ನೋವೂ ಒಂದು ಹೃದ್ಯ ಕಾವ್ಯ

ಪುಸ್ತಕ ಸಂಗಾತಿ

ನೋವೂ ಒಂದು ಹೃದ್ಯ ಕಾವ್ಯ

ಕವಯತ್ರಿ ರಂಗಮ್ಮ ಹೊದೇಕಲ್ ತಮ್ಮ ಚೆಂದದ ಕೈ ಬರಹದ ಮೂಲಕ  ಈಗಾಗಲೇ ನಾಡಿನಾದ್ಯಂತ  ಚಿರಪರಿಚಿತ ಹೆಸರು. ಇವತ್ತು ಇಡೀ ಜಗತ್ತು ಕೀಲಿಮಣೆಯ ಮುಂದೆ ಪವಡಿಸಿಕೊಂಡು ಬೆರಳ ತುದಿಯಲ್ಲಿ ಕುಟು ಕುಟು ಕುಟ್ಟುತ್ತಾ ಅಕ್ಷರವ ಅರಳಿಸುತ್ತಿರುವಾಗ, ಗಣಕ ಯಂತ್ರ ಇಲ್ಲದಿದ್ದರೆ ನಾನು ಖಂಡಿತಾ ಇಷ್ಟೂ ಬರೆಯುತ್ತಿರಲಿಲ್ಲವೇನೋ ಅಂತ ಬಡಬಡಿಸುತ್ತಿರುವ ಹೊತ್ತಿನಲ್ಲಿ ಇದಕ್ಕೆಲ್ಲ ಉತ್ತರವೆಂಬಂತೆ ಹಲವಾರು ವರುಷಗಳಿಂದ  ಬರಹಗಾರ್ತಿ ಶೈಲಾ ನಾಗರಾಜ್ ಅವರ ಸಂಪಾದಕತ್ವದಲ್ಲಿ  ರಂಗಮ್ಮ ಹೊದೇಕಲ್ ರವರ  ಕೈ ಬರಹದಲ್ಲಿಯೇ ಸ್ಫುಟ ಮತ್ತು ಸುಂದರವಾಗಿ ’ ಶೈನಾ’ ಎಂಬ ಕೈ ಬರಹದ ಪತ್ರಿಕೆ ಇವತ್ತೂ ತನ್ನ ಮಾನ್ಯತೆಯನ್ನು ಉಳಿಸಿಕೊಂಡಿದೆ.  ಬೆರಳ ತುದಿಯಲ್ಲಿ ಹೂವಂತೆ ಅರಳಿಕೊಳ್ಳುವ ಅವರ ಅಕ್ಷರಗಳಿಗೆ ಮಾರು ಹೋದವರಿಲ್ಲ. ಅವರ ಕೈ ಬರಹವೇ  ಒಂದು  ಜೀವಂತ ಕವಿತೆ.

 ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ರಂಗಮ್ಮಹೊದೇಕಲ್ ಒಳ್ಳೆಯ ಕವಯತ್ರಿಯೂ.  ಮಾರುದ್ದ ಕವಿತೆಗಳ ಖಾಲಿತನದ ಮುಂದೆ  ರಂಗಮ್ಮನವರ ಮೂರೇ ಸಾಲು ಪದ್ಯಗಳು ಅದೆಷ್ಟೋ ಅರ್ಥಗಳನ್ನ ಸ್ಫುರಿಸಬಲ್ಲವು.  ಬದುಕಿನ ಇಡೀ ಸಾರವನ್ನು  ಪುಟ್ಟ ಕವಿತೆಯ ಹೃದಯದಲ್ಲಿ ತಂದಿಡಬಲ್ಲರು.  ಸಣ್ಣ ಸಣ್ಣ ಸಾಲುಗಳಲ್ಲಿ ಬದುಕಿನ ಅಚ್ಚರಿಗಳನ್ನ ಹಿಡಿದಿಡಬಲ್ಲಂತಹ ಪ್ರತಿಭಾನ್ವಿತೆ ಈಕೆ. ಅವರೇ ಹೇಳುತ್ತಾರೆ ಬರೆಯದೇ ಉಳಿದ ಸಾಲುಗಳಲ್ಲಿದೆ ಬದುಕು ಅಂತ. ಎಷ್ಟು ಹೇಳಿದರೂ ಹೇಳದೇ ಉಳಿಯುತ್ತದೆ ಬದುಕಿನೊಳಗಿನ ಕವಿತೆ.  ಈ ಅತೄಪ್ತಿಯೇ ಮತ್ತೊಂದು ಕವಿತೆಯ ಮರು ಹುಟ್ಟಿಗೆ ಕಾರಣವಾಗಿಬಿಡಲ್ಲದು.

