ಅವಳ ಬದುಕಿನ ಪುಟಗಳಲ್ಲೊಂದು ಇಣುಕು…

ವಾರದ ಕಥೆ

ಅವಳ ಬದುಕಿನ ಪುಟಗಳಲ್ಲೊಂದು ಇಣುಕು…

ಟಿ.ಎಸ್.ಶ್ರವಣಕುಮಾರಿ

Close-up portrait of an artistic woman painted with red & green color. Part of face photo stock photography

ಆರನೆಯ ನಂಬರಿನ ಡಬಲ್‌ ಡೆಕರ್‌ ಬಸ್‌ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್‌ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್‌ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್‌ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, ತನ್ನ ಬ್ಯಾಗಿನಲ್ಲಿದ್ದ ಯಾವುದಾದರೊಂದು ಪುಸ್ತಕವನ್ನು ತೆರೆದು ಕುಳಿತರೆ ಮುಂದಿನ ಅರ್ಧ ಗಂಟೆ ಅದರಲ್ಲೇ ಮುಳುಗಿರುತ್ತಿದ್ದಳು. ಮತ್ತೆ ಇಹಕ್ಕೆ ಮರಳುತ್ತಿದ್ದುದು ಕ್ಯಾಶ್‌ ಫಾರ್ಮಸಿ ಸ್ಟಾಪಿಗೆ ಬಂದಾಗಲೇ. ಅವಳು ಉದ್ಯೋಗ ಮಾಡುತ್ತಿದ್ದದ್ದು ಸ್ಟೇಟ್‌ ಬ್ಯಾಂಕಿನಲ್ಲಿ. ಹಾಗಾಗಿ ಅಲ್ಲೆದ್ದು ಮಹಡಿಯಿಳಿದು ಮುಂದಿನ ಸ್ಟಾಪಿನಲ್ಲಿಳಿಯಲು ಅನುವಾಗುತ್ತಿದ್ದಳು.

ಇಷ್ಟೆಲ್ಲಾ ವಿವರ ಏಕೆ ಹೇಳುತ್ತಿದ್ದೀನೆಂದರೆ ಅವಳಷ್ಟೇ ಖರಾರುವಾಕ್ಕಾಗಿ ಮಹಡಿಯಲ್ಲಿ ಮುಂದಿನಿಂದ ಬಲಬಾಗದ ಮೊದಲನೆಯ ಸೀಟಿನಲ್ಲಿ ಕಿಟಕಿಯ ಪಕ್ಕವನ್ನು ಕಾಯ್ದಿರಿಸಿಕೊಂಡು ಸುಮಾರು ಇಪ್ಪತ್ತೇಳು, ಇಪ್ಪತ್ತೆಂಟು ವರ್ಷದ ಒಬ್ಬಾಕೆ ಕುಳಿತಿರುತ್ತಿದ್ದಳು. ಉದ್ಯೋಗಸ್ಥೆಯಾದರೂ ನಾಗರೀಕತೆ ಅವಳನ್ನು ತಬ್ಬಿದಂತೆ ಕಾಣುತ್ತಿರಲಿಲ್ಲ. ಹಳೆಯ ಕಾಲದವರಂತೆ ಅಂಚು ಸೆರಗಿನ ಸೀರೆಯನ್ನುಟ್ಟು, ಮೈತುಂಬಾ ಸೆರಗನ್ನು ಹೊದ್ದು, ಹಣೆಗೆ ಪುಡಿ ಕುಂಕುಮ, ಅರಿಶಿನ ಬಳಿದ ಕೆನ್ನೆ, ಮುಡಿಯಲ್ಲಿರುತ್ತಿದ್ದ ಹೂವು, ಗಂಭೀರ ವದನದಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯಳಂತೆ ಕಾಣುತ್ತಿದ್ದಳು. ಯಾರು ಮಹಡಿ ಹತ್ತಿದ ಸದ್ದಾದರೂ ತಿರುಗಿ ನೋಡುತ್ತಿದ್ದ ಅವಳ ಕಣ್ಣುಗಳನ್ನು ವೀಣಾ ದಿನವೂ ಸಂಧಿಸುತ್ತಿದ್ದರೂ, ಅವಳಿಂದ ಸ್ನೇಹ ಸೂಸುವ ಪ್ರತಿನಗೆಯಿರುತ್ತಿರಲಿಲ್ಲ. ಅವಳು ಕಾಯುತ್ತಿದ್ದದ್ದು ಅವನೊಬ್ಬನಿಗಾಗಿ… ಅವನಿಗಾಗಿ ಮಾತ್ರಾ… ಅವನು ಗಂಡನೆಂದು ಅನ್ನಿಸುತ್ತಿರಲಿಲ್ಲ. ಗಂಡನಾಗಿದ್ದರೆ ಒಟ್ಟಿಗೇ ಬರುತ್ತಿದ್ದರಲ್ಲ! ಅವನು ಬರುವವರೆಗೂ ಘಳಿಗೆಘಳಿಗೆಗೂ ತಿರುತಿರುಗಿ ನೋಡುತ್ತಾ, ಅವನನ್ನು ಕಂಡ ತಕ್ಷಣ ಅವಳ ದುಂಡನೆಯ ಮುಖ ಹಿಗ್ಗಿನಿಂದ ಉಬ್ಬಿ, ಅರಿಶಿನ ಬೆರೆತ ಕೆನ್ನೆಗೆ ಒಂದಿಷ್ಟು ಕುಂಕುಮವೂ ಸವರಿದಂತೆ ಕೆಂಪಾಗಿ, ಪಕ್ಕಕ್ಕೆ ಸರಿದು ತನ್ನ ಜಾಗವನ್ನು ಅವನಿಗೆ ಬಿಟ್ಟುಕೊಟ್ಟು ಕಿಟಕಿಯ ಪಕ್ಕಕ್ಕೆ ಸರಿಯುತ್ತಿದ್ದಳು. ತಕ್ಷಣವೇ ಅವರಿಬ್ಬರದೂ ಅದೇನು ನಗು, ಹರಟೆ… ಅವಳನ್ನು ನೋಡಿದರೆ ಅವಳಿಷ್ಟು ನಗಬಹುದೆಂದಾಗಲೀ, ಮಾತನಾಡಬಹುದೆಂದಾಗಲೀ ಅನ್ನಿಸುತ್ತಲೇ ಇರಲಿಲ್ಲ. ವೀಣಾ ಇಳಿಯುವವರೆಗೂ ಅವರಿಬ್ಬರೂ ಹೆಚ್ಚುಕಡಿಮೆ ಅದೇ ಲೋಕದಲ್ಲೇ ಇರುತ್ತಿದ್ದರು. ಪ್ರಾಯಶಃ ಇಬ್ಬರದೂ ಶಿವಾಜಿನಗರದ ಬಸ್‌ ನಿಲ್ದಾಣವಿರಬೇಕೇನೋ… ಅಥವಾ ಎಂ.ಜಿ.ರೋಡ್‌ ಸ್ಟಾಪೋ… ವೀಣಾ ವಾಪಸ್ಸಾಗುವಾಗಲೂ ಒಂದೊಂದು ದಿನ ತುಂಬಿದ ಬಸ್ಸಿನಲ್ಲಿ ಸಿಗುತ್ತಿದ್ದ ಅವಳು ಒಂದು ದಿನವೂ ಸಹಪ್ರಯಾಣಿಕರಲ್ಲಿ ವಿನಿಮಯವಾಗಬಹುದಿದ್ದ ಒಂದು ಪರಿಚಿತ ನಗೆಯನ್ನೂ ಬೀರದೆ, ತನ್ನ ಲೋಕದಲ್ಲೇ ಮುಳುಗಿದಂತೆ ಕುಳಿತಿದ್ದು ನಾಲ್ಕನೇ ಬ್ಲಾಕಿನ ಸ್ಟಾಪಿನಲ್ಲಿ ಇಳಿದು ಯಾರನ್ನೂ ನೋಡದೆ ತನ್ನ ಪಾಡಿಗೆ ತಲೆತಗ್ಗಿಸಿಕೊಂಡು ನಡೆದುಬಿಡುತ್ತಿದ್ದಳು. ಇಷ್ಟು ವಿರಾಗಿಯಂತಿರುವ ಇವಳು ಯಾರನ್ನಾದರೂ (ಅವನನ್ನು?) ಅಥವಾ ಇವಳನ್ನು ಯಾರಾದರೂ ಪ್ರೀತಿಸಲು ಸಾಧ್ಯವೇ?! ಹಾಗಾದರೆ ಪ್ರೀತಿಯಲ್ಲಿರುವ ಆಕರ್ಷಣೆ ಇನ್ನೆಂತಹುದು ಎಂದು ಎಷ್ಟೋ ವೇಳೆ ವೀಣಾಳಿಗೆ ಅಚ್ಚರಿಯಾಗುತ್ತಿತ್ತು. ಏಕೆಂದರೆ ವೀಣಾ ಪ್ರೀತಿಸಿದ್ದು ಮದುವೆಯಾದ ಮೇಲೆ ಗಂಡನನ್ನು. ಇಂತಹ ಪ್ರೀತಿ, ಪ್ರೇಮ ಅನುಭವಕ್ಕೆ ಬರುವ ಮೊದಲೇ ಮದುವೆಯಾಗಿತ್ತು ಹಾಗೆಯೇ ಅವಳ ಈ ನಡತೆ ಅವಳಿಗೊಂದು ನಮೂನೆಯ ಕುತೂಹಲವನ್ನು ಹುಟ್ಟಿಸುತ್ತಿತ್ತು.

