ವಾರದ ಕವಿತೆ

ಹೊಸ್ತಿನ ಹಗಲು

ಫಾಲ್ಗುಣ ಗೌಡ ಅಚವೆ

ಬಯಲು ಗದ್ದೆಯ ಹೊಸ ಭತ್ತದ ಕದರು
ರೈತರ ಬೆವರ ಬಸಿಯುವ ಕಯಿಲು
ಕಂಬಳಕಿಂಪಿನ ಪಾಂಗಿನ ಅಮಲು
ಹೊಡತಲೆ ಹಗಣದ ಕವಳದ ಸಾಲು
ಆಚರಿಸುತಿದೆ ಹೊಸ್ತಿನ ಹಗಲು.

ನೇಗಿಲ ಮೊನೆಯಲಿ ಸಸಿಬುಡ ಬೇರು
ಕದರಿನ ನಡುವಲಿ ಗಂಧದ ಹೂವು
ಮಣ್ಣಲಿ ಹುದುಗಿದ ಎರೆಹುಳ ಪಾಡು
ಹರಡಿದ ಗಿಣಿಗಳ ಹಾಡಿನ ಜಾಡು
ಆಚರಿಸುತಿದೆ ಹೊಸ್ತಿನ ಹಗಲು.

ಮಣ್ಣಿನ ಬಣ್ಣದ ಮನಸಿನ ತೆವಲು
ಕೆಂದರಕಿ ಹೂವಿನ ಕಮಾನು ಹೊಸಿಲು
ಹೂಡುವ ಎತ್ತಿನ ಅಡಸಲ ಕವಲು
ಹೂನೀರಾಡಿದ ಹೊಸ ಭತ್ತದ ತೆನೆಗಳು
ಆಚರಿಸುತಿದೆ ಹೊಸ್ತಿನ ಹಗಲು.

ಒಳಗಿನ ಅಕ್ಕಿಯ ಮಡಕೆಯ ಕೊರಳು
ಅಂಗಳದಲ್ಲಿನ ಒನಕೆಯ ಒರಳು
ತುಂಬಿದ ದನಗಳ ಹಟ್ಟಿಯ ಬಾಗಿಲು
ಮಿರಿ ಮಿರಿ ಮಿಂಚುವ ಮೋಡದ ಮುಗಿಲು
ಆಚರಿಸುತಿದೆ ಹೊಸ್ತಿನ ಹಗಲು.

ತೆನೆಗಳ ರಾಶಿಯ ಸುಗ್ಗಿಯ ಗೊಂಡೆ
ಮನೆ ಮನೆ ಹಿಗ್ಗುವ ಹೊಸ್ತಿನ ದಂಡೆ
ಹೊರಟಿದೆ ದೇವರ ಪಾಲ್ಕಿಯ ಹಿಂದೆ
ಹೊಸ ಅಕ್ಕಿಯ ಮಡಕೆಯ ಹೊತ್ತಿಹ ಮಂದೆ
ನಿಕ್ಕಿಯಾಗಿದೆ ಹೊಸ್ತಿನ ಹಗಲು.

ಭತ್ತದ ಕುತ್ರಿಯ ಸಾಲಿನ ಕನಸು
ಕಣಜವ ತುಂಬುವ ಸಾವಿರ ನನಸು
ಬಡತನ ಬಾರದ ಅನ್ನದ ಉಣಿಸು
ದೇವರಿಗೊಪ್ಪಿಸೋ ಧನ್ಯತೆ ಸೊಗಸು
ಆಚರಿಸುತ್ತಿದೆ ಹೊಸ್ತಿನ ಹಗಲು.

ಬೆವರಿನ ನೆತ್ತರ ಚೆಲ್ಲಿದ ದಿನಗಳು
ಹಿಡಿ ಅನ್ನಕೆ ದುಡಿದಿಹ ಗೇಣಿಯ ಕೈಗಳು
ಮೂಲಗೇಣಿಗೆ ಕೋರ್ಟಿನ ಕರೆಗಳು
ಒಡೆದೀರ್ ಮನೆಗಳ ಬಿಟ್ಟಿ ಕೆಲಸದ ಅಗಳು
ಕಳೆದಾಚರಿಸುತಿದೆ ಹೊಸ್ತಿನ ಹಗಲು.

