿಲ್ಲ.ಹಾಗೆಯೆ ಕೆರೆಯ ದಂಡೆಯಲ್ಲಿ ನಡೆದು ಹೋಗುತ್ತ ಸಣ್ಣ ಸಣ್ಣ ಕಲ್ಲುಗಳನ್ನು ನೀರಿಗೆ ಎಸೆಯುತ್ತ

ಮತ್ತೆ ಮತ್ತೆ ತಿರುಗಿ ನೋಡುತಿದ್ದನು ಅವಳಿಗಾಗಿ.

” ಅಯ್ಯಾ!!!!!”. ಕೆಲಸದ ಮಂಜನ ಕೂಗು.

” ಏನೋ ಮಂಜ” ಗಟ್ಟಿಯಾಗಿ ಕಿರುಚಿದಂತೆ ಕೇಳಿದನು.

” ಅಯ್ಯಾ, ಇಲ್ಲಿ ಬನ್ನಿ ಅಯ್ಯಾ!” ಅಳುತ್ತಲೆ ಹೇಳಿದಾಗ ಒಂದೇ ಉಸಿರಿಗೆ ಓಡಿದನು.

” ಏನಾತೊ!?, ಯಾಕ್ಲಾ ಹಾಗ್ ಕಿರ್ಚಿದ್ದು” ಎನ್ನುವಾಗ ಮಂಜ ತನ್ನ ಕೈಯನ್ನು ಕೆರೆ ದಂಡೆಯ ಕಡೆ ತೋರಿಸಿದನು.

ಅಲ್ಲಿ ಕಂಡ ದೃಶ್ಯಕ್ಕೆ ಪ್ರಜ್ಞೆ ತಪ್ಪಿ ಬೀಳುವಂತಾಗಿ ನಿಂತಲ್ಲೆ ಕುಸಿದನು ಪ್ರದೀಪ.ಅಲ್ಲಿ!!!?. ರಕ್ತದ ಕೋಡಿಯೇ ಹರಿದಿತ್ತು ಅಲ್ಲಿ.

ಬಟ್ಟೆಗಳೆಲ್ಲ ಅಸ್ತವ್ಯಸ್ತವಾಗಿದ್ದು ಹರಿದ ಹೋಗಿದ್ದವು. ಮೈ ಮೇಲೆಲ್ಲಾ ಪರಚಿದ ಗಾಯ,ತಲೆಯನ್ನು ದೊಡ್ಡ

ಕಲ್ಲಿನಿಂದ ಹೊಡೆದು ಹಾಕಿದಂತೆ ಇತ್ತು.ಮಂಜ ನಿಧಾನವಾಗಿ ಪ್ರದೀಪನನ್ನು ಹಿಡಿದೆತ್ತಿ ಇಬ್ಬರು ಕೆಳಗಿಳಿದು

ಹೋದರು.ಹತ್ತಿರ ಹೋದಂತೆ ಗೊತ್ತಾಗಿದ್ದು ಅಲ್ಲಿ ಬಿದ್ದಿರುವ ಶವ ಮಲ್ಲಿಯದೆಂದು. ಯಾರೋ ಅವಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದರು.ಅದು ಕೂಡ

ಆಗಷ್ಟೆ ಆದಂತೆ.ಪ್ರದೀಪನಿಗೆ ಏನೂ ಮಾಡಲಾಗದೆ ಸ್ವರವೇ ಹೊರಡಲಿಲ್ಲ.ಅವನನ್ನು ಅಲ್ಲಿಯೆ ಒಂದು

ಬದಿಯಲ್ಲಿ ಕೂರಿಸಿದ ಮಂಜ , ಕೆರೆ ದಂಡೆಯಿಂದ ಹೊರ ಬಂದು ಕೂಗಿದಾಗ ತೋಟದಲ್ಲಿ ಕೆಲಸ ಮಾಡುವವರೆಲ್ಲರು ಓಡಿ ಬಂದರು. ಈ ವಿಷಯ ಶಿವಪ್ಪನವರಿಗೂ ಮತ್ತು ಮಲ್ಲಿಯ ಮನೆಯವರಿಗೂ ತಿಳಿದು ಅವರ ದುಃಖ ಯಾರಿಂದಲು ತಡೆಯಲಾಗಲಿಲ್ಲ.ಪ್ರದೀಪನ ಪರಿಸ್ಥಿತಿ ಮಾತ್ರ ಮೌನವಾಗಿದ್ದ.ಅವನಿಗಾದ ಅಗಾತದಿಂದ