ಒಂದಷ್ಟು ದಿನಗಳ ನಂತರ ವೀಣಾಗೆ ಅದೇ ಬಸ್ಸಿನಲ್ಲಿ ಹೊಸತಾಗಿ ತನ್ನದೇ ಕಾಂಪೌಡಿನ ಬ್ರ್ಯಾಂಚ್‌ ಆಫೀಸಿಗೆ ವರ್ಗವಾಗಿ ಬಂದ ಮೀರಾಳ ಪರಿಚಯವಾಗಿ ಅಂದಿನಿಂದ ಇಬ್ಬರೂ ಆ ಮೂರನೆಯ ಸೀಟಿನ ಖಾಯಂ ಪ್ರವಾಸಿಗರಾದರು. ಮುಂದಿನ ಸೀಟಿನವಳು ಗೆಳೆಯನಿಗಾಗಿ ಜಾಗ ಕಾದಿರಿಸುತ್ತಿದ್ದಂತೆ ಇವಳೂ ಪಕ್ಕದ ಜಾಗವನ್ನು ಕಾದಿರಿಸಲಾರಂಭಿಸಿದಳು. ಮೀರಾ ಒಳ್ಳೆಯ ಮಾತುಗಾರಳು, ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಚುರುಕುಗಣ್ಣಿನ ಹುಡುಗಿ. ಒಂದೇ ಕಾಂಪೌಡಿನಲ್ಲಿ ಕೆಲಸ ಮಾಡುತ್ತಿದ್ದರೆಂದ ಮೇಲೆ ಮಾತಿನ ಸರಕಿಗೇನು ಕಡಿಮೆ? ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ತನ್ನ ಶಾಖೆಯಲ್ಲಿ ನಡೆಯುತ್ತಿದ್ದ ಹಲವಾರು ಲವ್‌ ಪ್ರಕರಣಗಳ ಬಗ್ಗೆ ಅವಳಿಗೆ ಏನೋ ಆಕರ್ಷಣೆ. ಅವರ ಚಲನವಲನಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದು ತುಂಬು ಉತ್ಸಾಹದಿಂದ ದಿನಕ್ಕೊಂದು ಕತೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದಳು. ʻಮದುವೆಯಾದʼ ʻಆಗದಿರುವʼ ಫರಕು ಅವರಿಬ್ಬರ ನಡುವೆ ಹೊರಟುಹೋಗಿ ಅರ್ಧ ಗಂಟೆಯ ಪ್ರಯಾಣವನ್ನು ಇಬ್ಬರೂ ಖುಷಿಯಿಂದ ಕಳೆಯುತ್ತಿದ್ದರು. ಸಂಜೆ ವಾಪಸ್ಸು ಬರುವ ವೇಳೆ ದಿನವೂ ಹೊಂದಾಣಿಕೆಯಾಗದೆ ಮೀರಾ ಒಮ್ಮೊಮ್ಮೆ ಮಾತ್ರಾ ಸಿಗುತ್ತಿದ್ದಳು. ಆದರೆ ಸಂಜೆಯ ಬಸ್ಸಿನಲ್ಲಿ ನಿಲ್ಲಲು ಜಾಗ ಸಿಕ್ಕುವುದೇ ಕಷ್ಟವಾಗಿದ್ದಾಗ ಮಾತಿಗೆ ಜಾಗವೆಲ್ಲಿ? ಅದೇನಿದ್ದರೂ ಬೆಳಗಿನ ಸರಕು!

ಒಂದು ದಿನ ಇದ್ದಕ್ಕಿದ್ದ ಹಾಗೆ ಮೀರಾ ವೀಣಾಳ ಗಮನವನ್ನು ಮುಂದಿನ ಸೀಟಿನ ಜೋಡಿಯೆಡೆ ಸೆಳೆದು “ಅವರಿಬ್ಬರನ್ನು ನೋಡಿದ್ರೆ ಆಶ್ಚರ್ಯ ಆಗತ್ತಲ್ವಾ?” ಅಂದಳು “ಬಿತ್ತಾ ನಿನ್ನ ಕಣ್ಣು ಅವರ ಮೇಲೂ?” ಎಂದಳು ವೀಣಾ ನಗುತ್ತಾ. “ನನಗೊಬ್ಬಳಿಗೇ ಏನು, ಈ ಮಹಡಿಗೆ ದಿನವೂ ಹತ್ತಿ ಬರೋ ಎಲ್ಲರ ಕಣ್ಣೂ ಅವರ ಮೇಲೇ ಇರತ್ತೆ. ಇಂಟರೆಸ್ಟಿಂಗ್‌ ವಿಷ್ಯ ಏನೂಂದ್ರೆ ಬ್ಯಾಂಕಲ್ಲಿ ಅವರವರ ಪಾರ್ಟ್ನರ್‌ಗಳನ್ನ ಖುಷಿ ಪಡ್ಸೋಕೆ ದಿನಕ್ಕೊಂದು ಥರಾ ವೇಷ, ಮೇಕಪ್ಪು ಮಾಡ್ಕೊಂಡು ಬಂದು ಒಬ್ಬರ ಮುಂದೊಬ್ಬರು ಸುಳಿದಾಡಿ, ಕಣ್ಣಲ್ಲೇ ಮುದ್ದಾಡೋದಾದ್ಮೇಲೆ ಅವರ ದಿನ ಶುರುವಾಗತ್ತೆ. ಆದ್ರೆ ಇವಳನ್ನ ನೋಡಿದ್ರೆ ಗೌರಮ್ಮನ ತರಹ ಅವರಮ್ಮಂದೋ, ಅಜ್ಜೀದೋ ಸೀರೆ ಉಟ್ಕೊಂಡು ಉರುಳು ಹಾಕ್ಕೊಳೋ ಹಾಗೆ ಸೆರಗು ಹೊದ್ಗೊಂಡು, ಎಣ್ಣೆ ಮೆತ್ಕೊಂಡು ಬಿಗಿಯಾಗಿ ಜಡೆ ಹಾಕ್ಕೊಂಡು, ಬುಡ್ಡಮ್ಮನ ತರಹ ಮಲ್ಲಿಗೆ ಬಿಡು, ಶಾವಂತಿಗೆ, ಡೇರಾ ಬೇಕಾದ್ರೂ ಮುಡ್ಕೊಂಡು ನಮ್ಮೂರಲ್ಲಿ ಶುಕ್ರವಾರದ ಮುತ್ತೈದೇರು ಅಂತ ಪ್ರತಿ ಮಂಗಳವಾರ, ಶುಕ್ರವಾರ ಸಾಯಂಕಾಲ ದೀಪ ಹಚ್ಚೋ ಹೊತ್ಗೆ ಮನೆಮನೆಗೆ ಬುಟ್ಟಿ ಎತ್ಕೊಂಡು ಕೆಲವು ಹೆಂಗಸ್ರು ಬರೋವ್ರು… ಒಂಥರಾ ಮರ‍್ಯಾದೆಯಿಂದ ಅಕ್ಕಿ ಬೇಡೋ ರೀತಿ ಅದು, ಅವರ ಜ್ಞಾಪಕ ಬರತ್ತೆ ನೋಡು. ಅವ್ನು ಪರ‍್ವಾಗಿಲ್ಲ ತಕ್ಕಮಟ್ಟಿಗೆ ಬರ‍್ತಾನೆ. ಆದ್ರೆ ಈ ಲವ್‌ ಹೇಗೇಂತ” ಅಂದಳು. “ಹೌದು ಅವಳಿರೋ ರೀತಿಗೂ, ಈ ಲವ್ವಿನ ರೀತಿಗೂ ಯಾಕೋ ಹೊಂದಾಣಿಕೆಯಾಗಲ್ಲ ಅಂತ ನಂಗೂ ಅನ್ಸತ್ತೆ” ವೀಣಾನೂ ಒಪ್ಪಿಕೊಂಡಳು.