  ಒಂದು ಮಾತಿದೆ,  ’ಅಸುಖಿಯಾಗದವ ಕವಿಯಾಗಲಾರ ’ ಅಂತ. ಆದರೆ  ಸಂಕಟವನ್ನೂ ಸೃಜನಶೀಲ ಕಲೆಯಾಗಿಸುವ  ಛಾತಿ ನಮಗಿರ ಬೇಕು ಅಷ್ಟೆ.  ರಂಗಮ್ಮ ಹೊದೇಕಲ್ ಅವರ ಪದ್ಯಗಳೂ ಕೂಡ ಅಷ್ಟೇ , ಇದೇ ಸತ್ಯವನ್ನು ಹೇಳುತ್ತವೆ.  ಬದುಕಿನ ದು:ಖ,ದುಗುಡ, ದುಮ್ಮಾನ.. ಇವುಗಳ ಬಗ್ಗೆ ಕವಯತ್ರಿ ಯಾವುದೇ  ತಕರಾರು ತೋರುವುದಿಲ್ಲ. ಎಲ್ಲಾ ನೋವುಗಳೂ ಹೃದ್ಯ ಕಾವ್ಯ ಅನ್ನುವ  ಅವರ ಅಂತರಾಳದ ಮಾತುಗಳು ನಮ್ಮನ್ನು ತಟ್ಟದೇ ಇದ್ದೀತೇ?  ಅಂತಹ ಕಾವ್ಯವೇ ಅವರ ಸಂಗಾತಿ ಆದ ಮೇಲೆ , ಕವಿತೆ ಎಲ್ಲ ನೋವುಗಳಿಗೂ ಸಾಂತ್ವಾನ  ಒದಗಿಸುವಂತಹ, ಹೆಗಲು ಕೊಡುವಂತಹ  ಆಪ್ತ ಸಖಿಯಂತೆ ಇಲ್ಲಿ ಗೋಚರಿಸುತ್ತದೆ.

  ನೋವೂ ಹೃದ್ಯ ಕಾವ್ಯ .. ಅಂತ ಹೇಳುವುದು ಅಷ್ಟು ಸಲೀಸಾ?  ಪಕ್ವ , ಮಾಗಿದ ಮನಸ್ಥಿತಿಗಷ್ಟೇ  ನೋವಲ್ಲೂ ಸುಸ್ವರ ಕೇಳಿಸ ಬಲ್ಲದು. ಇಂತಹ ಒಂದು ಪರಿಪಕ್ವ ಚಿಂತನೆಯನ್ನು ರಂಗಮ್ಮ ನವರ ಕವಿತೆಗಳಲ್ಲಿ ಕಾಣಬಹುದು.

  ಕವಯತ್ರಿ ಹೇಳುತ್ತಾರೆ, ಎಲ್ಲ ’ ಇಲ್ಲ ’ ಗಳ ನಡುವೆಯೂ ಬದುಕಿನ ಹಕ್ಕಿ ಹಾಡುತ್ತದೆ ಅಂತ.  ಬದುಕಿನ ಎಲ್ಲಾ ಭಾವಗಳು  ಹಾಡೇ ಅನ್ನುವ ಭಾವ  ಮಾತ್ರ ನಮ್ಮ ಬದುಕನ್ನು ನಾದಮಯವಾಗಿಸಬಲ್ಲದು. ನೋವು, ಅವಮಾನ, ದ್ವೇಷ, ಇವುಗಳಿಗೆ ಅವೇ ಪ್ರತ್ತ್ಯುತ್ತರ ಅಲ್ಲ,

ಖಡ್ಗಕ್ಕೆ ನೆತ್ತರೇ ಉತ್ತರವಾಗಿದ್ದರೆ

ಈ ನೆಲದಲ್ಲಿ ಯಾವ ಹೂವೂ ಅರಳುತ್ತಿರಲಿಲ್ಲ..

