ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…

ವಿಶೇಷ ಲೇಖನ

ಗಜಲ್ ಮದುಶಾಲೆಯ ಹೊಸ್ತಿಲಲ್ಲಿ…

ಡಾ. ಮಲ್ಲಿನಾಥ ಎಸ್. ತಳವಾರ

Pink Wine, Champagne, Celebration, Pink

       ಪ್ರೀತಿಯೇ ಈ ಜಗದ ಸುಂದರ ಬುನಾದಿ. ಎಲ್ಲ ಚಟುವಟಿಕೆಗಳಿಗೆ ಹೃದಯ ಬಡಿತದ ಪಿಸುಮಾತೆ ಕಾರಣ. ಸ್ಪರ್ಶಕ್ಕೂ ಎಟುಕದ ಅನುಭವಗಳೆಲ್ಲವನ್ನು ಕಟ್ಟಿಕೊಡುವುದೆ ಸಾಹಿತ್ಯ. ಆ ಸಾಹಿತ್ಯದ ಸಸಿಗೆ ನಮ್ಮ ಭಾವನೆಗಳೆ ವರ್ಷಧಾರೆ..!! ಭಾವಗಳ ಸಂಗಮವೇ ಆ ಅಕ್ಷರ ಅಕ್ಷಯ ಪಾತ್ರೆ. ಸುಂದರ ಸಮಾಜದ ಪ್ರತಿಬಿಂಬವನ್ನು ಪ್ರತಿನಿಧಿಸುವ ದರ್ಪಣವೇ‌ ಈ ಅಕ್ಷರ ಲೋಕ..!! ಇದೊಂದು ಭಾವನೆಗಳ ಕಲ್ಪನಾತ್ಮಕ ಪರಪಂಚ. ಇದು ಕ್ರಿಯಾಶೀಲತೆ, ಭಾಷೆ, ವರ್ಣಗಳು ಮತ್ತು ಛಂದಸ್ಸಿನ ಸುಂದರ ಆಪ್ತವಾದ ಹೊದಿಕೆಯನ್ನು ಹೊಂದಿರುತ್ತದೆ. ಇದು ಸಮಾಜದ ಹಿತವನ್ನು ಕಾಪಾಡುವ ಪರಂ ಜ್ಯೋತಿ. ಈ ಹೊಂಗಿರಣದಿಂದ ಯಾವ ವಿಷಯವೂ ಹೊರತಾಗಿ ಉಳಿದಿಲ್ಲ, ಉಳಿಯಲು ಸಾಧ್ಯವೂ ಇಲ್ಲ. ಅನನ್ಯ ಪಂಚೇಂದ್ರಿಯಗಳ ಅನುಪಮ ಅನುಭವವನ್ನು ಉಣಬಡಿಸುವ ಭಾಷೆಯ ಸಾಂಗತ್ಯದಲ್ಲಿ ಹೆಜ್ಜೆ ಹಾಕುವ ಸಾಹಿತ್ಯಕ್ಕೆ ಯಾವುದೆ ನಿರ್ದಿಷ್ಟವಾದ ಭಾಷೆಯ, ಗಡಿಯ ಸೀಮೆಯಿಲ್ಲ. ನಮ್ಮ ಕನ್ನಡದ ಅರ್ವಾಚೀನ ಸಾಹಿತ್ಯದ ಉದ್ಯಾನದಲ್ಲೊಮ್ಮೆ ವಿಹರಿಸಿದಾಗ ಸಂಸ್ಕೃತ ಭಾಷೆಯ, ಸಂಸ್ಕೃತ ಸಾಹಿತ್ಯದ ದಟ್ಟ ಪ್ರಭಾವ ಅಂದು ಇರುವುದನ್ನು ಗಮನಿಸಬಹುದು. ಮುಂದೆ ೧೨ನೇ ಶತಮಾನದಲ್ಲಿ ಶಿವಶರಣರ ಕಾಲಘಟ್ಟದಲ್ಲಿ ಪಾದರಸದಂತಹ ಸಾಹಿತ್ಯ ರೂಪ ‘ವಚನ’ ವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಾರಸ್ವತ ಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿತು..ತಿರುವಿನ ಆ ಕಾಲ ಗರ್ಭದಲ್ಲಿ ನವ್ಯ, ಆಧುನಿಕ ಕನ್ನಡಕ್ಕೆ ಪಾಶ್ಚಿಮಾತ್ಯ ಸಾಹಿತ್ಯವೇ ನಂದಾದೀಪವಾಯಿತು. ಈ ನೆಲೆಯಲ್ಲಿ ಚಿಂತನೆ ಮಾಡಿದಾಗ ಸಾಹಿತ್ಯವು ನಿರಂತರವಾಗಿ ಚಲಿಸುತ್ತಿರುತ್ತದೆ ಎಂದೆನಿಸದೆ ಇರದು.