“ಅವಳು ಅಲ್ಲಿ ಓರಿಯೆಂಟಲ್‌ ಬಿಲ್ಡಿಂಗ್‌ ಪಕ್ಕದ ಕ್ರಾಸಲ್ಲಿ ಒಂದು ಸಣ್ಣ ಸ್ಕೂಲಿದೆ ನೋಡು, ಅಲ್ಲಿ ಟೀಚರ್‌ ಅನ್ಸತ್ತೆ, ಮೊನ್ನೆ ಕೆ. ಸಿ. ದಾಸ್‌ಗೆ ಹೋಗಿದ್ದಾಗ ಅವ್ಳನ್ನ ಆ ಸ್ಕೂಲಿನ ಕಾಂಪೌಂಡಲ್ಲಿ ಮಕ್ಕಳ ಜೊತೆ ನೋಡ್ದೆ. ಅವ್ನು ಎಲ್.ಐ.ಸಿ. ಆಫೀಸಲ್ಲಿದಾನೆ. ಹೋದ್ವಾರ ನಮ್ಮ ರಂಜನಿ ಮೇಡಂ ಅಲ್ಲಿ ಏನೋ ಕೆಲ್ಸ ಇದೆ, ಸ್ವಲ್ಪ ಜೊತೆಗೆ ಬಾ ಅಂತ ಕರ‍್ಕೊಂಡು ಹೋಗಿದ್ರು. ಡಿಸ್ಪ್ಯಾಚ್‌ ಸೆಕ್ಷನ್‌ನಲ್ಲಿ ಇದಾನೆ. ಮೇಡಂ ಅವ್ರಿಗೆ ಬೇಕಾಗಿದ್ದ ಲೆಟರ‍್ನ ಅವನತ್ರಾನೆ ಎಂಟರ್‌ ಮಾಡಿಸ್ಕೊಂಡು ತಂದ್ರು” ಎಂದು ಅವರಿಬ್ಬರ ಉದ್ಯೋಗ ಚರಿತ್ರೆಯನ್ನೂ ಒಂದು ದಿನ ಬಿಚ್ಚಿಟ್ಟಳು ಮೀರಾ.

ಮಧ್ಯಾಹ್ನದ ಲಂಚ್‌ ಅವರ್‌ನಲ್ಲಿ ಆಗೀಗ ಏನೋ ಕೆಲಸದ ಮೇಲೆ ಚರ್ಚ್‌ ಸ್ಟ್ರೀಟಿನ ಕಡೆಗೆ ಹೋದಾಗ ಅವರಿಬ್ಬರೂ ಪೆಟ್ರೋಲ್‌ ಬಂಕಿನ ಪಕ್ಕದಲ್ಲಿರುವ ಕುಲ್ಫಿ ಕಾರ್ನರಿನಲ್ಲಿ ಕುಲ್ಫಿಯನ್ನು ಮೆಲ್ಲುತ್ತಿರುವುದನ್ನೋ, ಮೂಲೆಯ ಗಣೇಶ ಭವನದಲ್ಲಿ ಮಸಾಲೆದೋಸೆಯನ್ನು ತಿನ್ನುತ್ತಿರುವುದನ್ನೋ, ಈ ಮೂಲೆಯಲ್ಲಿ ಎಳೆನೀರು ಹೀರುವುದನ್ನೋ, ಬಾಳೆಹಣ್ಣನ್ನು ಗುಳುಂ ಮಾಡುತ್ತಿರುವುದನ್ನೋ ಇಬ್ಬರೂ ಯಾವಾಗಲಾದರೂ ನೋಡಿದ್ದನ್ನು, ಮರೆಯದೆ ಮರುದಿನ ಬೆಳಗ್ಗೆ ಅದನ್ನು ಹಂಚಿಕೊಂಡಿದ್ದರು. ಪ್ರಾಯಶಃ ಮೊದಲ ಸೀಟಿನಲ್ಲೇ ಕುಳಿತಿರುತ್ತಿದ್ದುದರಿಂದ ಇರಬಹುದು, ಬೇರೆಯವರು ತಮ್ಮನ್ನು ಹೀಗೆ ಗಮನಿಸುತ್ತಿರುತ್ತಾರೆ ಅನ್ನುವುದು ಅವರ ಗಮನಕ್ಕೆ ಬಂದಿರಲಿಲ್ಲವೇನೋ… ಪ್ರೀತಿಯಲ್ಲಿ ಮುಳುಗಿರುವವರಿಗೆ ಜಗತ್ತಿನ ಬಗ್ಗೆ ಗಮನವೇಕೆ?!

ಪ್ರಿಯ ಓದುಗ, ಇದು ಹೀಗೇ ನಡೆದಿದ್ದರೆ ನಾನು ಈ ಕತೆ ಹೇಳುವ ಅಗತ್ಯವೇ ಇರಲಿಲ್ಲವೇನೋ. ಹೀಗೆ ಏನೋ ಒಂದು ರೀತಿ ವಿಚಿತ್ರವಾಗಿ ನಮಗೆ ಅನ್ನಿಸುತ್ತಿದ್ದರೂ, ಅವರಿಬ್ಬರೂ ಮದುವೆಯಾಗಿ ಸುಖವಾಗಿ ಬಾಳನ್ನು ನಡೆಸಿದರು ಎಂದು ಕತೆ ಮುಗಿಯುತ್ತಿತ್ತಷ್ಟೇ. ಹೀಗೇ ಎಷ್ಟೋ ತಿಂಗಳುಗಳು ಕಳೆದ ಮೇಲೆ ಒಂದಷ್ಟು ದಿನ ಅವರಿಬ್ಬರೂ ಕಾಣಲೇ ಇಲ್ಲ. ದಸರಾ ರಜೆಯಿಂದ ಸ್ಕೂಲಿಲ್ಲವೇನೋ, ಹಾಗೇ ಕಂಡಿಲ್ಲ ಎಂದು ಇಬ್ಬರೂ ಗೆಳತಿಯರೂ ಅಂದುಕೊಂಡರು. ಆದರೆ ಹಬ್ಬ ಮುಗಿದು ವಾರವಾದರೂ ಪತ್ತೆಯಿಲ್ಲ. ʻಏನಾಯಿತು ಈ ಪ್ರೇಮ ಪಕ್ಷಿಗಳಿಗೆ?ʼ ಎಂದು ಇಬ್ಬರೂ ಅಂದುಕೊಳ್ಳುತ್ತಿರುವಾಗಲೇ ಒಂದು ಬೆಳಗ್ಗೆ ಆಕೆ ಮೊದಲ ಸೀಟಿನಲ್ಲಿ ಕಾಣಿಸಿಕೊಂಡಳು. ತಕ್ಷಣ ಮೀರಾ “ಆಹಾ…  ಲವ್‌ ಬರ್ಡ್ಸ್‌ ಆರ್‌ ಬ್ಯಾಕ್‌ ಅಗೇನ್” ಎಂದು ಖುಷಿಪಟ್ಟಳು. ಆದರೆ ಆಕೆ ಯಾಕೋ ತಿರುತಿರುಗಿ ನೋಡುತ್ತಾ ಅವನನ್ನು ಕಾಯುತ್ತಿರಲಿಲ್ಲ. ಬಸ್‌ ಹೊರಟರೂ ಅವನ ಪತ್ತೆಯಿಲ್ಲ. “ಏನಿದು, ಯಾಕೆ ಬಂದಿಲ್ಲ?” ಎಂದ ಮೀರಾನಿಗೆ “ಅವನಿಗೇನಾದ್ರೂ ಹುಷಾರಿಲ್ಲವೇನೋ. ಅವಳೂ ಸಪ್ಪಗಿದ್ದ ಹಾಗಿದೆ. ಒಂದೆರಡು ಸಲ ಕಣ್ಣೊರೆಸಿಕೊಂಡಳು ಕೂಡಾ, ಕಿಟಕಿಯತ್ತಲೇ ನೋಡುತ್ತಿದ್ದಾಳೆ ನೋಡು” ಅಂದಳು ವೀಣಾ. “ಹಾಗಂತೀಯಾ, ಪಾಪ ಲವ್‌ ಬ್ರೇಕಾಗಿಲ್ದಿದ್ರೆ ಸಾಕು. ಅವ್ನು ಬೇಗ ಹುಷಾರಾಗಿ ಬರಲಿ” ಎಂದಳು ಮೀರಾ. ಒಪ್ಪಿ ತಲೆಯಾಡಿಸಿದಳು ವೀಣಾ.

