ಪ್ರೇಮಪತ್ರ

ಪ್ರೇಮಪತ್ರ

ಕಂಡಕ್ಟರ್ ಸೋಮು.

ಕಿರುಬೆರಳಿನಂತವಳೇ,

     ಅಲ್ಲಿ ಗಿಳಿಯೊಂದು ಮಾತನಾಡುತ್ತದೆ, ಆ ಮಾತು ಎಷ್ಟು ಅರ್ಥಗರ್ಭಿತವೆಂದರೆ ಮನುಷ್ಯರ ಮಾತೂ ಕೂಡ ಅಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಕಾರಣ ಅದು ಕಾಡಿನಲ್ಲಿದೆ; ನೀನು ನಾಡಿನಲ್ಲಿ ಇರುವೆ!?

       ನನ್ನ ಪತ್ರದ ಪ್ರತಿ ಒಕ್ಕಣೆಯಲ್ಲೂ ಹೀಗೆ ನಿನ್ನ ಕಾಲು ಎಳೆಯದಿದ್ದರೆ ನಮ್ಮ ಪ್ರೇಮಕ್ಕೆ ಲವಲವಿಕೆಯಿರುವುದಿಲ್ಲ. ನಿನ್ನ ಮರೆತು ಗಿಳಿಯ ಸಂಗತಿ ಏಕೆ ಹೇಳಿದೆ ಎಂದು ಮುನಿಸೆ? ನಿನ್ನ ಮುನಿಸಿನಲ್ಲೂ ಒಂದು ಚೆಲುವಿದೆ. ಗಿಳಿ ಮುನಿಸಿಕೊಳ್ಳ್ದದಿದ್ದರೂ ಕೊಕ್ಕು ಮಾತ್ರ ಕೆಂಪಗಿದೆ, ನಿನಗೆ ಮುನಿಸು ಬಂದರೆ ದೇಹ ಪೂರ್ತಿ ಕೆಂಪು, ಥೇಟ್ ಬ್ಯಾಡಗಿ ಮೆಣಸಿನಕಾಯಿ ಥರ! ಆ ಖಾರದ ರುಚಿಯ ಸವಿಯಲು ನಾನು ಕಾತರನಾಗಿರುವೆ. ಅದು ಸರಿ, ಮೊನ್ನೆ ದೇವಸ್ಥಾನದಲ್ಲಿ ಕಂಡ ನೀನು ಇದ್ದಕ್ಕಿದ್ದ ಹಾಗೆ ಎಲ್ಲಿ ಮಾಯವಾಗಿ ಹೋದೆ ಹುಡುಗಿ, ನಾನಂತೂ ಎಲ್ಲಾ ಕಂಬಗಳ ಸುತ್ತೀ ಸುತ್ತೀ ಸಾಕಾಯ್ತು. ಜೊತೆಗೆ ಬಂದವನು ನನ್ನ ಅಳಿಯ ಇರಬೇಕು ನನ್ನನ್ನೇ ದುರುಗುಟ್ಟಿಕೊಂಡು ನೋಡ್ತಾ ಇದ್ದ. ನಿನ್ನ ಲಂಗ ದಾವಣಿ ಮೇಲಾಣೆ ಅವನು ಕೈಗೆ ಸಿಕ್ಕಿದ್ದಿದ್ದರೆ ದೇವರಿಗೆ ನೈವೇದ್ಯ ಮಾಡಿಬಿಡುತ್ತಿದ್ದೆ. ಅವನೇ ಅಲ್ಲವೇ ನಾನು ನಿನಗೆ ಬರೆದ ಮೊದಲ ಪತ್ರವನ್ನು ನಿನ್ನ ಅಪ್ಪನಿಗೆ ಕೊಟ್ಟದ್ದು, ಐಸ್ ಕ್ರೀಮ್ ಪಾರ್ಲರ್ ನಲ್ಲಿ ನಾವಿಬ್ಬರೇ ಇದ್ದದ್ದನ್ನ ಕದ್ದು ನೋಡಿ ನಿಮ್ಮ ಅಮ್ಮನಿಗೆ ಹೇಳಿದ್ದು. ಆ ಶನಿಯೊಂದು ಇಲ್ಲ ಅಂದಿದ್ದರೆ ಇಷ್ಟು ಹೊತ್ತಿಗೆ ನಾನು ಎರಡು ಮಕ್ಕಳ ತಂದೆಯಾಗಿರುತ್ತಿದ್ದೆ. ನೀನು ಸಾಕ್ಷಾತ್ ಸತಿ ಸಾವಿತ್ರಿ ಯಾಗಿರುತ್ತಿದ್ದೆ. ಹನಿಮೂನ್ ಹಾಳಾಗಿ ಹೋಗಲಿ ಆದರ್ಶ ದಂಪತಿಗಳು ಸ್ಪರ್ಧೆಗಾದರೂ ಹೋಗಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ ನೀನು ‘ಹ್ಞೂ…’ ಅನ್ನು ನಿಮ್ಮ ಅಪ್ಪನಿಗೊಂದು ಟ್ವೀಟ್ ಬಿಸಾಕಿ ಟಾಟಾ ಮಾಡೋಣ.  ಶಾಸ್ತ್ರೋಕ್ತವಾಗಿ ಮೂರು ಗಂಟು ಹಾಕ್ತೀನಿ. ಹನಿಮೂನ್ ಗೆ ಕೆಮ್ಮಣ್ಣು ಗುಂಡಿಗೆ ಹೋಗೋಣ, ಅಲ್ಲಿಂದ ಬರುವ ಹೊತ್ತಿಗೆ ಕೆಮ್ಮಣ್ಣು ತಿನ್ನುವ ಆಸೆ ಹುಟ್ಟುವಂತೆ ಮಾಡಿರ್ತೀನಿ! ನಮ್ಮ ಲವ್ ಶುರುವಾಗಿದ್ದು ಫೇಸ್‌ಬುಕ್‌ ನಲ್ಲಿ ಹಾಗಾಗಿ ಹುಟ್ಟೋ ಮಕ್ಕಳಿಗೆ ಒಂದಕ್ಕೆ ‘ಫೇಸ್’ ಎಂದೂ, ಮತ್ತೊಂದಕ್ಕೆ’ಬುಕ್’  ಎಂದೂ ಹೆಸರಿಡೋಣ ಏನಂತೀ?! ಅವಳಿ-ಜವಳಿ ಆದವು ಅಂತ ಇಟ್ಕೋ ‘ವೈ-ಫೈ’ ಅಂತ ಹೆಸರಿಡೋಣ!

