ಪವರ್ ಲೂಮ್…!
(ನೇಕಾರನ ಸ್ವಗತ)
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಹೊತ್ತು ಕೂಡ ಮೂಡದ ಹೊತ್ತಿಗೆ
ಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,
ಮೈಮುರಿವ ಆಯಾಸದಲು
ಒಂದು ದಿನ ತಪ್ಪದ ಹಾಗೆ
ಗುಂಡಿಯೊಳು ಇಳಿದರಾಯ್ತು – ಕಾಲೊದರಿ…
‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿ
ನೂಲಿಗೇ ಅರಿವೆ ನೇಯುವ ಸಿರಿ
ಲಾಳಿಗೋ ಮುಗಿಲಂತೆ ಗುಡುಗಿ
ಹರಿದೋಡುವ ತವಕ!’
ನೇಯುವುದು
ನಮಗೆ ಅಂತರಂಗದಲಿ ಒಪ್ಪಿ
ಅಪ್ಪಿದ ಕಸುಬು
ಹಗಲಿರಲಿ ಇರುಳಿರಲಿ
ಅಥವ ನಡುರಾತ್ರಿಯೇ ಇರಲಿ
ಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿ
ಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!
ಇಷ್ಟಾದರೂ ಒಂದೆರಡು ನವೆದ ಅಂಗಿ
ತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲು
ಒಳಗಿರದು ಒಂದು ಕಾಚ ಎಂದೂ!
ದಢಕ್ಕನೆ-
ನಮ್ಮ ತುತ್ತಿನ ಗಣಿ
ಮಗ್ಗದ ಎರಡಡಿ ಗಣಿ
ಒಮ್ಮೆಲೆ ಬಿದ್ದು ಮಣ್ಣಾದ ಮನೆ…
ಎಲ್ಲ ತಟಸ್ಥ ನಿಶಬ್ದ!
ಕುಟುಂಬದ ಎಲ್ಲ ಕೈಕಾಲು ಕಚ್ಚಿ
ತುಳಿದು ಮೆರೆದ ವಿದ್ಯುತ್ ತಂತಿ!
ಎಲ್ಲಿ ಯಾವ ದೇವರ ಮೊರೆ
ಜಠರದ ನಿಲ್ಲದ ಕೊರೆತದ ಕರೆಗೆ..
ಹರಿದುಹೋದ ಬಟ್ಟೆ
ಬಡ ಬದುಕು
ಕ್ಷಣ ಕ್ಷಣ ಚೂರುಚೂರಾಗಿ…
ದಾರ ತುಂಡಾಗಿ ಲಾಳಿ ನಿಂತ ಕ್ಷಣ
ಹರಿದ ದಾರಕ್ಕೆ ಮತ್ತೆ ಗಂಟು
ಅಥವಾ ಅಂಟು –
ಮತ್ತೆ ಲಾಳಿ ಪಯಣ!
ಅಂದು ಒಂದೊಮ್ಮೆ…
ಈಗ-
ನಾನೇ ನಿಂತು ಹೋದ ಘಳಿಗೆ
ಎಲ್ಲಿ ಹುಡುಕುವುದು ಈ ಲಾಳಿ
ಮುಲಾಮು ಕಷಾಯ ನನಗಾಗಿ
ಎತ್ತಿ ಕೂರಿಸಲು ನನ್ನ ಮತ್ತೆ
ಮಗ್ಗದೊಳಗೆ
ನೂಲಿನಲಿ ಹಚ್ಚಲು ಬೆಳಕಿನ ಹೊನಲು…!
**********************************
.
Excellent poem, exposes the ordeals of a poor weaver,
Super sr
Excellent, shows real life of weavers.
Many thanks to all of you who have wholeheartedly wished me…