ಹೊರಬರಲು ಆಗಲೆ ಇಲ್ಲ.ಈ ಕೆಲಸ ಯಾರದೆಂದು ಯೋಚಿಸುವಾಗಲೆ ಗಂಗಿಯ ತಮ್ಮನ ಮೇಲೆ ಅನುಮಾನವಿದ್ದು ಅದೇ ನಿಜವಾಗಿತ್ತು.ತನಗೆ ಸಿಗದ

ಹೆಣ್ಣು ಇನ್ನೊಬ್ಬರ ಸ್ವತ್ತಾಗುತ್ತೆ ಎಂದರಿತ ಶಂಕ್ರ ಒಂದು ಸಾರಿಯಾದರು ಅವಳನ್ನು ಅನುಭವಿಸುವ ನಿರ್ಧಾರದಲ್ಲೆ ಇರುವಾಗ ಪ್ರದೀಪನಿಗಾಗಿ ಕಾದಿರುವ ಮಲ್ಲಿ ಅವನ ಕಣ್ಣಿಗೆ ಕಂಡಿದ್ದಳು.ಅವಳನ್ನು ಬಲವಂತವಾಗಿ ಎಳೆದೋಯ್ಯಿದು ತನ್ನ ಆಸೆ ತೀರಿದ ಬಳಿಕ ತನ್ನ ವಿಷಯ ಹೊರ ಹಾಕಿದರೆ? ಎನ್ನುವ ಅನುಮಾನದಲ್ಲಿ ಕಲ್ಲಿಂದ ತಲೆಯ ಮೇಲೆ ಹೊಡೆದು ಸಾಯಿಸಿದ್ದ. ನಂತರ ಅಲ್ಲಿಂದ ಹೊರಡುವಾಗಲೆ ದೂರದಲ್ಲಿ ಪ್ರದೀಪ ಬರುವುದನ್ನು ಕಂಡು ಓಡಿ ಹೋಗಿದ್ದ.ಆದರೆ ಅದನ್ನು ಗಮನಿಸಿದ ಅವನು ಮಲ್ಲಿಗಾಗಿ ಕಾಯುತ್ತಿದ್ದ. ಶಂಕ್ರನ ಕ್ಷಣಿಕಾವೇಶದಲ್ಲಿ ಮಾಡಿದ ತಪ್ಪಿಗೆ ಮಲ್ಲಿಯ ಪ್ರಾಣ ಹೋಗಿತ್ತಾದರು ಪ್ರದೀಪ ಬದುಕಿದ್ದು ಶವದಂತಾಗಿದ್ದ.

*

ಅಂದು ಮೌನವಾದ ಪ್ರದೀಪನ ಮನ ಮತ್ತೆಂದು

ಮಾತನಾಡಲೆ ಇಲ್ಲ.ತನಗೆ ಏನೂ ಅರಿವಿಲ್ಲದವನಂತೆ ವರ್ತಿಸುತ್ತ ಊಟ ನೀರು ಬಿಟ್ಟು ಸೂರು ನೋಡುತ್ತ

ಕುಳಿತಿರುತ್ತಿದ್ದ.ಹಾಗೆಯೇ ಒಮ್ಮೆ ಮನೆಯಿಂದ ಹೊರ ಹೊರಟ ಪ್ರದೀಪ ಎಲ್ಲಿ ಹೋದನೆಂದು ಯಾರಿಗೂ ತಿಳಿದಿರಲಿಲ್ಲ.ಆಗಾಗ ಊರವರು ಕಂಡಾಗ

ಶಿವಪ್ಪನವರಿಗೆ ವಿಷಯ ತಿಳಿಸಿದರೆ ಅವರು ಹೋಗುವುದರೊಳಗೆ ಅಲ್ಲಿರುತ್ತಿರಲಿಲ್ಲ.

**

ಶಿವಪ್ಪನವರು ಮಗನ ಕಥೆ ಹೇಳಿ ಮುಗಿಸುವ ವೇಳೆಗೆ ಅದೇ ಕೆರೆಯ ದಡದ ಹತ್ತಿರ ಮೂವರು ಬಂದಿದ್ದರು. ಮಲ್ಲಿ ಸತ್ತ ಜಾಗ ತೋರಿಸಿದ ಶಿವಪ್ಪನವರಿಗೆ

ಮತ್ತೊಂದು ಘಟನೆಯು ಕಾದಿತ್ತು ಅಲ್ಲಿ.