ಒಂದು ವಾರವಾಯಿತೇನೋ… ಇದೇ ಕತೆ ಮುಂದುವರೆಯಿತು. ಗೆಳತಿಯರಿಬ್ಬರೂ ಪಾಪ ಅವನು ಬೇಗ ಬರಲಿ, ಇವಳ ದುಃಖ ನೋಡಕ್ಕಾಗಲ್ಲ ಎಂದು ದಿನದಿನವೂ ಹಾರೈಸಿದರು. ಅದೊಂದು ದಿನ ಇನ್ನೇನು ಬಸ್ಸು ಹೊರಡುವ ಹೊತ್ತಿಗೆ “ಇಲ್ಲಿ ಸೀಟಿದೆ ಬಾ” ಎನ್ನುತ್ತಾ ಮೆಟ್ಟಿಲನ್ನು ಹತ್ತಿದ ಗಂಡಸಿನ ದನಿ ಕೇಳಿತು. ಪರಿಚಿತವೆನಿಸಿದ ದನಿ ಕೇಳಿದ ತಕ್ಷಣ ಇಬ್ಬರೂ ತಿರುಗಿದರು. ಅದೇ ಅವನೇ! ಮದುವೆಯಾಗಿರಬೇಕು… ಯಾರೋ ತರುಣಿಯ ಕೈಹಿಡಿದುಕೊಂಡು ಹತ್ತಿಬಂದು ಎರಡು ಸೀಟಿನ ಹಿಂದೆ ಖಾಲಿಯಿದ್ದ ಸೀಟಿನಲ್ಲಿ ಕುಳಿತ. ಅವನ ಕತ್ತಿನಲ್ಲಿ ಮಿಂಚುತ್ತಿದ್ದ ಹೊಸ ಚೈನು, ಬೆರಳಲ್ಲಿದ್ದ ಹೊಸ ಚಿನ್ನದುಂಗುರ, ಅವಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಅಂತೆಯೇ ಬೆಳಗುತ್ತಿದ್ದ ಅವಳ ಮುಖ ಅವನ ಹೊಸ ಕತೆಯನ್ನು ತಾನೇ ಹೇಳಿತು. ಅವರ ಸಲ್ಲಾಪ ಆರಂಭವಾಯಿತು. ವೀಣನಿಗೆ ಕೋಪವುಕ್ಕಿ “ಹೀಗ್ಮಾಡೋಕೆ ಹೇಗ್‌ಮನಸ್ಬರತ್ತೆ? ಆ ಮುಠ್ಠಾಳಂಗೆ ಮುಂದಿನ ಸೀಟಿನಲ್ಲಿ ಅವ್ಳು ಕೂತಿದಾಳೇಂತಾನೂ ಅನ್ನಿಸ್ತಿಲ್ವಲ್ಲ” ಎಂದಳು ಮೆಲುದನಿಯಲ್ಲಿ. “ಪಾಪಿ, ಕಟುಕ ಅವ್ನು” ಮೀರಾನೂ ಜೊತೆಗೂಡಿದಳು. ಯಾವುದೇ ರೀತಿಯಲ್ಲಿ ಅವರಿಬ್ಬರ ಕತೆಯಲ್ಲಿ ಇವರಿಬ್ಬರ ಪಾತ್ರವಿರದಿದ್ದರೂ, ಇಬ್ಬರ ಮನಸ್ಸೂ ವ್ಯಗ್ರವಾಗಿತ್ತು. ಕೆಲವು ದಿನಗಳ ನಂತರ ಆ ಹೆಂಗಸು ಬರುವುದನ್ನೇ ಬಿಟ್ಟಳು… ಇವನು ತನ್ನ ಹೊಸ ಹೆಂಡತಿಯೊಡನೆ ಯಾವಾಗಲಾದರೂ ಬಸ್ಸಿನಲ್ಲಿ ಕಂಡು ಮೀರಾ, ವೀಣಾರಿಗೆ ಅವಳನ್ನು ನೆನಪಿಸುತ್ತಿದ್ದ ಅಷ್ಟೇ. ಇಲ್ಲವಾದರೆ ಇಬ್ಬರಿಗೂ ʻಅವಳʼ ನೆನಪು ಮಾಸಿದೆ.