ಅನ್ನುವ ಅವರ ಕವಿತೆಯ ಸಾಲುಗಳು ನೋವೇ ಇಲ್ಲದಿದ್ದರೆ ಕವಿತೆಗೆಲ್ಲಿ ಜಾಗ ಅಂತ ಹೇಳುವ ಮರುದನಿಯಂತಿದೆ.

ಇನ್ನೂ ಮುಂದಕ್ಕೆ ಹೋಗಿ,

ಬದುಕನ್ನು ಪ್ರೀತಿಸುವುದೆಂದರೆ

ನೋವುಗಳನ್ನು ದಾಟುವುದಷ್ಟೇ .. ಅನ್ನುತ್ತಾರೆ.

ಈ ಸಾಲುಗಳಿಗೆ ಬೇರಾವ ವ್ಯಾಖ್ಯಾನಗಳ ಭಾರ ಬೇಡ ಅನ್ನಿಸುತ್ತದೆ. ರಂಗಮ್ಮ ಅವರ ಕವಿತೆಗಳ ತುಂಬಾ ಅಲೆದಾಡುವುದು  ನೋವು ಮತ್ತು ಅದನ್ನು ಮೀರುವ ಭಾವ. ನೋವು ಹಾಡಾಗುವುದು, ನೋವು ಕವಿತೆಯಾಗುವುದು , ಇಲ್ಲಿಯ ಕವಿತೆಗಳ ಮಾಂತ್ರಿಕ ಶಕ್ತಿ.  ಪುಟ್ಟ ಪುಟ್ಟ ಕವಿತೆಗಳು  ಇಡೀ ಬದುಕಿನ ಹೃದ್ಯ ಚಿತ್ರಣವನ್ನು  ಬಿಡಿಸಿಡುವ ಪರಿಗೆ ಮನಸು ಮೂಕಾಗುತ್ತದೆ. ಯಾಕೆಂದರೆ ಎಲ್ಲರ ಎದೆಯೊಳಗಿನ ಭಾವಗಳು ಇಲ್ಲಿ ಕವಿತೆಯಾಗಿ ಅರಳಿಕೊಂಡಿವೆ.  ಓದುತ್ತಾ ನಮ್ಮ ಮನಸೂ ಹಕ್ಕಿಯಂತಾಗಿ ಹಾರುತ್ತದೆ ಹೊಸ ಚಿಂತನೆಯ ದಿಕ್ಕಿನೆಡೆಗೆ. ಒಳ್ಳೆಯ ಕವಿತೆಯ ಉದ್ದೇಶ ಇದುವೇ ತಾನೇ?

ಎಲ್ಲಾ ಸಂಕಟಗಳು ದಾಖಲಾಗುವುದಿಲ್ಲ

ದಾಖಲೆಗಳೆಲ್ಲಾ  ಮಾನ್ಯವಾಗುವುದಿಲ್ಲ..

ಅನ್ನುವ ಅವರ ಸಾಲುಗಳು ನಮ್ಮೆದೆಯ ಬಡಿತದ ಪ್ರತಿಧ್ವನಿಯಂತಿದೆ.  ಎಲ್ಲಾ ಬೆಂದ ಹೃದಯಗಳಿಗೆ ಮುಲಾಮು ಆಗುವಂತಿದೆ ಇಲ್ಲಿಯ ಕವಿತೆಗಳು. ರಂಗಮ್ಮನವರ ಕವಿತೆಗಳೂ ಔಷಧವೇ.