        ಈ ಹಿನ್ನೆಲೆಯಲ್ಲಿ ‘ಗಜಲ್’ ಕಾವ್ಯ ಪ್ರಕಾರವು ಮನವನ್ನು ಮೆದುವಾಗಿ ಸ್ಪರ್ಶಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ನ ಅರ್ಥ, ಹುಟ್ಟು, ಛಂದೋಲಕ್ಷಣಗಳು, ವೈವಿಧ್ಯತೆಗಳು ಹಾಗೂ ಅದರ ಪ್ರಕಾರಗಳ ಕುರಿತು ಅರಿಯುವುದು ತುಂಬಾ ಮುಖ್ಯ. ಈ ಗಜಲ್ ಶಬ್ಧದ ಇತಿಹಾಸವು ನಮ್ಮನ್ನು ದಕ್ಷಿಣ ಏಷ್ಯಾದ ಅರಬ್ ನ ಸುಂದರ ಮರಭೂಮಿಯತ್ತ ಕರೆದೊಯ್ಯುತ್ತದೆ. ‘ಗಜಲ್’ ಪದ ಮೂಡಿ ಬಂದದ್ದು ಅರೆಬಿಕ್ ಭಾಷೆಯಿಂದ. ಈ ಪದದ ನಿಷ್ಪತ್ತಿ ಕುರಿತು ಹೀಗೆ ಹೇಳಲಾಗಿದೆ. ಗಜಲುನ್, ಗಜಾಲ್, ಗಿಜಾಲ್ ಪದಗಳಿಂದ ಬಂದಿರಬಹುದು ಎನ್ನಲಾಗುತ್ತಿದೆ. ‘ಗಜಲುನ್’ ಎಂದರೆ ಮೋಹಕ ಸನ್ನೆಗಳಿಂದ ಹೆಂಗಸರೊಡನೆ ಮಾತನಾಡುವುದು ಎಂದು. ‘ಗಜಾಲ್’ ಎಂದರೆ ಹೆಣ್ಣಿಗೆ ಹೋಲಿಸಿ ಇಡುವ ಹೆಸರು ಅಥವಾ ಜಿಂಕೆ ಕಣ್ಣಿನ ಆಕರ್ಷಕ ತೀಕ್ಷ್ಣ ಬುದ್ಧಿಯ ಹೆಣ್ಣು. ‘ಗಿಜಾಲ್’ ಎಂದರೆ ಜಿಂಕೆ. ಈ ಹಿನ್ನೆಲೆಯಲ್ಲಿ “ಜಿಂಕೆ ಅನುಭವಿಸುವ ಆರ್ತನಾದ ಬೇಟೆಗಾರನಿಂದ ತಪ್ಪಿಸಿಕೊಂಡು ಸ್ವತಂತ್ರವಾಗುವ ನೋವೆ” ಗಜಲ್ ನ ಮೂಲ ಎಂಬ ೭ನೆ ಶತಮಾನದ ಗಜಲ್ ತಜ್ಞ ಶಮ್ಸ್ ಕೈಸ್ ರಾಜಿ ಯವರ ಹೇಳಿಕೆಯನ್ನು ಸ್ಮರಿಸಬಹುದು. ಇದರೊಂದಿಗೆ ಡಾ. ಅಬ್ದುರಶೀದ್ ಎ. ಶೇಖ್ ರವರು ತಮ್ಮ ಗಜಲ್ ಸೌಂದರ್ಯ ಮೀಮಾಂಸೆ ಯಲ್ಲಿ ದಾಖಲಿಸಿರುವುದನ್ನು ಇಲ್ಲಿ ಗಮನಿಸುವುದು ಸೂಕ್ತ. ಗಜಲ್ ಎನ್ನುವುದು ಮುಗಾಜೆಲಾತ, ತಗಜ್ಜುಲ್ ಪದಗಳಿಂದ ಬಂದಿದೆ ಎಂದು ಹೇಳಿದ್ದಾರೆ. ಈ ಪದಪುಂಜಗಳ ಅರ್ಥ ಪ್ರೇಮಿಗಳ ಮಾತುಕತೆ, ಸರಸ-ಸಲ್ಲಾಪ, ಹೆಂಗಸರ ಕುರಿತು ಮಾತು…. ಎಂದೆಲ್ಲಾ ಅರ್ಥೈಸಲಾಗುತ್ತಿದೆ. ಕ್ರೌಂಚ ಹಕ್ಕಿಗಳ ವಿಹ್ವಲತೆ, ದೀನ ನೋವು, ಆರ್ತನಾದವು ಮಹಾಕಾವ್ಯ ‘ರಾಮಾಯಣ’ ದ ಉದಯಕ್ಕೆ ಕಾರಣವಾಗಿರುವುದನ್ನು ಇಲ್ಲಿ ಮೆಲುಕು ಹಾಕಬಹುದು. ಈ ಅರ್ಥದಲ್ಲಿ ಕರುಣಾರಸ ತುಂಬಿದ ಮಧುಬಟ್ಟಲೆ ಈ ಬರಹದ ಸ್ಥಾಯೀ ರೂಪ. ಇದು ಸಾಹಿತ್ಯ ರೂಪವಾಗಿ ಬೆಳೆದು ಬಂದದ್ದು ಮಾತ್ರ ಇರಾನಿನ ಪರ್ಷಿಯನ್ ಭಾಷೆಯಲ್ಲಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅರಬರು ಇರಾನ್ ದೇಶವನ್ನು ಹಲವು ವರ್ಷಗಳ ಕಾಲ ಆಳಿದರು. ಇದರಿಂದ ಸಹಜವಾಗಿಯೇ ಅರಬರ ಭಾಷೆ, ಕಾವ್ಯಗಳ ಪ್ರಭಾವ ಇರಾನರ ಮೇಲೆ ಆಯಿತು. ಪರ್ಷಿಯನ್ ಭಾಷೆಯ ಪ್ರಕಾರ ‘ಗಜಲ್’ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು, ಪ್ರಗಾಥ ಎಂದಾಗುತ್ತದೆ. ನಂತರ ಮೂಲವಾಗಿ ಸುಂದರವಾಗಿ ಇರುವ ಉರ್ದುವಿನಲ್ಲಿ ಹಾಲು-ಜೇನಿನ ಸಂಗಮದಂತೆ ತನ್ನ ಪಾರುಪತ್ಯವನ್ನು ಸ್ಥಾಪಿಸಿರುವುದು ಇವಾಗ ಇತಿಹಾಸ..!!