*

ಹೀಗೇ ಒಂದೆರಡು ವರ್ಷಗಳೇ ಕಳೆದಿತ್ತೇನೋ. ಮೀರಾಗೂ ಮದುವೆಯಾಗಿ ಅವಳು ಕೃಷ್ಣರಾಜಪುರಕ್ಕೆ ವರ್ಗ ತೆಗೆದುಕೊಂಡಿದ್ದಾಳೆ. ವೀಣಾಗೆ ಫೋನಿನಲ್ಲಿ ಮಾತ್ರಾ ಆಗೀಗ ಸಿಗುತ್ತಾಳೆ. ವೀಣನಿಗೂ ಮಗುವಾಗಿ ಅವಳು ಮೊದಲಿನಂತೆ ಅದೇ ಬಸ್ಸನ್ನು ಹಿಡಿಯುವುದಿಲ್ಲ. ಸಿಕ್ಕಿದ ಬಸ್‌ ಹಿಡಿದು ಮಗುವನ್ನು ಬೇಬಿ ಸಿಟಿಂಗಿಗೆ ಬಿಟ್ಟು ಅಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಆಫೀಸು ತಲಪುತ್ತಾಳೆ. ಇದೇ ದಿನಚರಿಯಲ್ಲಿ ಒಂದು ದಿನ ಅವಳ ಮದುವೆಯ ನಾಲ್ಕನೆಯ ವಾರ್ಷಿಕೋತ್ಸವ ಬಂದು, ಮಗುವಿರುವುದರಿಂದ ದೂರವೆಲ್ಲೂ ಹೋಗದೆ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದರಾಯಿತೆಂದು ಗಂಡ ಹೆಂಡಿರಿಬ್ಬರೂ ಹೋದರು. ಅಂದು ಒಳ್ಳೆಯ ಮದುವೆ ಮುಹೂರ್ತವೇನೋ ದೇವಸ್ಥಾನದಲ್ಲಿ ಮೂರ‍್ನಾಲ್ಕು ಮದುವೆಗಳು ನಡೆಯುತ್ತಿದ್ದು ದೇವಸ್ಥಾನ ಗಿಜಿಗಿಜಿಯೆನ್ನುತ್ತಿತ್ತು. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೇಗೋ ದರ್ಶನ ಮುಗಿಸಿಕೊಂಡು ಬಂದು ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳಲು ಕುಳಿತರು. ಮದುವೆಯಾದ ಜೋಡಿಗಳು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಾ ದೇವರ ದರ್ಶನಕ್ಕೆ ಸಾಗುತ್ತಿದ್ದರು. ಅದರಲ್ಲೊಂದು ಜೋಡಿಯನ್ನು ನೋಡಿದ ತಕ್ಷಣ ವೀಣಾ “ಅರೇ ಅವಳು…” ಎಂದಳು ಜೋರಾಗಿ. “ಅವಳು ಅಂದ್ರೆ ಯಾರು? ನಿಂಗೊತ್ತಾ?” ಗಂಡ ಮಹೇಶ ಕೇಳಿದ. ಉತ್ತರಿಸದೆ ಆ ಜೋಡಿಯನ್ನು ನೋಡುತ್ತಿದ್ದ ವೀಣಾಳ ಕಣ್ಣುಗಳು ತಂತಾನೇ ತುಂಬಿಕೊಂಡವು. ವರ ಖಂಡಿತವಾಗಿ ಐವತ್ತು ವರ್ಷ ದಾಟಿದವನು. ಪೇಟದ ಅಂಚಿನಿಂದ ಬಿಳಿಕೂದಲು ಧಾರಾಳವಾಗಿ ಕಾಣುತ್ತಿದೆ… ಮುಖದ ಮೇಲೆ ಸುಕ್ಕುಬಂದು ಮುದಿಕಳೆ ಢಾಳಾಗಿದೆ… ಅಸಹನೆಯಿಂದ ಇವಳ ಕೈ ಹಿಡಿದು ಎಳೆದುಕೊಂಡು ಹೋಗುತ್ತಿದ್ದಾನೆ… ಕಟುಕನ ಹಿಂದೆ ಸಾಗುತ್ತಿರುವ ಕುರಿಯಂತೆ, ದಬ್ಬಿಸಿಕೊಂಡವಳಂತೆ ಇವಳು ಅವನ ಹಿಂದೆ ಹೋಗುತ್ತಿದ್ದಾಳೆ. ಪಕ್ಕದಲ್ಲಿ ಇಬ್ಬರು ಮುದುಕಿಯರು ಏನೋ ಹೊರೆ ಕಳೆದ ಸಂತಸದಲ್ಲಿರುವಂತೆ ಮುಖದಲ್ಲಿ ನಗುವನ್ನು ಸೂಸುತ್ತಾ ಆಗಾಗ ಗೋಪುರಕ್ಕೆ ಕೈಮುಗಿಯುತ್ತಾ ಸಾಗುತ್ತಿದ್ದಾರೆ…

ಕಣ್ಣೀರು ತುಂಬಿದ ಹೆಂಡತಿಯನ್ನು “ಏನಾಯ್ತು? ಆಕೆ ನಿಂಗೆ ಗೊತ್ತಾ” ಎಂದು ಕೇಳಿದ ಮಹೇಶ. “ಹೂಂ ಗೊತ್ತು, ಆದ್ರೆ… ಗೊತ್ತಿಲ್ಲ ಕೂಡಾ…” ಅಂದವಳು ಅಳಲು ಶುರುಮಾಡಿದ ಮಗುವನ್ನೆತ್ತಿಕೊಂಡು “ಇನ್ನು ಹೊರಡೋಣ” ಎಂದು ಕಣ್ಣೊರೆಸಿಕೊಂಡು ಮೇಲೆದ್ದಳು. ಮರಳುವ ದಾರಿ ಹೆಚ್ಚುಕಡಿಮೆ ಮೌನವಾಗಿಯೇ ಸಾಗಿತ್ತು. ಎಷ್ಟು ಪ್ರಯತ್ನ ಪಟ್ಟರೂ ತಲೆತಗ್ಗಿಸಿಕೊಂಡು ಕುರಿಯಂತೆ ಹೋಗುತ್ತಿದ್ದ ಅವಳು ವೀಣಾಳ ಕಣ್ಣಿನಿಂದ ಮರೆಯಾಗಲೇ ಇಲ್ಲ. ಮರುದಿನ ಮೀರಳೊಂದಿಗೆ ಹಂಚಿಕೊಂಡಳು. ಇಬ್ಬರೂ ಒಂದಷ್ಟು ಹೊತ್ತು ʻಪಾಪ, ಹೀಗಾಗಬಾರದಿತ್ತುʼ ಎಂದು ಮಾತಾಡಿಕೊಂಡರು. ಕಾಲ ಕ್ರಮೇಣ ಆ ದೃಶ್ಯವೂ ಮರೆಯಾಗಿ ಹೋಯಿತು.

*

ಇದಾಗಿ ಐದಾರು ವರ್ಷಗಳು ಕಳೆದಿವೆ. ಇನ್ನೊಂದು ಮಗುವಾದ ಮೇಲೆ ವೀಣಾನೂ ಮನೆಗೆ ಹತ್ತಿರವೆಂದು ಬನಶಂಕರಿಗೆ ವರ್ಗಾವಣೆ ತೆಗೆದುಕೊಂಡಿದ್ದಾಳೆ. ಆ ದಿನ ಬೆಳಬೆಳಗ್ಗೆಯೇ ತನ್ನ ಜಾಗದಲ್ಲಿ ಕುಳಿತು ಬೇಕಾಗುವ ಸರಕನ್ನೆಲ್ಲಾ ಜೋಡಿಸಿಕೊಳ್ಳುತ್ತಿದ್ದಾಗ ಅಕೌಂಟೆಂಟರು ಕರೆದರು. “ಏನ್ಸಾರ್?” ಎಂದು ತಿರುಗಿದ ವೀಣಾಳಿಗೆ ಅವರ ಜೊತೆಗೆ ನಿಂತಿದ್ದ ʻಅವಳʼನ್ನು ಕಂಡು ಅಚ್ಚರಿಯಾಗಿ ಅವಳ ಮುಖವನ್ನೇ ನೋಡುತ್ತಾ ನಿಂತಳು. ಅವಳೇ… ಆದರೆ ಹಣೆಯಲ್ಲಿ ಕುಂಕುಮವಿಲ್ಲ, ತಲೆಯಲ್ಲಿ ಹೂವಿಲ್ಲ, ಸೆರಗನ್ನು ಅಂದಿನಂತೆಯೇ ಮೈತುಂಬಾ ಸುತ್ತಿಕೊಂಡಿದ್ದಾಳೆ. “ಮೇಡಂ, ಇವರು ಸಾವಿತ್ರಿ ಅಂತ. ನಮ್ಮ ಹೆಡ್‌ ಆಫೀಸಿನಲ್ಲಿ ವೆಂಕಟೇಶ್‌ ಅಂತ ಆಫೀಸರ್‌ ಇದ್ರು. ಕಿಡ್ನಿ ಫೇಲ್ಯೂರ್‌ ಆಗಿ ತೀರಿಕೊಂಡು ಮೂರು ತಿಂಗಳಾಯಿತು. ಈಕೆ ಅವರ ಹೆಂಡತಿ. ಕಂಪಾಷನೇಟ್‌ ಅಪಾಯಿಂಟ್‌ಮೆಂಟ್. ನಿಮ್ಮ ಪಕ್ಕದ ಡಿಸ್ಪಾಚ್‌ ಸೆಕ್ಷನ್ನಿನಲ್ಲಿ ಕೂರಿಸ್ತಿದೀನಿ. ಕಲಾ ಒಂದು ವಾರ ರಜಾ. ನೀವು ಇವರಿಗೆ ಸ್ವಲ್ಪ ಗೈಡ್‌ ಮಾಡಿ” ಎಂದವರೇ “ಈಕೆ ವೀಣಾ ಅಂತ, ನಿಮಗೆ ಹೇಳಿಕೊಡ್ತಾರೆ. ಏನು ಬೇಕಿದ್ರೂ ಕೇಳಿ” ಎನ್ನುತ್ತಾ ಆಕೆಗೆ ಪರಿಚಯಿಸಿದರು. ಇಷ್ಟು ಹೊತ್ತೂ ತಲೆತಗ್ಗಿಸಿಯೇ ನಿಂತಿದ್ದ ಅವಳು ಈಗ ತಲೆಯೆತ್ತಿ ವೀಣನನ್ನು ನೋಡಿದೊಡನೇ ಶಾಕ್ ಹೊಡೆದಂತೆ ಒಮ್ಮೆ ದಿಟ್ಟಿಸಿ ನೋಡಿ ತಲೆತಗ್ಗಿಸಿ ತಲೆಯಾಡಿಸಿ ತನ್ನ ಕುರ್ಚಿಯಲ್ಲಿ ಕುಳಿತಳು. ಸಾವರಿಸಿಕೊಂಡ ವೀಣಾ ಏನೂ ತಿಳಿದಿಲ್ಲದವಳಂತೆ ಅವಳ ಟೇಬಲ್ಲಿಗೆ ಹೋಗಿ ಅವಳು ಮಾಡಬೇಕಾದ ಕೆಲಸವನ್ನು ತೋರಿಸಿಕೊಟ್ಟು ಬಂದಳು.

