ಅಂಕಣ ಬರಹ

ಕಣ್ಣು-ಕಣ್ಕಟ್ಟು

Rare Indian folklore now in comic form, thanks to these Chennai lads - The  Hindu

ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ. 


ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ. 

Mystic Mantra: No space for 'I' in Sufi doctrine


ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. 
ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. 
ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. 
ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.
ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. 
ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. 
ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು.


ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? 
ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ. 


ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು.

****************************

ರಹಮತ್‌ ತರೀಕೆರೆ

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top