     ಇಂತಹ ಗಜಲ್ ನ ವಿಕಾಸ ತುಂಬಾನೆ ಕುತೂಹಲಕಾರಿಯಾಗಿದೆ.  ಅರಬ್ ನ ೬ ನೇ ಶತಮಾನದ ಅರಬ್ಬಿ ಪದ್ಯ “ಕಸೀದ” ದಿಂದ ಇದು ಹುಟ್ಟಿರಬಹುದು ಎಂದು ಕೆಲವರು ಹೇಳಿದರೆ, ಪಾಕಿಸ್ತಾನದ ಕವಿ, ವಿಮರ್ಶಕ ವಜೀರ್ ಆಗಾ ಅವರು ಫಾರಸಿ ಭಾಷೆಯ ಜಾನಪದ ಕಾವ್ಯ “ಚಾಮ” ದಿಂದ ಹುಟ್ಟಿದೆ ಎಂದು ಹೇಳುತ್ತಾರೆ. ‘ಕಸೀದ’ ವ್ಯಕ್ತಿ ಪ್ರಶಂಸೆ, ದಾರ್ಶನಿಕತೆ, ಜನರನ್ನು ಉತ್ಸಾಹಗೊಳಿಸುವ ವಿಷಯಗಳಿಂದ ಕೂಡಿದ ಒಂದು ಧೀರ್ಘ ಖಂಡ ಕಾವ್ಯ. ಇಲ್ಲಿ ರಾಜನ ಹೊಗಳಿಕೆ ಮತ್ತು ರಾಜನ ಮನೋಭಿಲಾಸೆಯೆ ಮುಖ್ಯವಾಗುತಿತ್ತು. ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಶಬಾಬ್, ಶರಾಬ್ ಮತ್ತು ಕಬಾಬ್ ಕಸೀದದ ಸ್ಥಾಯಿ ಭಾವ ಆಗಿದ್ದವು ಎನ್ನುವುದರ ಜೊತೆಗೆ ಅರಸೊತ್ತಿಗೆಯ ಸಂಕೇತವಾಗಿದ್ದವು ಎಂಬುದು ಅಂದಿನ ಕಾಲಚಕ್ರವನ್ನು ಪ್ರತಿನಿಧಿಸುತ್ತದೆ.  ಜೊತೆ ಜೊತೆಗೆ ಇವು ವಿಲಾಸಿ ಜೀವನವನ್ನು ಬಿಂಬಿಸುತ್ತವೆ. ಈ ಕಾರಣಕ್ಕಾಗಿಯೇ ಅಂದಿನ ಕವಿಗಳು ತಮಗೆ ಇಷ್ಟವಿಲ್ಲದಿದ್ದರೂ ರಾಜ- ಮಹಾರಾಜರನ್ನು ಹೊಗಳುತ್ತಿದ್ದರು. ಕೆಲವರಂತೂ ತಮ್ಮ ಉಪಜೀವನಕ್ಕಾಗಿಯೂ ಬರೆಯುತ್ತಿದ್ದರು..!! ಕಸೀದದ ಪೀಠಿಕಾ ದ್ವಿಪದಿ ಎಂದರೆ ‘ತಷಬೀಬ್’ ಪ್ರೀತಿ, ಪ್ರೇಮ ಭಾವಾಭಿವ್ಯಕ್ತಿಯನ್ನು ಒಳಗೊಂಡಿರುತ್ತದೆ. ಪೀಠಿಕೆಯ ದ್ವಿಪದಿ/ ಷೇರ್ ಗಳನ್ನು ಎತ್ತಿ ಬೇರೆ ಮಾಡಿ ಅವುಗಳಿಗೆ ಗಜಲ್ ಎಂದು ಕರೆಯಲಾಯಿತು. ಇದರೊಂದಿಗೆ ಇರಾನ್ ದೇಶದ ಹಳ್ಳಿಗಳಲ್ಲಿ ಹೆಂಗಸರು ರಚಿಸಿ ಹಾಡುತ್ತಿದ್ದ ‘ಚಾಮ’ ಎಂಬ ಜಾನಪದ ಕಾವ್ಯ ಪ್ರಕಾರ ದಿಂದ ಗಜಲ್ ಹುಟ್ಟಿದೆಯೆಂದೂ ಹೇಳಲಾಗುತ್ತಿದೆ. ಇರಾನ್ ದೇಶವು ಅತಿಥಿಗಳ ಸತ್ಕಾರಕ್ಕೆ ತುಂಬಾ ಹೆಸರುವಾಸಿ. ತಮ್ಮ ಮನೆಗೆ ಬಂದ ಅತಿಥಿಗಳ ಮನೋರಂಜನೆಗಾಗಿ ಹಾಡು ಕಟ್ಟಿ ಹಾಡುತ್ತಿದ್ದರು. ಆ ನೆಲೆಯಲ್ಲಿ ಚಾಮ ಕಾವ್ಯವೂ ಹೌದು, ಸಂಗೀತವೂ ಹೌದು. ಇರಾನ್ ದೇಶದ ಹಳ್ಳಿಗಳಲ್ಲಿ ಅದು ಬಹಳ ಜನಪ್ರಿಯವಾಗಿತ್ತು,  ಅತ್ಯಂತ ಮನೋಹರವಾಗಿತ್ತು. ಈ ಸೆಲೆಯಲ್ಲಿ “ಗಜಲ್ ಸ್ವಭಾವತಃ ಗೀತದ ಬುನಾದಿಯ ಮೇಲೆ ನಿಂತಿರುವುದರಿಂದ ಗಜಲ್ ಅನ್ನು ಅರಬ್ಬಿ ತಷಬೀಬ್ (ಕಸೀದ್ ದ ಪೀಠಿಕೆ) ದಿಂದ ಹುಟ್ಟಿತು ಎನ್ನುವುದಕ್ಕೆ ಬದಲಾಗಿ ಅದನ್ನು ಇರಾನದ ಚಾಮ ಕಾವ್ಯಕ್ಕೆ ಸಂಬಂಧ ಪಟ್ಟುದೆಂದು ಹೇಳುವುದು ಸೂಕ್ತ” ಎಂಬ ಪಾಕಿಸ್ತಾನದ ಕವಿ, ವಿಮರ್ಶಕ ಡಾ. ವಜೀರ್ ಆಗಾರವರ ಹೇಳೀಕೆ ಮುಖ್ಯವೆನಿಸುತ್ತದೆ. ‌