ಮಧ್ಯಾಹ್ನ ಎರಡು ಗಂಟೆಯಾದರೂ ಅವಳು ತನ್ನ ಜಾಗವನ್ನು ಬಿಟ್ಟೇಳದೆ ತಲೆತಗ್ಗಿಸಿಕೊಂಡು ಕೆಲಸ ಮಾಡುತ್ತಲೇ ಇದ್ದಳು. ವೀಣಾಳೇ ಅವಳನ್ನು ಕರೆದು ಊಟಕ್ಕೆ ಹೋಗೋಣ ಬನ್ನಿ ಎಂದು ಕರೆದೊಯ್ದಳು. ಅದೇ ಹೊತ್ತಿಗೆ ಲಂಚ್‌ರೂಮಿನಲ್ಲಿದ್ದವರಿಗೆಲ್ಲಾ ಪರಿಚಯ ಮಾಡಿಕೊಟ್ಟಳು. ನಕ್ಕ ಹಾಗೆ ಮಾಡಿ ತಲೆತಗ್ಗಿಸಿ ಊಟ ಮಾಡಿದವಳೇ ತನ್ನ ಸೀಟಿಗೆ ವಾಪಸ್ಸಾದಳು. “ಏನೋ ಮುಷುಂಡಿ ಅಲ್ವಾ. ಹೊರಗ್ಬಂದ್ಮೇಲೆ ನಾಕ್ಜನದ ಜೊತೆ ಹೇಗಿರ‍್ಬೇಕೂಂತಾನೂ ಗೊತ್ತಿಲ್ವಲ್ಲ” ಅಂತ ಎಲ್ಲರ ಜಡ್ಜ್‌ಮೆಂಟ್‌ ಪಾಸಾಯಿತು. ವೀಣಾ ಬದಲು ಹೇಳದೆ ಸುಮ್ಮನೆ ನಕ್ಕಳು. ಅಂತೂ ಪ್ರತಿದಿನವೂ ಊಟದ ಹೊತ್ತಿನಲ್ಲಿ ಬಂದು ಕೂತು ಮೌನವಾಗೇ ಊಟ ಮುಗಿಸಿ ಎದ್ದು ಹೋಗುತ್ತಿದ್ದಳು. ಹಾಗೂ ಹೀಗೂ ವೀಣನೊಂದಿಗೆ ಅಲ್ಪ ಸ್ವಲ್ಪ ಮಾತಾಡುತ್ತಿದ್ದಳು.

ಒಂದು ದಿನ ಯಾರದೋ ಒಬ್ಬ ಸಹೋದ್ಯೋಗಿಯ ಮದುವೆಗೆ ಎಲ್ಲ ಮಹಿಳಾ ಸಿಬ್ಬಂದಿಯವರೂ ಒಟ್ಟಿಗೆ ಮದುವೆಮನೆಗೆ ಊಟಕ್ಕೆ ಹೋಗಿದ್ದರು. ಹದಿನೈದು ದಿನದಿಂದ ರಜದ ಮೇಲಿದ್ದು ಅಂದೇ ವಾಪಸ್ಸು ಬಂದಿದ್ದ ವೀಣಾಳಿಗೆ ವಿಷಯ ತಿಳಿಯದೆ ಅವಳು ಮದುವೆಮನೆಗೆ ಹೋಗಲು ತಯಾರಾಗಿ ಬಂದಿರಲಿಲ್ಲ. ನಿರೀಕ್ಷೆಯಂತೆ ಸಾವಿತ್ರಿಯೂ ಹೊರಡಲಿಲ್ಲ. ಅಂದು ಇಬ್ಬರೇ ಲಂಚ್‌ರೂಮಿನಲ್ಲಿ ಕುಳಿತಾಗ ವೀಣಾ “ತಪ್ಪು ತಿಳೀದಿದ್ರೆ ಒಂದು ಪ್ರಶ್ನೆ ಕೇಳ್ತೀನಿ. ನೀವು ಯಾಕೆ ಅಂತಹ ಮದುವೆಗೆ ಒಪ್ಕೊಂಡ್ರಿ. ನಾನು ನಿಮ್ಮ ಮದುವೆಯಾದ ದಿನ ಘಾಟಿ ದೇವಸ್ಥಾನಕ್ಕೆ ಬಂದಿದ್ದೆ. ನಂಗೆ ಶಾಕ್‌ ಆಯ್ತು ನಿಮ್ಮನ್ನೋಡಿ. ಹೇಳಬಹುದೂಂತ ಅನ್ನಿಸಿದ್ರೆ ಮಾತ್ರಾ ಹೇಳಿ” ಎಂದು ಕೇಳಿದಳು. ಸ್ವಲ್ಪ ಹೊತ್ತು ಮೌನವಾಗಿದ್ದ ಸಾವಿತ್ರಿ “ಅದು ಹೇಗೋ ಬಸ್ನಲ್ಲಿ ಆದ ಪ್ರಕರಣಕ್ಕೂ ನೀವು ಸಾಕ್ಷಿಯಾಗಿದ್ರಿ, ಆಮೇಲೆ ಮದುವೆ ದಿನವೂ ನಾನೂ ನಿಮ್ಮನ್ನ ಗಮನಿಸಿದ್ದೆ. ಈಗಲೂ ಅದು ಹೇಗೋ ಮತ್ತೆ ನಿಮ್ಮ ಪಕ್ಕಾನೇ ಕೂತು ಕೆಲಸ ಮಾಡ್ತಿದೀನಿ” ಎಂದವಳು ಯಾವುದೋ ಯೋಚನೆಯಲ್ಲಿ ಮುಳುಗಿದಳು. ಅವಳಾಗೇ ಹೇಳಲಿ ಎಂದು ವೀಣಾನೂ ಆಗಾಗ ಅವಳ ಮುಖವನ್ನೇ ನೋಡುತ್ತಾ ಊಟವನ್ನು ಮುಂದುವರೆಸಿದಳು. “ನೀವು ಇದುವರೆಗೂ ನನ್ನ ಹಳೆಯ ಪುರಾಣಾನ ಇಲ್ಲಿ ಯಾರ ಹತ್ರಾನೂ ಹೇಳ್ದೇ ಇರೋದು ನೋಡಿದ್ರೆ ನಿಮ್ಮ ಹತ್ರ ಹೇಳಬಹುದು ಅನ್ನಿಸ್ತಿದೆ…”ಎಂದಳು.

