ಗಜಲ್
ಶೈಲಜಾ.ವಿ.ಕೋಲಾರ
ಊರಿಗೆ ಊರೇ ಬೆಂಕಿಯಲ್ಲಿ ಬೇಯುತ್ತಿದೆ ಕಾಯುವರಾರಿಲ್ಲಿ
ಜಾತಿಗೆ ಜಾತಿ ಜಿದ್ದಾಜಿದ್ದಿ ಶಾಂತಿ ಸೊರಗುತ್ತಿದೆ ಕಾಯುವರಾರಿಲ್ಲಿ
ಕಳೆ ಬೆಳೆದ ಹೊಲದಲ್ಲಿ ಬೆಳೆ ಬೆಳೆಯಲು ಜಾಗವುಂಟೇ
ಕೂಳಿಲ್ಲದ ಹಸುಳೆಯ ಕೂಗು ಒಣಗುತ್ತಿದೆ ಕಾಯುವರಾರಿಲ್ಲಿ
ಸ್ವಸ್ಥ ಸಂದೇಶ ಹೊತ್ತುಬಂದ ಬಿಳಿ ಪಾರಿವಾಳ ಕೆಂಪಾಗಿ ಹಾರುತ್ತಿದೆ
ಗಾಯ ಒಸರುವ ರಕ್ತಕೆ ಗಾಳಿ ಗೋಳಾಡುತ್ತಿದೆ ಕಾಯುವರಾರಿಲ್ಲಿ
ಮೇಲು ಕೀಳೆಂಬ ಬೇರು ಬಲವಾಗಿ ಮತ ಧರ್ಮ ಸಿಟಿಲೊಡೆದಿದೆ
ಊರ ಕೆರೆ ಜಾಲಿ ಮರದ ಮುಳ್ಳು ನಂಜೇರುತ್ತಿದೆ ಕಾಯುವರಾರಿಲ್ಲಿ
ಹಲವು ಹೂಗಳು ಒಂದೇ ಮಾಲೆಯಲಿ ನೋಟ ಸೆಳೆದಿವೆ
ಕುರಬುವ ಕೈಗೆ ಮಾತಿಲ್ಲದ ಶೈಲವೂ ನೋಯುತ್ತಿದೆ ಕಾಯುವರಾರಿಲ್ಲಿ
***************************