       ಈ ಗಜಲ್ ಎನ್ನುವುದು ಮುಂಜಾವಿನ, ನಸುಕಿನ ಸಮಯದ ಸವಿ ನಿದ್ದೆ, ಕಂದಮ್ಮಗಳ ನೆಚ್ಚಿನ ಚಂದಮಾಮ, ತಾಯಿಯ ವಾತ್ಸಲ್ಯಮಯ ಲಾಲಿ ಹಾಡು ಹಾಗೂ ಅಬಲೆಯರ ಆಕ್ರಂದನವನ್ನೂ ಸಶಕ್ತವಾಗಿ ಅಭಿವ್ಯಕ್ತಿಸುತ್ತದೆ. ಇದೊಂದು ಪ್ರೀತಿಸುವ ಜೀವಿಗಳ ಭಾವಪರವಶತೆಯ ಸುಂದರ ಸಂಭ್ರಮ. ಇದು ನಿರಂತರವಾದ ಮತ್ತು ಆಳವಾದ ಅನುಭೂತಿಯನ್ನು ಸಹ ನೀಡುತ್ತದೆ. ಅಂತೆಯೇ “Ghazal is all about desire, Journey to love and light” ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಾವ್ಯಗಳ ರಾಣಿ ಎಂಬ ನವಿಲು ಗರಿಯನ್ನು ಹೊತ್ತು ನಿಂತಿದೆ.

****************************************

Leave a Reply

Back To Top