“ನಾನು ಒಂದಿನ ಬಸ್ಸಿಗೆ ಬರೋವಾಗ ಮನೇಲಿ ಗೌರಿ ಹಬ್ಬ ಇದ್ದಿದ್ರಿಂದ ಲೇಟಾಗಿ ಇನ್ನೇನು ಆ ಬಸ್ಸು ಹೊರಡೋದ್ರಲ್ಲಿತ್ತು. ಸ್ಕೂಲಿಗೆ ಲೇಟಾಗತ್ತೆ ಅಂತ ಹೊರಟೇಬಿಟ್ಟಿದ್ದ ಬಸ್ಸನ್ನು ಹತ್ತುವಾಗ ಜೋಲಿಹೊಡೆದು ನಾನು ಬಿದ್ದೇ ಹೋಗ್ತಿದ್ದೆ. ಅಷ್ಟ್ರಲ್ಲಿ ಅವನು ನನ್ನನ್ನ ಹಿಡಿದು ಎಳೆದುಕೊಂಡ. ಹಾಗೆ ನಮ್ಮಿಬ್ರ ಪರಿಚಯವಾಗಿದ್ದು. ಆ ಪರಿಚಯದ ಮೇಲೆ ಮುಖ ನೋಡಿ ನಗ್ತಿದ್ದ, ಮಾತಾಡಿಸ್ತಿದ್ದ, ಇಬ್ರೂ ಒಂದೇ ಸ್ಟಾಪಲ್ಲಿ ಇಳೀತಿದ್ವಿ. ಜೀವ ಉಳಿಸಿದ ಕೃತಜ್ಞತೆಯಿಂದ ನಾನೂ ಮಾತಾಡಿಸ್ತಿದ್ದೆ. ನಮ್ಮನೇಲಿ ಅಪ್ಪ ಅಮ್ಮ ವಿಪ್ರೀತ ಹಳೆ ಕಾಲದವರು. ನಾನು ಪ್ರೈವೇಟಲ್ಲಿ ಕಟ್ಟಿ ಬಿ.ಎ. ಪಾಸ್‌ ಮಾಡ್ಕೊಂಡಿದ್ದು. ನಾನು ಹೀಗೆ ಡ್ರೆಸ್‌ ಮಾಡ್ಕೊಳ್ದಿದ್ರೆ ನಂಗೆ ಮನೆಯಿಂದ ಹೊರಗ್ಹೋಗಕ್ಕೆ ಪರ್ಮಿಶನ್‌ ಇರ‍್ಲಿಲ್ಲ. ಎಲ್ರೂ ನನ್ನ ಆಡ್ಕೊಳ್ತಾರೆ ಅನ್ಸಿ ನಂಗೆ ತುಂಬಾ ಕೀಳರಿಮೆ ಅನ್ನಿಸ್ತಿತ್ತು. ಹಾಗಾಗಿ ಯಾರ ಹತ್ರಾನೂ ಮಾತಾಡ್ತಿರ‍್ಲಿಲ್ಲ. ಆದರೆ ಅವನು ಒಂದಿನವೂ ನನ್ನಲ್ಲಿ ಕೀಳರಿಮೆ ಹುಟ್ಟಿಸ್ದೆ ಪ್ರೀತಿಯಿಂದ ಮಾತಾಡ್ತಾ ಇದ್ದ. ಹಾಗೇ ನಾನೂ ಅವ್ನನ್ನ ಪ್ರೀತ್ಸಕ್ಕೆ ಶುರುಮಾಡ್ದೆ. ಕಡೆಗೊಂದಿನ ಅವನ ಮದುವೆ ಇನ್ವಿಟೇಶನ್‌ ತಂಕೊಟ್ಟ. ನಾನು ಹೀಗ್ಯಾಕೆ ನಂಗೆ ಮೋಸ ಮಾಡ್ದೆ ಅಂತ ಕೇಳ್ದೆ. ನಾನು ಫ್ರೆಂಡ್ಸ್‌ ಹತ್ರ ಬೆಟ್ಸ್‌ ಕಟ್ಟಿದ್ದೆ ʻನಿನ್ನಂತ ಗುಡ್ಡಿ ಗೌರಮ್ಮನ್ನೂ ಬುಟ್ಟೀಗ್ಹಾಕ್ಕೋಬಲ್ಲೆ ಅಂತ. ಅದನ್ನ ಪ್ರೂವ್‌ ಮಾಡ್ದೆ ಅಷ್ಟೆ. ಮದ್ವೆಗೆ ಖಂಡಿತಾ ಬಾʼ ಅಂತ ಹೇಳಿ ಹೊರಟೇಬಿಟ್ಟ…”

ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ಮುಂದುವರೆಸಿದಳು. “ನನಗೆ ಆ ಆಘಾತದಿಂದ ಹೊರಗೆ ಬರಕ್ಕಾಗ್ಲಿಲ್ಲ. ಪುಣ್ಯಕ್ಕೆ ಮನೇಲಿ ಯಾರಿಗೂ ಈ ವಿಷಯ ಗೊತ್ತಿರ‍್ಲಿಲ್ಲ. ಕೆಲಸ ಬಿಟ್ಬಿಟ್ಟೆ. ಅಪ್ಪ ಮಾಡ್ತಿದ್ದಿದ್ದು ಪೌರೋಹಿತ್ಯ. ಅಂದಿಗಂದಿಗೆ ಸರಿಹೋಗ್ತಿತ್ತು. ಅಣ್ಣ ಕೆಲಸ ಸಿಕ್ಮೇಲೆ ಬೇರೆ ಜಾತಿ ಹುಡುಗೀನ ಲವ್‌ ಮಾಡಿ ಮದ್ವೆ ಮಾಡ್ಕೊಂಡು ಮನೆಬಿಟ್ಟು ಹೋದ. ಅಪ್ಪಾನೂ ಹಾರ್ಟ್‌ಅಟ್ಯಾಕ್‌ ಆಗಿ ಹೋಗ್ಬಿಟ್ರು. ಅಮ್ಮನ ಅಮ್ಮ, ಅಂದ್ರೆ ಅಜ್ಜಿ ನಮ್ಮಿಬ್ರನ್ನೂ ಅವ್ರ ಮನೇಲಿಟ್ಕೊಂಡ್ರು. ಮುಂಚೇನೇ ನಮ್ಮ ಸೋದರತ್ತೆ ಹೋಗ್ಬಿಟ್ಟಿದ್ರು. ಸೋದರಮಾವ, ಅವ್ರ ಇಬ್ರು ಮಕ್ಕಳು, ಅವ್ರೆಲ್ರ ಜೊತೆ ನಾವಿಬ್ರು ಸೇರ‍್ಕೊಂಡ್ವಿ. ಅಷ್ಟರಲ್ಲಿ ಮಾವಂಗೆ ಕಿಡ್ನಿ ಪ್ರಾಬ್ಲಂ ಶುರುವಾಯ್ತು. ಇನ್ನು ಬಹಳ ದಿನ ಬದಕಲ್ಲ ಅಂತ ಡಾಕ್ಟ್ರು ಹೇಳಿದ್ರು. ಅವ್ರೂ ಹೋಗ್ಬಿಟ್ರೆ ಐದು ಜನರ ಗತಿ ಏನು? ಊಟಕ್ಕೂ ಗತಿಯಿಲ್ಲದ ಹಾಗೆ ಆಗೋಗತ್ತೆ ಅಂತ ಮನೇಲಿ ಎಲ್ಲರಿಗೂ ದುಃಖದ ಜೊತೆಗೆ ಯೋಚ್ನೇನೂ ಶುರುವಾಯ್ತು. ಅವರ ಫ್ರೆಂಡ್‌ ಯಾರೋ ಬಂದವ್ರು…. ಅವ್ರು… ಇದನ್ನ ಒಂದು ಸಲಹೆ ಅನ್ನೋ ಹಾಗೆ ಹೇಳಿದ್ರು. ನನ್ನನ್ನ ಮದುವೆಯಾದ್ರೆ ಅವರು ಹೋದ್ಮೇಲೆ ಕಂಪ್ಯಾಷನೇಟ್‌ ಆಧಾರದ ಮೇಲೆ ಕೆಲಸ ಸಿಗತ್ತೆ, ಜೊತೆಗೆ ಫ್ಯಾಮಿಲಿ ಪೆನ್ಷನ್‌ ಕೂಡಾ ಸಿಗತ್ತೆ. ಜೀವನ ನಡೆಸಕ್ಕೆ ಕಷ್ಟ ಆಗಲ್ಲಾಂತ. ಮಾವ ಇದನ್ನ ಒಪ್ಕೊಳ್ಳಿಲ್ಲ. ಆದ್ರೆ ಅಮ್ಮನ ಅಜ್ಜಿಯ ತಲೇಲಿ ಇದು ಭದ್ರವಾಗಿ ಕೂತ್ಬಿಡ್ತು. ನನ್ನ ಒಪ್ಪಿಗೆ ಯಾರ‍್ಗೂ ಬೇಕಿರ‍್ಲಿಲ್ಲ. ಅತ್ತೂ ಕರ‍್ದೂ, ಆಣೆ ಭಾಷೆ ಹಾಕಿ ಇವರನ್ನ ಒಪ್ಸಿ ಕಟ್ಟೇ ಬಿಟ್ರು” ಎಂದವಳು ಕಣ್ಣು ತುಂಬಿಕೊಂಡಳು. ಹೇಗೆ ಪ್ರತಿಕ್ರಿಯಿಸಬೇಕೆಂದು ವೀಣನಿಗೆ ತೋರದೆ ಪೆಚ್ಚಾಗಿ ಕುಳಿತಿದ್ದವಳು ಎದ್ದು ಬಂದು ಅವಳ ಪಕ್ಕ ನಿಂತು “ಅಳ್ಬೇಡಿ ಸಾವಿತ್ರಿ, ತುಂಬಾ ದುಃಖ ಆಗತ್ತೆ, ಸಮಾಧಾನ ತಂದ್ಕೊಳಿ” ಎಂದಳು ಬೆನ್ನು ಸವರುತ್ತಾ. ಅವಳಿಗೆ ಸಮಾಧಾನ ಹೇಳಿದರೂ ಇವಳ ಕಣ್ಣಲ್ಲೂ ನೀರು ತುಂಬತೊಡಗಿತ್ತು.

