ನಿರುತ್ತರ

ಕಥೆ

ನಿರುತ್ತರ

ಚಂದ್ರಿಕಾ ನಾಗರಾಜ್  ಹಿರಿಯಡಕ

Another Woman of Low Caste in India Has Died After a Brutal Attack

ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು.

 ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ.  ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು.

 ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು‌.

 ಅವನ ಮೈಗಂಧವ  ತಂಗಾಳಿ ನನ್ನ ನಾಸಿಕಗಳಿಗೆ ಸವರಿ ಹೋದರೆ ಸಾಕು ನಾನು ಅದಾಗಲೇ ನಿಟ್ಟುಸಿರಾಗಬಲ್ಲೆ…ಅವನ ಹೆಜ್ಜೆಯ ಸಪ್ಪಳವ ತರಗೆಲೆಗಳು ಮೆತ್ತಗೆ ಚೀರಿ ಕಿವಿಗೆರೆದು ಹಾರಿದರೆ ಸಾಕು ನಾನು ಚುರುಕಾಗಬಲ್ಲೆ

 ಇತರೆಡೆ ಗಮನವ ಹರಿಸದೆ ಪಂಚೇಂದ್ರೀಯಗಳು ಕೇವಲ ಆತನ ಹಾದಿಯತ್ತ ತಮ್ಮ ಚಿತ್ತ ಹರಿಸಿವೆ. ಬರಲಿ ಆತ, ಒಂದೊಮ್ಮೆ ಎದುರು ನಿಲಲಿ…ಇರುಳಲಿ ನಿಶಾಚರ ಪ್ರಾಣಿಯಂತಾಗಿದ್ದ ಮನವು ಆತನೆದೆಯಲಿ ನಿದ್ರಿಸಿಬಿಡುವುದೋ…ಮುಂಜಾವಿನಲಿ, ಹಕ್ಕಿಗಳಿಂಚರದಿ ಬೆರೆತು ತಾನು ಹಾಡಾಗದೆ ಉಳಿದ ದನಿ ಮಾತಾಗುವುದೋ…ಅಪರಾಹ್ನದಿ ಸೂರ್ಯದೇವನ  ತಾಪದಲಿ ಮಿಂದು ಬೆಂದಿರುವ ಈ ಒಡಲು ಅವನ ಸುಕೋಮಲ ಸ್ಪರ್ಷಕೆ ತಣಿದು ಕಡಲಾಗುವುದೋ… ಮುಸ್ಸಂಜೆಯ ಈ ರಂಗು ಕೆನ್ನೆಗಂಟಿ ಲಜ್ಜೆಯ ಮಜ್ಜೆಯಾಗುವುದೋ…ಅಥವಾ ವಿರಹದ ಕುಪಿತತೆಯ ಕುರುಹಾಗುವುದೋ…

 ಹ್ಹ ಹ್ಹ! ನಿನ್ನ ಬಗೆಗೆ ನನಗೆ ಗೊತ್ತಿಲ್ಲವೇ!.. ಅವನು ಬರುತ್ತಾನೆ..ಒಂದೋ ನೀನವನನ್ನು ನೋಡಿ ಮುಖವ ಸಿಂಡರಿಸುತ್ತಿಯೇ…ಅವನು ಬಳಿ ಬಂದಂತೆ ಒಂದು ಮೋಡ ಮಗದೊಂದು ಮೋಡವ ಬೆಂಬತ್ತುವಂತೆ ನಿಮ್ಮಿಬ್ಬರ ಆಟ ನಡೆಯುತ್ತದೆ. ಮತ್ತೆ ಅವು ಸೇರಲೇ ಬೇಕಲ್ಲವೇ…ಇಲ್ಲವಾದಲ್ಲಿ, ಅವನು ಬರುತ್ತಿರುವಂತೆ ಪಂಜರದಿಂದ ಹೊರಬಿಟ್ಟ ಪಕ್ಷಿಯಂತೆ, ಬೇಡನಿಟ್ಟ ಬಲೆಗೆ ಸಿಲುಕಿದ ಜಿಂಕೆಯೊಂದ ಅದು ಯಾರೋ ಬಿಡಿಸಿದಾಗ  ಛಂಗನೆ ನೆಗೆಯುತ್ತದೆ ನೋಡು ಹಾಗೆ ನೀನು ಓಡಿ ಹೋಗಿ ಆತನ ಯೋಗ ಕ್ಷೇಮ ವಿಚಾರಿಸುತ್ತೀಯೇ, ಸೂರ್ಯ ದೇವನು ತನ್ನೊಡಲ ಸೇರಲು ಕಡಲ ಮೈಬಣ್ಣ ರಂಗೇರುವಂತೆ,  ಅವನ ಮೊಗದಲ್ಲರಳೋ ಕಿರುನಗೆ ನಿನ್ನ ಮೊಗದಲ್ಲಿ ನಸುಗೆಂಪ ಹಮ್ಮಿಸುತ್ತದೆ. ಅಲ್ಲವೇ…!? ಮನದ ಮಾತುಗಳು ಕಲ್ಪನಾ ರೂಪದಲ್ಲಿ ದೃಶ್ಯಗಳಾಗಿ ನಯನಗಳ ಮುಂದೆ ಚಲಿಸಿದಾಗ ನಾನು ಪಿಸು ನಕ್ಕು ತಣ್ಣಗೆ ಹರಿಯುತ್ತಿದ್ದ ತೊರೆಯೊಳಗೆ ಕಾಲ ಇಳಿಬಿಟ್ಟು ಹರ್ಷಿಸಲಾರಂಭಿಸಿದೆ. ಅಷ್ಟರಲ್ಲಾಗಲೆ  ಮೀನುಗಳು ನನ್ನ ಪಾದೋಪಚಾರಕ್ಕೆ ತೊಡಗಿಕೊಂಡವು. ನನ್ನೊಳಗೆ ಕಚಗುಳಿಯ ಅನುಭೂತಿ…ಮೆಲ್ಲನೆ ಬಾಗಿ ನೀರ ಬೊಗಸೆಯಲಿ ಹಿಡಿದು ನೋಡಿದೆ ನನ್ನದೇ ಪ್ರತಿಬಿಂಬ…ಕಾಯುವಿಕೆಯಲಿ ನೋಟವ ನೆಟ್ಟು  ಕಳೆಗುಂದಿರುವ ನೇತ್ರಗಳು…ಚಿಂತನೆಗಳಲಿ ಗಂಟು ಕಟ್ಟಿರುವ ಹುಬ್ಬು, ನೊಸಲು…ಒಲವ ಸುಗಂಧಕ್ಕೆ ಕಾದು ಸೋಲೊಪ್ಪಿಕೊಂಡಿರುವ ನಾಸಿಕ…ಸಾವಿರ ಮಾತುಗಳ ಆಡುವ ತವಕತೆ ಮರೆಯಾಗಿ ಮೌನಕ್ಕೆ ಶರಣಾಗಿರುವ ತುಟಿಗಳು…ನೀರುಣ್ಣದೆ ಬಾಡಿದ ನೈದಿಲೆಯಂತಾಗಿರುವ ಮುಗುಳ್ನಗೆಗೆ ಹಿಗ್ಗಬೇಕಾಗಿದ್ದ ಕೆನ್ನೆ ಗಲ್ಲಗಳು…ಹೌದು, ನಿರೀಕ್ಷೆಗಳು ಸುಡುತ್ತವೆ.