       ನಿನ್ನ ಪ್ರೀತಿಯ ಕಣಕಣದಲ್ಲೂ ಅಕ್ಷರಶಃ ನಾನಿದ್ದೇನೆ ಎಂದು ನನಗೆ ಗೊತ್ತು. ನನ್ನೆಲ್ಲಾ ತಲೆಹರಟೆಗಳನ್ನು ಸಹಿಸಿಕೊಂಡು ಬಂದಿರುವ ನಿನಗೆ ಜೀ ಕನ್ನಡ ದವರಿಗೆ ಹೇಳಿ  ಕುಟುಂಬ ಅವಾರ್ಡ್ ಕೊಡಿಸ್ತೀನಿ. ನೀನು ಇತ್ತೀಚೆಗೆ ಫೇರ್ ನೆಸ್  ಕ್ರೀಮು ಬದಲಿಸಿದಂತೆ ಕಾಣುತ್ತೆ. ನಿನ್ನ ತ್ವಚೆ ಮೊದಲಿಗಿಂತಲೂ ಕೋಮಲ ಮತ್ತು ಮೃದು ; ಕಳೆದ ವೀಕೆಂಡ್ನಲ್ಲಿ ಈ ಸೌಂದರ್ಯ ರಹಸ್ಯ ನನ್ನ ಅನುಭವಕ್ಕೆ ಬಂತು ಒಂದು ಕಿಸ್ನ ಮೂಲಕ. ನೆನಪಿರಲಿ ಆ ಕ್ರೀಮಿನಲ್ಲಿ ನಾನಿದ್ದೇನೆ. ನಿನ್ನ ಮುಖದ ಕಾಂತಿಗೆ ಕಾರಣ ನಾನೆ. ಈ ಗುಟ್ಟನ್ನು ನಿನ್ನ ತಂಗಿಗೆ ಹೇಳಬೇಡ, ಹೇಳಿದರೆ ಆಗುವ ಅನಾಹುತಕ್ಕೆ ನಾನು ಕಾರಣನಲ್ಲ.