ಸ್ವಲ್ಪ ಹೊತ್ತಿನ ಮೌನದ ನಂತರ ಸಾವಿತ್ರಿ “ಏನೇ ಹೇಳಿದ್ರೂ ಹೊಟ್ಟೆ ಮುಂದೆ ಜಗತ್ತಿನಲ್ಲಿ ಇನ್ನೆಲ್ಲವೂ ಕ್ಷುಲ್ಲಕ ವೀಣಾ. ಒಂದು ದಿನವೂ ನಾವಿಬ್ರೂ ಗಂಡ ಹೆಂಡತಿಯಾಗಿ ಜೀವನ ನಡೆಸಿಲ್ಲ; ಅವರ ಪಿಂಚಣಿ ತಿನ್ನಕ್ಕೆ ನನಗೆ ಹಕ್ಕಿದ್ಯಾ ಅಂತ ತುಂಬಾ ಯೋಚಿಸ್ತೀನಿ. ಏನೇ ಆದ್ರೂ ಈಗ ಲೋಕದ ಕಣ್ಣಲ್ಲಿ ನಾವೆಲ್ರೂ ಮರ‍್ಯಾದೆಯಾಗಿ ಬಾಳ್ತಿದೀವಲ್ವಾ. ಇಲ್ದಿದ್ರೆ ಈ ವಯಸ್ಸಲ್ಲಿ ನಂಗೆ ಯಾರು ಕೆಲ್ಸ ಕೊಡ್ತಿದ್ರು? ಈ ಪರಿಸ್ಥಿತೀಲಿ ನಮ್ಮೆಲ್ಲರ ಜವಾಬ್ದಾರೀನೂ ಹೊತ್ಕೊಂಡು ನನ್ನನ್ನ ಮದುವೆ ಮಾಡಿಕೊಳ್ಳೋವ್ರು ಯಾರಾದ್ರೂ ಸಿಗ್ತಿದ್ರಾ? ನನ್ನ ಮುಂದೆ ಬೇರೆ ಏನು ಆಯ್ಕೆ ಇತ್ತು?”

ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿ ಕುಳಿತರು. ಮೌನವನ್ನು ಮುರಿದ ವೀಣಾ “ನನ್ನದೊಂದು ಸಲಹೆ ಸಾವಿತ್ರಿ. ಆಗಿದ್ದು ಆಗ್ಹೋಗಿದೆ. ಈಗ ನೀವು ದುಡೀತಿದೀರಿ. ನಿಮ್ಮನ್ನ ನಂಬಿಕೊಂಡವ್ರನ್ನ ಸಾಕ್ತಿದೀರಿ. ಆದರೆ ಹೀಗ್ಯಾಕಿರ‍್ಬೇಕು? ನೀವೇನು ಮುದುಕಿಯಾಗಿಲ್ಲ. ಸ್ವಲ್ಪ ನಿಮ್ಮ ಮನೋಭಾವ ಬದಲಾಯಿಸಿಕೊಳ್ಳಿ. ಒಳ್ಳೊಳ್ಳೆ ಸೀರೆಗಳನ್ನುಟ್ಕೊಳಿ. ಈಗಿನ ಕಾಲ್ದಲ್ಲಿ ಯಾರೂ ಹೀಗಿರಲ್ಲ. ಹಣೆಗೆ ಬಿಂದಿ ಇಟ್ಕೊಳಿ. ಬೋಳುಕತ್ತಿನಲ್ಲಿಲ್ದೆ ಒಂದ್ಸರ ಹಾಕ್ಕೊಳಿ. ನಿಮ್ಮನ್ನ ನೋಡಿದ್ರೇನೇ ಅಯ್ಯೋ ಅನ್ನಿಸ್ದಿರೋ ಹಾಗೆ ಬನ್ನಿ. ನೀವು ಜೀವನದಲ್ಲಿ ಸೋತವರ ಹಾಗೆ ತಲೆತಗ್ಗಿಸ್ಕೊಂಡಿರ‍್ಬೇಡಿ. ಎದುರಿಸಕ್ಕೆ ಹೊರ‍್ಟಿರೋ ಯೋಧನ ಹಾಗೆ ಆತ್ಮವಿಶ್ವಾಸದಿಂದ ತಲೆಯೆತ್ತಿ ಬನ್ನಿ. ನಂಗೊತ್ತು. ಒಂದೇ ದಿನ ಬದಲಾವಣೆ ಆಗಲ್ಲ. ಕ್ರಮೇಣ ಬದಲಾವಣೆ ಸಾಧ್ಯ ಮಾಡ್ಕೊಳಿ” ಎನ್ನುತ್ತಾ ಸಾವಿತ್ರಿಯ ಮುಖ ನೋಡಿದಳು. ಸ್ವಲ್ಪ ಹೊತ್ತು ಮೌನವಾಗೇ ಕುಳಿತಿದ್ದ ಸಾವಿತ್ರಿ ನಿಧಾನವಾಗಿ ತಲೆಯೆತ್ತಿ ವೀಣಾಳ ಮುಖವನ್ನೇ ನೋಡಿದಳು. ʻಹೀಗೇ… ಹೀಗೆ ತಲೆಯೆತ್ತಿ ನಡೆಯಿರಿʼ ಎನ್ನುವಂತೆ ವೀಣಾ ತಲೆಯಾಡಿಸಿ ಹೆಬ್ಬೆಟ್ಟೆತ್ತಿದಳು. ಅನುಮೋದಿಸುವಂತೆ ನಿಧಾನವಾಗಿ ತಲೆಯಾಡಿಸುತ್ತಾ ಸಾವಿತ್ರಿ ಮೇಲೆದ್ದಳು. ಮದುವೆಮನೆಗೆ ಹೋದವರೆಲ್ಲ ವಾಪಸ್ಸು ಬಂದ ಗಲಗಲ ಕೇಳತೊಡಗಿತು. ಇಬ್ಬರೂ ಎದ್ದು ತಮ್ಮ ಸೀಟಿಗೆ ನಡೆದರು…

*******************************************

2 thoughts on “ಅವಳ ಬದುಕಿನ ಪುಟಗಳಲ್ಲೊಂದು ಇಣುಕು…

  1. ವಾಹ್. ಮಾತಿಲ್ಲ.. ಎಂದಿನಂತೆ ನಿಮ್ಮ ಕಥೆ ಮನದ ಕದ ತಟ್ಟಿತು. ಸಾವಿತ್ರಿ ಬದಲಾಗಿ ಖುಷಿಯಿಂದ ಇರುವಳು ಅಂತ ಭಾವಸ್ತೀನಿ.

Leave a Reply

Back To Top