ಕವಿತೆ
ಕ್ಷಮಿಸಿ ಬಿಡು ಬಸವಣ್ಣ
ಡಾ.ಶಿವಕುಮಾರ್ ಮಾಲಿಪಾಟೀಲ
ನೀ ಹಾಕಿದ ಸಮಾನತೆಯ
ಭದ್ರ ಬುನಾದಿ ಮೇಲೊಂದು
ಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ
— ಕ್ಷಮಿಸಿಬಿಡು ಬಸವಣ್ಣ.
ನೀನು ಗಳಿಸಿದ ನೈತಿಕ
ಆಸ್ತಿಯ ಮಾರಿ
ಮಹಾಮನೆಯ ಜಂತಿ
ಮುರಿದು ಉರುವಲಾಗಿ
ಬಳಸುತ್ತಿದ್ದೇವೆ
— ಕ್ಷಮಿಸಿಬಿಡು ಬಸವಣ್ಣ.
ನಿನ್ನ ಜನ್ಮದಿನದಂದೆ
ಆಸ್ತಿ, ಬಂಗಾರ ಖರೀದಿಸಿ
ಅಕ್ಷಯ ನಿಧಿ ತುಂಬಿಸಿ
ಕೃತಕ ಜಗತ್ತು ಕಟ್ಟುತ್ತಿದ್ದೇವೆ
–ಕ್ಷಮಿಸಿಬಿಡು ಬಸವಣ್ಣ
ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,
ನಿನ್ನ ವಚನಗಳನ್ನು
ಎಲ್ಲಾ ಭಾಷೆಗಿಳಿಸಿ,
ಕಲ್ಯಾಣ ನಾಡನ್ನೆ
ಕಟ್ಟುವುದ ಮರೆತಿದ್ದೇವೆ
— ಕ್ಷಮಿಸಿಬಿಡು ಬಸವಣ್ಣ
ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,
ಕಾಯಕವೇ ಕಷ್ಟವೆಂದು
ನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ
–ಕ್ಷಮಿಸಿಬಿಡು ಬಸವಣ್ಣ
ಜಾತಿ ಅಳಿಸಲು ನೀನು ಚಳುವಳಿ ರೂಪಿಸಿದಿ
ಜಾತಿ ಉಳಿಸಲು ನಾವು ಪೀಠಗಳನ್ನು ಸ್ಥಾಪಿಸಿ
ಜಾತಿ ಸಮಾವೇಶಗಳ ಧೂಳಿನಲ್ಲಿ ನಿನ್ನನ್ನು
ಹುಡುಕಲು ಹೊರಟಿದ್ದೇವೆ
— ಕ್ಷಮಿಸಿಬಿಡು ಬಸವಣ್ಣ
ನಿನ್ನ ಕ್ರಾಂತಿಯ ಕಣಗಳು
ನಮ್ಮ ರಕ್ತದಲ್ಲಿಂದು ಮಾಯವಾಗಿವೆ
“ಬಸವಾ ಮತ್ತೆ ಹುಟ್ಟಿ ಬಾ” ಎಂದ್ಹೇಳಲು ನಾವು ಅರ್ಹತೆ ಕಳೆದುಕೊಂಡಿದ್ದೇವೆ
–ಕ್ಷಮಿಸಿಬಿಡು ಬಸವಣ್ಣ.
ಕ್ಷಮಿಸಿ ಬಿಡು ….
************************
Super sir
ತುಂಬಾ ಅರ್ಥಗರ್ಭಿತವಾದ ಕವನ. ಧನ್ಯವಾದಗಳು.