ಚಿಂತೆ, ಚಿಂತನೆಗಳನ್ನು ಸೀಳಿ ಆ ಗಾನ ಹೊಮ್ಮಿತು…ಕೊಲ್ಮಿಂಚೊಂದು ಬಂದು ಅಂಧಕಾರದಿ ಬೆವಿತಿರೋ ಜಗವ ಒಮ್ಮೆಗೆ ಬೆಳಗಿ ಹೋದಂತೆ ನನ್ನೊಳಗೆ ಭಾಸವಾಯಿತು. ಮುರಳಿಯ ಗಾನ…ಇದೇ ರಾಗಕೆ ಕಾಯುತ್ತಿದ್ದ ಕರ್ಣಗಳು ನೆಟ್ಟಗಾದವು, ಕಂಗಳು ಮಿಂಚಿದವು, ನಾಸಿಕ ಕೆರಳಿದವು, ತುಟಿಗಳು ಅರಳಿದವು…ಅತ್ತ ಹೊರಟೆ…ಹೌದು, ಇದು ಅವನದೇ ವೇಣುವಿನ ನಾದ…ಇಷ್ಟು ಕಾಯಿಸಿ, ಸತಾಯಿಸಿ ಇದೀಗ ಬಂದನೇ…ಒಡತಿ ಹಾಕುವ ಕಾಳಿಗಾಗಿ ಹಸಿವಿನಿಂದ ಕಾದು ಕೂರುವ ಪಂಜರದ ಶುಕದಂತೆ ನಾನು ಚಡಪಡಿಸಿ ಬಿಟ್ಟೆನಲ್ಲಾ…ನಾನೇ ಬಳಿ ಸಾಗಿ ಬರಲೆಂದು ಅಲ್ಲೆಲ್ಲೋ ಕುಳಿತು ಸುನಾದ ನುಡಿಸುತ್ತಿದ್ದಾನಲ್ಲಾ ಎಂದು ಹುಸಿಗೋಪ ನಟಿಸುತ್ತಾ

ನಡೆದೆ…ಇದೀಗಲೇ ಹೋಗಿ ಅವನ ಹೆಗಲಿಗೊರಗಿ ಜಗವ ಮರೆಯಬೇಕು! ಪಾದಗಳು ಅದ್ಯಾವುದೋ ಶಕ್ತಿ ಒಲಿದಿರುವಂತೆ  ಹೆಜ್ಜೆ ಇಡುತ್ತಿದ್ದವು. ಆಗಲೇ ಆ ದೃಶ್ಯ ಕಾಲುಗಳಿಗೆ ವಿರಾಮ ನೀಡಿತು.

 ಎಂತಹ ತನ್ಮಯತೆ! ಜಗವ ಮರೆಯಿಸಿ, ತಾನೂ  ಮರೆತಿರುವ ಜಗದ್ದೋದ್ಧಾರಕ..! ಇಳಿ ಸಂಜೆಯಲಿ ತಂಗಾಳಿಯ ಹಾಸುತ್ತಿರುವ ಹಸನ್ಮುಖಿ! ಜೊತೆಗೆ ಅವನ ಮಡಿಲಲಿ ತಲೆ ಇಟ್ಟು ಕಣ್ಣೆವೆಗಳ ಮುಚ್ಚಿ ಅದ್ಯಾವುದೋ ಅವ್ಯಾಹತ ಆನಂದದಿ ಮುಳುಗಿರುವ ದೇವಿ ರುಕ್ಮಿಣಿ. ಹೆಗಲು ಖಾಲಿ…! ಆದರೆ!? ಅವನ ಮನ ತುಂಬಿದೆಯಲ್ಲವೇ..?  ಹಿಂತಿರುಗಿ ನಡೆದೆ…

ನಾ ರಾಧೆ…

****************************

2 thoughts on “ನಿರುತ್ತರ

Leave a Reply

Back To Top