” ಅಲ್ಲಿ ಯಾರೊ ಇದ್ದಂಗ ಅದ.ನಿಮಗೇನಾರ ಕಂಡಿತ್ತ”

” ಎಲ್ಲಿ ಸರ್?”

” ಅಲ್ಲಿ” ಎಂದು ಕೈ ತೋರಿಸಿದ ಕಡೆ ಇಬ್ಬರು ನೋಡಿದರು.

” ಹೌದು ಸರ್,ಯಾರೋ ಮಲಗಿದ್ದ ಹಾಗಿದೆ. ನೋಡೋಣ ಬನ್ನಿ ಸರ್”

” ನಡೀರಿ ನೋಡನ” ಮೂವರು ಆ ವ್ಯಕ್ತಿಯ ಹತ್ತಿರ ಹೋದರು. ಶಿವಪ್ಪನವರು ಅವರಾರೆಂದು ನೋಡಲು , ಭುಜ ಹಿಡಿದು ಅಲುಗಾಡಿಸಿದರು…ಆದರೆ!!!!

ಶರೀರ ಕಟ್ಟಿಗೆಯಂತಾಗಿತ್ತು..ಒಂದು ಸಾರಿ ಕೈ ಹಿಂದೆ ಸರಿಸಿದರು.

ಹರೀಶ ಏನೆಂದು ಕೇಳುವಂತೆ ಅವರ ಮುಖ ನೋಡಿದನು.

” ಯಾರೋ ಸತ್ತಾರ!!.

” ಆ!!? ಯಾರು? ಸರ್!!?”

” ಗೊತ್ತಿಲ್ರಿ, ಪೋಲಿಸ್ ಬರಬೇಕ್ರಿ.ಶವ ನಾವ್ ಮುಟ್ಟಂಗಿಲ್ಲ.ಕರೆ ಕಳಿಸ್ಬೇಕು” ಎಂದವರೆ ಕೆಲಸದವರಿಗೆ

ಕರೆದು ವಿಷಯ ತಿಳಿಸಿದರು.ಅರ್ಧ ಗಂಟೆಯ ನಂತರ ಬಂದ ಪೋಲಿಸ್ ಶವವನ್ನು ತಿರುಗಿಸಿದಾಗ ಯಾರು ಸಹ ಗುರುತು ಹಿಡಿಯಲಾಗಲಿಲ್ಲ. ಕೊಳೆಯಾದ ಬಟ್ಟೆ, ಗೆಡ್ಡೆ ಕಟ್ಟಿದ ತಲೆ ಕೂದಲು , ಉದ್ದವಾದ ಗಡ್ಡ ಮೀಸೆಗಳು ಮುಖವೇ ಕಾಣದಂತೆ ಇದ್ದು ಇದೊಂದು ಬಿಕ್ಷುಕನ ಶವವೆಂದು ಪೋಲಿಸರು ಕೇಸ್ ಮಾಡಿದರು.ಆದರೆ ಊರವರಲ್ಲಿ ಒಂದು ಸಾರಿ ವಿಚಾರಿಸಿದಾಗ ಪ್ರದೀಪನ ನೆನಪಾಯಿತು ಕೆಲವರಿಗೆ. ಶಿವಪ್ಪನವರು ಸಹ ಗೊತ್ತಿಲ್ಲವೆಂದರು.ಆದರೂ ಒಮ್ಮೆ ಅವನನ್ನು ಪರೀಕ್ಷಿಸಿದಾಗ, ಬೆರಳಲ್ಲಿದ್ದ ಉಂಗುರದ ಆಧಾರದ ಮೇಲೆ ಸತ್ತಿದ್ದು ಪ್ರದೀಪನೆ ಎಂದು ಗುರುತಿಸಿದರು.

ಪ್ರೇಮಿಗಳಿಬ್ಬರು ಒಂದಾಗಿ ಜೀವಿಸುವ ಕನಸು ಕಂಡವರು.ಆದರೆ!? ವಿಧಿಯ ಆಟಕ್ಕೆ ಬಲಿಯಾಗಿ ಒಂದೇ ಜಾಗದಲ್ಲಿ ಸಾವು ಅವರನ್ನು ವರಿಸಿತ್ತು….

——

Leave a Reply

Back To Top