ಗಜಲ್
ರವಿ.ವಿಠ್ಠಲ. ಆಲಬಾಳ.
ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿ
ಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ.
ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆ
ತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ.
ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆ
ಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ .
ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆ
ದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ ಪ್ರೀತಿ.
ನೀ ಹೊರಟು ಹೋಗುವಾಗ ಕಣ್ಣೀರಲಿ ಎಷ್ಟೋ ಮಾತುಗಳಿದ್ದವು
ಧ್ವನಿಯಿಲ್ಲದ ಪದಗಳಲ್ಲಿ ಪ್ರೇಮವನೇ ಸುರಿದೆ ಸಾಕಿಂದಿಗೆ ಈ ಪ್ರೀತಿ.
ಮರೆತುಬಿಡಲು ಹೃದಯವಿಲ್ಲದ ದೇಹ ನನ್ನದಲ್ಲ ಕೇಳು ಪ್ರಿಯತಮೆ
ರವಿ ಹುಟ್ಟಿ ಮುಳುಗುವವರೆಗೆ ನಿನ್ನ ಗುಂಗಿದೆ ಸಾಕಿಂದಿಗೆ ಈ ಪ್ರೀತಿ.
*********************