       ನಿನ್ನ ಚೆಲುವು ನನ್ನಲ್ಲಿ ಕನಸುಗಳನ್ನು ಬಿತ್ತಿದೆ, ಹೊಸ ಹೊಸ ಆಸೆಗಳನ್ನು ಚಿಗುರಿಸಿದೆ, ನನ್ನನ್ನು ನಾನೇ ಮರೆಯುವಂತೆ ಮಾಡಿದೆ. ಈ ಮರೆಯುವಿಕೆಯಿಂದ  ಎಂಥಾ ಅಪಘಾತವಾಗುತ್ತಿತ್ತೆಂದರೆ, ಒಮ್ಮೆ ಬಚ್ಚಲು ಮನೆಯಿಂದ ನೇರ ರಸ್ತೆಗೆ ಬಂದು ನಿಂತ್ತಿದ್ದೇನೆ;ಟವಲ್ ಮರೆತಿರಲಿಲ್ಲ ನಿನ್ನ (?) ಪುಣ್ಯ.  ಈ ಪ್ರೀತಿಯ ಆಟದಲ್ಲಿ ಅಂತ್ಯ ಬೇಡವೇಬೇಡ, ಸೋಲು ಗೆಲುವು ಯಾವನಿಗೆ ಬೇಕು, ಇಬ್ಬರೂ ಉಸಿರಿರುವ ವರೆಗೆ ಸೆಣಸುತ್ತಿರೋಣ. ಪ್ರೀತಿಯ ಪರಾಕಾಷ್ಠೆ ಮಿಲನದಲ್ಲಿ ಅಂತ್ಯವಾಗಬಾರದು. ಬದುಕಿನ ಅನಂತ ನಡಿಗೆಯಲ್ಲಿ ಸದಾ ಜತೆಗಿರೋಣ. ಹೆಗಲಿಗೆ ಹೆಗಲು ತಾಕಿಸುತ್ತಾ ನಡೆಯೋಣ, ಕ್ಷಿತಿಜದಂಚಿನತ್ತ ಸಾಗೋಣ.

     ಮತ್ತದೇ ಬಸವನಗುಡಿಯ ರಾಕ್ ಗಾರ್ಡನ್ ನ ಕಪ್ಪು ಕಲ್ಲಿನ ಮೇಲೆ ನಿನಗಾಗಿ ಕಾಯುತ್ತಿರುತ್ತೇನೆ, ಉಪ್ಪು-ಖಾರ-ಉಳಿ ಬೆರೆತ ಹುರಿಗಡಲೆಯೊಂದಿಗಿನ ನಿನ್ನ ಹಾಜರಿಗೆ ಕಾಯುತ್ತಿರುತ್ತೇನೆ, ತೆಳ್ಳಗಿನ, ಕುಳ್ಳಗಿನ ಹುಡುಗಿಗೊಂದು ಉಮ್ಮಾ…

*************************************************

One thought on “ಪ್ರೇಮಪತ್ರ

Leave a Reply

Back To Top