ಕಿರುಗಥೆ
ದನ ಕಾಯೋದಂದ್ರ ಏನಮ್ಮ
ರಶ್ಮಿ .ಎಸ್.
ಅರ್ನಿ, ಹೋಂವರ್ಕ್ ಮಾಡಿಲ್ಲ…
ಇಲ್ಲಮ್ಮ…
ಮಾಡಾಂಗಿಲ್ಲ?
ಇಲ್ಲಮ್ಮ…
ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು…
ದನಾ ಕಾಯೂದಂದ್ರೇನಮ್ಮ..
ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು.
ಶಗಣಿ ಹಾಕೂದಂದ್ರ?
ಎಮ್ಮಿ ಕಕ್ಕಾ ಮಾಡೂದು..
ಅವಾಗೂ ಬಿಟ್ಟು ಹೋಗೂಹಂಗಿಲ್ಲಾ?
ಇಲ್ಲ…
ಓಹ್… ಆಸಮ್…ನಾ ಎಮ್ಮೀ ಜೊತೀಗೆ ಇರಬೇಕು.. ಹೌದು…
ಅಮ್ಮಾ.. ಹಂಗಾರ ನಾ ಎಮ್ಮೀ ಒಲ್ಲೆ… ಅಮ್ಮಾನ ಕಾಯ್ತೀನಿ. ನೀ ಎಲ್ಲಿ ಹೋದ್ರೂ ನಿನ್ನ ಹಿಂದ ಇರ್ತೀನಿ. ಆಫೀಸಿಗೆ ಬರ್ತೀನಿ. ಮನ್ಯಾಗೂ ನಿನ್ನ ಜೊತಿಗೆ ಇರ್ತೀನಿ. ಬಾತ್‌ರೂಮಿಗೂ ಬರ್ತೀನಿ… ಪ್ಲೀಸ್ ಅಮ್ಮಾ… ನಾ ಅಮ್ಮಾಗ ಕಾಯ್ತೀನಿ. ಬೇಕಂದ್ರ ಅಪ್ಪಾಗೂ ಕಾಯ್ತೀನಿ… ಸಾಲೀ ಒಲ್ಲೆ…
……