ಲೇಖನ
ಚಿಕ್ಕ ಪುಟ್ಟ ಸಂಗತಿಗಳಲ್ಲೇ ಸಂತೃಪ್ತಿ ಕಾಣುತ್ತಿರಿ
ಆಗ ಬದುಕು ಎಷ್ಟೊಂದು ಸುಂದರ.
ಪಲ್ಲವಿ ಪ್ರಸನ್ನ
ಬೆಳಗಾಗಲೆoದೆ ಕತ್ತಲು ,ಗೆಲ್ಲಲೆoದೆ ಸೋಲು,ನಗುವಿನ ಜೊತೆ ದುಃಖ ಇದ್ದೇ ಇರುತ್ತದೆ ,ಅದರೂ ಚಿಕ್ಕ ಪುಟ್ಟ ಸಂಗತಿಗಳಲ್ಲೇ ನಾವು ಆನಂದ ಅನುಭವಿಸುತ್ತೇವಲ್ಲ ಅದು ನಮಗೆ ಅಪ್ಪಟ ಆರೋಗ್ಯ ,ಉಲ್ಲಾಸಿತರಾಗಿಡಲು ಸಹಾಯಮಾಡುತ್ತದೆ.
ತಲೆ ಬಾಚಿಕೊಳ್ಳುವಾಗ ಉದುರಿದ ಕೂದಲ ಬಗ್ಗೆ ಕೊರಗದೇ ಇದ್ದ ಕೂದಲನ್ನು ನೇವರಿಸುತ್ತ ಅದರ ಆರೈಕೆಯಲಿ ಮಗ್ನವಾಗಿ ಖುಷಿ ಅನುಭವಿಸಬೇಕು.
ಒಂದು ಒಳ್ಳೆ ಪುಸ್ತಕವನ್ನು ಓದುವಾಗ ಅದರ ಇಂಚಿಂಚೂ ,ಪ್ರತೀ ಸಾಲನ್ನೂ ಸವಿಯುತ್ತ ಅದರಲ್ಲಿ ನಿಮ್ಮ ಪರಕಾಯ ಪ್ರವೇಶವಾಗುವಂತೆ ಓದಿದರೆ ಆ ಓದಿನಲ್ಲೂ ಒಂಥರಾ ನಿರಾಳ.ಆಕಳು ಕರೆಯುವಾಗಲೂ ಸಹ ಹಾಡುಹೇಳಿಕೊಳ್ಳುತ್ತಾ ಅದರ ಮೈ ದಡವಿ ,ಅದ್ಭುತ ಅನುಭವ ನಿಮಗಾಗುತ್ತದೆ.
ಮಗು ನೀವೊಬ್ಬರೆ ಇರುವಾಗ ಅಪ್ಪಿಕೊಂಡು ಮುದ್ದು ಮಾಡುವುದ ಅನುಭವಿಸಿ ನೋಡಿ ಅದು ಬಿಟ್ಟು ನನಗೆ ಕೆಲಸ ಇದೆ ಹೋಗೋ ಆಚೆ ಎಂದು ದೂರ ತಳ್ಳಿದರೆ ಪಾಪ ಮಗುವಿಗೂ ಬೇಸರ ನಿಮಗೂ ಕಳವಳ.ನನ್ನ ಮಗನಿಗೆ ನಾನು ಅವನು ಮಲಗಿ ನಿದ್ರಿಸುವಾಗ ಸಣ್ಣದಾಗಿ ಮುತ್ತು ಕೊಡಬೇಕೆನಿಸುತ್ತದೆ ,ನನ್ನ ಯಜಮಾನರು ಮಲಗಿರುವವನ ಏಕೆ ಮುದ್ದೀಸ್ತೀಯಾ ಅಂತ ಬಯ್ದರೂ ಮೆಲ್ಲಗೆ ಎಚ್ಚರ ಆಗದಂತೆ ಪಪ್ಪಿ ಕೊಡುತ್ತೇನೆ .ಇದರಲ್ಲೇ ಏನೋ ಒಂಥರಾ ಹಿತ .ನೀವೂ ಅನುಭವಿಸಿ ನೋಡಿ.