ಆಲದ ಬಯಲಲಿ ಸೇರಿದ ಜನಗಳು
ದೇವಿಗೆ ಅರ್ಪಿಸಿರನ್ನದ ಅಗಳು
ಹೃನ್ಮನ ತುಂಬಿದ ಕೈಯನು ಮುಗಿದು
ಆಚರಿಸಿದರು ಹೊಸ್ತಿನ ಹಗಲು.

ಉಪಾರ ಹಂಚುವ ಹೈಲಿನ ಹಿರಿಯ
ಎಲ್ಲರೂ ಕೂಡಿಯೇ ಉಂಬರು ಬೆಳೆಯ
ಮುಂದೆಯೂ ಬದುಕನು ಕಾಯಲು ಬೇಡುತ
ಆಚರಿಸಿದರು ಹೊಸ್ತಿನ ಹಗಲು.

ಸುಗ್ಗಿಯ ಕಾಲದ ಸಂಭ್ರಮ ನೆನಪು
ಕರಿಯಕ್ಕಿಯ ಹಂಚಲು ಕೂಡಿಡೋ ಮನಸು
ಹಬ್ಬದಿ ಬಡವರ ಹಸಿವನು ನೀಗಿಸೋ
ಆಚರಿಸುತಿದೆ ಹೊಸ್ತಿನ ಹಗಲು

ಕರಿದೇವರ ಪೂಜಿಸೋ ಧನ್ಯತೆ ಸೊಗಸು
ಕುಲದೇವರ ನೆನೆಯುವ ಭಕ್ತಿಯನಿಂಪು
ಗ್ರಾಮ ದೇವರಲಿ ಪುಡಿ ಕೇಳುವ ಹುರುಪು
ಆಚರಿಸುತಿದೆ ಹೊಸ್ತಿನ ಹಗಲು.

ಹತ್ತರದಲ್ಲಿದೆ ಹಸುಗಳ ಬಿಚ್ಚುವ ಹಬ್ಬ
ಹುಲಿದೇವನ ನೆನೆದು ಕಾಯುವ ಕಬ್ಬ
ವರುಷಕೆ ಒಂದೇ ಕಚ್ಚೆ ರುಮಾಲು
ಆಚರಿಸುತಿದೆ ಹೊಸ್ತಿನ ಹಗಲು.

ಹುಲ್ಲಿನ ಮನೆಗಳ ಹೊದಿಕೆಯ ಸಾಲು
ಕಂಬಳ ಮಾಡುವ ಪಾಯಸ ಗಮಲು
ಮನೆ ಮನೆಗೊಬ್ಬನ ಕರೆಯುವ ಕರೆಯು
ಆಚರಿಸುತಿದೆ ಹೊಸ್ತಿನ ಹಗಲು.

ಸುಗ್ಗಿಯ ತುರಾಯಿ ಭತ್ತದ ಕದರು
ಒಣಗಿದ ಕೆಯ್ಯಿನ ಹುರುಪಿನ ಕೊಯ್ಲು
ಬಡತನ ಬದುಕಿನ ಕಷ್ಟದ ಬಯಲು
ಆಚರಿಸುತಿದೆ ಹೊಸ್ತಿನ ಹಗಲು.

ಅಂಬಲಿ ಮಡಕೆಯ ಅಮೃತದಸಿವು
ಬೆಣ್ಣೆ ದೊಸೆಯ ಕಡುರುಚಿದುಸಿರು
ವರುಷಕೆ ಒಂದೇ ಕಚ್ಚೆ ಅರಬಿಯ ಹಾಡು
ದುಡಿತದ ಮೈಕಪ್ಪಿನ ಅರೆಬರೆ ಪಾಡು
ಮರೆಸುವ ಸಿರಿ ಹೊಸ್ತಿನ ಹಗಲು.

******************************

5 thoughts on “ವಾರದ ಕವಿತೆ

  1. ಹೊಸ್ತಿನ ಹಗಲು ಕವನ ಕಟ್ಟಿದ ರೀತಿ ಮನತಟ್ಟಿತು.ಶುಭಾವಾಗಲಿ ತಮಗೆ

  2. ಹೊಸ್ತು ಹಬ್ಬದ ಕವಿತೆ ತುಂಬಾ ಚೆನ್ನಾಗಿದೆ ಸೂಪರ್

  3. ಚಂದದ ಕವಿತೆ…..ಒಂದು ಪ್ರದೇಶದ ಅಥವಾ ಜನಾಂಗದ ಸಂಸ್ಕೃತಿಯ ಅನಾವರಣ ಕವಿತೆಯಾದ ಬಗೆ ಚಂದ…

Leave a Reply

Back To Top