ನಮ ಪಾಲಿನ ಆಕಾಶದಲ್ಲಿ

ನಾವು ಹಾಡುತ್ತಿರಬೇಕಷ್ಟೇ

ಕೊರಳಿದ್ದಲ್ಲಿ ಹಾಡುಗಳು

ಅರಳುತ್ತಿರುತ್ತವೆ.. ಎಂದು ಬರೆಯುವ ಕವಯತ್ರಿ, ಮಿತಿಯೊಳಗೇ ಮೀರಿ  ಬೆಳೆಯುವುದು ಹೇಗೆ? ನಮ್ಮ ಕಣ್ಣಳತೆಗೆ ದಕ್ಕಿದ್ದನ್ನೇ ಆಕಾಶವಾಗಿಸುವುದು ಹೇಗೆ ಎನ್ನುವುದಕ್ಕೆ ಉತ್ತರದಂತಿದೆ.  ಮಿತ ಪದಗಳಲ್ಲಿ ಅರ್ಥ ಅನಂತವಿದೆ.

ಮನುಷ್ಯರೇ ಇರದೆಡೆ

ದೇವರಿರಬಹುದಾ?

ಎನ್ನುವ ಪ್ರಶ್ನೆ ನಮ್ಮೊಳಗೂ ತಡಕಾಡುವಂತೆ ಮಾಡಿ ಬಿಡುತ್ತದೆ.  ಮಾನವೀಯತೆಯೇ ದೈವತ್ವ ಎನ್ನುವ ಕಲ್ಪನೆಯೇ ಎಷ್ಟು ಸುಂದರವಾದದ್ದು. ಗಾಯಗಳನ್ನು ಯಾವೊತ್ತೂ ತೋರಿಸಬಾರದು, ಗಾಯ ಎಷ್ಟೇ ಇರಲಿ ಬದುಕು ಕವಿತೆಯನ್ನು ದಯಪಾಲಿಸಿದರಷ್ಟೇ ಸಾಕು ಅನ್ನುವುದು ಅವರ ವಿನಮ್ರ ಪ್ರಾರ್ಥನೆ.  ಕವಿತೆ ಮಾತ್ರ ನೋವು ಮೀರುವ ಹಾದಿಯಾಗಬಲ್ಲದು ಅನ್ನುವಂತದ್ದು ಇಲ್ಲಿಯ ಕವಿತೆಗಳ ಹೂರಣ.

  ನೋವೂ ಒಂದು ಹೃದ್ಯ ಕಾವ್ಯ ಅನ್ನುವ ರಂಗಮ್ಮ ಹೊದೇಕಲ್ ರವರ ಕವನ ಸಂಕಲನ ಅವರ  ಸುಂದರ ಕೈಬರಹದಲ್ಲಿಯೇ  ಪ್ರಕಟಗೊಂಡಿರುವ ಕಾರಣ, ಇಲ್ಲಿಯ ಕವಿತೆಗಳು ಮತ್ತಷ್ಟು ಆಪ್ತವಾಗುತ್ತವೆ.  ಪುಟ್ಟ ಪುಟ್ಟ ಹನಿಯೊಳಗೆ ಇಡಿಯ ಬದುಕೇ ಅಡಕಗೊಂಡಿದೆ. ನೋವನ್ನೆಲ್ಲಾ ಹೃದ್ಯ ಕಾವ್ಯವಾಗಿಸುವ ಕಲೆಗಾರಿಕೆ ಎಲ್ಲರಿಗೂ ದಕ್ಕಲಿ. ಒಳ್ಳೆಯ ಸಂಕಲನಕ್ಕಾಗಿ ಕವಯತ್ರಿ ರಂಗಮ್ಮ ಹೊದೇಕಲ್ ರವರಿಗೆ ಅಭಿನಂದನೆಗಳು.

***************************************

    ಸ್ಮಿತಾ ಅಮೃತರಾಜ್. ಸಂಪಾಜೆ

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ

    

2 thoughts on “ನೋವೂ ಒಂದು ಹೃದ್ಯ ಕಾವ್ಯ

  1. ಶೀರ್ಷಿಕೆಯೇ ಎದೆಯಾಳಕಿಳಿಸಿಬಿಟ್ಟಿತು.ಇಬ್ಬರಿಗೂ ಪ್ರೀತಿ…

Leave a Reply

Back To Top