ಹಾಗೆಯೇ ತರಕಾರಿ ಗಿಡಕ್ಕೆ ನೀರುಣಿಸುವುದು, ಹೂವಿನ ಗಿಡದ ಆರೈಕೆಯಲ್ಲಿ ಹೂವು ನಳ ನಳಿಸುವಂತಾದರೆ ಅದರ ಸೌಂಧರ್ಯವನ್ನು ಆಸ್ವಾಧಿಸುತ್ತ ,ನಮಗೆ ಎಷ್ಟು ಸಮಯವಿದ್ದರೂ ಅದು ಕಡಿಮೆಯೇ, ಹಾಗೆಯೇ ಏನಾದರೂ ಬರೆಯುವ ಹವ್ಯಾಸವಿದ್ದರೆ ಒಂಟಿಯಾಗಿ ಕುಳಿತು ಅನುಭವಿಸಿ ಬರೆದಾಗ ನಾಲ್ಕು ಜನರು ಚೆಂದ ಬರಿದ್ಯೆ ಎನ್ನುವ ಮಾತು ನಮ್ಮಲ್ಲಿ ಸಾರ್ಥಕ್ಯ ಭಾವನೆ ,ಸ್ಫೂರ್ತಿ ಮೂಡಿಸುತ್ತದೆ .ಇಷ್ಟೆಲ್ಲದರ ಮಧ್ಯೆ ನಮಗೆ ಬೇರೆಯವರ ಸುದ್ಧಿ ಹೇಳಲು ,ಕೇಳಲು ಸಮಯವೂ ಇರುವುದಿಲ್ಲ,ಇದ್ದರೂ ಇದು ಕಾಲ ಹರಣದ ಜೊತೆ ನಮ್ಮ ನೋವಿಗೆ ಕಾರಣ.
ಯಾರೇನೆಂದರೂ ಒಂಟಿಯಾಗಿ ನಮ್ಮ ಚಟುವಟಿಕೆಯಲ್ಲಿ ತೊಡಗುವುದೇ ಉತ್ತಮ.
ಮೌನಕ್ಕಿಂತ ಸುಂದರ ಮಾತಿಲ್ಲ.ಕಾಡಿ ಬೇಡಿ ಪಡೆಯುವ ಮಿತ್ರರಿಗಿಂತ ,ನೆರೆ ಹೊರೆ ಯವರಿಗಿಂತ ನಿಸರ್ಗ ತುಂಬಾ ನಿಸ್ವಾರ್ಥಿ ,ಅದು ನಮಗೆ ಏನೆಲ್ಲ ಕೊಟ್ಟಿತು ,ಏನೂ ಬಯಸುವುದಿಲ್ಲ ,ನಿಮ್ಮದೇ ತೋಟ ಇದ್ದರೆ ಒಂದು ಸುತ್ತು ತಿರುಗಿ ಹಸಿರನ್ನು ಆಸ್ವಾದಿಸಿ .
ಇನ್ನೂ ಅಡಿಗೆ ಕೂಡಾ ಪ್ರೀತಿಯಿಂದ ಮಾಡಿ ಬಡಿಸಿ ,ಅದರಲ್ಲಿ ಮನೆಯ ಜನಗಳ ತೃಪ್ತಿ ಗಮನಿಸಿ ಇದರಿಂದ ನೀವು ಊಟ ಮಾಡದಿದ್ದರೂ ನಿಮ್ಮ ಹೊಟ್ಟೆ ತುಂಬುತ್ತದೆ.
ಸದಾ ಒಂದಲ್ಲಾ ಒಂದು ಕೆಲಸದಲ್ಲಿದ್ದರೆ ಯಾವ ಚಿಂತೆ ನೋವು ನಮಗೆ ಬಾಧಿಸುವುದಿಲ್ಲ.ಇದು ನಾನು ಕಂಡು ಕೊಂಡ ಸತ್ಯ. ಇದೇ ಅನಿವಾರ್ಯ,ಇದೇ ಸತ್ಯ,ಇದೇ ಜೀವನ ಎಂದು ನಮ್ಮ ಮನಸ್ಸಿಗೆ ನಾವೇ ಸಾಂತ್ವನಿಸುತ್ತ ಅಳುಕನ್ನು ದೂರ ಮಾಡುತ್ತಾ ಅಲ್ಲೊಂದು ಶಾಂತಿ,ಪ್ರೀತಿ ,ಸಹನೆಯ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು.ಆವಾಗ ನಿಮ್ಮ ಜೀವನ ಸದಾ ಸುಂದರವಾಗಿರುತ್ತದೆ.
*************************************